ಬಡವರಿಗಾಗಿ ಬೆಳಗಾವಿಯ ಆಟೋ ಆಯ್ತು ಉಚಿತ ಆಂಬ್ಯುಲೆನ್ಸ್‌

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಮಂಜುನಾಥ್ ನಿಂಗಪ್ಪ ಪೂಜಾರಿ ಕೆಲಸ ಮುಗಿದ ನಂತರ ಸಂಜೆ 6 ರಿಂದ 9 ರವರೆಗೆ ಓಲಾ ಆಟೋ ಓಡಿಸುತ್ತ ಆಪತ್ತಿನಲ್ಲಿರುವವರಿಗೆ ನೇರವಾಗುತ್ತಿದ್ದಾರೆ.

ಬಡವರಿಗಾಗಿ ಬೆಳಗಾವಿಯ ಆಟೋ ಆಯ್ತು ಉಚಿತ ಆಂಬ್ಯುಲೆನ್ಸ್‌

Thursday October 31, 2019,

2 min Read

ಎಷ್ಟೋ ಗರ್ಭಿಣಿಯರು, ಅಪಘಾತಕ್ಕೊಳಗಾದ ವ್ಯಕ್ತಿಗಳು ಸರಿಯಾದ ಸಮಯದಲ್ಲಿ ಆಂಬುಲೆನ್ಸ್/ವಾಹನ ವ್ಯವಸ್ಥೆ ಇಲ್ಲದೆ ಸಾವನ್ನಪ್ಪಿರುವುದನ್ನೂ ನೋಡಿದ್ದೇವೆ. ಇಂಥವರಿಗೆ ಸಹಾಯ ಮಾಡಲು ಮುಂದೆ ಬರುವವರು ಬೆರಳೆಣಿಕೆಷ್ಟು ಮಂದಿ ಮಾತ್ರ. ಅಕ್ಕ ಪಕ್ಕದಲ್ಲಿ ಯಾರಾದರು ನರಳುತ್ತಿದ್ದರೆ ನಮಗ್ಯಾಕೆ ಎಂದು ಮುಂದೆ ಸಾಗುವ ಜನರೇ ಹೆಚ್ಚು. ಇಂತಹ ಜನರ ಮಧ್ಯೆ ಬೆಳಗಾವಿಯ ಮಂಜುನಾಥ್ ಬಡವರಿಗೆ ಸಹಾಯ ಮಾಡಲೆಂದೇ ತಮ್ಮ ಸಂಜೆಯ ಸಮಯವನ್ನು ಮೀಸಲಿಟ್ಟಿದ್ದಾರೆ.


ತಮ್ಮ ಆಟೋ ಜೊತೆ ಮಂಜುನಾಥ್ ನಿಂಗಪ್ಪ ಪೂಜಾರಿ (ಚಿತ್ರ ಕೃಪೆ: ಆಲ್ ಅಬೌಟ್ ಬೆಳಗಾಂ)




ಹೌದು, ಬೆಳಗಾವಿ ಜಿಲ್ಲೆಯ ಆಟೋ ಚಾಲಕ ಮಂಜುನಾಥ್ ನಿಂಗಪ್ಪ ಪೂಜಾರಿ ತಮ್ಮ ಸಾಮಾಜಿಕ ಕೆಲಸದ ಮೂಲಕ ಹೆಸರುವಾಸಿಯಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಸೂಪರ್‌ ವೈಸರ್ ಆಗಿ ಕೆಲಸ ಮಾಡುವ ಇವರು ಕೆಲಸದ ಅವಧಿ ಮುಗಿದ ನಂತರ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಓಲಾ ಆಟೋ ಓಡಿಸುತ್ತಾ, ಪ್ರತಿ ನಿತ್ಯ ರೋಗಿಗಳನ್ನು ಆಸ್ಪತ್ರೆ ತಲುಪಿಸುವ ಕಾಯಕವನ್ನು ಮಾಡುತ್ತಿದ್ದಾರೆ.

ಕಾರಣವಾದ ಘಟನೆ

ಮಂಜುನಾಥ್ ಅವರ ಮನೆಯ ಪಕ್ಕದಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಪ್ರಾರಂಭವಾಗುತ್ತವೆ. ಆಟೋ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಕಷ್ಟವಾಗುತ್ತೆ. ನಂತರ ಆಂಬುಲೆನ್ಸ್ ಕರೆಸಿ ಗರ್ಭಿಣಿಯನ್ನು ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಗರ್ಭಿಣಿ ಸಾವನ್ನಪ್ಪುತ್ತಾರೆ. ಈ ಘಟನೆ ಮಂಜುನಾಥ್ ನಿಂಗಪ್ಪ ಪೂಜಾರಿ ಮನಸಲ್ಲಿ ಗಾಢವಾಗಿ ಉಳಿಯುತ್ತದೆ. ಆ ವೇಳೆ ಅಂತಹ ಜನರಿಗೆ ಸಹಾಯ ಮಾಡಲು ನಿರ್ಧರಿಸುತ್ತಾರೆ ಮಂಜುನಾಥ್ ನಿಂಗಪ್ಪ ಪೂಜಾರಿ, ವರದಿ ಆಲ್ ಅಬೌಟ್ ಬೆಳಗಾಂ.


ಎನ್‌ಡಿಟಿವಿ ಜೊತೆ ಮಾತನಾಡುತ್ತಾ ಮಂಜುನಾಥ್ ನಿಂಗಪ್ಪ ಪೂಜಾರಿ,


“ರೋಗಿಗಳನ್ನು ಆಸ್ಪತ್ರೆಗೆ ಬಿಟ್ಟಾಗ, ಅವರ ಕಷ್ಟದ ಸಮಯವನ್ನು ತುಸು ಹಗುರ ಮಾಡುತ್ತಿದ್ದೇನೆ ಎಂದನಿಸುತ್ತದೆ. ಗ್ರಾಹಕರು ಕಷ್ಟದಲ್ಲಿದ್ದಾಗ ಅವರ ಕಷ್ಟಕ್ಕೆ ಸ್ಪಂದಿಸುತ್ತೇನೆ. ನಾನು ಒಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದೇನೆ ಎಂಬ ಸಮಾಧಾನ ಇದೆ. ಆದ್ದರಿಂದ ಯಾರಿಗೂ ಈ ಕೆಲಸಕ್ಕೆ ಹಣ ನೀಡಿ ಎಂದು ಒತ್ತಾಯಿಸುವುದಿಲ್ಲ. ನನಗೆ ನನ್ನ ಕೆಲಸದಲ್ಲಿ ಸಮಧಾನವಿದೆ” ಎನ್ನುತ್ತಾರೆ.

ಸದ್ಯ ಮಂಜುನಾಥ್ ನಿಂಗಪ್ಪ ಪೂಜಾರಿ ಇದೊಂದೆ ಸಾಮಾಜಿಕ ಕೆಲಸ ಮಾಡುತ್ತಿಲ್ಲ. ತಮ್ಮ ತಿಂಗಳ ಸಂಬಳದಲ್ಲಿ ಒಂದಿಷ್ಟು ಹಣವನ್ನು ಸಮಾಜ ಸೇವೆಗಾಗಿ ಆಶ್ರಯ ಫೌಂಡೇಶನ್ ಗೆ ದೇಣಿಗೆಯಾಗಿ ನೀಡುತ್ತಾರೆ.


ಸಾಕಷ್ಟು ಮಂದಿಯನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ರೋಗಿಗಳ ಪ್ರಾಣ ಉಳಿಸುವ ಕೆಲಸ ಮಾಡುತ್ತಿರುವ ಮೂಲಕ ಮಂಜುನಾಥ್ ಸಮಾಜದಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.