ತಮ್ಮ ನಗರವನ್ನು ಭಿತ್ತಿಪತ್ರರಹಿತವಾಗಿ ಮಾಡಿ, ಇಡೀ ಅಂಧ್ರದಾದ್ಯಂತ ಸ್ವಚ್ಚತಾ ಆಂದೋಲನ ಕೈಗೊಳ್ಳುವ ಕಾರ್ಯದಲ್ಲಿದ್ದಾರೆ ಈ ಟೆಕ್ಕಿ
ವಾರದ ದಿನಗಳಲ್ಲಿ ವೃತ್ತಿಪರ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುವ ತೇಜಸ್ವಿ ಪೊಡಪತಿ ವಾರಾಂತ್ಯದಲ್ಲಿ ಹೈದರಾಬಾದ್ ನಿಂದ 300 ಕಿಮೀ ದೂರದ ತಮ್ಮ ಊರಾದ ಒಂಗೋಲ್ ನಲ್ಲಿ ಈವರೆಗೆ 80 ಸ್ವಚ್ಚತಾ ಆಂದೋಲನಗಳನ್ನು ನಡೆಸಿದ್ದಾರೆ.
ನೈರ್ಮಲ್ಯ, ಸ್ವಚ್ಚತೆ ಹಾಗೂ ಆರೋಗ್ಯ ಭಾರತದ ನಗರಗಳು ಕಾಳಜಿ ವಹಿಸಬೇಕಾದ ಪ್ರಮುಖ ವಿಷಯಗಳು. ಅತ್ತ ಸರಕಾರಗಳು, ಆಡಳಿತ ಮಂಡಳಿಗಳು ನಗರಗಳನ್ನು ಸ್ವಚ್ಚವಾಗಿಡುವ ಕ್ರಮಗಳನ್ನು ಕೈಗೊಳ್ಳುತ್ತಿದ್ದಂತೆ ಇತ್ತ ಜನರು ಸಹ ಸ್ವಚ್ಚತಾ ಕಾರ್ಯಗಳಲ್ಲಿ ತಮ್ಮ ಪಾತ್ರವನ್ನು ಸ್ವಲ್ಪವಾದರೂ ನಿರ್ವಹಿಸುತ್ತಿದ್ದಾರೆ.
ಉದಾಹರಣೆಗೆ, 23 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ತೇಜಸ್ವಿ ಪೊಡಪತಿ ತಮ್ಮ ಆದಾಯದ 70 ಪ್ರತಿಶತವನ್ನು ಸ್ವಚ್ಚತಾ ಆಂದೋಲನಗಳಿಗೆ ಮೀಸಲಿಟ್ಟಿದ್ದಾರೆ. ಇದಲ್ಲದೆ ಈಕೆ ಭೂಮಿ ಫೌಂಡೇಶನ್ ಎಂಬ ಎನ್.ಜಿ.ಒ. ಸ್ಥಾಪಿಸಿ ಹೈದರಾಬಾದ್ ಹಾಗೂ ಒಂಗೋಲ್ ನಗರಗಳನ್ನು ಸ್ವಚ್ಚ ಹಾಗೂ ಸುಂದರವಾಗಿಸುವ ಕೆಲಸ ಮಾಡುತ್ತಿದ್ದಾರೆ.
ಐಟಿ ಉದ್ಯೋಗಿಗಳು, ಶಾಲಾ ಕಾಲೇಜು ಮಕ್ಕಳು ಹಾಗೂ ಮಧ್ಯ ವಯಸ್ಕರನ್ನು ಒಳಗೊಂಡ 700 ಸ್ವಯಂ ಸೇವಕರ ಈ ಸಂಸ್ಥೆ ಇಲ್ಲಿಯವರೆಗೆ 80 ಯೋಜನೆಗಳನ್ನು ಪೂರ್ಣಗೊಳಿಸಿದೆ. ಈ ಯೋಜನೆಗಳು ಶಾಲೆ, ಪಾರ್ಕ್ ಹಾಗೂ ಆಸ್ಪತ್ರೆಗಳನ್ನು ಸ್ವಚ್ಚಗೊಳಿಸುವ ಕಾರ್ಯಗಳಾಗಿವೆ.
ಇದಲ್ಲದೆ, ಅಕ್ರಮವಾಗಿ ಕಸ ಎಸೆದ, ಬೇರ್ಪಡಿಸದ ತ್ಯಾಜ್ಯವನ್ನು ಎಸೆದ ಒಂಗೋಲ್ ನಗರಕ್ಕೆ ಕಪ್ಪು ಚುಕ್ಕೆಯಂತಿದ್ದ 700 ಜಾಗಗಳನ್ನು ಮತ್ತು ಹೈದರಾಬಾದ್ ನ 70 ಜಾಗಗಳನ್ನು ಸ್ವಚ್ಚಗೊಳಿಸಿದ್ದಾರೆ.
ಆದಾಗ್ಯೂ ನಾಲ್ಕು ವರ್ಷಗಳ ಹಿಂದೆ ಈ ಕೆಲಸವನ್ನು ಒಬ್ಬರೇ ಪ್ರಾರಂಭಿಸಿದಾಗ ತೇಜಸ್ವಿಗೆ ಇದು ಸುಲಭವಾಗಿರಲಿಲ್ಲ.
ನ್ಯೂ ಇಂಡಿಯಾ ಎಕ್ಸ್ಪ್ರೆಸ್ ನೊಂದಿಗೆ ಮಾತನಾಡುತ್ತಾ, ಅವರು,
"ನನ್ನ ಊರು ಒಂಗೋಲ್, ಅತೀ ಕಡಿಮೆ ನೈರ್ಮಲ್ಯತೆ ಹೊಂದಿರುವ ಪ್ರದೇಶ. ಆದರೆ 2015 ರಲ್ಲಿ ಸ್ವಚ್ಛ ಭಾರತ ಅಭಿಯಾನ ಶುರುವಾದಾಗ, ನಾನು ನೈರ್ಮಲ್ಯ ನಿಯಂತ್ರಣಕ್ಕಾಗಿ ಕೆಲಸ ಮಾಡಬೇಕೆಂದು ಕೇವಲ ಹತ್ತು ಜನ ಸ್ವಯಂಸೇವಕರಿಂದ ಶುರು ಮಾಡಿದೆ".
ಅವರ ಮೊದಲ ಕಾಳಜಿ ಇದ್ದದ್ದು ಗೋಡೆಗಳ ಹಾಗೂ ಮರಗಳ ಮೇಲೆ ಅಂಟಿಸಿರುವ ಭಿತ್ತಿಚಿತ್ರಗಳ ಹಾಗೂ ಭಿತ್ತಿಪತ್ರಗಳ ಮೇಲೆ. ಅವುಗಳನ್ನು ಕಿತ್ತಾಗ ಅವು ಉಳಿಸಿಹೋಗುತ್ತಿದ್ದ ಕಲೆಗಳು ಅಸಹ್ಯವಾಗಿ ಕಾಣುತ್ತಿದ್ದವು. ಇದಕ್ಕೆ ಒಂದು ಪರಿಹಾರದಂತೆ ಆಕೆ ಅವುಗಳನ್ನು ಸರಿಯಾಗಿ ತೆಗೆಯುವ ಆಂದೋಲನ ಶುರುಮಾಡಿದರು.
ಸಮಯದೊಟ್ಟಿಗೆ ಅವರ ಚಳುವಳಿ ಆವೇಗವನ್ನು ಪಡೆದುಕೊಂಡಿತು. ಜನರು ಅವರ ಆಂದೋಲನಕ್ಕೆ ಬೆಂಬಲಿಸಿದರು. ಹೈದರಾಬಾದ್ ನಲ್ಲಿ ಆಕೆಗೆ ಕೆಲಸ ಸಿಕ್ಕಾಗಲೂ ಅವರ ಈ ಉತ್ಸಾಹ ಕಡಿಮೆಯಾಗಲಿಲ್ಲ.
ರಾಜ್ಯದ ರಾಜಧಾನಿಯಲ್ಲಿ ಕೆಲಸ ಮಾಡುತ್ತಿದ್ದರೂ ಆಕೆ 300 ಕಿಮೀ ದೂರದ ಒಂಗೋಲ್ ಗೆ ಪ್ರತೀ ವಾರಾಂತ್ಯವು ಹೋಗಿ ಸ್ವಚ್ಚತಾ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಡೆಕ್ಕನ್ ಕ್ರೋನಿಕಲ್ ನೊಂದಿಗೆ ತನಗೆ ಸಿಗುವ ಬೆಂಬಲದ ಕೊರತೆಯ ಬಗ್ಗೆ ಮಾತನಾಡುತ್ತಾ, ತೇಜಸ್ವಿ,
"ನಮಗೆ ಯಾವುದೇ ರೀತಿಯ ಅನುದಾನ ಬರುವುದಿಲ್ಲ. ಎಲ್ಲ ಖರ್ಚುಗಳನ್ನು ನಮ್ಮ ತಂದೆಯೇ ನೋಡಿಕೊಳ್ಳುತ್ತಾರೆ. ಆದಾಗ್ಯೂ ಓರ್ವ ಉದ್ಯಮಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಅದನ್ನು ನಾವು ಮುಖ್ಯ ರಸ್ತೆಯನ್ನು ಅಂದವಾಗಿ ಕಾಣಿಸುವಂತೆ ಮಾಡುವುದಕ್ಕೆ ಹೂವಿನ ಮಡಿಕೆಗಳನ್ನು ತರಲು ಉಪಯೋಗಿಸಿದ್ದೆವು. ಹೊಸ ವರ್ಷದ ಆಚರಣೆಯಲ್ಲಿ ಯಾರೋ ಕಿಡಿಗೇಡಿಗಳು ಅವನ್ನು ಕೆಡವಿ ಹಾಳು ಮಾಡಿದ್ದರು. ನಾವು ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ"
ಹಲವಾರು ಜನ ಈ ಕಾರ್ಯ ಆಗುವುದಿಲ್ಲ ಎಂದರೂ ತೇಜಸ್ವಿ ಚಲ ಬಿಡದೆ ತಮ್ಮ ಸ್ವಚ್ಚತಾ ಕಾರ್ಯಗಳನ್ನು ಮುಂದುವರಿಸಿದರು ಹಾಗೂ ಜನ ಕಸಹಾಕುವುದನ್ನು ನಿಲ್ಲಿಸುವವರೆಗೂ ಸ್ವಚ್ಚಗೊಳಿಸುತ್ತಲೇ ಇದ್ದರು.
ಬೇಗನೆ ಎಲ್ಲ ಕಾರ್ಯಗಳೂ ಹಾದಿ ಹಿಡಿದವು. ಇವರ ಕೆಲಸವನ್ನು ಗಮನಿಸಿ ಸುತ್ತಲಿನ ಪಟ್ಟಣಗಳ ಪುರಸಭೆಗಳು ತಮ್ಮ ಊರಿನಲ್ಲೂ ಸ್ವಚ್ಚತಾ ಆಂದೋಲನ ನಡೆಸಿಕೊಡುವಂತೆ ಕೇಳಿಕೊಂಡವು. ಈಗ ಸಂಸ್ಥೆಯು ಮಕ್ಕಳಿಗೆ ಸ್ವಚ್ಚತೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡುತ್ತಿದೆ.
ತೇಜಸ್ವಿ ವಿವರಿಸುತ್ತಾ,
"ಸ್ಥಳಿಯ ಶಾಸಕರೂ ಸಹ ನಮ್ಮೊಂದಿಗೆ ಸೇರಿದರು. ನಾವು ಯಾವುದೇ ಅನುದಾನವನ್ನು ಕೇಳಲಿಲ್ಲ ಹಾಗೂ ನಮ್ಮ ಪಾಡಿಗೆ ನಾವು ಎಲ್ಲವನ್ನು ಮಾಡುತ್ತಿದ್ದೆವು. ನಮಗೆ ಬೇಕಿದ್ದದ್ದು ಅಧಿಕಾರಿಗಳ ಸಹಕಾರ ಅಷ್ಟೇ, ಅದಕ್ಕಿಂತ ಇನ್ನೇನೂ ನಮಗೆ ಬೇಡ"
ಇದಲ್ಲದೆ ಸರಕಾರ ಸಹ ತೇಜಸ್ವಿಯವರ ಕಾರ್ಯವನ್ನು ಗುರುತಿಸಿ ಅಭಿನಂದಿಸಿದೆ. ಉದಾಹರಣೆಗೆ, ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೇಜಸ್ವಿಯವರಿಗೆ "ಸ್ವಚ್ಚ ಆಂಧ್ರ" ಪ್ರಶಸ್ತಿ ನೀಡಿ ಒಂಗೋಲ್ ನಗರವನ್ನು ಭಿತ್ತಿಪತ್ರರಹಿತ ನಗರವನ್ನಾಗಿ ಆಂಧ್ರ ಸರಕಾರ 2017 ರಲ್ಲಿ ಘೋಷಿಸಿತು.
"ನಿಮ್ಮ ದೇಶದಲ್ಲಿ ನೀವು ಬದಲಾವಣೆ ತರಬೇಕಾದರೆ, ಮೊದಲು ನೀವು ಬದಲಾಗಬೇಕು, ನಂತರ ನಗರ, ರಾಜ್ಯವನ್ನು ಬದಲಾಯಿಸಬೇಕು. ಇದು ಇಡೀ ದೇಶವನ್ನೇ ಬದಲಾಯಿಸಬಲ್ಲದು," ಎಂದು ದಿ ಲಾಜಿಕಲ್ ಇಂಡಿಯನ್ ಗೆ ಹೇಳಿದರು.