ಪಾರಿವಾಳಗಳ ಪಾಲಿಗೆ ಅನ್ನದಾತ- ಪಕ್ಷಿ ಸಂಕುಲವನ್ನು ಕಾಪಾಡುವ ಸಂರಕ್ಷಕ
ಟೀಮ್ ವೈ.ಎಸ್. ಕನ್ನಡ
ಪರಿಸರದಿಂದ ನಾವೇನು ಪಡೆದುಕೊಳ್ಳುತ್ತೇವೆಯೋ ಅದರ ಅರ್ಧದಷ್ಟಾನ್ನಾದರೂ ಪರಿಸರಕ್ಕೆ ವಾಪಾಸ್ ಕೊಡಬೇಕು. ಆದ್ರೆ ಮನುಷ್ಯ ಪರಿಸರದಿಂದ ಪಡೆದುಕೊಂಡಿದ್ದನ್ನು ವಾಪಾಸ್ ಕೊಡುವ ವಿಚಾರ ಬಿಟ್ಟುಬಿಡಿ, ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಟ್ಟರೆ ಸಾಕು ಅನ್ನುವ ಹಾಗಾಗಿದೆ. ಈ ನಡುವೆ ಕೆಲವ ಸಂಸ್ಥೆಗಳು ನಮ್ಮ ನಡುವೆ ಇರುವ ಪ್ರಾಣಿಗಳನ್ನು, ಹಕ್ಕಿಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಗುಬ್ಬಚ್ಚಿ ಮರೆಯಾಗಿದೆ. ಮೊಬೈಲ್ ಟವರ್ಗಳ ರೇಡಿಯೇಷನ್ ಅವುಗಳ ಅವನತಿಗೆ ಕಾರಣ ಅನ್ನುವುದು ವಿಶ್ಲೇಷಕರ ವಾದ. ಇನ್ನೊಂದು ಕಡೆಯಲ್ಲಿ ಪಕ್ಷಿ ಸಂಕುಲವೇ ಅಪಾಯದ ಸ್ಥಿತಿಯಲ್ಲಿದೆ. ಮನೆಯ ಮುಂದೆಯೇ ಇರುವ ಪಾರಿವಾಳ ಕೂಡ ಮುಂದೊಂದು ನಶಿಸಿ ಹೋಗಬಹುದು. ಆಹಾರದ ಕೊರತೆ ಹಾಗೂ ಇನ್ನಿತರ ಕಾರಣಗಳು ಅವುಗಳ ಅವನತಿಗೆ ಕಾರಣವಾಗಬಹುದು. ಆದ್ರೆ ಅಪಾಯದ ಅಂಚಿನಲ್ಲಿರುವ ಪಾರಿವಾಳಗಳನ್ನು ಉಳಿಸಿಕೊಳ್ಳಲು ಬೆಂಗಳೂರಿನ ಸಂಸ್ಥೆಯೊಂದು ಶ್ರಮಿಸುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಕಷ್ಟು ಕಡೆ ವಿವಿಧ ರೀತಿಯಲ್ಲಿ ದಾಸೋಹ ನೀಡಲಾಗುತ್ತದೆ. ಆ ಸಾಲಿಗೆ ಈಗ ಪಾರಿವಾಳಕ್ಕೂ ದಾಸೋಹ ನಡೆಯುತ್ತಿದೆ. ಹೌದು ಪಾರಿವಾಳ ಮನುಷ್ಯ ಸಾಕುವ ಮುದ್ದಿನ ಪಕ್ಷಿಗಳಲ್ಲೊಂದು. ಅದನ್ನು ತುಂಬಾ ಪ್ರೀತಿಯಿಂದ ಕಾಣುತ್ತಾರೆ. ನಾವು ಎಷ್ಟೇ ಪ್ರೀತಿಯಿಂದ ಕಂಡರೂ ಬೆಂಗಳೂರಿನ ಬ್ಯುಸಿ ಬದುಕಿನಲ್ಲಿ ಅದಕ್ಕೆ ಪ್ರತಿ ದಿನ ಒಂದೇ ರೀತಿಯ ಪ್ರೀತಿ ತೋರಿಸುವುದು ಕಷ್ಟದ ಕೆಲಸ. ಅದಕ್ಕಾಗಿ ಬೆಂಗಳೂರಿನಲ್ಲೊಂದು ಸಂಸ್ಥೆ ಇದೆ. ಕಳೆದ ಈ ಸಂಸ್ಥೆ 20 ವರ್ಷಗಳಿಂದ ಪಾರಿವಾಳಗಳಿಗೆ ಆಹಾರ ನೀಡುವುದಲ್ಲದೆ, ಅವುಗಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದೆ. ಅದರ ಹೆಸರು, "ಕಬೂತರ್ ದಾನಾ ಸೇವಾ ಸಮಿತಿ".
ಈ "ಕಬೂತರ್ ದಾನಾ ಸೇವಾ ಸಮಿತಿ"ಯನ್ನು ರಾಜಾಜಿನಗರದ ಪುಖ್ರಾಜ್ ಎಂಬವರು ಗೆಳೆಯ ಪನಾಲಾಲ್ ಜತೆ ಸೇರಿ ಆರಂಭಿಸಿದ್ದರು. ಆದಾದ ಮೆಲೆ ಅದನ್ನು ಅವರ ಗೆಳೆಯರಾದ ವಸಂತ್‌ರಾಜ್ ಮುನ್ನಡೆಸುತ್ತಿದ್ದಾರೆ. ವಸಂತ್‌ರಾಜ್ ತಮ್ಮ ಇತರೆ ಕೆಲಸದ ಜತೆ ಪಾರಿವಾಳಗಳ ಯೋಗ ಕ್ಷೇಮನೋಡಿಕೊಳ್ಳುತ್ತಾರೆ.
" ದಿನವೊಂದಕ್ಕೆ 14ರಿಂದ 15 ಸಾವಿರ ರೂಪಾಯಿ ಇನ್ವೆಸ್ಟ್ ಆಗುತ್ತಿದೆ. ನಮ್ಮದೇ ಒಂದು ಟ್ರಸ್ಟ್ ಇರುವುದರಿಂದ ಸದ್ಯಕ್ಕೆ ಸಮಸ್ಯೆಯಾಗುತ್ತಿಲ್ಲ. ದಿನ ಕಳೆದಂತೆ ಪಾರಿವಾಳಗಳ ಹೆಚ್ಚಾಗುತ್ತಿದೆ. ದಾನಿಗಳು ಮುಂದೆ ಬಂದರೆ ಇನ್ನೂ ಸಹಾಯ ಆಗುತ್ತದೆ"
- ವಸಂತ್‌ರಾಜ್, ಪಾರಿವಾಳಗಳಿಗೆ ಆಹಾರ ನೀಡುವವರು
ಶುದ್ಧ ಸಸ್ಯಹಾರವನ್ನೇ ತಿನ್ನುವ ಏಕೈಕ ಪಕ್ಷಿ ಎಂದರೆ ಪಾರಿವಾಳ. ಅದು ಹಗಲು ರಾತ್ರಿ ನಿದ್ರೆ ಮಾಡುತ್ತದೆ. ರಾತ್ರಿ ಆಹಾರ ಸೇವಿಸುವ ವಿಶೇಷ ಪಕ್ಷಿ ಕೂಡ ಪಾರಿವಾಳವೇ ಆಗಿದೆ. ಇದರ ಮುಖ್ಯ ಆಹಾರ, ಜೋಳ, ಗೋಧಿ, ಹೆಸರುಕಾಳು, ಹುರಿಗಡಲೆ. ಜೋಳ ಮಾತ್ರ ಹೊಟ್ಟೆ ತುಂಬುವಂತಹ ಆಹಾರ. ಬೆಂಗಳೂರಿನಲ್ಲಿಸುಮಾರು 40 ರಿಂದ 50 ಸಾವಿರ ಪಾರಿವಾಳಗಳಿದ್ದು, ಅವುಗಳಿಗೆ ಅವಿರತ ದಾಸೋಹ ನೀಡುತ್ತಿದ್ದಾರೆ ವಸಂತರಾಜ್. ಇವರ ಸಮಿತಿಯಲ್ಲಿ 23 ಸದಸ್ಯರಿದ್ದಾರೆ.
20 ವರ್ಷಗಳಿಂದ ಸೇವೆ
ಈ ಕಬೂತರ್ ದಾನ ಸೇವಾ ಸಮಿತಿ ಕಳೆದ 20 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಈ ಹಿಂದೆ ಕೇವಲ 10 ಕಿಲೋಗ್ರಾಂ ನಷ್ಟು ಜೋಳತಿನ್ನುವಷ್ಟು ಪಾರಿವಾಳಗಳು ಮಾತ್ರ ಇದ್ದವಂತೆ. ಈಗ ಪಾರಿವಾಳಗಳ ಸಂಖ್ಯೆ ಬೆಳೆದು ದಿನಕ್ಕೆ 600 ಕಿಲೋಗ್ರಾಂ ಜೋಳವನ್ನು ಪ್ರತಿದಿನ ಪಾರಿವಾಳಗಳಿಗೆ ತಿನ್ನಲು ಕೊಡುತ್ತಾರೆ. ಆದರೆ, ಇವಕ್ಕೆ ಇಷ್ಟು ಸಾಲುತ್ತಿಲ್ಲವಂತೆ. ಜೋಳದ ಬೆಳೆ ಕಡಿಮೆಯಾಗಿ, ಬೆಲೆ ಹೆಚ್ಚಾಗಿರುವುದರಿಂದ ಕೈಲಾದಷ್ಟು ಆಹಾರವನ್ನುಒದಗಿಸಲಾಗುತ್ತಿದೆ. ಯಾರಾದರೂ ಜೋಳವನ್ನು ದಾನ ಮಾಡುವವರು ಮಾಡಬಹುದು.
ಎಲ್ಲೆಲ್ಲಿದೆ ಪಾರಿವಾಳಗಳಿಗೆ ಆಹಾರ..?
ಪ್ರತಿದಿನ ಬೆಳಗ್ಗೆ ಪಾರಿವಾಳಗಳ ಆಹಾರ ವಿತರಣೆಗೆಂದೇ ನಾಲ್ಕು ಜನರ ತಂಡ ಹೊರಡುತ್ತದೆ. ಬೆಳಗ್ಗೆ 6.30ಕ್ಕೆ ರಾಜಾಜಿನಗರದ ತಮ್ಮ ಉಗ್ರಾಣದಿಂದ ಧಾನ್ಯಗಳನ್ನು ಗಾಡಿಗಳಲ್ಲಿ ತುಂಬಿಕೊಂಡು ಹೊರಟು, ನೇತಾಜಿ ಪಾರ್ಕ್, ಸಾಣೆ ಗುರವನಹಳ್ಳಿ, ದೇವಯ್ಯ ಪಾರ್ಕ್, ಸ್ಯಾಂಕಿ ಟ್ಯಾಂಕ್, ಪ್ರೆಸ್‌ಕ್ಲಬ್ ವಾಹನ ನಿಲ್ದಾಣ, ಕಬ್ಬನ್ ಪಾರ್ಕ್ ಹಾಗೂ ಫ್ರೀಡಂ ಪಾರ್ಕ್ ಇಷ್ಟೂ ಸ್ಥಳಗಳಲ್ಲಿ ಆಹಾರ ಒದಗಿಸುತ್ತಾರೆ. ನಿತ್ಯವೂ ತಪ್ಪದೆ ಸಾಗುವ ಕಾಯಕವಿದು. ಹಬ್ಬ, ಹರಿದಿನ,ಉತ್ಸವ, ಜಾತ್ರೆ, ಚಳಿ, ಮಳೆ, ಬಿಸಿಲು ಇವ್ಯಾವುದರ ಲೆಕ್ಕವಿಲ್ಲದೆ, ಮೂಕ ಪಕ್ಷಿಗಳ ಹೊಟ್ಟೆ ತಣಿಸುವ ಕೆಲಸ ಸಾಗುತ್ತಿದೆ. ನೀವೇನಾದರೂ ಸಾವಿರಾರು ಪಾರಿವಾಳಗಳು ಒಟ್ಟಿಗೆ ಆಹಾರ ಸೇವಿಸುವ ದೃಶ್ಯವನ್ನು ನೋಡಬೇಕೆಂದರೆ ಈ ಜಾಗಗಳಿಗೆ ಹೇಳಿದ ಸಮಯಕ್ಕೆ ಹೋದರೆ ಕಣ್ತುಂಬಿಸಿಕೊಳ್ಳಬಹುದು.
ಚಿಕಿತ್ಸಾ ಸೌಲಭ್ಯ
ಒಂದು ವೇಳೆ ಪಾರಿವಾಳಗಳು ಗಾಯಗೊಂಡರೆ ಅವುಗಳಿಗೆ ಚಿಕಿತ್ಸೆಯನ್ನು ಒದಗಿಸಲಾಗುವುದು. ಅದಕ್ಕಾಗಿ ಒಬ್ಬರು ವೆಟರ್ನರಿ ವೈದ್ಯರನ್ನು ಕೂಡ ನೇಮಿಸಿಕೊಂಡಿದ್ದಾರೆ. ಗಾಯಗೊಂಡ ಪಾರಿವಾಳಗಳನ್ನು ತಂದು, ಅವುಗಳನ್ನು ಒಂದು ಗೂಡಿನಲ್ಲಿಟ್ಟು, ಚಿಕಿತ್ಸೆ ನೀಡಿ, ಸಂಪೂರ್ಣ ಗುಣಮುಖವಾದ ಮೇಲೆಹೊರಗೆ ಬಿಡುವ ವ್ಯವಸ್ಥೆ ಇದೆ.
ಜೈನ ಧರ್ಮದ ಪ್ರೇರಣೆ
ಪಾರಿವಾಳಗಳ ಹಸಿವು ತಣಿಸುವ ಈ ಕಾರ್ಯಕ್ಕೆ ವಸಂತ್‌ರಾಜ್ ಅವರಿಗೆ ಜೈನಧರ್ಮದ ಒಂದು ಘಟನೆಯೇ ಪ್ರೇರಣೆ. 16ನೇ ತೀರ್ಥಂಕರರಾದ ಶಾಂತಿನಾಥರು ರಾಜರಾಗಿದ್ದಾಗ, ಒಬ್ಬ ಬೇಟೆಗಾರ ಬಿಟ್ಟ ಬಾಣ, ಪಾರಿವಾಳಕ್ಕೆ ಹೊಕ್ಕು, ಅದು ಬಂದು ಶಾಂತಿನಾಥರ ತೊಡೆಯ ಮೇಲೆ ಕೂರುತ್ತದೆ. ಬೇಟೆಗಾರ ತನ್ನ ಬೇಟೆಯನ್ನು ತನಗೆ ಕೊಡಬೇಕೆಂದು ಶಾಂತಿನಾಥರಲ್ಲಿ ಆಗ್ರಹಿಸುತ್ತಾನೆ. ಆಗ ಶಾಂತಿನಾಥರು, "ನಿನಗೆ ಬೇಕಿರುವುದು ಮಾಂಸ ತಾನೇ? ತೆಗೆದುಕೋ ನನ್ನ ಮಾಂಸ' ಎಂದು ತಮ್ಮ ತೊಡೆಯ ಮಾಂಸವನ್ನು ಆತನಿಗೆ ಕೊಟ್ಟು ಅರೆ ಜೀವವಾಗಿದ್ದ ಪಾರಿವಾಳಕ್ಕೆ ಶುಶ್ರೂಷೆ ನೀಡಿ, ಬದುಕಿಸಿದರಂತೆಈ ಕಾರಣದಿಂದಾಗಿ ವಸಂತ್ ರಾಜ್ ಈ ಕೆಲಸವನ್ನು ಮಾಡುತ್ತಿದ್ದಾರೆ. ವಸಂತ್ ರಾಜ್ ಈಗ ಮಾಡುತ್ತಿರುವ ಕೆಲಸ ಮುಂದಿನ ದಿನಗಳಲ್ಲಿ ಪರಿಸರ ಮತ್ತು ಪಕ್ಷಿ ಸಂಕುಲಕ್ಕೆ ನೀಡುವ ಅತೀ ದೊಡ್ಡ ಕೊಡುಗೆ ಆಗುತ್ತದೆ ಅನ್ನುವ ನಂಬಿಕೆ ಎಲ್ಲರಿಗಿದೆ.
1. ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ರು- ಬಡವರ ಆರೋಗ್ಯ ಸೇವೆಗೆ ನಿಂತ ಮೊಬೈಲ್ ಡಾಕ್ಟರ್..!
2. ನಿಮ್ಮ ಬ್ಯೂಟಿಫುಲ್ ಲುಕ್ಗಾಗಿ ಡೆಸ್ರಿಂಗ್ ಸೆನ್ಸ್ ಹೀಗಿದ್ದರೆ ಚೆನ್ನ.. !
3. "ಸ್ವಚ್ಛಗೃಹ"ದಲ್ಲಿದೆ ಕಸದಿಂದ ರಸ ಮಾಡಿಕೊಳ್ಳುವ ಪಾಠ..!