ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ರಕ್ಷಣಾಕಾರ್ಯಚರಣೆಗೆ ಅಳಿಲು ಸೇವೆ ಮಾಡಿದ ಭಾರತೀಯ ಮೂಲದ ಸಿಖ್ ದಂಪತಿ
ವಿಕ್ಟೋರಿಯಾದ ಪೂರ್ವ ಗಿಪ್ಸ್‌ಲ್ಯಾಂಡ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್ ದೇಸಿ ಗ್ರಿಲ್ ಬೈರ್ನ್ಸ್‌ಡೇಲ್ ಮಾಲೀಕರು ಅಗ್ನಿಶಾಮಕ ದಳದವರಿಗೆ ಮತ್ತು ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿಗೆ ಬಲಿಯಾದವರಿಗೆ ಉಚಿತ ಆಹಾರವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಹೊಸವರ್ಷದ ಗದ್ದಲದಲ್ಲಿ, ಬಹುಶಃ ನಮಗೆ ಆಸ್ಟ್ರೇಲಿಯಾದ ಗಿಪ್ಸ್‌ಲ್ಯಾಂಡ್ ಹಾಗೂ ಆಗ್ನೇಯ ಆಸ್ಟ್ರೇಲಿಯಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಳ್ಗಿಚ್ಚಿನ ಅಟ್ಟಹಾಸ ಹಾಗೂ ಅದರಿಂದ ಮುಂದೆ ಉಂಟಾಗಬಹುದಾದ ಅಪಾಯದ ಅರಿವು ಗೋಚರಿಸದೆ ಇದ್ದಿರಬಹುದು. ಜಗತ್ತಿಗೆ ಆಮ್ಲಜನಕವನ್ನು ಪೂರೈಸುವ ಅಮೆಜಾನ್ ಕಾಡು ಸುಟ್ಟು ಕರಕಲಾದ ಘಟನೆ ಇನ್ನೂ ಮಾಸದ ನೆನಪಾಗಿ ಉಳಿದಿದೆ.
ಗಿಪ್ಸ್‌ಲ್ಯಾಂಡ್ ಹಾಗೂ ಆಗ್ನೇಯ ಆಸ್ಟ್ರೇಲಿಯಾದಲ್ಲಿ ಹೆಚ್ಚ್ಬುತ್ತಿರುವ ಕಾಡ್ಗಿಚ್ಚು ವನ್ಯಪ್ರಾಣಿಗಳ ಬದುಕಿಗೆ ಮಾರಕವಾಗಿದ್ದಲ್ಲದೆ ಅಲ್ಲಿನ ಸ್ಥಳೀಯ ಜನರಿಗೂ ಕಂಟಕಪ್ರಾಯವಾಗಿದೆ. ರಕ್ಷಣಾಕಾರ್ಯಚರಣೆ ತೀವ್ರದಿಂದ ಸಾಗುತ್ತಿದ್ದು, ಇದರ ನಡುವೆ ಮಾನವೀಯತೆಯನ್ನು ಸಾರುವ ಒಂದು ಘಟನೆ ಜಗತ್ತನ್ನೇ ತನ್ನತ್ತ ಸೆಳೆದಿದೆ.
ವಿಕ್ಟೋರಿಯಾದ ಪೂರ್ವ ಗಿಪ್ಸ್‌ಲ್ಯಾಂಡ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್ ದೇಸಿ ಗ್ರಿಲ್ ಬೈರ್ನ್ಸ್‌ಡೇಲ್ ಮಾಲೀಕರು ಅಗ್ನಿಶಾಮಕ ದಳದವರಿಗೆ ಮತ್ತು ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿಗೆ ಬಲಿಯಾದವರಿಗೆ ಉಚಿತ ಆಹಾರವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಇದರ ಮಧ್ಯೆ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಪೂರ್ವ ಗಿಪ್ಸ್‌ಲ್ಯಾಂಡ್ ಪ್ರದೇಶದಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಬುಷ್‌ಫೈರ್‌ಗೆ ಬಲಿಯಾದವರಿಗೆ ಕನ್ವಾಲ್ಜಿತ್ ಸಿಂಗ್ ಮತ್ತು ಅವರ ಪತ್ನಿ ಕಮಲ್ಜಿತ್ ಕೌರ್ ಉಚಿತ ಆಹಾರವನ್ನು ನೀಡಿದರು. ಅವರಿಗೆ ಮೆಲ್ಬೋರ್ನ್ ಮೂಲದ ಸಿಖ್ ವಾಲಂಟಿಯರ್ಸ್ ಆಸ್ಟ್ರೇಲಿಯಾ ಗುಂಪು ಸಹಾಯ ಮಾಡಿದೆ.
ಕಳೆದ ಆರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಸಿಂಗ್, ಒಂದು ದಿನದಲ್ಲಿ 1,000 ಜನರಿಗೆ ಅಡುಗೆ ಮಾಡುವ ಸಾಮರ್ಥ್ಯ ಹಾಗು ಅಗತ್ಯ ಪರಿಕರಗಳು ತಮ್ಮಲ್ಲಿ ಇವೆ ಎಂದು ಹೇಳಿದರು. ದೇಸಿ ಗ್ರಿಲ್‌ನಲ್ಲಿ ಬೇಯಿಸಿದ ಆಹಾರವನ್ನು ಬೈರ್ನ್ಸ್‌ಡೇಲ್‌ನಲ್ಲಿರುವ ತಾತ್ಕಾಲಿಕ ಆಶ್ರಯದಲ್ಲಿ ವಾಸಿಸುವ ಜನರಿಗೆ ನೀಡಲಾಗುತ್ತದೆ, ವರದಿ ದಿ ಲಾಜಿಕಲ್ ಇಂಡಿಯನ್.
ತಮ್ಮ ರೆಸ್ಟೋರೆಂಟ್ ಎದುರುಗಡೆ "ನಾವು ಅಗ್ನಿಶಾಮಕ ದಳ ಮತ್ತು ಕಾಡ್ಗಿಚ್ಚಿಗೆ ಬಲಿಯಾದ ಜನರಿಗೆ ಉಚಿತ ಆಹಾರವನ್ನು ನೀಡುತ್ತೇವೆ. ದಯವಿಟ್ಟು! ಪ್ರೀತಿ ಮತ್ತು ಗೌರವದ ಈ ಸಂಕೇತವನ್ನು ಸ್ವೀಕರಿಸಿ,” ಎಂದು ಭಿತ್ತಿಚಿತ್ರವನ್ನು ಹಾಕಲಾಗಿದೆ.
ಸಿಖ್ ಸ್ವಯಂಸೇವಕರ ಆಸ್ಟ್ರೇಲಿಯಾದ ಸ್ವಯಂಸೇವಕರು ವಿಕ್ಟೋರಿಯಾದ ವಿವಿಧ ಭಾಗಗಳಿಗೆ ಆಹಾರ ಟ್ರಕ್ಗಳನ್ನು ತೆಗೆದುಕೊಂಡು ಶಿಬಿರಗಳಲ್ಲಿ ಆಹಾರವನ್ನು ಒದಗಿಸುತ್ತಿದ್ದಾರೆ.
ವಿಕ್ಟೋರಿಯನ್ ಪ್ರೀಮಿಯರ್ ಡೇನಿಯಲ್ ಆಂಡ್ರ್ಯೂಸ್, ಸ್ವಯಂಸೇವಕರನ್ನು ಭೇಟಿ ಮಾಡಿ ಅವರ ಸಹಾಯವನ್ನು ಪ್ರಶಂಸಿಸಿದರು.
ಕಷ್ಟ ಮನುಷ್ಯರಿಗೆ ಬಾರದೆ ಮರಗಳಿಗೆ ಬರುತ್ತವೆಯೇ ಎನ್ನುತ್ತಾರೆ ನಮ್ಮ ಹಿರಿಯರು. ಆದ್ರೆ ಇಂದು ಅಸ್ಟ್ರೇಲಿಯದಲ್ಲಿ ಮನುಷ್ಯರು ಮರಗಳು ವನ್ಯಜೀವಿಗಳು ಎಲ್ಲವೂ ಕಷ್ಟಕ್ಕೆ ಸಿಲುಕಿಕೊಂಡಿವೆ. ಬಹುಶಃ ಇಂಥಹ ಆ ಸಂಧರ್ಭದಲ್ಲಿ ಯಾವುದೇ ಲಾಭೋದ್ದೇಶವಿಲ್ಲದೆ ನಿಸ್ವಾರ್ಥ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಭಾರತೀಯ ಮೂಲದ ಕನ್ವಾಲ್ಜಿತ್ ಸಿಂಗ್ ಮತ್ತು ಅವರ ಪತ್ನಿ ಕಮಲ್ಜಿತ್ ಕೌರ್ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.