ಮಸೀದಿಯಲ್ಲಿ ನಡೆಯಲಿದೆ ಹಿಂದೂ ವಿವಾಹ

ತಮ್ಮ ಪತಿಯನ್ನು ಕಳೆದುಕೊಂಡು ಎರಡು ಮಕ್ಕಳೊಂದಿಗೆ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಬಿಂದು ಅವರ ಮಗಳಾದ ಅಂಜು ಅವರ ವಿವಾಹವನ್ನು ಚೆರಾವಳಿ ಮುಸ್ಲಿಂ ಜಮಾಥ್ ಸಮಿತಿ ಎಲ್ಲಾ ಖರ್ಚು ಭರಿಸಿ ಹಿಂದೂ ಸಂಪ್ರದಾಯದಂತೆ ಮಸೀದಿಯ ಆವರಣದಲ್ಲಿ ಮಾಡಲು ನಿರ್ಧರಿಸಿದೆ.

ಮಸೀದಿಯಲ್ಲಿ ನಡೆಯಲಿದೆ ಹಿಂದೂ ವಿವಾಹ

Tuesday January 07, 2020,

2 min Read

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿ ಸರ್ವೇಸಾಮಾನ್ಯ. ಹಲವು ಧರ್ಮ ಮತಗಳನ್ನು ಹೊಂದಿರುವ ನಮ್ಮ ನಾಡಿನಲ್ಲಿ, ಮದುವೆಯ ಶಾಸ್ತ್ರ ವಿಧಾನಗಳು ಒಂದಕ್ಕಿಂತ ಒಂದು ಭಿನ್ನ. ಇಷ್ಟೊಂದು ವಿಭಿನ್ನತೆ ನಮ್ಮಲ್ಲಿದ್ದರೂ ನಮ್ಮೆಲ್ಲರನ್ನೂ ಏಕತೆಯ ಎಳೆಯೊಂದು ಬಂಧಿಸಿದೆ.


ಇಂದು ನಮ್ಮಲ್ಲಿ ಈ ಐಕ್ಯತೆಯ ಅಸ್ತಿತ್ವವೇ ಅಲುಗಾಡುತ್ತಿರುವ ಸಂಧರ್ಭದಲ್ಲಿ, ಕೇರಳ ರಾಜ್ಯ ಕೋಮುಸೌಹಾರ್ದತೆಯನ್ನು ಸಾರುವ ಮಾನವೀಯತೆಯೆ ಮೊದಲ ಧರ್ಮವೆಂದು ಜನಸಮುದಾಯದಲ್ಲಿ ಸಾಮರಸ್ಯವನ್ನು ಬಿತ್ತುವಂತಹ ಕೆಲಸವನ್ನು ಮಾಡಿದೆ.


ಚಿತ್ರಕೃಪೆ: ಸಾಕ್ಷಿ ಸಮಾಚಾರ


ಕೇರಳದ ಕಾಯಂಕೊಲ್ಲಂನ ನಿವಾಸಿ ಬಿಂದು ಅವರ ಪತಿ ಅಶೋಕನ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ತೀರ ಬಡಕುಟುಂಬದಿಂದ ಬಂದ ಬಿಂದು ತಮ್ಮ ಎರಡು ಮಕ್ಕಳೊಂದಿಗೆ ತಮ್ಮ ಪತಿಯ ಅಂತ್ಯಸಂಸ್ಕಾರವನ್ನೂ ಸಹ ಕಷ್ಟದಿಂದಲೇ ಮುಗಿಸಿದ್ದರು.


ಇತ್ತೀಚಿಗೆ ತಮ್ಮ ಮಗಳಾದ ಅಂಜುವಿನ ಮದುವೆಯ ಕುರಿತು ಯೋಚಿಸಿದ ಬಿಂದು ಹಣಕಾಸಿನ ತೊಂದರೆಯನ್ನು ಈ ಹಿಂದೆ ತಮಗೆ ಸಹಾಯ ಮಾಡಿದ್ದ ಚೆರಾವಳಿ ಮುಸ್ಲಿಂ ಜಮಾಥ್ ಸಮಿತಿಯ ಕಾರ್ಯದರ್ಶಿ ನುಜುಮುದ್ದೀನ್ ಅಲುಮ್ಮುಟ್ಟಿಲ್ ಅವರ ಬಳಿ ಹೇಳಿಕೊಂಡರು.


ದ ಹಿಂದೂ ಜೊತೆಗೆ ಮಾತನಾಡಿದ ಬಿಂದು,


"ಹಣಕಾಸಿನ ತೊಂದರೆಯಿಂದಾಗಿ ನಾವು ಮದುವೆ ಮಾಡುವ ಸ್ಥಿತಿಯಲ್ಲಿರಲಿಲ್ಲ. ನುಜುಮುದ್ದೀನ್ ಈ ಹಿಂದೆ ನಮಗೆ ಸಹಾಯ ಮಾಡಿದ್ದರು. ನಾವು ಅವರನ್ನು ಸಂಪರ್ಕಿಸಿದಾಗ, ಅವರು ಎಲ್ಲಾ ಸಹಾಯವನ್ನು ಮಾಡುವ ಭರವಸೆ ನೀಡಿದರು,” ಎಂದರು.


ನುಜುಮುದ್ದೀನ್ ಬಿಂದು ಅವರಿಗೆ ಸಹಾಯಮಾಡಲು ನಿರ್ಧರಿಸುತ್ತಾರೆ. ಆದರೆ ಇದು ಅವರೊಬ್ಬರಿಂದ ಆಗುವ ಕೆಲಸವಲ್ಲ. ಈ ಹಿನ್ನಲೆಯಲ್ಲಿ ತಮ್ಮ ಜಮಾತ್ ನ ಮುಂದೆ ಈ ವಿಷಯವನ್ನು ಪ್ರಸ್ತುತ ಪಡಿಸುತ್ತಾರೆ.


ಶುಕ್ರವಾರ ಪ್ರಾರ್ಥನೆಯ ನಂತರ ನುಜುಮುದ್ದೀನ್ ಈ ವಿಷಯವನ್ನು ಜಮಾತ್‌ನ ಮುಂದಿಟ್ಟಾಗ, ಎಲ್ಲರೂ ಒಪ್ಪಿಗೆ ಸೂಚಿಸಿ, ಅಂಜು ಅವರ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಲಂನಲ್ಲಿರುವ ಚೇರಾವಲ್ಲಿ ಮುಸ್ಲಿಂ ಜಮಾತ್ ಸಮಿತಿಯು ಮಸೀದಿಯ ಆವರಣದಲ್ಲಿ ಆಯೋಜಿಸಲು ನಿರ್ಧರಿಸಿತು. ಮಾತ್ರವಲ್ಲದೆ ಮದುವೆಯ ಖರ್ಚುವೆಚ್ಚವನ್ನೆಲ್ಲಾ ಸಮಿತಿಯು ಭರಿಸಲು ಮುಂದಾಯಿತು, ವರದಿ ದ ವೀಕ್.


ಜನವರಿ 19 ರಂದು ಕೇರಳದ ಫಿತ್ರಾ ಇಸ್ಲಾಮಿಕ್ ಅಕಾಡೆಮಿಯು ಕೃಷ್ಣಪುರದ ಶರತ್ ಸಾಸಿ ಮತ್ತು ಚೇರಾವಳಿಯ ಅಂಜು ಅಶೋಕ್ ಅವರ ಈ ವಿನೂತನ ಮದುವೆಗೆ ಸಾಕ್ಷಿಯಾಗಲಿದೆ.


ದಯವಿಲ್ಲದ ಧರ್ಮವಾವುದಯ್ಯ ದಯವೇ ಧರ್ಮದ ಮೂಲವಯ್ಯ ಎಂದವರು ಬಸವಣ್ಣ. ಮಾನವೀಯತೆ, ಸ್ನೇಹ, ಪ್ರೀತಿ, ಮಮತೆಗಳಿಗಿಂತ ಮಿಗಿಲಾದ ಮತಧರ್ಮಗಳು ಇರಲು ಸಾಧ್ಯವಿಲ್ಲ. ಕೇರಳದ ಈ ಸಾಮರಸ್ಯದ ಕತೆ ದೇಶದೆಲ್ಲೆಡೆ ಹರಡಲಿ ಕೋಮುಸೌಹಾರ್ದತೆ ಎಲ್ಲೆರೆದೆಯಲ್ಲೂ ಮೂಡಲಿ ಎಂದು ಆಶಿಸೋಣ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.