ಚಿತ್ರಕಲಾ ಲೋಕದಲ್ಲೊಂದು ವರ್ಣ ‘ವಿಲಾಸ’

ಬಿಆರ್​ಪಿ ಉಜಿರೆ

ಚಿತ್ರಕಲಾ ಲೋಕದಲ್ಲೊಂದು ವರ್ಣ ‘ವಿಲಾಸ’

Sunday December 20, 2015,

4 min Read

image


ಕಲೆ ಎಲ್ಲರನ್ನೂ ಸೆಳೆಯುತ್ತೆ. ಆದ್ರೆ ಕೆಲವರನ್ನ ಮಾತ್ರ ಅದು ಆಯ್ಕೆ ಮಾಡಿಕೊಳ್ಳುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ಮಾತು. ಆದ್ರೆ ಆ ಕಲೆಯನ್ನ ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಬದ್ಧತೆ ಬೇಕು. ಹೀಗೆ ಕಲೆಯನ್ನ ಸಿದ್ಧಿಸಿಕೊಳ್ಳಲು ತಪಸ್ಸು ಮಾಡಿ ಅದರೊಂದಿಗೇ ಸಾರ್ಥಕ ಬದುಕು ಕಾಣುತ್ತಿರುವ ಅದೆಷ್ಟೋ ಸಾಧಕರನ್ನ ಕಂಡಿರುತ್ತೀರಿ. ಅವರ ಬಗ್ಗೆ ಕೇಳಿರುತ್ತೀರಿ. ಇದೀಗ ಯುವರ್ ಸ್ಟೋರಿ ಅಂತಹ ಒಬ್ಬ ಅಪೂರ್ವ ಕಲಾವಿದನ ಪರಿಚಯವನ್ನ ನಿಮಗೆ ಮಾಡಿಕೊಡುತ್ತಿದೆ.

image


ಹೆಸರು ವಿಲಾಸ್ ನಾಯಕ್. ಸದ್ಯ ಚಿತ್ರಕಲೆಯಲ್ಲಿ ಇಡೀ ದೇಶದ ಉದ್ದಗಲದಲ್ಲಿ ಖ್ಯಾತಿ ಪಡೆಯುತ್ತಿರುವ ಹೆಸರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಟ್ಟ ಹಳ್ಳಿಯೊಂದರಲ್ಲಿ ಅರಳಿದ ಈ ಕಲಾಕಾರನ ಕುಂಚ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕಲರ್ಸ್ ವಾಹಿನಿಯ ಇಂಡಿಯಾ ಗಾಟ್ ದಿ ಟ್ಯಾಲೆಂಟ್ ರಿಯಾಲಿಟಿ ಶೋ ಮೂಲಕ ಹೆಚ್ಚು ಗುರುತಿಸ್ಪಲ್ಪಟ್ಟ ವಿಲಾಸ್ ನಾಯಕ್ ಅವರ ಕುಂಚಕಲೆ ಇದೀಗ ಬಾಲಿವುಡ್ ನ ಬಹುತೇಕ ಎಲ್ಲಾ ಸೂಪರ್ ಸ್ಟಾರ್ ಗಳು, ಸಚಿನ್ – ಸೌರವ್ ಗಂಗೂಲಿಯಂತಹ ಕ್ರಿಕೆಟ್ ಸ್ಟಾರ್ ಗಳಿಂದ ಹಿಡಿದು ಬಹುತೇಕ ಎಲ್ಲರಿಗೂ ಚಿರಪರಿಚಿತ. ಯಾವುದೇ ದೊಡ್ಡ ಕಾರ್ಯಕ್ರಮವಿರಲಿ ಅಥವಾ ಪ್ರತಿಷ್ಠಿತ ಕಂಪೆನಿಗಳ ಪ್ರೊಡೆಕ್ಟ್ ಲಾಂಚಿಂಗ್ ಇರಲಿ ಅಲ್ಲಿ ವಿಲಾಸ್ ಕುಂಚವರಳಿದ್ರೆನೇ ಅದಕ್ಕೊಂದು ಘನತೆ. ಇತ್ತೀಚೆಗೆ ಪ್ರಧಾನಿ ನರೇಂದ್ರಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಬೋ ಅಬೆ ಸಮ್ಮುಖದಲ್ಲಿ ತಮ್ಮ ಚಿತ್ರಕಲೆ ಪ್ರತಿಭೆಯನ್ನ ವಿಲಾಸ್ ಪ್ರದರ್ಶಿಸುವ ಅವಕಾಶ ಪಡೆದಿದ್ದರು. ಆ ವಿಶೇಷ ಹಾಗೂ ಅಪರೂಪದ ಅನುಭವವನ್ನ ಅವರು ಯುವರ್ ಸ್ಟೋರಿಯೊಂದಿಗೆ ಹಂಚಿಕೊಂಡಿದ್ದಾರೆ..

image


ಯುವರ್​ ಸ್ಟೋರಿ: ದೇಶದ ಪ್ರಧಾನಿಯನ್ನ ಭೇಟಿ ಮಾಡಿ ಅವರೊಂದಿಗೆ ಕಾಲ ಕಳೆಯುವುದೇ ಒಂದು ಕನಸು. ಆದ್ರೆ ನಿಮಗೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲೇ ಚಿತ್ರ ಬಿಡಿಸುವ ಅವಕಾಶ ಸಿಕ್ಕಿತು. ಹೇಗಿತ್ತು ನಿಮ್ಮ ಆ ಅನುಭವ ?

ವಿಲಾಸ್​​: ಬಹಳ ಎಕ್ಸೈಟಿಂಗ್ ಆಗಿತ್ತು. ಅವರು ನಮ್ಮ ದೇಶದ ಪ್ರಧಾನಿ ಅನ್ನುವುದೇ ದೊಡ್ಡ ವಿಷ್ಯ. ಅಂತದ್ರಲ್ಲಿ ಜಪಾನ್ ಪ್ರಧಾನಿ ಉಪಸ್ಥಿತಿಯಲ್ಲಿ ಪರ್ಫಾಮ್ ಮಾಡೋದಿಕ್ಕೆ ಅವಕಾಶ ಸಿಕ್ಕಿದಕ್ಕೆ ತುಂಬಾ ಖುಷಿ ಅನಿಸುತ್ತಿದೆ. ಅದರಲ್ಲೂ ವಾರಣಾಸಿಯಂತಹ ಪುಣ್ಯ ಕ್ಷೇತ್ರದ ಕೇಂದ್ರ ಭಾಗಕ್ಕೆ ಹೋಗಿ ಅಲ್ಲಿ ಚಿತ್ರಬಿಡಿಸಿದ್ದು ಅವಿಸ್ಮರಣೀಯ ಕ್ಷಣ..

ಯುವರ್​​ ಸ್ಟೋರಿ: ವಿಲಾಸ್ ಚಿತ್ರಕಲೆಯಲ್ಲಿ ಯಾವಾಗಲೂ ಡಿಫರೆಂಟ್ ಕಾನ್ಸೆಪ್ ಇರುತ್ತೆ. ಈ ಬಾರಿ ಥೀಮ್ ಯಾವ್ದಾಗಿತ್ತು..?

ವಿಲಾಸ್​: ವ್ಯಕ್ತಿ ಚಿತ್ರವನ್ನ ನಾನು ಸಾಮಾನ್ಯವಾಗಿ ಬಿಡಿಸುತ್ತೇನೆ. ಆದ್ರೆ ಈ ಕಾರ್ಯಕ್ರಮಕ್ಕೂ ಮೊದಲೇ ಕೆಲವು ನಿಯಮಗಳನ್ನ ಸೂಚಿಸಲಾಗಿತ್ತು. ವ್ಯಕ್ತಿಗಳ ಮುಖ ಚಿತ್ರಿಸಲು ಪ್ರೊಟೋಕಾಲ್ ಅಡ್ಡಿಯಾಗ್ತಿತ್ತು. ಹೀಗಾಗಿ ನಾನು ಪ್ರೊಪ್ರೇಟ್ ಬಿಡಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ಎರಡೂ ರಾಷ್ಟ್ರಗಳ ಪ್ರಮುಖ ಸ್ಪಿರಿಚುವಲ್ ಸೆಂಟರ್ ಗಳನ್ನ ಬಿಂಬಿಸಲು ತಯಾರಿ ನಡೆಸಿದ್ದೆ. ಭಾರತೀಯರಿಗೆ ಕಾಶಿ ಅತೀ ದೊಡ್ಡ ಧಾರ್ಮಿಕ ಕ್ಷೇತ್ರ. ಹಾಗೇ ಕ್ಯೋಟೋ ಜಪಾನಿಯರಿಗೆ ಪ್ರಮುಖ ಕ್ಷೇತ್ರ. ಹೀಗಾಗಿ ಕ್ಯೋಟೋ ಟು ಕಾಶಿ ಅನ್ನುವ ಥೀಮ್ ರೆಡಿ ಮಾಡಿದ್ದೆ .

image


ಯುವರ್​ ಸ್ಟೋರಿ: ಥೀಮ್ ನಲ್ಲಿ ಇದ್ದ ಇನ್ನಿತರ ಸ್ಪೆಷಾಲಿಟಿ ಏನು.. ?

ವಿಲಾಸ್​​: ಕೇವಲ ಸ್ಪಿರಿಚುವಲ್ ಸ್ಥಳಗಳನ್ನ ಪ್ರತಿಬಿಂಬಿಸುವುದಷ್ಟೇ ಉದ್ದೇಶವಾಗಿರಲಿಲ್ಲ. ಜೊತೆಗೆ ಎರಡೂ ರಾಷ್ಟ್ರಗಳ ಸಾಂಸ್ಕೃತಿಕತೆಯನ್ನ ಎತ್ತಿ ಹಿಡಿಯುವ ಗುರಿ ಇತ್ತು. ಹೀಗಾಗಿ ನಾನು ನಮ್ಮ ದೇಶದ ಸಾಂಸ್ಕೃತಿಕ ಪ್ರತೀಕವಾಗಿ ಕಥಕ್ಕಳಿಯನ್ನು ಆಯ್ದುಕೊಂಡೆ. ಜಪಾನ್ ಪರವಾಗಿ ಅವರಿಗೆ ಹೆಚ್ಚು ಇಷ್ಟಾಗುವ ಡ್ರಮ್ ಸೆಟ್ಟನ್ನ ಆಯ್ಕೆ ಮಾಡಿಕೊಂಡೆ.

ಯುವರ್​ ಸ್ಟೋರಿ: ನಿಮ್ಮ ಚಿತ್ರಕಲೆ ಕಂಡು ಹೇಗಿತ್ತು ಮೋದಿಯವರ ಪ್ರತಿಕ್ರಿಯೆ..?

ವಿಲಾಸ್​​: ಗಂಗಾ ಆರತಿ ನಂತರ ಪ್ರಧಾನಿಗಳಿಬ್ಬರು ತಾಜ್ ಹೊಟೇಲ್ ಗೆ ಆಗಮಿಸಿದ್ರು. ಅಲ್ಲಿ ನನ್ನನ್ನು ಹೊರತು ಪಡಿಸಿ ನಾಲ್ಕೈದು ಜನರ ಕಾರ್ಯಕ್ರಮವನ್ನಷ್ಟೇ ಆಯೋಜಿಸಲಾಗಿತ್ತು. ನನ್ನ ಕಾರ್ಯಕ್ರಮವನ್ನ ಮೋದಿಜಿ ಕೇವಲ 10 ಅಡಿ ದೂರದಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಅಲ್ಲದೆ ನಾನು ನನ್ನ ಪೇಂಟಿಂಗ್ ಮುಗಿಸಿದಾಗ ಅವರು ಬಹಳ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ರು. ಆದ್ರೆ ಕಾರ್ಯಕ್ರಮ ಮುಗಿದ ಕೂಡಲೇ ಅವರು ದೆಹಲಿಗೆ ಹೋಗ್ಬೇಕಾಗಿದ್ರಿಂದ ನನಗೆ ವೈಯುಕ್ತಿಕವಾಗಿ ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆದ್ರೆ ನನ್ನ ಪೇಯಿಂಟಿಂಗ್ ಈಗಾಗಲೇ ದೆಹಲಿಯಲ್ಲಿರುವ ಫಾರೀನ್ ಅಫೇರ್ಸ್ ಆಫೀಸನ್ನ ತಲುಪಿದೆ. ಅಲ್ಲಿಂದ ಅದು ಪ್ರಧಾನಿ ಕಚೇರಿಯನ್ನ ತಲುಪುವ ನಿರೀಕ್ಷೆ ಇದೆ.

image


ಯುವರ್​ ಸ್ಟೋರಿ: ಪ್ರಧಾನಿ ಮುಂದೆ ಕಾರ್ಯಕ್ರಮ ನೀಡುವುದೇ ಒಂದು ದೊಡ್ಡ ಸವಾಲು.. ಅಂತದ್ರಲ್ಲಿ ಅಂತರಾಷ್ಟ್ರೀಯ ಮಟ್ಟದ ಗಣ್ಯರ ಸಮ್ಮುಖದಲ್ಲಿ, ನೀವೊಬ್ಬ ದೇಶದ ಪ್ರತಿನಿಧಿಯಾಗಿ ಕಾರ್ಯಕ್ರಮ ನೀಡಲು ನಡೆಸಿದ್ದ ತಯಾರಿಗಳು ಹೇಗಿತ್ತು..? ಆ ಒತ್ತಡ ಹೇಗಿತ್ತು..?

ವಿಲಾಸ್​​: ದೊಡ್ಡ ಕಾರ್ಯಕ್ರಮ, ಚಿಕ್ಕ ಕಾರ್ಯಕ್ರಮ ಅನ್ನುವುದಕ್ಕಿಂತ ಸ್ಟೇಜ್ ಮೇಲೆ ಹೋದಾಗ ನಾನು ಚೆನ್ನಾಗಿ ಮಾಡದೇ ಇದ್ರೆ ಅದು ನನ್ನ ಫೇಲ್ಯೂರ್.. ಹೀಗಾಗಿ ಎಲ್ಲಾ ಕಾರ್ಯಕ್ರಮಗಳಿಗೂ ತಯಾರಿಗಳು ಇದ್ದೇ ಇರುತ್ತವೆ. ಅದರಲ್ಲೂ ಇಂತಹ ಹೈ ಪ್ರೊಫೈಲ್ ಷೋಗಳಲ್ಲಿ ಸ್ವಲ್ಪ ನಿರೀಕ್ಷೆಗಳೂ ಜಾಸ್ತಿನೇ ಇರುತ್ತವೆ. ನಾನು ಬಿಡಿಸಿದ ಪೇಂಟಿಂಗ್ ನಲ್ಲಿ ಕಂಟೆಂಟ್ ಹೆಚ್ಚಾಗೇ ಇದ್ದಿದ್ರಿಂದ ಕಾರ್ಯಕ್ರಮಕ್ಕೆ ಕೊಂಚ ಹೆಚ್ಚಿನ ತಯಾರಿ ನಡೆಸಿದ್ದೆ.

image


ಯುವರ್​ ಸ್ಟೋರಿ – ಪಿಎಂಒ ಕಚೇರಿಯಿಂದ ಮೊದಲು ಕರೆ ಮಾಡಿ ಈ ಕಾರ್ಯಕ್ರಮದ ಬಗ್ಗೆ ಕೇಳಿಕೊಂಡಾಗ ನಿಮ್ಮ ಮೊದಲ ಪ್ರತಿಕ್ರಿಯೆ ಹೇಗಿತ್ತು.. ?

ವಿಲಾಸ್​​: ಸರ್ಪೈಸ್ ಅಂತ ಏನು ಅನಿಸಲಿಲ್ಲ. ಪ್ರಧಾನಿ ಮುಂದೆ ನಾನು ಯಾವತ್ತಾದ್ರೂ ಒಂದು ದಿನ ಕಾರ್ಯಕ್ರಮ ಕೊಡ್ತೀನಿ ಅಂತ ಅಂದುಕೊಂಡಿದ್ದೆ. ಬಹಳಷ್ಟು ಜನ ಇದ್ರ ಬಗ್ಗೆ ನನ್ನ ಜೊತೆ ಚರ್ಚಿಸಿದ್ರೂ, ಅದಕ್ಕೆ ಸಮಯ ಯಾವಾಗ ಕೂಡಿ ಬರಬಹುದು ಅನ್ನುವ ಅಂದಾಜಿರಲಿಲ್ಲ. ಆದ್ರೆ ಇಬ್ಬರು ಪ್ರಧಾನಿಗಳ ಸಮ್ಮುಖದಲ್ಲಿ, ಮೋದಿ ಅವರ ಕ್ಷೇತ್ರ ವಾರಣಾಸಿಯಲ್ಲೇ ಕಾರ್ಯಕ್ರಮ ನೀಡಬೇಕು ಅಂತ ಕರ ಬಂದಾಗ ಭಾರೀ ಖುಷಿಯಾಗಿತ್ತು. ಆದ್ರೆ ಈ ಕಾರ್ಯಕ್ರಮದಂದೇ ಬೇರೆ ಕಾರ್ಯಕ್ರಮ ಪೂರ್ವ ನಿರ್ಧರಿತವಾಗಿತ್ತು. ಆದ್ರೆ ನಮ್ಮ ದೇಶದ ಪ್ರಧಾನಿ ಮುಂದೆ ಕಾರ್ಯಕ್ರಮ ನೀಡುವ ಅವಕಾಶ ಸಿಕ್ಕಿದ್ದೇ ನನಗೆ ಸಿಕ್ಕ ಗೌರವ. 

ಯುವರ್​ ಸ್ಟೋರಿ: ನಿಮ್ಮ ಈ ಕಾರ್ಯಕ್ರಮದ ಯಶಸ್ಸಿಗೆ ಬೇರೆ ಯಾರು ಸಹಕಾರ ನೀಡಿದ್ದಾರೆ..?

ವಿಲಾಸ್​: ವಾರಣಾಸಿಯ ಈ ಕಾರ್ಯಕ್ರಮಕ್ಕೆ ನನಗೆ ನೀಡಲಾಗಿದ್ದ ಸಮಯ ಕೇವಲ 5 ನಿಮಿಷ. ಈ ಅವಧಿಯಲ್ಲಿ ನಾನು ಪೇಂಟಿಂಗ್ ಮುಗಿಸಬೇಕಿತ್ತು. ಇದಕ್ಕೆ ಸಾಥ್ ನೀಡಿದ್ದು ಗ್ರ್ಯಾಮಿ ಅವಾರ್ಡ್ ವಿನ್ನರ್ ಕನ್ನಡದ ಮ್ಯೂಸಿಕ್ ಡೈರೆಕ್ಟರ್ ರಿಕಿ ಕೇಜ್. ಅವರನ್ನ ನಾನು ಭೇಟಿಯಾದಾಗ ನನ್ನ ಕಾರ್ಯಕ್ರಮಕ್ಕೆ 5 ನಿಮಿಷಗಳ ಮ್ಯೂಸಿಕ್ ರೆಡಿ ಮಾಡಿಕೊಡುವುದಾಗಿ ಹೇಳಿದ್ರು. ಅಲ್ಲದೆ ಭಾರತ ಹಾಗೂ ಜಪಾನ್ ಸಂಸ್ಕೃತಿಯನ್ನ ಬಿಂಬಿಸುವ ಒಂದು ಫ್ಯೂಜನ್ ರೆಡಿಮಾಡಿಕೊಟ್ರು. ಅವರ ಸಹಕಾರದಿಂದ ಕಾರ್ಯಕ್ರಮ ಚೆನ್ನಾಗಿ ಬಂತು. ಇದೇ ರೀತಿ ಪ್ರತಿಯೊಂದು ಕಾರ್ಯಕ್ರಮಗಳಿಗೂ ಮ್ಯೂಸಿಕ್ ಹಾಗೂ ಕಾನ್ಸೆಪ್ಟ್ ಗಳನ್ನ ತಯಾರಿ ಮಾಡಿಕೊಳ್ಳುತ್ತೇನೆ.

image


ಯುವರ್​ ಸ್ಟೋರಿ: ಚಿತ್ರಕಲೆಯಲ್ಲಿ ಅದೆಷ್ಟೋ ಮಕ್ಕಳು ನಿಮ್ಮನ್ನ ಮಾದರಿಯಾಗಿ ಪರಿಗಣಿಸಿದ್ದಾರೆ. ನಿಮ್ಮ ಒಟ್ಟಾರೆ ಚಿತ್ರಕಲಾ ಜಗತ್ತಿನ ಜರ್ನಿ ಬಗ್ಗೆ ಏನ್ ಹೇಳೋದಿಕ್ಕೆ ಇಷ್ಟ ಪಡುತ್ತೀರಾ.. ?

ವಿಲಾಸ್​: ನಾನು ಒಬ್ಬ ಚಿಕ್ಕ ಹಳ್ಳಿಯಿಂದ ಬಂದವನಾಗಿದ್ರೂ, ನಾನು ಬೆಳೆದ ಬಂದ ಪರಿಸರ ಸಾಕಷ್ಟು ಪ್ರಭಾವ ಮೂಡಿಸಿತ್ತು. ಸಣ್ಣ ವಯಸ್ಸಿನಲ್ಲೇ ಗುರಿಗಳನ್ನ ಫಿಕ್ಸ್ ಮಾಡಿಕೊಳ್ಳುತ್ತಿದ್ದೆ. ನಾನು ಕಲಿತ ಶಾಲಾ ಕಾಲೇಜಿನಲ್ಲಿ ನನ್ನ ಚಟುವಟಿಕೆಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗ್ತಿತ್ತು. ನನಗೆ ಚಿತ್ರಕಲೆಯಲ್ಲೇ ಏನನ್ನಾದ್ರು ವಿಶೇಷವಾದುದನ್ನ ಮಾಡಬೇಕು ಅನ್ನೋ ಕನಸಿತ್ತು. ಶಾಲೆಯಲ್ಲಿ ನನ್ನ ಚಿತ್ರಕಲೆಗಳಿಗೆ ಬಹುಮಾನದ ರೂಪದಲ್ಲಿ ಸಿಗುತ್ತಿದ್ದ ಲೋಟಗಳೂ ನನಗೆ ಸ್ಫೂರ್ತಿ ಕೊಡುತ್ತಿತ್ತು. ಚಿಕ್ಕ ಚಿಕ್ಕ ಪ್ರೋತ್ಸಾಹಗಳೂ ನನ್ನಲ್ಲಿ ವಿಶ್ವಾಸ ತುಂಬುತ್ತಿತ್ತು. ಅಲ್ಲದೆ ನನ್ನ ಮೇಲಿದ್ದ ನಿರೀಕ್ಷೆಗಳೇ ನನಗೆ ಜವಾಬ್ದಾರಿಯಾಗಿತ್ತು. ಮಕ್ಕಳು ಸಣ್ಣ ಸಣ್ಣ ಯಶಸ್ಸಿನಲ್ಲಿ ಖುಷಿ ಪಡೋದನ್ನ ಕಲಿಯಬೇಕು. ಅಲ್ಲದೆ ಚಿಕ್ಕ ವಯಸ್ಸಿನಲ್ಲೇ ಅವರು ತಮ್ಮ ಆಸಕ್ತಿಯ ಕ್ಷೇತ್ರ ಹಾಗೂ ಪ್ರತಿಭೆಯನ್ನ ಅರಿತುಕೊಂಡು ಅದ್ರಲ್ಲೇ ಪರಿಣತಿ ಸಾಧಿಸಿದ್ರೆ, ಅದ್ಭುತವಾದುದನ್ನ ಸಾಧಿಸಬಹುದು.