ಪುರುಷರ ಜಗತ್ತಿನಲ್ಲಿ ಮಹಿಳೆಯ ಕಾರುಬಾರು..!

ಕೃತಿಕಾ

ಪುರುಷರ ಜಗತ್ತಿನಲ್ಲಿ ಮಹಿಳೆಯ ಕಾರುಬಾರು..!

Monday February 15, 2016,

3 min Read

ಟೈಲರಿಂಗ್ ಲೋಕದಲ್ಲಿ ಇಣುಕಿದರೆ ರಾರಾಜಿಸುವವರು ಪುರುಷರೇ ಹೊರತು ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಕೈ ಮತ್ತು ಕಾಲ್ಚಳಕವನ್ನು ತೋರಿಸುವ ಮಹಿಳೆಯರಲ್ಲ. ಮಹಿಳೆಯರ ಧಿರಿಸುಗಳನ್ನು ಹೊಲಿಯುವವರು ಕೂಡ ಪುರುಷರೇ. ಪುರುಷರ ಬಟ್ಟೆ ಹೊಲಿಯುವ ಮಹಿಳಾ ಟೈಲರನ್ನು ತೋರಿಸಿ ನೋಡೋಣ? ಎಲ್ಲೆಲ್ಲೂ ಪುರಷರದ್ದೇ ದರ್ಬಾರು. ಅಂಥವರ ನಡುವೆ, ಮಹಿಳೆಯೊಬ್ಬರು ಪುರುಷರು ಅಂದವಾಗಿ ಕಾಣುವಂತೆ, ಅವರವರ ಅಭಿರುಚಿಗೆ ತಕ್ಕಂತೆ ಸೂಟ್ ಹೊಲಿಯುವ ಟೈಲರಿಂಗ್ ಉದ್ಯಮದಲ್ಲಿ ಕಾಲಿಟ್ಟು ಪುರುಷರು ತಲೆಯೆತ್ತಿ ನೋಡುವಂತೆ ಬೆಳೆದಿದ್ದಾರೆ.

image


ಅವರೇ ಶ್ರೀಲಂಕಾದಲ್ಲಿ ಹುಟ್ಟಿ, ಚೆನ್ನೈನಲ್ಲಿ ಬೆಳೆದು, ಲಂಡನ್, ಪ್ಯಾರಿಸ್ ಸುತ್ತಾಡಿ, ಬೆಂಗಳೂರಿನಲ್ಲಿ ನೆಲೆಗೊಂಡು, ಪುರುಷರ ಬಟ್ಟೆ ಹೊಲಿಯುವ ಟೇಲರ್​ಮ್ಯಾನ್ ಕಂಪನಿಯನ್ನು ಸ್ಥಾಪಿಸಿರುವ ಯಶಸ್ವಿ ಮಹಿಳೆ ವಿದ್ಯಾ ನಟರಾಜ್. ಇನ್ನೂ 33ರ ಹರೆಯದ ವಿದ್ಯಾ, ಕೇವಲ ಒಂದೂವರೆ ವರ್ಷದಲ್ಲಿ ಟೈಲರಿಂಗ್ ಕ್ಷೇತ್ರದಲ್ಲಿ ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ಗಮನಿಸುವಂಥ ಸಾಧನೆ ಮಾಡಿದ್ದಾರೆ. ಅಪ್ಪ ಅಮ್ಮ ಚೆನ್ನೈನವರಾದರೂ ವಿದ್ಯಾ ಹುಟ್ಟಿದ್ದು ಶ್ರೀಲಂಕಾದಲ್ಲಿ. ಲಂಡನ್ನಿನ ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಡಿಗ್ರಿ ಪಡೆದುಕೊಂಡು, ಅಲ್ಲಿ ಇನ್ವೆಸ್ಟ್​​ಮೆಂಟ್ ಬ್ಯಾಂಕರ್ ಆಗಿ ಹಣಕಾಸಿನ ವ್ಯವಹಾರದಲ್ಲಿ ಎರಡು ವರ್ಷ ಪೂರೈಸಿದ್ದಾರೆ. ನಂತರ ಫ್ರಾನ್ಸ್​ನ ಇನ್ಸೆಡ್ ಬಿಸಿನೆಸ್ ಸ್ಕೂಲ್​ನಲ್ಲಿ ಎಂಬಿಎ ಪದವಿ ಗಳಿಸಿರುವ ವಿದ್ಯಾ ಹೆಸರಿಗೆ ತಕ್ಕಂತೆ ವಿದ್ಯಾಪಾರಂಗತೆ. ಉದ್ಯಮಿಯಾಗಬೇಕೆಂಬ ಕನಸು ಹೊತ್ತಿದ್ದ ವಿದ್ಯಾ ಚೆನ್ನೈನಲ್ಲಿ ಆಪರೇಷನಲ್ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇದನ್ನು ಓದಿ

ಗಾಂಧಿಯಿಂದ ಮೋದಿವರೆಗೆ ಖಾದಿಯ ಪಯಣ- ಅಹಿಂಸೆಯ ಪ್ರತೀಕ

ವಿದ್ಯಾ ಅವರ ಬದುಕಿಗೆ ತಿರುವುದು ಸಿಕ್ಕಿದ್ದು ಗಣೇಶ್ ನಾರಾಯಣ್ ಅವರನ್ನು ಲಗ್ನವಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡನಂತರ. ಕುಟುಂಬ ಸ್ಥಾಪಿಸಿದ್ದ ಲ್ಯಾಂಡ್​​ಮಾರ್ಕ್ ರಿಟೇಲ್ ಬಿಸಿನೆಸ್ ನಲ್ಲಿ ಕೆಲವರ್ಷ ತೊಡಗಿಕೊಂಡರು. ಉದ್ಯಮದಲ್ಲಿ ಹೊಸತನದ ತುಡಿತದಲ್ಲಿಯೇ ಇದ್ದ ವಿದ್ಯಾ ಅವರು ಬೆಂಗಳೂರಿನ ಮತ್ತೊಬ್ಬ ಉದ್ಯಮಿ ಗೌತಮ್ ಗೊಲ್ಚಾ ಅವರನ್ನು ಭೇಟಿಯಾಗಿದ್ದು ಮತ್ತೊಂದು ಕನಸಿಗೆ ನಾಂದಿ ಹಾಡಿತು. ಸೂಟ್ ಮತ್ತು ಪ್ಯಾಂಟ್ ಉತ್ಪಾದನೆಯಲ್ಲಿ ಏಷ್ಯಾದಲ್ಲಿ ಅಗ್ರಗಣ್ಯರಾಗಿರುವ ಗೌತಮ್ ಜೊತೆ ಸೇರಿಕೊಂಡು ಆರಂಭಿಸಿದ್ದೇ ಟೇಲರ್ ಮ್ಯಾನ್ ಕಂಪನಿ.

image


"ನಮ್ಮಲ್ಲಿ ಬೇಕಾದಷ್ಟು ಟೇಲರುಗಳಿದ್ದಾರೆ. ಗುಣಮಟ್ಟದ ಬಟ್ಟೆ ಸಿಗುತ್ತದೆ, ಆದರೆ ನಮ್ಮ ಅಳತೆಗೆ ತಕ್ಕಂತೆ ಬಟ್ಟೆ ಹೊಲಿಯುವುದಿಲ್ಲ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಅತ್ಯಂತ ನಿಖರವಾಗಿ ಹೊಲಿಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದನ್ನೆಲ್ಲ ಗಮನಿಸಿ, ಎಲ್ಲ ಅನುಕೂಲಗಳೂ ಒಂದೇ ಕಡೆ ಸಿಗುವ, ಕಡಿಮೆ ಬೆಲೆಯಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ದಿರಿಸನ್ನು ಏಕೆ ನೀಡಬಾರದು ಎಂಬ ವಿಚಾರ ಬಂದಿದ್ದೇ ಶುರುಮಾಡಿದ್ದು ಟೇಲರ್​ಮ್ಯಾನ್." ಅಂತಾರೆ ವಿದ್ಯಾ ನಟರಾಜ್

image


ಟೇಲರ್​ಮ್ಯಾನ್ ನೀಡುತ್ತಿರುವ ಮತ್ತೊಂದು ಸೇವೆ ಅವರನ್ನು ಇತರ ಎಲ್ಲರಿಗಿಂತ ವಿಭಿನ್ನವಾಗಿಸಿವೆ. ಅದು, ಮನೆಗೇ ಹೋಗಿ ಅಳತೆ ತೆಗೆದುಕೊಂಡು, ಹೊಲಿದ ಬಟ್ಟೆಯನ್ನು ಅವರ ಮನೆಗೆ ತಲುಪಿಸುವುದು. ಇದಕ್ಕೆ ಅವರು ಯಾವುದೇ ಸೇವಾಶುಲ್ಕವನ್ನು ಕೂಡ ತೆಗೆದುಕೊಳ್ಳುವುದಿಲ್ಲ. ಸದ್ಯಕ್ಕೆ ಬೆಂಗಳೂರು, ಚೆನ್ನೈ ಮತ್ತು ಕೋಲ್ಕತಾದಲ್ಲಿ ಆರಂಭಿಸಿರುವ ಮಳಿಗೆಗಳನ್ನು ದೇಶದಾದ್ಯಂತ ವಿಸ್ತರಿಸುವ ಬೃಹತ್ ಯೋಜನೆಯನ್ನು ಕೂಡ ವಿದ್ಯಾ ಹಾಕಿಕೊಂಡಿದ್ದಾರೆ. www.tailorman.com ವೆಬ್ ಸೈಟನ್ನು ಇಣುಕಿ ನೋಡಿದರೆ ಶರ್ಟ್, ಜಾಕೆಟ್, ಸೂಟ್ ಗಳೆಲ್ಲವೂ ಆನ್ ಲೈನ್ ನಲ್ಲೇ ಬುಕ್ ಮಾಡಿ ಕೊಂಡುಕೊಳ್ಳಬಹುದು.

ಉದ್ಯಮಿಯಾಗಿ ಬೆಳೆಯಬೇಕೆಂಬ ಕನಸು ಹೊತ್ತಿರುವ ನಾರಿಮಣಿಗಳಿಗೆ ಮಾದರಿಯಂತಿರುವ ವಿದ್ಯಾ ಅವರ ಬಟ್ಟೆ ಹೊಲಿಯುವ ಸಿಲ್ವರ್ ಕ್ರೆಸ್ಟ್ ಫ್ಯಾಕ್ಟರಿಯಲ್ಲಿ ಹೆಚ್ಚಿನ ಪಾಲು ಟೇಲರ್ ಗಳೆಲ್ಲ ಮಹಿಳೆಯರೇ ಎಂದು ವಿದ್ಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಟೇಲರಿಂಗ್ ಉದ್ಯಮದಲ್ಲಿ ಉದ್ಯಮಿಯಾಗಿ ಮಹಿಳೆಯರು ಹೆಚ್ಚಾಗಿ ಯಾಕೆ ತೊಡಗಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ವಿದ್ಯಾ ಅವರಲ್ಲಿಯೂ ನಿಖರವಾದ ಉತ್ತರವಿಲ್ಲ

image


ನಿಶ್ಚಿತಾರ್ಥ, ಮದುವೆ, ಮುಂಜಿ ಮುಂತಾದ ಸಮಾರಂಭಗಳಿದ್ದಾಗ ಇಡೀ ಕುಟುಂಬದ ಸಲುವಾಗಿ ಆರ್ಡರ್​ಗಳನ್ನು ತೆಗೆದುಕೊಂಡಿದ್ದೂ ಇದೆ. ಅಲ್ಲದೆ, ಕಾರ್ಪೊರೇಟ್ ಕಂಪನಿಗಳನ್ನು ಸಂಪರ್ಕಿಸಿ ಅಲ್ಲಿನ ಉದ್ಯೋಗಿಗಳಿಗಾಗಿ ಹೋಲ್ ಸೇಲ್ ಆಗಿ ಬಟ್ಟೆಗಳನ್ನು ಹೊಲಿಸಿಕೊಟ್ಟಿದ್ದು ನಾವು ನೀಡುತ್ತಿರುವ ಸೇವೆಯ ಸಂಕೇತ ಅಂತಾರೆ ವಿದ್ಯಾ. 

ಮಧ್ಯಮವರ್ಗದವರಿಗೆ ಕೂಡ ಹೊರೆಯಾಗದಂತೆ ಅತ್ಯುತ್ಕೃಷ್ಟ ಗುಣಮಟ್ಟದ ಬಟ್ಟೆ ಹೊಲಿದು ಕೊಡುವುದೇ ನಮ್ಮ ಸ್ಪೆಷಾಲಿಟಿ ಅಂತಾರೆ ವಿದ್ಯಾ. ಪುರುಷರ ಬಟ್ಟೆ ಹೊಲಿಯುವುದಕ್ಕಾಗಿ ಆರಂಭಿಸಲಾಗಿರುವ ಟೇಲರ್​ಮ್ಯಾನ್ ನಿಧಾನವಾಗಿ ಮಹಿಳೆಯರ ಸೂಟ್ ಕೂಡ ಹೊಲಿಯಲು ಆರಂಭಿಸಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರು ಪ್ಯಾಂಟ್ ಶರ್ಟ್ ಧರಿಸುವುದು ವಿರಳವಾಗಿರುವುದು ಕೂಡ ಇದಕ್ಕೆ ಕಾರಣ. ಆದರೆ, ಹೆಚ್ಚೆಚ್ಚು ಮಹಿಳಾ ಉದ್ಯಮಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಒಂದು ವೇದಿಕೆ ನಿರ್ಮಿಸುವ ಕನಸನ್ನು ಕೂಡ ವಿದ್ಯಾ ಕಟ್ಟಿಕೊಂಡಿದ್ದಾರೆ. ಅವರ ಕನಸುಗಳು ಸಾಕಾರವಾಗಲಿ.

ಇದನ್ನು ಓದಿ

1. ಜಿಗರಿ ದೋಸ್ತ್​ಗಳಿಂದ ಯುವ ಉದ್ಯಮಿಗಳಿಗೆ ಮಾರ್ಗದರ್ಶನ

2. ಮನಸ್ಸಿದ್ದರೆ ಮಾರ್ಗ- ಟೆರೆಸ್​​ ಮೇಲಿನ ಕೈತೋಟವೇ ಸ್ವರ್ಗ..!

3. ತಂಪು ತಂಪು ಕೂಲ್ ಕೂಲ್- ಇದು ಶ್ರೀರಾಜ್ ಲಸ್ಸಿ ಬಾರ್ ಕಮಾಲ್