16.7 ಲಕ್ಷ ಭಾರತೀಯರನ್ನು ಬಲಿ ತೆಗೆದುಕೊಂಡ ವಾಯು ಮಾಲಿನ್ಯ
ಭಾರತದ ವಾಯು ಮಾಲಿನ್ಯ ಮತ್ತು ಆರೋಗ್ಯದ ಮೇಲೆ ಅದರಿಂದಾಗಿರುವ ಪರಿಣಾಮವನ್ನು ಬಿಚ್ಚಿಡುವ ಅಧ್ಯಯನವನ್ನು ದಿ ಲ್ಯಾನ್ಸೆಟ್ ಪ್ಲಾನೆಟರಿ ಹೇಲ್ತ್ ಬಿಡುಗಡೆಗೊಳಿಸಿದ್ದು, ಫಲಿತಾಂಶ ಆಶ್ಚರ್ಯ ಮೂಡಿಸುವಂತಿದೆ.
2019 ರಲ್ಲಿ ವಾಯು ಮಾಲಿನ್ಯದಿಂದ ಭಾರತದಲ್ಲಿ 16.7 ಲಕ್ಷ ಜನ ಮರಣ ಹೊಂದಿದ್ದಾರೆ. ದೇಶದಲ್ಲಾದ ಒಟ್ಟು ಸಾವುಗಳಲ್ಲಿ 17.8 ಪ್ರತಿಶತ ಜನರು ಏರುತ್ತಿರುವ ವಾಯು ಮಾಲಿನ್ಯದಿಂದಲೆ ಸಾವಿಗೀಡಾಗಿದ್ದಾರೆ. ಅಷ್ಟೇ ಅಲ್ಲದೆ ಈ ಸಾವುಗಳಿಂದ ದೇಶದ ಜಿಡಿಪಿಗೆ 1.36 ಪ್ರತಿಶತ ನಷ್ಟವಾಗಿದೆ ಎಂದು ತಿಳಿಸುತ್ತದೆ ಗ್ಲೋಬಲ್ ಬರ್ಡನ್ ಆಪ್ ಡಿಸೀಸ್ ಸ್ಟಡಿ 2019 ಅಧ್ಯಯನ.
ಈ ಸಾವುಗಳಲ್ಲಿ ಬಹುಪಾಲು ಅಂದರೆ 6.1 ಲಕ್ಷ ಸಾವುಗಳು ಮನೆಗಳಲ್ಲಿ ಉಂಟಾಗುವ ಮಾಲಿನ್ಯದಿಂದಾದರೆ ಮತ್ತು 9.8 ಲಕ್ಷ ಸಾವುಗಳು ಹೊರಗೆ ಸುತ್ತುವರಿದ ಮಾಲಿನ್ಯದಿಂದ ಸಂಭವಿಸಿದೆ. 1990 ರಿಂದ 2019 ರವರೆಗೆ ಮನೆಗಳಲ್ಲಿ ಉಂಟಾಗುವ ಮಾಲಿನ್ಯದಲ್ಲಿ 64.2 ಪ್ರತಿಶತದಷ್ಟು ಇಳಿಕೆ ಕಂಡು ಬಂದಿದ್ದು, ಹೊರಗೆ ಸುತ್ತುವರಿದ ಮಾಲಿನ್ಯದಲ್ಲಿ 115.3 ಪ್ರತಿಶತ ಮತ್ತು ಸುತ್ತುವರಿದ ಓಜೋನ್ ಮಾಲಿನ್ಯದಲ್ಲಿ 139.2 ಪ್ರತಿಶತ ಏರಿಕೆ ಕಂಡು ಬಂದಿದೆ.
ಕಲ್ಲಿದ್ದಲು ಮತ್ತು ಕೃಷಿ ತ್ಯಾಜ್ಯ ಸುಡುವುದು, ಸಾರಿಗೆ ವಾಹನಗಳು ಮತ್ತು ಇತ್ಯಾದಿಗಳು ಹೊರಗೆ ಸುತ್ತುವರೆದಿರುವ ಮಾಲಿನ್ಯಕ್ಕೆ ಕಾರಣವಾದರೆ, ಅಡುಗೆಗಾಗಿ ಕಟ್ಟಿಗೆ, ಸಗಣಿ, ಕಲ್ಲಿದ್ದಲು ಉರಿಸುವುದೆ ಮನೆ ಮಾಲಿನ್ಯಕ್ಕೆ ಪ್ರಮುಖ ಕಾರಣ. ಓಜೋನ್ ಮಾಲಿನ್ಯಕ್ಕೆ ಸಾರಿಗೆ ವಾಹನ, ಫ್ಯಾಕ್ಟರಿ, ಪವರ್ ಪ್ಲಾಂಟ್‌ಗಳು ಹೊರ ಸೂಸುವ ಮಾಲಿನ್ಯಕಾರಕಗಳಿಂದಾಗಿವೆ.
ಅಕಾಲಿಕ ಮರಣ ಮತ್ತು ಕಾಯಿಲೆಯಿಂದಾಗಿ ಒಟ್ಟಾರೆ 36.8 ಬಿಲಿಯನ್ ಡಾಲರ್ ನಷ್ಟವಾಗಿದ್ದು, ಇದು ಜಿಡಿಪಿಯ 1.36 ಪ್ರತಿಶತಕ್ಕೆ ಸಮನಾಗಿದೆ. ಶ್ವಾಸಕೋಶದ ಕಾಯಿಲೆಯಿಂದ ಶೇ. 36, ಉಸಿರಾಟದ ತೊಂದರೆಯಿಂದ ಶೇ. 14.2, ಶ್ವಾಸಕೋಶದ ಕ್ಯಾನ್ಸರ್‌ನಿಂದ ಶೇ. 1.2, ಪಾರ್ಶವಾಯುವಿನಿಂದ ಶೇ. 14.1 ಮತ್ತು ಮಧುಮೇಹದಿಂದ ಶೇ. 8.4 ರಷ್ಟು ಸಾವುಗಳು ಸಂಭವಿಸಿವೆ.
ಬಡ ರಾಷ್ಟ್ರಗಳಾದ ಉತ್ತರ ಪ್ರದೇಶ, ಬಿಹಾರ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಡದಲ್ಲಿ ಅತೀ ಹೆಚ್ಚು ನಷ್ಟವಾಗಿದೆ. ದೆಹಲಿ ಅತೀ ಹೆಚ್ಚಿನ ತಲಾದಾಯ ನಷ್ಟ ಅನುಭವಿಸಿದ್ದು, ನಂತರದ ಸ್ಥಾನದಲ್ಲಿ ಹರಿಯಾಣ ಇದೆ.
ವಾಯುಮಾಲಿನ್ಯದಿಂದುಂಟಾಗುವ ಸಾವು ನೋವು ಮತ್ತು ಆರ್ಥಿಕ ನಷ್ಟ 2024ಕ್ಕೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಬೇಕೆನ್ನುವ ಭಾರತದ ಕನಸಿಗೆ ಅಡ್ಡಿಯನ್ನುಂಟು ಮಾಡಬಹುದು. ರಾಜ್ಯವಾರು ವಿಭಿನ್ನ ತಂತ್ರಗಳನ್ನು ಅನುಸರಿಸಿ ವಾಯು ಮಾಲಿನ್ಯವನ್ನು ಯಶಸ್ವಿಯಾಗಿ ಕಡಿಮೆ ಮಾಡಿದ್ದೆ ಆದಲ್ಲಿ ಆರೋಗ್ಯವಾಗಿಯೂ ಆರ್ಥಿಕವಾಗಿಯೂ ದೇಶಕ್ಕೆ ಲಾಭವಾಗಲಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.