ಬೆಂಗಳೂರಿನ ರಸ್ತೆ ದತ್ತು ಪಡೆಯಲು ಆಸಕ್ತಿ ಇರುವವರಿಗಾಗಿ ಬಿಬಿಎಂಪಿಯಿಂದ ವಿನೂತನ ಕಾರ್ಯಕ್ರಮ
ನಗರದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಬಿಬಿಎಂಪಿ 'ಅಡಾಪ್ಟ್-ಎ-ಸ್ಟ್ರೀಟ್' ಎನ್ನುವ ವಿನೂತನ ಕಾರ್ಯಕ್ರಮ ಆರಂಭಿಸಿದೆ. ಈ ಕಾರ್ಯಕ್ರಮಕ್ಕೆ ಕೈ ಜೋಡಿಸಬಯಸುವವರು ನಗರದ ಯಾವುದಾದರೂ ರಸ್ತೆಗಳನ್ನು ದತ್ತು ತೆಗೆದುಕೊಂಡು ಇನ್ನಷ್ಟು ಸ್ವಚ್ಛ ಸುಂದರವಾಗಿಡಲು ಕ್ರಮ ಕೈಗೊಳ್ಳಬಹುದಾಗಿದೆ.
ತಮ್ಮ ಮನೆಯ ವ್ಯಾಪ್ತಿಯ ಬೀದಿಯನ್ನು ಸ್ವಚ್ಛ ಮತ್ತು ಸುಂದರವಾಗಿ ಕಾಣ ಬಯಸುವ ಬೆಂಗಳೂರು ಜನರಿಗಾಗಿ, ಬಿಬಿಎಂಪಿ ರಸ್ತೆಗಳನ್ನು ದತ್ತು ನೀಡುವ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. 'ಅಡಾಪ್ಟ್-ಎ-ಸ್ಟ್ರೀಟ್' ಹೆಸರಿನಡಿ ಬಿಬಿಎಂಪಿ ವ್ಯಾಪ್ತಿಗೆ ಬರುವ ರಸ್ತೆಗಳನ್ನು ನೀವು ಸಹ ದತ್ತು ಪಡೆಯಬಹುದು. ಈ ಮೂಲಕ ರಸ್ತೆಯ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ರಸ್ತೆ ಹಸಿರೀಕರಣ, ಪಾದಚಾರಿ ಮಾರ್ಗ ನಿರ್ವಹಣೆ, ಬೀದಿ ದೀಪ ನಿರ್ವಹಣೆ ಮತ್ತು ಇತ್ಯಾದಿ ಚಟುವಟಿಕೆಗಳನ್ನು ನಿರ್ವಹಿಸಬಹುದು.
ನೀವು ದತ್ತು ಪಡೆದ ರಸ್ತೆಗಳ ನಿರ್ವಹಣೆಗೆ ಬಿಬಿಎಂಪಿ ಯಾವುದೇ ಅನುದಾನ ನೀಡುವುದಿಲ್ಲ. ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವ ದೃಷ್ಟಿಯಿಂದ ಬಿಬಿಎಂಪಿ ಜತೆ ಸಾರ್ವಜನಿಕರು ಕೈ ಜೋಡಿಸುವ ಕಾರ್ಯಕ್ರಮ ಇದಾಗಿದ್ದು, ರಸ್ತೆಗಳ ಸಮರ್ಪಕ ನಿರ್ವಹಣೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಬಿಬಿಎಂಪಿ ರಸ್ತೆಯನ್ನು ದತ್ತು ಪಡೆಯುವ ಆಸಕ್ತಿ ನಿಮಗಿದ್ದರೆ, ಇಲ್ಲಿ ನೀಡಿರುವ ಬಿಬಿಎಂಪಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು [email protected] ಗೆ ಕಳುಹಿಸಬಹುದು.
ಬೆಂಗಳೂರಿನ ಹಲವಾರು ಆಸಕ್ತ ಸ್ವಯಂ ಸೇವಕರು ಈಗಾಗಲೇ ಈ ಕಾರ್ಯಕ್ರಮದಡಿ ಕೈ ಜೋಡಿಸಿದ್ದಾರೆ, ದಿ-ಅಗ್ಲಿ-ಇಂಡಿಯನ್ (ಟಿಯುಐ) ಸಹಯೋಗದೊಂದಿಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಲ್ಲಿನ ನಿವಾಸಿಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ತಮ್ಮ ನೆರೆ ಹೊರೆಯ ರಸ್ತೆಗಳನ್ನು ಸ್ವಚ್ಛವಾಗಿಡಲು ಮತ್ತು ನಿರ್ವಹಿಸಲು ಒತ್ತಾಯಿಸಿದೆ. ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಿದ ಈ ಉಪಕ್ರಮಕ್ಕೆ ಆಸಕ್ತರಿಂದ 40ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
ಈ ಉಪಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ ಕೋರಮಂಗಲದ ಎಸ್.ಟಿ. ಬೆಡ್ ಲೇಔಟ್ ನಿವಾಸಿ ಚಿರಾಗ್ ಅರೋರಾರವರು ಹೀಗೆ ಹೇಳುತ್ತಾರೆ,
"ಎಲ್ಲ ಸಾಮಾಜಿಕ ಮಾಧ್ಯಮ ಮತ್ತು ಜನಪ್ರಿಯ ದಿನಪತ್ರಿಕೆಗಳಲ್ಲಿ 'ಅಡಾಪ್ಟ್-ದಿ-ಸ್ಟ್ರೀಟ್‌ನ ಪ್ರಕಟಣೆಯನ್ನು ಹೊರಟಿಸಿದ್ದಾರೆ. ನಾವು ಎಸ್‌ಟಿ ಬೆಡ್ ಲೇಔಟ್‌ನಿಂದ ಪ್ರಾರಂಭಿಸಿದ್ದೇವೆ" ವರದಿ ದಿ ಬೆಟರ್ ಇಂಡಿಯಾ.
ಚಿರಾಗ್‌ರವರ ತಂಡವು, ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಬಿಬಿಎಂಪಿ ಮತ್ತು ದಿ ಅಗ್ಲಿ ಇಂಡಿಯನ್ ಮಾರ್ಗದರ್ಶನದಲ್ಲಿ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಿತು. ಇವರು ಎಸ್‌ಟಿ ಬೆಟ್ ಲೇಔಟ್‌ನ ಒಂದು ದೊಡ್ಡ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ವಿಶೇಷವಾಗಿ ಗೋಡೆಗಳು ಮತ್ತು ಮರಗಳನ್ನು ಪೋಸ್ಟರ್ ಮುಕ್ತ ಮಾಡಲು ಬಯಸಿದ್ದಾರೆ. ಅವರು ಮರದ ಕೆಳಗಿನ ಭಾಗಕ್ಕೆ ಕೆಂಪು ಬಣ್ಣ ಬಳಿಯುತ್ತಾರೆ, ಇದು ಪೋಸ್ಟರ್‌ಗಳನ್ನು ಅಂಟಿಸದಂತೆ ಜನರನ್ನು ತಡೆಯುತ್ತದೆ ಎನ್ನುವುದು ಅವರ ಅಭಿಪ್ರಾಯ.
ಮುಂದುವರೆದು ಮಾತನಾಡುತ್ತಾ ಚಿರಾಗ್‌ರವರು ದಿ ಬೆಟರ್ ಇಂಡಿಯಾ ಗೆ ಹೀಗೆ ಹೇಳುತ್ತಾರೆ,
"ಬಿಬಿಎಂಪಿಯ ಈ ಕಾರ್ಯಕ್ರಮವು ಫಲಪ್ರದವಾಗಿದೆ, ಆಸಕ್ತರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲು ಸಫಲವಾಗಿದೆ. ಬಿಬಿಎಂಪಿ ಮತ್ತು ಟಿಯುಐಯು ಈ ಕಾರ್ಯಕ್ರಮವನ್ನು ನಿವಾಸಿಗಳ ಜೀವನಶೈಲಿಯ ಒಂದು ಅವಿಭಾಜ್ಯ ಅಂಗವಾಗಿಸುವ ದೃಷ್ಟಿಕೋನ ಹೊಂದಿದೆ. ಪ್ರದೇಶವನ್ನು ಅತ್ಯಂತ ಸ್ವಚ್ಛ ಮತ್ತು ಸುಂದರಗೊಳಿಸಿದ ಮೇಲೆ ಅದನ್ನು ಹಾಳು ಮಾಡಲು ಯಾವ ನಿವಾಸಿಯೂ ಬಯಸುವುದಿಲ್ಲ."
ಜವಾಬ್ದಾರಿಗಳೇನು?
ರಸ್ತೆಯನ್ನು ದತ್ತು ಪಡೆದುಕೊಳ್ಳಬಯಸುವವರಿಗೆ ಬಿಬಿಎಂಪಿ ಈ ನಾಲ್ಕು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಸೂಚಿಸಿದೆ.
ರಸ್ತೆಯ ಸ್ವಚ್ಛತೆ
- ನಿಯಮಿತವಾಗಿ ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಳ್ಳುವುದು (ಕನಿಷ್ಟ ತಿಂಗಳಿಗೊಮ್ಮೆ)
- ರಸ್ತೆಯಲ್ಲಿ ಕಾನೂನುಬಾಹಿರ ಬ್ಯಾನರ್, ಫ್ಲೆಕ್ಸ್, ಒಎಫ್‌ಸಿ ಕೇಬಲ್ ಅಳವಡಿಸದಂತೆ ನಿಗಾ ವಹಿಸುವುದು, ತೆರವು ಮಾಡುವುದು ಅಥವಾ ಬಿಬಿಎಂಪಿಗೆ ಮಾಹಿತಿ ನೀಡುವುದು
- ತ್ಯಾಜ್ಯವನ್ನು ಕಡಿಮೆಗೊಳಿಸುವುದು ಮತ್ತು ರೂಪಾಂತರಗೊಳಿಸುವುದು
- ಸ್ವಂತ ಸಿಬ್ಬಂದಿಗಳ ಮೂಲಕ ಪ್ರತಿನಿತ್ಯ ರಸ್ತೆಗಳನ್ನು ಸ್ಚಚ್ಛಗೊಳಿಸುವುದು
ರಸ್ತೆಯನ್ನು ಹಸಿರಾಗಿಡುವುದು
- ಪಾದಚಾರಿ ಮಾರ್ಗದಲ್ಲಿ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟಿರುವ ಸಸ್ಯಗಳ ಸಂರಕ್ಷಣೆ ಮತ್ತು ನಿರ್ವಹಣೆ
- ಅನುಮತಿ ಪಡೆದು ಹೊಸ ಗಿಡಗಳನ್ನು ಬೆಳೆಸುವುದು
- ಒಣ ಮರ ಮತ್ತು ರೆಂಬೆಗಳ ತೆರವುಗೊಳಿಸುವ ಅವಶ್ಯಕತೆಯಿದ್ದರೆ ಬಿಬಿಎಂಪಿಗೆ ಮಾಹಿತಿ ನೀಡುವುದು
ಪಾದಚಾರಿ ಮಾರ್ಗ ನಿರ್ವಹಣೆ
- ಹಾಳಾಗಿರುವ ಪಾದಚಾರಿ ಮಾರ್ಗವನ್ನು ಗುರುತಿಸಿ ಸರಿಪಡಿಸುವುದು
- ಪಾದಚಾರಿ ಮಾರ್ಗದ ಸಣ್ಣ-ಪುಟ್ಟ ಅಡೆತಡೆಗಳನ್ನು ತೆರವುಗೊಳಿಸಲು ಸಹಾಯ ಮಾಡುವುದು
- ನೀರಿನ ಸೋರಿಕೆಯನ್ನು ತಡೆಗಟ್ಟಿ ರಾಜಕಾಲುವೆಗೆ ಸರಾಗವಾಗಿ ಹರಿಯುವಂತೆ ನಿಗಾ ವಹಿಸುವುದು
- ಕಾರ್ಯ ನಿರ್ವಹಿಸದ ಬೀದಿ ದೀಪಗಳ ಕುರಿತು ಮಾಹಿತಿ ನೀಡುವುದು ಮತ್ತು ಸರಿಪಡಿಸಲು ನೆರವಾಗುವುದು
ರಸ್ತೆಗೆ ಇತರ ಸೌಲಭ್ಯಗಳು
- ಸಂಬಂಧ ಪಟ್ಟ ಇಲಾಖೆಯ ಅನುಮತಿಯ ಮೇರೆಗೆ ರಸ್ತೆಗಳಲ್ಲಿ ಪೀಠೋಪಕರಣಗಳು ಮತ್ತು ಸೌಕರ್ಯಗಳನ್ನು ಅಳವಡಿಸಲು ನೆರವಾಗುವುದು, ಉದಾಹರಣೆಗೆ: ಕಸದ ತೊಟ್ಟಿ ಅಳವಡಿಸುವುದು, ಬೆಂಚುಗಳನ್ನು ಅಳವಡಿಸುವುದು ಇತ್ಯಾದಿ.
ರಸ್ತೆಗಳನ್ನು ದತ್ತುಪಡೆಯಲುನ ಆಸಕ್ತಿ ಇರುವವರಿಗೆ ಬಿಬಿಎಂಪಿ ಮೊದಲು ಪ್ರಾಯೋಗಿಕವಾಗಿ ರಸ್ತೆ ಸ್ವಚ್ಛಗೊಳಿಸುವ ಪರೀಕ್ಷೆ ನೀಡಲಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ದತ್ತು ಪಡೆಯುವ ಅವಕಾಶ ಸಿಗಲಿದೆ. ಕಳೆದ ಭಾನುವಾರ ಕೋರಮಂಗಲ ಮತ್ತು ಸದಾಶಿವನಗರದಲ್ಲಿ ದತ್ತು ಪಡೆಯಲು ಆಸಕ್ತಿ ಹೊಂದಿದ ಸಂಸ್ಥೆಗಳು ಪ್ರಾಯೋಗಿಕವಾಗಿ ಸ್ವಚ್ಛತಾ ಕಾರ್ಯ ನಡೆಸಿವೆ. ನಮ್ಮ ಬೆಂಗಳೂರನ್ನು ಸ್ವಚ್ಛ ಮತ್ತು ಸುಂದರವನ್ನಾಗಿ ಪರಿವರ್ತಿಸುವ ಆಂದೋಲನಕ್ಕೆ ನೀವೂ ಸಹ ಕೈ ಜೋಡಿಸಬಹುದು.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.