ಪುಣೆ ಮಹಾನಗರಿಯ ಹಳೆ ಮಾರುಕಟ್ಟೆಗೆ ತಮ್ಮ ಕುಂಚದಿಂದ ಹೊಸ ಜೀವಕಳೆ ತುಂಬಿದ ಕಲಾವಿದೆಯರು
ಅನುಷ್ಕಾ ಹಾರ್ಡಿಕರ್ ಹಾಗೂ ಅಲೆಫಿಯಾ ಕಚ್ವಲ್ಲಾ ತಮ್ಮ ವರ್ಣಚಿತ್ರಗಳ ಮೂಲಕ ಜನಸಮುದಾಯದಿಂದ ಮರೆಯಾಗುತ್ತಿರುವ ಕಥೆಗಳನ್ನು ಹೇಳುತ್ತಿದ್ದಾರೆ ಹಾಗೂ ಜನಸಮುದಾಯಕ್ಕೆ ಅಗತ್ಯ ಇರುವ ಸ್ವಚ್ಛತೆಯ ಕುರಿತು ಅರಿವನ್ನು ಮೂಡಿಸುತ್ತಿದ್ದಾರೆ.
ಭಾರತದಾದ್ಯಂತ ಬಹುತೇಕ ನಗರಗಳಲ್ಲಿ ಬೀದಿಗಳು ಒಂದೋ ಕಸದ ರಾಶಿಯಿಂದ ಕೂಡಿರುತ್ತವೆ, ಇಲ್ಲವೇ ಬೀದಿಗೆ ಬೀದಿಯೇ ಸಪ್ಪೆಯಾಗಿ ಬೇಸರ ತರಿಸುವಂತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರೇತರ ಸಂಸ್ಥೆಗಳ ಪ್ರಯತ್ನದಿಂದ, ಜನಸಾಮಾನ್ಯರ ಶ್ರಮದಿಂದ, ಸ್ವಚ್ಛ ಭಾರತದಂತ ಸರಕಾರಿ ಕಾರ್ಯಕ್ರಮಗಳಿಂದ ನಮ್ಮ ದೇಶದ ಬೀದಿಗಳು ಸ್ವಚ್ಛ -ಸುಂದರ ಬೀದಿಗಳಾಗುತ್ತಾ ಬದಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಪುಣೆ ಮಹಾನಗರ ಬೀದಿಗಳನ್ನು ವರ್ಣಮಯಗೊಳಿಸಿದ ಗ್ರಾಫಿಕ್ಸ್ ಡಿಸೈನರ್ ಅನುಷ್ಕಾ ಹಾರ್ಡಿಕರ್ (24) ಹಾಗೂ ಡಿಜಿಟಲ್ ಮಾರ್ಕೆಟರ್ ಅಲೆಫಿಯಾ ಕಚ್ವಲ್ಲಾ (25) ಈ ಇಬ್ಬರು ಕಲಾವಿದೆಯರ ಸಾಧನೆ ಗಮನಾರ್ಹ.
ಇವರು "ಫ್ರೆಶ್ ಕೋಟ್" ಎಂಬ ತಮ್ಮ ಸಹಭಾಗಿತ್ವದ ಯೋಜನೆಯ ಮೂಲಕ ಪುಣೆಯ ಅತ್ಯಂತ ಹಳೆಯಮಾರುಕಟ್ಟೆ ರವಿವಾರ್ ಪೇಟ್ ನ ಸುಮಾರು 18 ಅಂಗಡಿಗಳು ಮತ್ತು 20 ಅಂಗಡಿಗಳ ಬಾಗಿಲುಗಳ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ರಚಿಸಿ ಪೂರ್ಣ ಮಾರುಕಟ್ಟೆಗೆ ಹೊಸ ಜೀವಕಳೆ ತಂದಿದ್ದಾರೆ.
ಈ ಜೋಡಿ ತಮ್ಮ ಚಿತ್ರಗಳ ಮೂಲಕ ಅಂಗಡಿಗಳಲ್ಲಿ ಹುದುಗಿರುವ ಅದೆಷ್ಟೋ ಕತೆಗಳಿಗೆ ಪುನರ್ಜನ್ಮ ನೀಡುವುದಲ್ಲದೆ, ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಮೊಟ್ಟ ಮೊದಲ ಪ್ರಯತ್ನ
ಇದೆಲ್ಲಾ ಪ್ರಾರಂಭವಾಗಿದ್ದು ಅಲೆಫಿಯಾ ಅವರ ತಂದೆಯ "ಕಿಂಗ್ಸ್ ಪೇಪರ್ ಅಂಡ್ ಸ್ಟೇಷನರಿ" ಅಂಗಡಿಯಿಂದ. ಈ ಮಾರುಕಟ್ಟೆಯನ್ನ ಬಹಳ ಹತ್ತಿರದಿಂದ ಆಳವಾಗಿ ಅಧ್ಯಯನ ನಡೆಸಿದ ಅಲೆಫಿಯಾಗೆ ಅನ್ನಿಸಿದ್ದು ಈ ಮಾರುಕಟ್ಟೆಯ ಪ್ರತಿಯೊಂದು ಅಂಗಡಿಗಳು ತನ್ನಲ್ಲಿ ಅದೆಷ್ಟೋ ದಾಖಲಿಸಬಹುದಾದ ಕತೆಗಳನ್ನು ಅಡಗಿಸಿಟ್ಟುಕೊಂಡಿವೆ ಎಂದು.
ಅಲೆಫಿಯಾ ಅವರು ತಮ್ಮ ಯೋಜನೆಯ ಪ್ರಾರಂಭದ ಉದ್ದೇಶವನ್ನು ವಿವರಿಸುತ್ತಾ ಎಡೆಕ್ಸ್ ಲೈವ್ ಗೆ ಹೀಗೆ ಹೇಳಿದರು,
"ಈ ಮಾರುಕಟ್ಟೆಯಲ್ಲಿ ಅಂಗಡಿ ಹೊಂದಿರುವ ಪ್ರತಿಯೊಂದು ಕುಟುಂಬವು ತಮ್ಮದೇ ಆದ ಕಥೆಯನ್ನು ಹೊಂದಿವೆ. ಒಂದರ್ಥದಲ್ಲಿ ಇದು ಪುಣೇನಗರ ಬೆಳೆದುಬಂದ ಸಂಸ್ಕೃತಿಯನ್ನು ವಿವರಿಸುತ್ತದೆ. ಆದ್ದರಿಂದ ಈ ಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವರ್ಣಚಿತ್ರಗಳೇ ಅತ್ಯಂತ ಸೂಕ್ತ ಎಂದು ಈ ಕುರಿತು 2018 ದ ಡಿಸೆಂಬರ್ ನಲ್ಲಿ ಯೋಜನೆಯನ್ನು ರೂಪಿಸಲು ಆರಂಭಿಸಿದೆವು" ಎಂದರು
ಮುಂದುವರೆದು,
"ಅಂಗಡಿಗಳ ಬಾಗಿಲು ಕವಾಟಗಳ ಮೇಲೆ ಚಿತ್ರ ರಚಿಸುವುದು ನಮ್ಮ ಉದ್ದೇಶವಾಗಿರಲಿಲ್ಲ, ಪ್ರಾರಂಭದಲ್ಲಿ ಗೋಡೆಗಳ ಮೇಲೆ ಚಿತ್ರ ರಚಿಸಲು ಮುಂದಾದೆವು. ಆದರೆ ಖಾಲಿ ಗೋಡೆಗಳು ಸಾಕಷ್ಟು ಇಲ್ಲದೇ ಇರುವ ಕಾರಣ ಅಂಗಡಿಗಳ ಬಾಗಿಲು ಕವಾಟಗಳ ಮೇಲೆ ಚಿತ್ರರಚಿಸಲು ಪ್ರಾರಂಭಿಸಿದೆವು" ಎಂದರು.
ಕಥೆ ಹೇಳುವ ಬಗೆ
ಇಬ್ಬರು ಬಾಗಿಲುಗಳ ಮೇಲೆ ತಮ್ಮ ಕುಂಚಗಳಿಂದ ರಚಿಸಿದ ಕಲಾಕೃತಿಯ ಮೂಲಕ ನೋಡುಗರಿಗೆ ಆ ಅಂಗಡಿಯ ಕಥೆಯನ್ನ ಹೇಳಲು ನಿರ್ಧರಿಸಿದರು. ತಮ್ಮ ವಿನೂತನ ಪ್ರಯತ್ನವನ್ನು ದಿ ಹಿಂದೂ ಜೊತೆ ಹಚ್ಚಿಕೊಂಡ ಅನುಷ್ಕಾ,
"ಅಂತಿಮವಾಗಿ ಇದು ನಮ್ಮ ಮತ್ತು ಅಂಗಡಿ ಮಾಲೀಕರ ಒಟ್ಟು ಪ್ರಯತ್ನ. ಚಿತ್ರ ರಚಿಸುವ ಮೊದಲು ನಾವು ಅವರೊಂದಿಗೆ ಕುಳಿತು ಅವರ ಅಂಗಡಿ ಬೆಳೆದು ಬಂದ ಕತೆಯನ್ನು ದಾಖಲಿಸಿಕೊಂಡು ನಂತರ ಅವರ ಸಲಹೆಯೊಂದಿಗೆ ಬಾಗಿಲುಗಳ ಮೇಲೆ ಚಿತ್ರಬಿಡಿಸಲು ಪ್ರಾರಂಭಿಸಿದೆವು."
ಅವರೊಂದಿಗೆ ಆರಂಭಿಕ ಹಂತದಲ್ಲಿ ಅಂದರೆ ಏಪ್ರಿಲ್ 1 ರಿಂದ 2019 ರ ಜೂನ್ 1 ರವರೆಗೆ, ಈ ಯೋಜನೆಯಲ್ಲಿ 30 ಕಲಾವಿದರು ಜೊತೆಗಿದ್ದರು.
ಈ ಪ್ರಕ್ರಿಯೆಯ ಕುರಿತು ಅನುಷ್ಕಾ ಹೀಗೆ ಹೇಳುತ್ತಾರೆ,
“ಇಲ್ಲಿನ ಅಂಗಡಿಗಳ ಬಾಗಿಲು ಹೆಚ್ಚಾಗಿ ಲೋಹ ಇಲ್ಲವೇ ಮರದಿಂದ ಮಾಡಲ್ಪಟ್ಟಿದೆ. ನಾವು ಸಾಮಾನ್ಯವಾಗಿ ಬಳಸುವ ಬಣ್ಣವು ತೈಲ ಆಧಾರಿತವಾಗಿದ್ದು ಅದು ಹೆಚ್ಚು ಕಾಲ ಉಳಿಯುತ್ತದೆ, ಉತ್ತಮ ಬಾಳಿಕೆ ಬರುವ ಇವು ಸುಲಭವಾಗಿ ನಾಶವಾಗುವುದಿಲ್ಲ. ಪ್ರತಿಯೊಂದು ಕಲಾಕೃತಿಗಳನ್ನು ವಿಭಿನ್ನ ಕಲಾವಿದರೊಂದಿಗೆ ರಚಿಸಲಾಗಿದೆ” ಎಡೆಕ್ಸ್ ಲೈವ್ ವರದಿ.
ಕೆಲವೊಮ್ಮೆ, ಅಂಗಡಿಯವರು ಸಹ ಈ ಪ್ರಕ್ರಿಯೆಯಲ್ಲಿ ತಮ್ಮ ಅಂಗಡಿ ಮತ್ತು ಕಪಾಟುಗಳನ್ನು ಹೇಗೆ ಚಿತ್ರಿಸಬೇಕೆಂದು ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾರೆ, ಕೆಲವೊಬ್ಬರೂ ತಮ್ಮ ಅಂಗಡಿಯ ಚಿತ್ರಗಳು ತಾವು ಮಾರಾಟ ಮಾಡುವ ಬಗೆಯನ್ನು ತೋರಿಸುವಂತಿರಬೇಕು ಎಂದರೆ ಮತ್ತೆ ಕೆಲವರು ಚಿತ್ರಗಳು ಗ್ರಾಹಕಸ್ನೇಹಿ ಆಗಿರಬೇಕು ಎಂದು ಬಯಸುತ್ತಾರೆ.
ಮುಂದೆ ಮಾತನಾಡುತ್ತ ಅನುಷ್ಕಾ ಹೀಗೆ ಹೇಳುತ್ತಾರೆ,
ಸಾಮಾನ್ಯವಾಗಿ ನಾವು 3 ಗಂಟೆಗಳಲ್ಲೇ ಈ ಎಲ್ಲಾ ಕೆಲಸವನ್ನು ಮುಗಿಸುತ್ತೇವೆ ಹೆಚ್ಚಾಗಿ ಭಾನುವಾರದ ಬೆಳಿಗ್ಗೆ 6 ರಿಂದ ಬೆಳಿಗ್ಗೆ 9 ರವರೆಗೆ. ಕೈಯಲ್ಲಿ ಎತ್ತಿಹಿಡಿದು ಚಿತ್ರಿಸಬೇಕಾದ ಬಾಗಿಲುಗಳಿಗೆ ನಮಗೆ ಇನ್ನು ಹೆಚ್ಚಿನ ಜನರ ಅವಶ್ಯಕತೆ ಉಂಟಾಗುತ್ತದೆ ಮತ್ತು ಇಂತಹ ಕೆಲಸಗಳು ಪೂರ್ತಿ ಭಾನುವಾರವನ್ನು ತೆಗೆದುಕೊಳ್ಳುತ್ತದೆ. ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದರೆ ಅಥವಾ ಚಿತ್ರಗಳಿಗೆ ಅಂತಿಮ ಸ್ಪರ್ಶ ನೀಡಬೇಕಿದ್ದರೆ ಇನ್ನೊಂದು ಭಾನುವಾರ ಮತ್ತೆ ಬಂದು ಎಲ್ಲವನ್ನೂ ಪೂರ್ಣಗೊಳಿಸುತ್ತೇವೆ, ಎಡೆಕ್ಸ್ ಲೈವ್ ವರದಿ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.