ತಮ್ಮ ಹಿಂದೂ ಸಾಕುಮಗಳ ಮದುವೆಯನ್ನು ದೇಗುಲದಲ್ಲಿ ಏರ್ಪಡಿಸಿದ ಕೇರಳದ ಮುಸ್ಲಿ೦ ದಂಪತಿ
ದತ್ತುಮಗಳು ರಾಜೇಶ್ವರಿಯ ವಿವಾಹವನ್ನು ಕೇರಳದ ಕಾಸರಗೋಡು ಜಿಲ್ಲೆಯ ಅಬ್ದುಲ್ಲಾ ಮತ್ತು ಖಾದೀಜಾ ದಂಪತಿಗಳು ಇತ್ತೀಚಿಗೆ ಕನ್ಹಂಗಡ್‌ನ ವಿಷ್ಣು ಪ್ರಸಾದ್ ಅವರೊಂದಿಗೆ ದೇಗುಲದಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿಸಿದರು.
ಮದುವೆ ಎನ್ನುವುದು ಎರಡು ಮನಸ್ಸುಗಳು ಮತ್ತು ಎರಡು ಕುಟುಂಬಗಳ ಸಮ್ಮಿಲನ, ಕೆಲವೊಮ್ಮೆ ಇದು ಜಾತಿ ಮತಗಳ ಹೇರಿಕೆಯಲ್ಲಿ ಸಿಕ್ಕು ಬದುಕನ್ನು ದುರ್ಭರಗೊಳಿಸುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ದೇಶದ ಗಡಿನಾಡು ಕೇರಳದ ಕಾಸರಗೋಡು ಜಿಲ್ಲೆಯ ಅಬ್ದುಲ್ಲಾ ಮತ್ತು ಖದೀಜಾ ದಂಪತಿಗಳ ಮಗಳ ವಿವಾಹವು ನಡೆದಿದೆ.
ಕಾಸರಗೋಡಿನ ಅಬ್ದುಲ್ಲಾ ಮತ್ತು ಖದೀಜಾ ದಂಪತಿಗಳ ಮನೆಯ ತೋಟದ ಕೆಲಸಕ್ಕೆ ಬಂದಿದ್ದ ತಮಿಳುನಾಡಿನ ತಂಜಾವೂರಿನ ಹಿಂದೂ ದಂಪತಿ ಅನಾರೋಗ್ಯದ ಹಿನ್ನಲೆಯಲ್ಲಿ ಸಾವನ್ನಪ್ಪಿದರು, ವರ್ಷದ ಹೆಣ್ಣುಮಗು ರಾಜೇಶ್ವರಿಯನ್ನು ಅವರೇ ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು.
ತಮ್ಮ ಮೂರು ಗಂಡುಮಕ್ಕಳಾದ ಶಮೀಮ್, ನಜೀಬ್ ಮತ್ತು ಶರೀಫ್ ಅವರ ಸಹೋದರಿಯಾಗಿ ರಾಜೇಶ್ವರಿ ಬೆಳೆದಳು ಎಂದು ಅಬ್ದುಲ್ಲಾ ಹೇಳುತ್ತಾರೆ.
"ಅವಳಿಗೆ 22 ವರ್ಷ ತುಂಬುತ್ತಲೇ ವರಾನ್ವೇಷಣೆಗೆ ತೊಡಗಿದೆವು ಆದ್ರೆ ಆಕೆಯ ಬಗ್ಗೆ ಪೂರ್ಣ ವಿಷಯ ತಿಳಿಯುತ್ತಲೇ ಹೆಚ್ಚಿನ ಹುಡುಗರು ಮತ್ತು ಅವರ ಕುಟುಂಬ ಮದುವೆಗೆ ನಿರಾಕರಿಸುತ್ತಿದ್ದರು," ಎನ್ನುತ್ತಾರೆ ಅಬ್ದುಲ್ಲಾ, ವರದಿ ನ್ಯೂಸ್ ಮಿನಿಟ್.
ಕೆಲದಿನಗಳ ನಂತರ ಅವರು 25 ಕಿಲೋಮೀಟರ್ ದೂರದಲ್ಲಿರುವ ಕನ್ಹಂಗಡ್ ಬಳಿಯ ಪುತಿಯಕೋಟ್ಟದಲ್ಲಿ ಬಾಲಚಂದ್ರನ್ ಮತ್ತು ಜಯಂತಿ ಅವರ ಪುತ್ರ ವಿಷ್ಣು ಪ್ರಸಾದ್ ಅವರಿಂದ ಮದುವೆಯ ಪ್ರಸ್ತಾಪವನ್ನು ಸ್ವೀಕರಿಸಿದರು.
‘ವರನ ಕುಟುಂಬಕ್ಕೆ ಒಂದೇ ಬೇಡಿಕೆ ಇತ್ತು; ಮದುವೆ ದೇವಾಲಯದಲ್ಲಿ ನಡೆಯಬೇಕು. ಆದ್ದರಿಂದ ನಾವು ಕನ್ಹಂಗಡ್‌ನ ಒಂದು ದೇವಾಲಯವನ್ನು ಆಯ್ಕೆ ಮಾಡಿದೆವು, ಅಲ್ಲಿ ಯಾವುದೇ ಧರ್ಮಕ್ಕೆ ಯಾವುದೇ ನಿರ್ಬಂಧವಿಲ್ಲ ಮತ್ತು ಆದ್ದರಿಂದ ನಾವು ಸಮಾರಂಭದಲ್ಲಿ ಭಾಗವಹಿಸಬಹುದಾಗಿತ್ತು," ಎಂದು ಅಬ್ದುಲ್ಲಾ ಹೇಳಿದರು, ವರದಿ ನ್ಯೂಸ್ 18.
ಮದುವೆ ಖರ್ಚು ವೆಚ್ಚದ ಬಗ್ಗೆ ಮಾತನಾಡುತ್ತಾ, ತಂದೆ ಅಬ್ದುಲ್ಲಾ ಅವರು,
"ಅವಳು ನಮ್ಮಲ್ಲಿ ಒಬ್ಬಳಾಗಿರುವುದರಿಂದ, ದುಬೈನಲ್ಲಿ ಕೆಲಸಮಾಡುತ್ತಿರುವ ಅವಳ ಸಹೋದರರು ವೆಚ್ಚವನ್ನು ಹಂಚಿಕೊಂಡರು ಮತ್ತು ನಾವೂ ಸಹ ಆಕೆಗಾಗಿ ಹಣವನ್ನು ಉಳಿಸಿದ್ದೇವೆ," ಎಂದು ಹೇಳಿದರು.
ಅಂತೆಯೇ ಮುಸ್ಲಿಂ ದಂಪತಿಗಳು ತಮ್ಮ ಕುಟುಂಬ ಸಮೇತ ತಾವು ಸಾಕಿದ ಹೆಣ್ಣುಮಗಳನ್ನು ಹಿಂದೂ ಧರ್ಮದ ಸಂಪ್ರದಾಯದಂತೆ ದೇಗುಲದಲ್ಲಿ ಮದುವೆ ಮಾಡಿಕೊಟ್ಟರು. ಈ ವಿವಾಹ ತಾಯಿ ತಂದೆ ಕುಟುಂಬ ಮೊದಲಾದ ವಾರ ಪ್ರೀತಿ ಮಮತೆಯ ಜೊತೆಗೆ ಕೋಮುಸೌಹಾರ್ದತೆಯನ್ನು ಎತ್ತಿಹಿಡಿಯುತ್ತದೆ. ಸಣ್ಣ ಸಣ್ಣ ವಿಷಯಗಳು ಕ್ರೌರ್ಯದ ಸ್ವರೂಪ ಪಡೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ನಾವು ಇಂಥ ಘಟನೆಗಳಿಂದ ಕಲಿಯಬೇಕಾಗಿರುವುದು ಬಹಳಷ್ಟು ಇದೆ ಎಂದರೆ ಅತಿಶಯೋಕ್ತಿಯಲ್ಲ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.