ಆಂಬ್ಯುಲೆನ್ಸ್‌ಗೆ ದಾರಿ ಕಲ್ಪಿಸಿ ಜೀವ ಉಳಿಸುವ 7 ವರ್ಷದ ಬಾಲಕಿಯ ಮೊಬೈಲ್ ಆ್ಯಪ್
ಬೆಂಗಳೂರಿನ ಬೃಂದಾ ಜೈನ್ ಎಂಬ 7 ವರ್ಷದ ಬಾಲಕಿ ಆಂಬ್ಯುಲೆನ್ಸ್ ವ್ಹಿಜ್ ಎಂಬ ಮೊಬೈಲ್ ಆ್ಯಪ್‍ಅನ್ನು ರಚಿಸಿದ್ದು, ಆಂಬುಲೆನ್ಸ್ ಬಗ್ಗೆ ಮುಂಚಿತವಾಗಿಯೇ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ನಗರದಾದ್ಯಂತ ಆಂಬುಲೆನ್ಸ್‌ಗಳಿಗಾಗಿ ವೇಗವಾಗಿ ಕಾರಿಡಾರ್ ರಚಿಸಿ ಜೀವ ಉಳಿಸುವ ಗುರಿ ಹೊಂದಿದ್ದಾಳೆ.
ಬೆಳೆಯುವ ಪೈರು ಮೊಳಕೆಯಲ್ಲಿಯೇ ಸಿರಿ ಎಂಬ ಮಾತು ನಿಜಕ್ಕೂ ಅರ್ಥಪೂರ್ಣ. ಸಾಧನೆಗೆ ವಯಸ್ಸಿನ ಮಿತಿಯಿಲ್ಲ, ಸಾಧಿಸುವ ಛಲ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಮನಸ್ಥಿತಿ ಅಗತ್ಯವಾಗಿರುತ್ತದೆ.
ಏಳನೇ ವಯಸ್ಸಿನಲ್ಲೆ ಜೀವ ಉಳಿಸುವಂತಹ ಕೆಲಸಕ್ಕೆ ಸಾಕ್ಷಿಯಾದವಳು ಬೃಂದಾ ಜೈನ್. ಬೆಂಗಳೂರಿನ ವೈದ್ಯಕುಟುಂಬದಿಂದ ಬಂದ 7 ವರ್ಷದ ಬೃಂದಾ ತಾನೇ ಖುದ್ದಾಗಿ ಆಂಬುಲೆನ್ಸ್ ವ್ಹಿಜ್ ಎಂಬ ಆ್ಯಪ್‍ಅನ್ನು ಅಭಿವೃದ್ದಿಪಡಿಸಿ ರೋಗಿಗಳಿಗಾಗಿ ಮತ್ತು ವೈದ್ಯಲೋಕಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡಿದ್ದಾಳೆ.
ಹೃದಯಾಘಾತಕ್ಕೆ ಮತ್ತು ಪಾರ್ಶ್ವವಾಯುಗೆ ಒಳಗಾದ ರೋಗಿಗಳಿಗೆ ಮೊದಲ ಕೆಲವು ಗಂಟೆಗಳು ತುಂಬಾ ಸೂಕ್ಷ್ಮವಾದದ್ದು. ಇದು ವ್ಯಕ್ತಿಯ ಸಾವು ಬದುಕನ್ನು ನಿರ್ಧರಿಸುತ್ತದೆ. ಆದರೆ ಇಂದು ಮಹಾನಗರಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ನ ಸಮಸ್ಯೆ ಅದೆಷ್ಟೋ ರೋಗಿಗಳಿಗೆ ಪ್ರಣಾಕಂಟಕವಾಗಿದೆ.
ಅನೇಕ ಮಹಾನಗರಗಳಲ್ಲಿ, ಟ್ರಾಫಿಕ್ ಜಾಮ್‌ಗಳಿಂದ ತಪ್ಪಿಸಿಕೊಳ್ಳಲು ಮತ್ತು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್‌ಗಳಿಗೆ ಸಾಧ್ಯವಾಗದಿರುವುದು ಸಾಮಾನ್ಯವಾಗಿದೆ. ಆಂಬುಲೆನ್ಸ್‌ಗೆ ಸಹಾಯ ಮಾಡಲು ನಗರದ ಮೂಲೆ ಮೂಲೆಯಲ್ಲಿರುವ ಪರಿಸ್ಥಿತಿಯ ಬಗ್ಗೆ ಪೊಲೀಸರಿಗೆ ತಕ್ಷಣದ ಮಾಹಿತಿಯನ್ನು ನೀಡಲು ಸಾಧ್ಯವಾಗುವಂತೆ, ಕಳೆದ ಕೆಲವು ತಿಂಗಳುಗಳಿಂದ ವೈಟ್‌ಹ್ಯಾಟ್ ಜೂನಿಯರ್ ಪ್ಲಾಟ್‌ಫಾರ್ಮ್‌ನಲ್ಲಿ ಕೋಡಿಂಗ್ ಕಲಿಯುತ್ತಿರುವ ಬೃಂದಾ, ಈ ಸಮಸ್ಯೆಯನ್ನು ಪರಿಹರಿಸುವಂತಹ ಅಪ್ಲಿಕೇಶನ್ ಒಂದನ್ನು ರಚಿಸಲು ತನ್ನ ಕಲಿಕೆಯನ್ನು ಬಳಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ.
ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಆಂಬ್ಯುಲೆನ್ಸ್ ವ್ಹಿಜ್ ಆಪ್ಲಿಕೇಶನ್ ಆ್ಯಂಬುಲೆನ್ಸ್ ಚಾಲಕನಿಗೆ ಆಂಬುಲೆನ್ಸ್‌ನ ಸ್ಥಳವನ್ನು ಅಪ್ಲಿಕೇಶನ್‌ನಲ್ಲಿ ನಮೂದಿಸುವಂತೆ ಆದೇಶ ನೀಡುತ್ತದೆ, ಈ ಮಾಹಿತಿಯನ್ನು ಟ್ರಾಫಿಕ್ ಕಂಟ್ರೋಲ್‌ಗೆ ರವಾನಿಸಲಾಗುತ್ತದೆ, ನಂತರ ಅದರ ಆಧಾರದ ಮೇಲೆ ಆಂಬುಲೆನ್ಸ್ ಹಾದುಹೋಗಲು ಪೊಲೀಸರು ಫಾಸ್ಟ್ ಟ್ರ್ಯಾಕ್ ಕಾರಿಡಾರ್ ಕಲ್ಪಿಸಿಕೊಡುತ್ತಾರೆ, ಇದು ಕಡಿಮೆ ಸಮಯದಲ್ಲೇ ಅಂಬುಲೆನ್ಸ್ ಅನ್ನು ಆಸ್ಪತ್ರೆಗೆ ಸಾಗಿಸಲು ಸಹಾಯಮಾಡುತ್ತದೆ ಮತ್ತು ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಗಿಸುತ್ತದೆ.
ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆ್ಯಪ್ ಅಭಿವೃದ್ಧಿಗೆ ಸ್ವತಂತ್ರವಾಗಿ ಕೋಡ್ ಮಾಡುವ ವೈಟ್‌ಹ್ಯಾಟ್ ಜೂನಿಯರ್ ಸ್ಪರ್ಧೆಯಲ್ಲಿ ದೇಶಾದ್ಯಂತ ಭಾಗವಹಿಸಿದ್ದ 7,000 ಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ ಸಿಲಿಕಾನ್ ವ್ಯಾಲಿ ಪ್ರೋಗ್ರಾಂನಲ್ಲಿ ವಿಜೇತರಾದ 12 ಸ್ಪರ್ಧಿಗಳ ಪೈಕಿ ಬೃಂದಾ ಕೂಡಾ ಒಬ್ಬರಾಗಿದ್ದಾರೆ.
"ಮಕ್ಕಳು ಇಂದು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬಹಳ ತಿಳಿದಿದ್ದಾರೆ ಮತ್ತು ಅವುಗಳನ್ನು ಪರಿಹರಿಸಲು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಲು ಬಯಸುತ್ತಾರೆ. ವೈಟ್‌ಹ್ಯಾಟ್ ಜೂನಿಯರ್ ಪ್ಲಾಟ್‌ಫಾರ್ಮ್‌ನಲ್ಲಿ ಕೋಡಿಂಗ್ ಮಾಡಿದ ಕೇವಲ 40 ಗಂಟೆಗಳ ಒಳಗೆ ಬೃಂದಾಳಂತಹ ಅನೇಕ ಚಿಕ್ಕ ಮಕ್ಕಳು ನಿಜವಾದ ಪರಿವರ್ತನೆ ಮತ್ತು ಹೆಚ್ಚಿನ ಪ್ರಭಾವದ ಅಪ್ಲಿಕೇಶನ್‌ಗಳನ್ನು ರಚಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ, ಅದು ವಿಶ್ವದ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ,” ಎಂದು ವೈಟ್‌ಹ್ಯಾಟ್ ಜೂನಿಯರ್ ಸ್ಥಾಪಕ ಮತ್ತು ಸಿಇಒ ಕರಣ್ ಬಜಾಜ್ ಹೇಳಿದರು, ವರದಿ ಅನಾಲಿಟಿಕ್ಸ್ ಇಂಡಿಯಾ.
ಈ ಕಾರ್ಯಕ್ರಮದ ಭಾಗವಾಗಿ ಅಮೆರಿಕದ ಸಿಲಿಕಾನ್ ವ್ಯಾಲಿಗೆ ಬೃಂದಾ ಭೇಟಿ ನೀಡಲಿದ್ದು, ಅಲ್ಲಿ ಖ್ಯಾತನಾಮ ವೆಂಚರ್ ಕ್ಯಾಪಿಟಲಿಸ್ಟ್‌ಗಳ ಎದುರು ಆ್ಯಪ್ ಪ್ರಸ್ತುತಪಡಿಸಲಿದ್ದಾಳೆ. ಚಾಲಕ ರಹಿತ ಕಾರುಗಳ ಬಗ್ಗೆ ಪ್ರಾಡಕ್ಟ್ ಮ್ಯಾನೇಜರ್‌ಗಳಿಂದ ಮಾಹಿತಿ ಅನ್ನೂ ಪಡೆಯಲಿದ್ದಾರೆ.
ಎಳೆಯ ವಯಸ್ಸಿಗೆ ಇಂತಹ ಅದ್ಭುತ ಸಾಧನೆಗೈದ 7 ವರ್ಷದ ಬೃಂದಾ, ಸಾಧನೆಗೆ ಎಂದೂ ವಯಸ್ಸಿನ ಹಂಗಿಲ್ಲಾ ಎಂಬುವುದನ್ನು ಸಾಬೀತು ಪಡಿಸಿದ್ದಾಳೆ. ಇವರಿಂದ ಮುಂದಿನ ದಿನಗಳಲ್ಲಿ ಇನ್ನು ಹಲವರು ಮಾನುಕುಲಕ್ಕೆ ಪೂರಕವಾಗುವ ಸಾಧನಗಳು ಆವಿಷ್ಕಾರಗಳು ಮುಡಿಬರಲಿ ಎಂದು ಆಶಿಸೋಣ.