ನಿಮ್ಮ ಕಾರು ಎಲ್ಲೇ ಹೋಗಲಿ, ಯಾರೇ ಡ್ರೈವ್ ಮಾಡಲಿ ಚಿಂತೆ ಬೇಡ- "ಕಾರ್ನೊಟ್" ಡಿವೈಸ್ ಮೂಲಕ ಎಲ್ಲವೂ ನಿಮಗೆ ತಿಳಿಯುತ್ತೆ..!
ಟೀಮ್ ವೈ.ಎಸ್. ಕನ್ನಡ
ಇವತ್ತಿನ ಜಮಾನದಲ್ಲಿ ಕಾರು ಖರೀದಿ ಮಾಡುವುದು ದೊಡ್ಡ ವಿಷಯವೇ ಅಲ್ಲ. ಕಾರಿನ ಆಯ್ಕೆಯಿಂದ ಹಿಡಿದು, ಫೈನಾನ್ಸ್ ತನಕ ಎಲ್ಲವೂ ಕೂಡ ನೀವು ಕುಳಿತುಕೊಂಡಲ್ಲೇ ನಡೆದು ಬಿಡುತ್ತದೆ. ಆದ್ರೆ ಮಹಾನಗರಗಳಲ್ಲಿ ಕಾರು ಕೊಂಡುಕೊಳ್ಳುವುದು ದೊಡ್ಡ ಪ್ರಶ್ನೆಯಲ್ಲ. ಆದ್ರೆ ಅದ್ರ ಸೇಫ್ಟಿ ಮತ್ತು ಪಾರ್ಕಿಂಗ್ನದ್ದೇ ದೊಡ್ಡ ತಲೆ ನೋವು. ಮನೆ ಎಲ್ಲೋ, ಕಾರು ಇನ್ನೆಲ್ಲೋ ನಿಂತಿರುತ್ತದೆ. ಆದ್ರೆ ಇನ್ನು ಮುಂದೆ ಎಲ್ಲೋ ನಿಂತಿರುವ ಕಾರಿನ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ನಿಮ್ಮ ಕಾರು ಎಲ್ಲಿದೆಯೋ ಅಲ್ಲಿಂದಲೇ ಟ್ರ್ಯಾಕ್ ಆಗುತ್ತದೆ. ರಾಂಗ್ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಕಾರನ್ನು ಟ್ರಾಫಿಕ್ ಪೊಲೀಸರು ಟೋ ಮಾಡಿದಾಗ, ಕಾರು ಕಳವಾದಾಗ, ಕಾರು ಕೆಟ್ಟು ನಿಂತಾಗ ಹೀಗೆ ಎಲ್ಲಿಂದ ಬೇಕಾದ್ರೂ ಕಾರಿನ ಬಗ್ಗೆ ಅಪ್ಡೇಟ್ ಪಡೆದುಕೊಳ್ಳಬಹುದು. ಐಐಟಿಯ ನಾಲ್ವರು ಕಾರಿನ ರಿಯಲ್ ಟೈಮ್ ಅಪ್ಡೇಟ್ ಪಡೆದುಕೊಳ್ಳಲೆಂದೇ ಹೊಸ ಡಿಸೈಸ್ ಒಂದರ ಆವಿಷ್ಕಾರ ಮಾಡಿದ್ದಾರೆ. ಚಿಕ್ಕದೊಂದು ಪ್ಲಗ್ ಅಂಡ್ ಪ್ಲೇ ಡಿವೈಸ್ ಮೂಲಕ ಸ್ಮಾರ್ಟ್ ಫೋನ್ನಲ್ಲೇ ಕಾರಿನ ಬಗ್ಗೆ ನೀವು ಲೈವ್ ಟ್ರ್ಯಾಕ್ ಮಾಡಬಹುದು.
ಆವಿಷ್ಕಾರದ ರೂವಾರಿಗಳು ಇವರು..!
ಮುಂಬೈನ ಪುಷ್ಕರ್ ಲಿಮಯೆ, ಪ್ರಥಮೇಶ್ ಜೋಶಿ, ಉರ್ಮಿಲ್ ಷಾ ಮತ್ತು ನಾಸಿಕ್ನ ರೋಹನ್ ವಡ್ಗಾಂವ್ಕರ್ ಐಐಟಿ ಬಾಂಬೆಯಿಂದ ಎಂಜಿನಿಯನಿರಿಂಗ್ ಪದವಿ ಪಡೆದವರು. ಆರಂಭದಲ್ಲಿ ಇವರು ಎಂಎನ್ಸಿ ಕಂಪನಿಗಳಾದ ಬ್ರೈನ್& ಕಂಪನಿ, ಪಿ&ಜಿ ಮತ್ತು ಶ್ಲುಂಬರ್ಗ್ನಂತಹ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆದ್ರೆ ತಾವೇ ಏನಾದ್ರೂ ಮಾಡಬೇಕು ಅನ್ನುವುದು ಈ ಯುವಕರ ಮೊದಲ ಕನಸಾಗಿತ್ತು.
“ ಕೆಲಸಕ್ಕೆ ರಾಜಿನಾಮೆ ನೀಡುವುದು ಮತ್ತು ನಮ್ಮದೇ ಕಂಪನಿ ಆರಂಭಿಸುವುದು ನಮಗೆ ಸುಲಭವಾಗಿತ್ತು. ಆದ್ರೆ ನಮ್ಮ ಪೋಷಕರಿಗೆ ಈ ಬಗ್ಗೆ ತಿಳಿ ಹೇಳುವುದೇ ನಮಗೆ ಸವಾಲಾಗಿತ್ತು. ನನ್ನ ತಂದೆಗೆ ನಾನು ಹೊಸತನ್ನು ಆರಂಭಿಸುವ ಬಗ್ಗೆ ಅರ್ಥ ಮಾಡಿಸುವುದೇ ಅತೀ ದೊಡ್ಡ ಕೆಲಸವಾಗಿತ್ತು. ”
- ರೋಹನ್, ಸಿಇಒ ಮತ್ತು ಕಾರ್ನೊಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಹ ಸಂಸ್ಥಾಪಕ
ಕಾರ್ನೊಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ 2015ರ ಆಗಸ್ಟ್ನಲ್ಲಿ ಆರಂಭವಾಗಿತ್ತು. ಕಂಪನಿಯ ಸಂಸ್ಥಾಪಕರಾದ ನಾಲ್ವರು ಐಐಟಿ ಬಾಂಬೆಯ ರೇಸಿಂಗ್ ಟೀಮ್ ನಲ್ಲಿದ್ದರು. ಪಿಟ್ಸ್ಟಾಪ್ನಲ್ಲೇ ಅವರು ಕಾರಿಗೆ ಫಿಟ್ ಮಾಡಿದ್ದ ಡಿವೈಸ್ ಮೂಲಕ ರೇಸಿಂಗ್ ಕಾರ್ನ ಫರ್ಫಾಮೆನ್ಸ್ ಅನ್ನು ಮಾನಿಟರ್ ಮಾಡುತ್ತಿದ್ದರು. ಇದೇ ಕೆಲಸದಲ್ಲಿದ್ದಾಗ ಜನ ಸಾಮಾನ್ಯರ ಕಾರಿನಲ್ಲಿ ಈ ವ್ಯವಸ್ಥೆ ಯಾಕಿಲ್ಲ ಅನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ಭಾರತೀಯ ಕುಟುಂಬದಲ್ಲಿ ಕಾರಿಗೆ ಅದರದ್ದೇ ಆದ ಸ್ಥಾನವಿದೆ. ಆದ್ರೆ ಅವರ ಕಾರಿನ ಬಗ್ಗೆ ಮಾನಿಟರ್ ಮಾಡುವ ಅಥವಾ ಅದನ್ನು ಟ್ರ್ಯಾಕ್ ಮಾಡುವ ತಂತ್ರಜ್ಞಾನವಿಲ್ಲ. ಹೀಗಾಗಿ ಅವರ ಯೋಚನೆ ಅದರ ಬಗ್ಗೆಯೇ ಹೆಚ್ಚಾಗಿತ್ತು.
ಈ ಯೋಜನೆಯಂತೆ 2015ರ ಮೇ ತಿಂಗಳಲ್ಲಿ ಐಐಟಿಯ ಹೊರಭಾಗದ ಕ್ಯಾಂಪಸ್ನಲ್ಲಿ ಮೊದಲ ಪೈಲಟ್ ಪ್ರಾಜೆಕ್ಟ್ ಪರೀಕ್ಷೆ ನಡೆಸಿದ್ದರು. ಆದ್ರೆ ಕೈಯಿಂದಲೇ ಸೋಲ್ಡರಿಂಗ್ ಆಗಿದ್ದ ಕಾರ್ನೊಟ್ ಡಿವೈಸ್ ಹೆಚ್ಚು ಪರಿಣಾಮಕಾರಿ ಆಗಿರಲಿಲ್ಲ. ಮಳೆ ಬಂದಾಗ ಅಥವಾ ಹೆಚ್ಚು ಹ್ಯೂಮಿಡಿಟಿ ಇದ್ದಾಗ ಡಿವೈಸ್ನ ಕಾರ್ಯಕ್ಷಮತೆ ಚೆನ್ನಾಗಿರಲಿಲ್ಲ.
ಇದನ್ನು ಓದಿ: ದೆಹಲಿಯ ಇಬ್ಬರು ಸಹೋದರರ ವಿಭಿನ್ನ ಕಥೆ- ಹೊಸ ಉದ್ಯಮ, ಹೊಸ ಕನಸು..!
ಸಮಸ್ಯೆಗೆ ಪರಿಹಾರ
ಕಾರ್ನೊಟ್ ಅನ್ನುವುದು ಚಿಕ್ಕದೊಂದು ಡಿವೈಸ್. ಇದನ್ನು ಕಾರಿನ ಆನ್ ಬೋರ್ಡ್ ಡಯಾಗ್ನಸ್ಟಿಕ್ಸ್ನಲ್ಲಿ ಫಿಕ್ಸ್ (OBD) ಮಾಡಲಾಗುತ್ತದೆ. 2008ರಿಂದ ಪ್ರತಿಯೊಂದು ಕಾರಿನಲ್ಲೂ OBD ಫೀಚರ್ ಮಾಮೂಲಿ ಆಗಿದೆ. ಆದ್ರೆ ಇದರ ಬಗ್ಗೆ ಯಾರಿಗೂ ಹೆಚ್ಚು ಅರಿವು ಇಲ್ಲ. ಆದ್ರೆ ಇದೇ OBD ಪೋರ್ಟ್ಗೆ ಕಾರ್ನೊಟ್ ಡಿವೈಸ್ ಅಳವಡಿಸಿದ್ರೆ ಅಲ್ಲಿಂದ ಸೆನ್ಸಾರ್ಗಳ ಮೂಲಕ ಸಿಗ್ನಲ್ಗಳು ರವಾನೆ ಆಗುತ್ತದೆ. ಆ ಸಿಗ್ನಲ್ಗಳು ನಿಮ್ಮ ಸ್ಮಾರ್ಟ್ ಫೋನ್ ಮೂಲಕ ನಿಮಗೆ ಕಾರಿನ ಸ್ಥಿತಿಗಳನ್ನು ಟ್ರ್ಯಾಕ್ ಮಾಡಲು ನೆರವು ನೀಡುತ್ತದೆ. ಈ ಡಿವೈಸ್ನಲ್ಲಿ 2ಜಿ ಸಿಮ್ ಅಳವಡಿಸಿರುವುದರಿಂದ ಅದು ನಿಮ್ಮ ಸ್ಮಾರ್ಟ್ಫೋನ್ಗಳಿಗೆ ಸಿಗ್ನಲ್ಗಳನ್ನು ರವಾನೆ ಮಾಡುತ್ತಿರುತ್ತದೆ. ಈ ಮೂಲಕ ನಿಮ್ಮ ಕಾರಿನ ಟ್ರ್ಯಾಕಿಂಗ್ ತುಂಬಾ ಸುಲಭವಾಗುತ್ತದೆ.
ಈ ಕಾರ್ನೊಟ್ ಡಿವೈಸ್ ನಿಮ್ಮ ಕಾರಿನಲ್ಲಿರುವ ಎಂಜಿನ್ ಸಮಸ್ಯೆ ಮತ್ತು ಬ್ಯಾಟರಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಪತ್ತೆ ಹಚ್ಚುತ್ತದೆ. ಅಷ್ಟೇ ಅಲ್ಲ ಭಾರತದಾದ್ಯಂತ ರೋಡ್ ಸೈಡ್ ಅಸಿಸ್ಟಂಟ್ ಪಡೆಯಲು ಕೂಡ ಇದು ಸಹಾಯ ನೀಡಬಲ್ಲದು. ನಿಮ್ಮೆಲ್ಲಾ ಟ್ರಿಪ್ನ ಮೈಲೇಜ್ಗಳನ್ನ ಕೂಡ ಕಾರ್ನೊಟ್ ಮೂಲಕ ಟ್ರ್ಯಾಕ್ ಮಾಡಬಹುದು. ಈ ಎಲ್ಲಾ ವ್ಯವಸ್ಥೆಗಳ ಜೊತೆಗೆ ಕಾರಿನ ಇನ್ಶೂರೆನ್ಸ್ ಬಗ್ಗೆ ಕೂಡ ಅಪ್ಡೇಟ್ಗಳನ್ನು ಪಡೆದುಕೊಳ್ಳಬಹುದು. ಕಾರ್ನೊಟ್ ಡಿವೈಸ್ನಲ್ಲಿ ಈ ಎಲ್ಲಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಶ್ರಮ ಮತ್ತು ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗಿದೆ.
ಯಾಂತ್ರೀಕೃತ ತಯಾರಿಕೆಯ ಮೊದಲ ಕಾರ್ನೊಟ್ ಡಿವೈಸ್ 5 ತಿಂಗಳ ಬಳಿಕ ತಯಾರಾಯಿತು. ಇದಾದ ಮೇಲೆ ರೋಹನ್ ಮತ್ತು ಗೆಳೆಯರು ಲಿಂಕ್ಡ್ ಇನ್ ಮೂಲಕ ಎಲ್ಲಾ ಇನ್ಶೂರೆನ್ಸ್ ಕಂಪನಿಯ ಸಿಇಒಗಳಿಗೆ ಪತ್ರ ಬರೆದು ತಮ್ಮ ಅನ್ವೇಷಣೆಯ ಬಗ್ಗೆ ತಿಳಿಸಿದ್ರು. ಈ ಪೈಕಿ ಕೆಲವರು ಪೈಲಟ್ ಪ್ರಾಜೆಕ್ಟ್ನ ಪ್ರಯೋಗಕ್ಕೆ ಮುಂದಾದರು. ಈ ಮಧ್ಯೆ 2015ರ ನವೆಂಬರ್ನಲ್ಲಿ ಫ್ರೀ ಚಾರ್ಜ್ನ ಕಮಲ್ ಷಾ ಮತ್ತು ಸಂದೀಪ್ ಟಂಡನ್ ಮೂಲಕ ಸೀಡ್ ಪಂಡಿಂಗ್ ಅನ್ನು ಕೂಡ ಪಡೆದುಕೊಂಡರು. ಕಂಪನಿಯ ಕನಸುಗಳು ಗಟ್ಟಿಯಾಗಿ ನನಸಾಗುವ ಸಮಯ ಹತ್ತಿರ ಬಂದಿತ್ತು.
ಈ ಮಧ್ಯೆ ಕಾರ್ ಡೀಲರ್ಶಿಪ್ ಒಂದರ ಮೂಲಕ ಕಾರ್ನೊಟ್ ಡಿವೈಸ್ನ ಬಗ್ಗೆ ಗ್ರಾಹಕರ ಅಭಿಪ್ರಾಯ ಏನಿರುತ್ತೆ ಮತ್ತು ಅದರ ಬಗ್ಗೆ ಗ್ರಾಹಕರು ಏನು ಹೇಳುತ್ತಾರೆ ಅನ್ನುವುದನ್ನು ಕಲಿತುಕೊಂಡರು. ಹೀಗಾಗಿ ಡೀಲರ್ಗಳ ಮೂಲಕ ತಮ್ಮ ಪ್ರಾಡಕ್ಟ್ನ ಮಾರ್ಕೆಟಿಂಗ್ನ ಮೊದಲ ಹೆಜ್ಜೆ ಇರಿಸಿದ್ರು. ಈ ಡಿವೈಸ್ನ ಬೆಲೆ ಕೂಡ ಕೈಗೆಟುಕುವ ದರದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಕಾರ್ನೊಟ್ ಮೂಲಕ, ಇನ್ಶೂರೆನ್ಸ್ ರಿನಿವಲ್, ಸರ್ವೀಸ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಕೂಡ ಈ ಡಿವೈಸ್ ಮೂಲಕವೇ ಹ್ಯಾಂಡಲ್ ಮಾಡುವಂತೆ ಮಾಡುವ ಗುರಿಯನ್ನು ಕಾರ್ನೊಟ್ ಕಂಪನಿ ಇಟ್ಟುಕೊಂಡಿದೆ.
ಹೊಸತರ ಆರಂಭ
ಫಂಡಿಂಗ್ ಸಿಕ್ಕಮೇಲೆ ತಂಡದೊಂದಿಗೆ ಡಿವೈಸ್ನ ಅಪ್ಗ್ರೇಡ್ ಮಾಡಿ ಹೊಸ ಡಿವೈಸ್ ಡಿಸೈನ್ ಮಾಡಿ ಗ್ರಾಹಕರ ಗಮನ ಸೆಳೆಯುವ ಕೆಲಸ ಮಾಡಿದ್ರು. ಆದ್ರೆ ನಾನ್ ಸ್ಟಾಂಡರ್ಡ್ OBD ಪೋರ್ಟ್ನಿಂದಾಗಿ ಮತ್ತೆ ಸಮಸ್ಯೆ ಎದುರಿಸಿದ್ರು. ಆದ್ರೆ ಹಠ ಬಿಡದ ಕಂಪನಿ ಕಾರ್ನಲ್ಲಿ ಸರಿಯಾಗಿ ಕೆಲಸ ನಿರ್ವಹಿಸಬಲ್ಲ ಡಿವೈಸ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ರು.
“ ನಾವು ತಯಾರಿಸಿದ ಮಾಸ್ ಮ್ಯಾನ್ಯುಫಾಕ್ಚರಿಂಗ್ ಡಿವೈಸ್ ಬೇಟಾ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿತು. ಆ ಪರೀಕ್ಷೆಯಲ್ಲಿ ಎಲ್ಲವೂ ಕೈ ಕೊಟ್ಟಿತ್ತು. ಆದ್ರೆ ಪರೀಕ್ಷೆಯ ಪ್ರತಿಯೊಂದು ಹಂತವೂ ನಮಗೆ ಹೊಸ ಪಾಠ ಕಲಿಸಿತ್ತು.”
- ರೋಹನ್, ಸಿಇಒ ಮತ್ತು ಕಾರ್ನೊಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಹ ಸಂಸ್ಥಾಪಕ
ತಪ್ಪುಗಳಿಂದ ಕಲಿತ ಪಾಠದಿಂದ 2016ರ ಜುಲೈನಲ್ಲಿ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿಕೊಂಡು ಹೊಸ ಡಿವೈಸ್ ತಯಾರಿಸಿದ್ರು. 2016ರ ನವೆಂಬರ್ ವೇಳೆಯಲ್ಲಿ ಸರಿಯಾಗಿ ಕೆಲಸ ಮಾಡಬಲ್ಲ ಮತ್ತು ಪಕ್ಕಾ ಮಾಹಿತಿ ನೀಡಬಲ್ಲ ಕಾರ್ನೊಟ್ ಡಿವೈಸ್ ತಯಾರಿಸಿದ್ರು. ಅಷ್ಟೇ ಅಲ್ಲ ಹಳೆಯ ಡಿವೈಸ್ನಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಿದ್ದರು.
ಕಾರ್ನೊಟ್ ಬಳಸಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ರು. ಒಬ್ಬರು ಗ್ರಾಹಕರಂತೂ ತನ್ನ ತಂದೆ ಎಲ್ಲಿ ಹೋದ್ರೂ ಅಲರ್ಟ್ಗಳು ಬರುತ್ತಿವೆ. ಹೀಗಾಗಿ ನಾನೂ ನನ್ನ ತಂದೆ ಎಲ್ಲೇ ಹೊರಗಡೆ ಕಾರು ತೆಗೆದುಕೊಂಡು ಹೋದ್ರೂ ಅವರಿಗೆ ಪದೇ ಪದೇ ಫೋನ್ ಮಾಡುವುದನ್ನು ಬಿಟ್ಟಿದ್ದೇನೆ. ಅಷ್ಟೇ ಅಲ್ಲ ಕಾರಿನ ಬಗ್ಗೆ ಎಲ್ಲಾ ರೆಕಾರ್ಡ್ಗಳು ಕೂಡ ಸಿಗುತ್ತಿವೆ ಅನ್ನುವ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಡ್ರೈವರ್ಗಳು ಕಾರನ್ನು ಮಿಸ್ ಯೂಸ್ ಮಾಡಿಕೊಳ್ಳುವುದು ಕೂಡ ನಿಂತಿದೆ. ಈ ನಡುವೆ ಕಂಪನಿ ಭಾರತದ ಅತಿ ದೊಡ್ಡ ಮೊಟಾರ್ ಇನ್ಶೂರೆನ್ಸ್ ಕಂಪನಿ ಮೂಲಕ ತಮ್ಮ ಡಿವೈಸ್ನ ಉಪಯೋಗ ಮತ್ತು ಅದರ ಲಾಭದ ಬಗ್ಗೆ ಗ್ರಾಹಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಎರಡೇ ಎರಡು ತಿಂಗಳ ಹಿಂದೆ ಈ ಡಿವೈಸ್ ಸರಿಯಾಗಿ ಕೆಲಸ ಆರಂಭಿಸಿದ್ದರೂ ಸುಮಾರು 1500ಕ್ಕಿಂತಲೂ ಹೆಚ್ಚಿನ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
“ ನಮ್ಮ ಸದ್ಯದ ಸಮಸ್ಯೆ ಅಂದ್ರೆ ಕಾರ್ನೊಟ್ಗೆ ಬೇಡಿಕೆ ಹೆಚ್ಚಾಗಿದೆ, ಆದ್ರೆ ಅದ್ರ ದಾಸ್ತಾನು ಕಡಿಮೆ ಇದೆ. ನಾವು ಫುಲ್ ಲಾಂಚ್ ಆಗುವ ಮೊದಲು ಹೆಚ್ಚು ಡಿವೈಸ್ಗಳನ್ನು ಸಜ್ಜುಗೊಳಿಸಬೇಕು. ನಾವು ಈಗಾಗಲೇ 1ಲಕ್ಷ ಡಾಲರ್ ಆದಾಯದ ಹತ್ತಿರದಲ್ಲಿದ್ದೇವೆ. ಯೂನಿಟ್ ಬೇಸಿಸ್ನಲ್ಲೂ ನಾವು ಲಾಭಗಳಿಸುತ್ತಿದ್ದೇವೆ.”
- ರೋಹನ್, ಸಿಇಒ ಮತ್ತು ಕಾರ್ನೊಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸಹ ಸಂಸ್ಥಾಪಕ
ಕಾರ್ನೊಟ್ ಆನ್ಲೈನ್ ಮೂಲಕ ಬೇಡಿಕೆ ಹೆಚ್ಚಿಕೊಂಡಿದೆ. ರಿಟೈಲ್ ಪ್ರೈಸ್ಗಿಂತ ಶೇಕಡಾ 10ರಷ್ಟು ಬೆಲೆ ಆನ್ಲೈನ್ನಲ್ಲಿ ಹೆಚ್ಚಿದ್ದರೂ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಡಿವೈಸ್ ಅನ್ನು ದ್ವಿಚಕ್ರವಾಹನಗಳಿಗೆ ಫಿಕ್ಸ್ ಮಾಡುವಂತೆ ಬೇಡಿಕೆ ಬಂದಿದೆ. ಆದ್ರೆ ಭಾರತದ ಬೈಕ್ಗಳಲ್ಲಿ ಯಾವುದೇ ಸೆನ್ಸಾರ್ಗಳಾಗಲಿ ಅಥವಾ OBD ಪೋರ್ಟ್ಗಳಿಲ್ಲ. ಹೀಗಾಗಿ ಸದ್ಯಕ್ಕೆ ದ್ವಿಚಕ್ರವಾಹನಗಳಿಗೆ ಕಾರ್ನೊಟ್ ಅಳವಡಿಸುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಕಾರ್ನೊಟ್ ಟೆಕ್ನಾಲಜಿಸ್ ಕಳೆದ ತಿಂಗಳು ಕ್ವಾಲ್ಕಂಸ್ ಡಿಸೈನ್ ಇನ್ ಇಂಡಿಯಾ ಚಾಲೆಂಜ್ ಪ್ರಶಸ್ತಿ ಜೊತೆಗೆ ಸುಮಾರು 1 ಲಕ್ಷ ಡಾಲರ್ ಸಹಾಯ ಧನವನ್ನು ಕೂಡ ಪಡೆದುಕೊಂಡಿದೆ.
ಬೇಡಿಕೆ ಬಗ್ಗೆ..
ಕಾರ್ನೊಟ್ ಪ್ರಾಡಕ್ಟ್ನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರಾಟವಾಗುವ ಕಾರುಗಳ ಸಂಖ್ಯೆಯನ್ನು ಆಧರಿಸಿದ್ರೆ ಸುಮಾರು 1 ಬಿಲಿಯನ್ ಡಾಲರ್ ವಹಿವಾಟು ನಡೆಯುವುದು ಬಹುತೇಕ ಖಚಿತ. 2014ರಲ್ಲಿ ಆರಂಭವಾದ CarIQ ಕಾರ್ನೊರ್ಟ್ಗೆ ಪ್ರತಿಸ್ಪರ್ಧೆ ನೀಡುತ್ತಾ ಇದ್ರೂ ಅದು ಕೇವಲ ಇನ್ಶೂರೆನ್ಸ್ ವಿಭಾಗಕ್ಕೆ ಮಾತ್ರ ಸೀಮಿತವಾಗಿದೆ. ಕಾರ್ನೊಟ್ ಟೆಕ್ನಾಲಾಜಿಸ್ ಮುಂದಿನ ತ್ರೈಮಾಸಿಕದಲ್ಲೇ ಬ್ರೇಕ್ ಈವನ್ ಸಾಧಿಸುವ ಸಾಧ್ಯತೆ ಹೆಚ್ಚಿದೆ. 2017-18ರ ವರ್ಷದಲ್ಲಿ ಸುಮಾರು 2 ಮಿಲಿಯನ್ ಡಾಲರ್ ವಹಿವಾಟಿನ ನಿರೀಕ್ಷೆಯಲ್ಲಿದೆ. ಒಟ್ಟಿನಲ್ಲಿ ಕಾರ್ನೊಟ್ ಇಟ್ಟಿರುವ ಹೆಜ್ಜೆ ಹೊಸ ಇತಿಹಾಸ ಸೃಷ್ಟಿ ಮಾಡುವುದರಲ್ಲಿ ಅನುಮಾನವಿಲ್ಲ.
1. ಮಣ್ಣಲ್ಲಿ ಬಿದ್ದು ಮೇಲೆದ್ದವರ ಕಥೆ- ಇವರ ಬಳಿ ಮಾತನಾಡಿದ್ರೆ ದೂರವಾಗುತ್ತೆ ವ್ಯಥೆ..!
2. ಸೌಂದರ್ಯ ಇದ್ದರೆ ಉದ್ಯೋಗಕ್ಕೊಂದು ಬೆಲೆ- ಆತ್ಮವಿಶ್ವಾಸಕ್ಕೆ ಕೈಗನ್ನಡಿ ಹೆಣ್ಣಿನ ಸೌಂದರ್ಯ
3. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್