ಈ ಕಾರ್ ತಗೊಂಡ್ರೆ ಡ್ರೈವರ್ ಬೇಡ್ವೇ ಬೇಡ..!
ಉಷಾ ಹರೀಶ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಕಾರಿನಲ್ಲಿ ಹೋಗೊಣ ಎಂದರೆ ಅದನ್ನು ಚಲಾಯಿಸುವರು ಒಂದು ಕ್ಷಣ ದಿಗಿಲುಬೀಳುತ್ತಾರೆ. ಅಷ್ಟೊಂದು ಟ್ರಾಫಿಕ್ ಬೆಂಗಳೂರಿನಲ್ಲಿ ಈ ಮಹಾನಗರದಲ್ಲಿ ಕಾರು ಡ್ರೈವ್ ಮಾಡಲು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಡ್ರೈವರ್ಗಳೇ ಇಲ್ಲದ ಕಾರುಗಳ ಬಂದರೆ ಈ ಯಾವ ತೊಂದರೆಗಳು ಇರುವುದಿಲ್ಲ.
![image](https://images.yourstory.com/production/document_image/mystoryimage/kcg6OijwQoVAKhz8fbTG_driver less car.jpg145.jpg?fm=png&auto=format)
ಡ್ರೈವರ್ಗಳಿಲ್ಲದ ಕಾರು ಎಂಬ ಕಾನ್ಸೆಪ್ಟೆ ಅದ್ಭುತ. ಇದು ಸಾಧ್ಯವಾದರೆ ಮಾತ್ರ ಒಂದು ಅದ್ಭುತವೇ ಸೃಷ್ಟಿಯಾದಂತೆ. ಅದರಲ್ಲೂ ಬೆಂಗಳೂರಿಗರಿಗೆ ಇದರ ಅನುಕೂಲ ಸಾಕಷ್ಟಿದೆ. ಆ ದಿನಗಳು ಬರುವ ಕಾಲ ಬಹಳ ಸನಿಹದಲ್ಲೇ ಇದೆ. ಬೆಂಗಳೂರಿನ ಟೆಕ್ಕಿಯೊಬ್ಬರು ಚಾಲಕ ರಹಿತ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ.
ಇದನ್ನು ಓದಿ: ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!
ಹೌದು ಬೆಂಗಳೂರಿನ ಟೆಕ್ಕಿ ರೋಶಿ ಜಾನ್ ಮತ್ತು ಅವರ ಸ್ನೇಹಿತರು ಸೇರಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಇವರ ಈ ಅಭೂತಪೂರ್ವ ಸಾಧನೆಯಿಂದಾಗಿ ಭಾರತದ ಮೊದಲ ಚಾಲಕ ರಹಿತ ಕಾರು ಸದ್ಯದಲ್ಲೇ ರಸ್ತೆಗಿಳಿಯಲಿದೆ.
ಐಡಿಯಾ ಬಂದದ್ದು ಹೇಗೆ..?
ಕೆಲವು ವರ್ಷದ ಹಿಂದೆ ರೋಶಿ ಜಾನ್ ಅವರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ವಾಪಾಸ್ ಬರಬೇಕಾದರೆ ಅವರು ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ನಿದ್ರೆ ಮಂಪರಿನಲ್ಲಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದರಲ್ಲಿದ್ದ.ಆಗ ಆ ಅಪಘಾತವನ್ನು ತಪ್ಪಿಸಿಕೊಂಡ ರೋಶಿ ಜಾನ್ಗೆ ಆಗಲೇ ಚಾಲಕ ರಹಿತ ಕಾರ್ ಅಭಿವೃದ್ಧಿ ಪಡಿಸಿದರೆ ಹೇಗೆ ಎಂಬ ಐಡಿಯಾ ಬಂತು ಅದರಿಂದ ಅಪಘಾತಗಳು ಕಡಿಮೆಯಾಗುತ್ತವೆ. ಚಾಲಕರಿಗೆ ಕೊಡುವ ಹಣವೂ ಉಳಿಯುತ್ತದೆ. ಆ ಅಪಘಾತವಾಗಿ ಸರಿಯಾಗಿ 5 ವರ್ಷದ ಬಳಿಕ ತಮ್ಮ 29 ಸ್ನೇಹಿತರ ತಂಡದೊಂದಿಗೆ ಚಾಲಕ ರಹಿತ ಕಾರನ್ನು ರೋಶಿ ಜಾನ್ ಅಭಿವೃದ್ಧಿಪಡಿಸಿದ್ದಾರೆ.
![image](https://images.yourstory.com/production/document_image/mystoryimage/vR6X7eYeSQ686B2d5o1a_drvive.jpg?fm=png&auto=format)
ಸಂಶೋಧನೆಗೆ ನ್ಯಾನೋ ಕಾರು ಬಳಕೆ
ಚಾಲಕ ರಹಿತ ಕಾರು ಅಭಿವೃದ್ಧಿಪಡಿಸಲು ಸಾಫ್ಟ್ವೇರ್ ಪರೀಕ್ಷೆಗಾಗಿ ರೋಶಿ ಅವರು 2011ರಲ್ಲಿ ಟಾಟಾ ಕಂಪನಿಯ ನ್ಯಾನೊ ಕಾರನ್ನು ಖರೀದಿಸಿದ್ದರು. ಆ ಕಾರಿನೊಂದಿಗೆ ತಮ್ಮ ಸಂಶೋಧನೆ ಆರಂಭಿಸಿದ ರೋಶಿ ಆ ಕಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿದರು. ಇವರ ಇನ್ನಿತರ ಸ್ನೇಹಿತರು ಸಾಫ್ಟ್ವೇರ್, ಅಲ್ಗೊರಿಥಮ್ಸ್, ಟೆಸ್ಟ್ಗಾಗಿ 3ಡಿ ಮಾಡೆಲ್ ಸಿದ್ಧಪಡಿಸಿದರು. ಒಟ್ಟಿನಲ್ಲಿ ನ್ಯಾನೊ ಕಾರನ್ನು ಒಳಗೊಂಡ ಎಂಜಿನಿಯರಿಂಗ್ ಇವರ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿತು. ಈ ಕಾರನ್ನು ಅಭಿವೃದ್ಧಿಪಡಿಸಿದ ನಂತರ ಇದಕ್ಕೆ ಟಾಟಾ ನ್ಯಾನೊ ಅಟಾನೊಮಸ್ ಎಂದು ಹೆಸರಿಟ್ಟಿದ್ದಾರೆ. ವಿಶೇಷವೆಂದರೆ ಈ ಕಾರು ಬೆಂಗಳೂರಿನಲ್ಲಿ ಸದ್ಯವೇ ಓಡಾಡಲಿದೆ.
2012ರಲ್ಲೇ ಸಿದ್ದ
ರೋಶಿ ಜಾನ್ ಅವರ ಈ ವಿಶೇಷ ಕಾರು 2012ರಲ್ಲಿ ಸಿದ್ಧಗೊಂಡಿತು. ಪ್ರಯೋಗಕ್ಕಾಗಿ ಕಾರನ್ನು ರಸ್ತೆಗೆ ಇಳಿಸಿದಾಗ ಅದು ತಂತಾನೇ ನಿಂತುಹೋಯಿತು. ಇದರಿಂದ ಸ್ವಲ್ಪ ಮಟ್ಟಿನ ತೊಂದರೆಯ ಜೊತೆಗೆ ರೋಶಿ ಅವರು ನ್ಯಾಯಾಂಗ ವಿಚಾರಣೆಯನ್ನು ಎದುರಿಸಬೇಕಾದ ಸಂದರ್ಭ ಎದುರಾಯಿತು. ಇದರಿಂದ ಹೆದರಿದ ರೋಶಿ ಪ್ರಯೋಗಕ್ಕೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಒಳಗೊಂಡ ಮೂರು ಪುಟಗಳ ಮಾಹಿತಿಯನ್ನು ಸಂಚಾರಿ ಪೊಲೀಸ್ ಆಯುಕ್ತರಿಗೆ ನೀಡಿದ್ದರು. ಆನಂತರ ಕಾರಿನ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ಅಳವಡಿಸಿ ಪರೀಕ್ಷೆ ಮಾಡಿ ಅದರಲ್ಲಿ ಅವರು ಗೆದ್ದಿದ್ದಾರೆ.
![image](https://images.yourstory.com/production/document_image/mystoryimage/62Hj1JmrT3SdKi82oZN3_driver less car.jpg?fm=png&auto=format)
ಬೃಹತ್ ಕಂಪನಿಗಳಿಂದ ಹೂಡಿಕೆ
ಈ ಚಾಲಕ ರಹಿತ ಕಾರು ಅಭಿವೃದ್ಧಿಗೆ ದೈತ್ಯ ಕಾರು ಕಂಪನಿಗಳಾದ ನಿಸಾನ್, ಜನರಲ್ ಮೋಟಾರ್ಸ್, ಬಿಎಂಡಬ್ಲ್ಯು, ಗೂಗಲ್, ತೆಲ್ಸಾ ಸೇರಿದಂತೆ ಇನ್ನಿತರ ಬೃಹತ್ ಕಂಪನಿಗಳು ಸಾಕಷ್ಟು ಹೂಡಿಕೆ ಮಾಡಿವೆ. ರೋಶಿ ಅವರ ಪ್ರಯೋಗ ಯಶಸ್ವಿಯಾದರೆ ಕಾರು ಕಂಪನಿಗಳ ಕಣ್ಣು ಇವರ ಮೇಲೆ ಬಿದ್ದು ಇವರ ಲಕ್ ಬದಲಾಯಿಸಬಹುದು.
ಈ ಚಾಲಕ ರಹಿತ ಕಾರನ್ನು ಅಭಿವೃದ್ಧಿಪಡಿಸಲು ರೋಶಿ ಮತ್ತವರ ಸ್ನೇಹಿತರು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಇವರ ಈ ಶ್ರಮಕ್ಕೆ ಪ್ರತಿಫಲ ದೊರೆಯಬೇಕಿದ್ದರೆ ಆ ಕಾರು ರಸ್ತೆಗೆ ಬರಬೇಕು ಅದಕ್ಕಾಗಿ ಇವರು ಸಂಚಾರಿ ಪೊಲೀಸರ ಅನುಮತಿಗಾಗಿ ಅವರು ಕಾಯುತ್ತಿದ್ದಾರೆ. ಪೊಲೀಸರು ಶೀಘ್ರ ಅನುಮತಿ ನೀಡಿದರೆ ಪ್ರಾಯೋಗಿಕವಾಗಿ ರಸ್ತೆಗಿಳಿಸಲಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಿನ ಟೆಕ್ಕಿಯೊಬ್ಬರ ಸಾಹಸದಿಂದಾಗಿ ಭಾರತದ ಮೊಟ್ಟ ಮೊದಲ ಚಾಲಕ ರಹಿತ ಕಾರು ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವ ಕಾಲ ದೂರವಿಲ್ಲ.
1. "ಬಿಪಿಎಲ್'' ಪುನರಾಗಮನದ ಅದ್ಭುತ ಕಹಾನಿ - ಫ್ಲಿಪ್‍ಕಾರ್ಟ್ ಹೆಗಲ ಮೇಲೆ ಸವಾರಿ