ಮಲೆನಾಡಿನಲ್ಲಿ ಮೊಳಕೆಯೊಡೆಯುತ್ತಿರುವ ಗಾಂಧೀಜಿಯ ಕನಸುಗಳು
ಹೆಗ್ಗೋಡಿನ ಗಾಂಧಿವಾದಿ ಪ್ರಸನ್ನರ ನೇತೃತ್ವದಲ್ಲಿ ಚರಕ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಗ್ರಾಮೀಣ ಮಹಿಳೆಯರು ಗಾಂಧೀಜಿಯ ಆದರ್ಶ ಗ್ರಾಮದ ಕನಸನ್ನ ನನಸಾಗಿಸಲು ಹೊರಟ್ಟಿದ್ದಾರೆ.
ಗಾಂಧೀಜಿ ಎಂದರೆ ಹಾಗೆ, ಮುದ್ದು ಮಕ್ಕಳ ಬೊಚ್ಚು ಬಾಯಿಯ ಬಾಪೂಜೀ, ತಾವೇ ಚರಕದಿಂದ ನೂಲು ತೆಗೆದು ದೇಶಕ್ಕೆ ಸ್ವಾವಲಂಬನೆಯ ಪಾಠ ಹೇಳಿದರು, ಪೊರಕೆ ಹಿಡಿದು ಶೌಚಾಲಯ ಸ್ವಚ್ಚಗೊಳಿಸಿ 'ಸ್ವಚ್ಛತೆಯೇ ದೇವರೆಂದರು', ದೇಶದ ಬಡತನಕ್ಕೆ ಮರುಗಿದ ಗಾಂಧೀಜಿ ಕೊನೆಯತನಕ ಉಳಿದಿದ್ದು ಅರೆಬೆತ್ತಲೆಯ ಫಕೀರನಾಗಿ. ಇಂದು ನಮ್ಮದೇಶ 'ರಾಷ್ಟ್ರಪಿತ'ನ 150 ನೆ ಜನ್ಮದಿನವನ್ನು ಆಚರಿಸುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ಗಾಂಧಿವಾದಿಯ ಈ ಚರಕದ ಯಾತ್ರೆಯನ್ನ ನಿಮ್ಮ ಮುಂದಿಡುತ್ತಿದ್ದೇನೆ.
ಒಂದು ಖಾದಿಜುಬ್ಬ, ಸಾಧಾರಣ ವೇಸ್ಟಿ, ಮುಖಕ್ಕೋಪ್ಪುವ ನೀಳ ಬಿಳಿಗಡ್ಡ ಒಂದು ಬಟ್ಟೆ ಚೀಲ ಧರಿಸಿ, ಜಗತ್ತಿನ ಹೊಗಳಿಕೆ ತೆಗಳಿಕೆಗಳಿಂದ ನಿರ್ಲಿಪ್ತರಾಗಿ ಹೊರಟ ಪ್ರಸನ್ನರನ್ನು ಈ ಶತಮಾನದ ಗಾಂಧೀಜಿ ಎಂದರೆ ಅತಿಶಯೋಕ್ತಿಯಲ್ಲ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ವಿಧ್ಯಾರ್ಥಿ ಆಗಿದ್ದ ಪ್ರಸನ್ನ, ಗಾಂಧೀಜಿ ಅವರ ಆದರ್ಶಗಳಿಂದ ಪ್ರಭಾವಿತರಾಗಿದ್ದವರು, ತಮ್ಮನ್ನು ಬರವಣಿಗೆ, ನಾಟಕ ನಿರ್ದೇಶನಗಳಲ್ಲಿ ತೊಡಗಿಸಿಕೊಂಡರೂ ಪ್ರಸನ್ನರು ವಿಭಿನ್ನವಾಗಿ ನಿಲ್ಲುವುದು, ಮನಸ್ಸಿಗೆ ಕಾಡುವುದು ಅವರ ಚರಕದಿಂದಲೇ.
ಚರಕ
ಅದು 1993 ರ ಕಾಲ, ಮಲೆನಾಡಿನ ಹಳ್ಳಿಗಳಲ್ಲಿ ಮುಂದೆ ಬದುಕು ಕಟ್ಟಿಕ್ಕೊಳ್ಳುವುದು ಅಸಾಧ್ಯ ಎಂದು ಅದೆಷ್ಟೋ ಜನ ನಗರಗಳಿಗೆ ವಲಸೆ ಹೊರಟಿದ್ದರು, ಹಳ್ಳಿಗಳಲ್ಲಿ ಉಳಿದ ಹೆಣ್ಣುಮಕ್ಕಳು ನಂಬಿಕೊಂಡಿದ್ದು ಅವರಿವರ ಮನೆಗಳಲ್ಲಿ ದಿನಗೂಲಿಯನ್ನು. 1996 ರಲ್ಲಿ ಹೆಗ್ಗೋಡಿನ ಭೀಮನಕೋಣೆಯ ಗ್ರಾಮದಲ್ಲಿ, ಪ್ರಸನ್ನ ಹಾಗೂ ಕವಿಕಾವ್ಯ ಪ್ರತಿಷ್ಠಾನವು ಮೊದಲಬಾರಿಗೆ "ಚರಕ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘ" ವನ್ನು ಸುಮಾರು 30 ಮಹಿಳೆಯರು ಹಾಗೂ ಎರಡೇ ಎರಡು ಕೈಮಗ್ಗದೊಂದಿಗೆ ಆರಂಭಿಸಿದರು.
ಇದೀಗ ಅದೇ ಚರಕ ತನ್ನ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುವ ಹೊತ್ತಿಗೆ ಶೇಕಡ 90ರಷ್ಟು ಮಹಿಳೆಯರನ್ನು ಒಳಗೊಂಡು, ಸರಿಸುಮಾರು 200-300 ಜನರಿಗೆ ಉದ್ಯೋಗವನ್ನು ನೀಡಿದೆ. ಚರಕದ ವಾರ್ಷಿಕ ವಹಿವಾಟು 4.5 ಕೋಟಿ. ನೂರು ರೂಪಾಯಿ ದಿನಗೂಲಿಗಾಗಿ ಒದ್ದಾಡುತ್ತಿದ್ದ ಮಹಿಳೆಯರು ಇಂದು ಸಾವಿರಾರು ರೂಪಾಯಿ ಸಂಬಳವನ್ನು ಎಣಿಸುವ ಗುಣಮಟ್ಟದ ಬದುಕನ್ನ ಕಟ್ಟಿಕೊಂಡಿದ್ದಾರೆ.
ಮಲೆನಾಡಿನ ಹೃದಯ ಭಾಗದಲ್ಲಿರುವ ಈ "ಶ್ರಮಜೀವಿ ಆಶ್ರಮ"ದ ಬೆಳ್ಳಿಗ್ಗೆ 8-9ಕ್ಕೆ ಗಾಂಧೀಜಿಯ ಮೆಚ್ಚಿನ "ರಘುಪತಿ ರಾಘವ ರಾಜಾರಾಮ್" ಭಜನೆಯೊಂದಿಗೆ ಪ್ರಾರಂಭಗೊಳ್ಳುತ್ತದೆ. ಇಲ್ಲಿನ ಮಹಿಳೆಯರು ಚರಕದಿಂದ ನೂಲು ತೆಗೆದು ಆ ನೂಲಿಗೆ ನೈಸರ್ಗಿಕ ಬಣ್ಣ ಕೊಟ್ಟು ಒಣಗಿಸಿ, ಕೈ ಮಗ್ಗದಿಂದ ಅದನ್ನು ವಸ್ತ್ರ ಮಾಡಿ ತಾವೇ ತಮ್ಮ ಕೈಯಾರೇ ಆ ಬಟ್ಟೆಗಳ ಮೇಲೆ ಚಿತ್ತಾರ ಬರೆದು ಅದಕ್ಕೊಂದು ರೂಪು ಕೊಟ್ಟು, ಚರಕದ ದೇಸಿ ಅಂಗಡಿಗಳಲ್ಲಿ ಮಾರುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳು ನಡೆಯುವುದು ಶುದ್ಧ ದೈಹಿಕ ಶ್ರಮದಿಂದಲೇ ಎನ್ನುವುದು ವಿಶೇಷ.
ಮಾಸದ ಬಣ್ಣಗಳು
ಚರಕದ ಬಗ್ಗೆ ಹೇಳಲೇ ಬೇಕಾಗಿದ್ದು, ಇಲ್ಲಿನ ನೈಸರ್ಗಿಕ ಬಣ್ಣಗಳು. ಮಂಜಿಸ್ಟ ಬೇರಿನಿಂದ ತಿಳಿ ಗುಲಾಬಿ ಬಣ್ಣ, ದಾಳಿಂಬೆ ಸಿಪ್ಪೆ, ಅಡಿಕೆ ಚೊಗರು, ಇಂಡಿಗೊ ನೀಲಿ, ಕೈಮಗ್ಗದ ಹಾಳಾದ ಕಬ್ಬಿಣದ ಚೂರುಗಳನ್ನು ಶೇಖರಿಸಿ ಅದರಿಂದ ಕಪ್ಪುಬಣ್ಣವನ್ನು ತಯಾರಿಸಿ, ನೂಲುಗಳಿಗೆ ನೈಸರ್ಗಕ ಬಣ್ಣದ ಕಳೆ ನೀಡುತ್ತಾರೆ. ಪ್ರಸ್ತುತ ಚರಕದ ಉತ್ತಮ ಬಟ್ಟೆಯ ಕೈಚೀಲ, ಕರವಸ್ತ್ರ, ಮಕ್ಕಳ -ವಯಸ್ಕರರ ಸಿದ್ದಉಡುಪು, ಹೊದಿಕೆ, ಕೌದಿ ಇಂಥಹ 150 ವಿವಿಧ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ದೇಸಿ
(ಡೆವಲಪಿಂಗ್ ಎಕೊಲೊಜಿಕಲ್ ಸಸ್ಟೆನೆಬಲ್ ಇಂಟಸ್ಟ್ರಿ)
ಉದ್ಯಮವಂದು ಬೆಳೆಯಬೇಕು ನಿಜ ಆದರೆ ತನ್ನ ಸುತ್ತಲಿನ ಪರಿಸರವನ್ನು ಮಲೀನಗೊಳಿಸಿ ತಾನು ಮಾತ್ರ ವರ್ಷದಿಂದ ವರ್ಷಕ್ಕೆ ಲಾಭದ ಮೊತ್ತವನ್ನು ಜಾಸ್ತಿಗೊಳಿಸಿಕೊಳ್ಳುತ್ತಾ ಹೋದರೆ ಅದು ಅಭಿವೃದ್ಧಿಯಲ್ಲ. ಈ ಹಿನ್ನಲೆಯಲ್ಲಿ ಚರಕ ಅಳವಡಿಸಿಕೊಂಡಿದ್ದು ಸುಸ್ಥಿರ ಅಭಿವೃದ್ಧಿಯ ಸೂತ್ರವನ್ನು. ಇಲ್ಲಿ ಪ್ರತಿ ಕೆಲಸವು ಪರಿಸರಕ್ಕೆ ಪೂರಕ. ತಮ್ಮ ಪೂರ್ತಿ ಕಟ್ಟಡವನ್ನು ಮಣ್ಣಿನಿಂದ ನಿರ್ಮಿಸಿದ ಪ್ರಸನ್ನ ಗೋಡೆಯ ಕಿಟಕಿಗಳಿಗೆ ಸೌರಫಲಕ ಅಳವಡಿಸಿ ಅದರಿಂದ ವಿದ್ಯುತ್ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಆವರಣದಲ್ಲೇ ತರಕಾರಿ ಬೆಳೆಯುತ್ತಾರೆ, ವಿವಿಧ ಬಗೆಯ ಹಣ್ಣುಹಂಪಲುಗಳನ್ನು ಬೆಳೆಯುತ್ತಾರೆ.
ಇಲ್ಲಿ ಕೆಲಸ ಮಾಡುವ ಮಹಿಳೆಯರ ಅನುಕೂಲಕ್ಕಾಗಿ ಅವರ ಎಳೆಯ ಮಕ್ಕಳಿಗೆ ಶಿಶುಪಾಲನ ಕೇಂದ್ರಗಳಿವೆ. ಕೇವಲ ಕೈಮಗ್ಗದಿಂದ ಬಟ್ಟೆ ತಯಾರಿಸುವುದರ ಜೊತೆಗೆ ಮಹಿಳೆಯರು ಕಲೆ - ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಅವರಿಗಾಗಿ ಪ್ರತಿವರ್ಷ ಚರಕ ಉತ್ಸವ ಶ್ರಮಜೀವಿ ಆಶ್ರಮದಲ್ಲಿ ಜರಗುತ್ತದೆ.
ಮುಗಿಸುವ ಮುನ್ನ
ಪ್ರಸನ್ನರ ಈ ಪ್ರಯತ್ನ ಇಂದು ಹಲವು ಕಡೆಗಳಲ್ಲೂ ಅವನತಿಯ ಹಂತ ತಲುಪಿದ ನೇಕಾರಿಕೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಸಹಕಾರಿಯಾಗಿದೆ. ಇಂದು ಯುವಜನತೆಗೆ ಗಾಂಧೀಜಿ ಹಾಸ್ಯದ, ನಗೇಪಾಟಲಿನ ವಿಷಯವಾಗಿರುವಾಗ, ಸೋ ಕಾಲ್ಡ್ ಜನನಾಯಕರಿಗೆ ಗಾಂಧಿವಾದ ಬರೀ ಶೋಕಿ ಆಗಿರುವಾಗ, ಒಂದು ಮೂರ್ತಿ, ಒಂದು ಭಜನೆ ಒಂದು ಫೋಟೋ ಹಾರ ತುರಾಯಿಗೆ ಗಾಂಧೀಜಿಯನ್ನು ಸೀಮಿತಗೊಳಿಸುತ್ತಿರುವ ಈ ಸಂಧಿಗ್ಧತೆಯತೆಯಲ್ಲಿ, ಮೌನವಾಗಿ ಮಲೆನಾಡಿನ ಮರೆಯಲ್ಲಿ ಅಪ್ಪಟ ಗಾಂಧೀಜಿ ಕಂಡ ಗ್ರಾಮವನ್ನು ಕಟ್ಟಿ, ಚರಕದಿಂದ ಹೊಸ ಭಾಷ್ಯ ಬರೆದ ಪ್ರಸನ್ನರು, ನಮಗೂ, ನಿಮಗೆಲ್ಲ ಮಾದರಿಯಾಗಿದ್ದಾರೆ.