ಅಂಧ-ಸ್ನೇಹಿ ರೈಲ್ವೆ ನಿಲ್ದಾಣವನ್ನು ನಿರ್ಮಿಸಿದ ಸಂಸ್ಥೆ
ಬೆಂಗಳೂರು ಮೂಲದ ಅನುಪ್ರಯಾಸ್ ಎಂಬ ಸಾಮಾಜಿಕ ಉದ್ಯಮ, ಭಾರತೀಯ ರೇಲ್ವೆಯೊಂದಿಗೆ ಸಹಕರಿಸಿ ಮೈಸೂರು ರೇಲ್ವೆ ನಿಲ್ದಾಣವನ್ನು ದೇಶದಲ್ಲಿಯೇ ಮೊದಲ ಅಂಧ-ಸ್ನೇಹಿ ನಿಲ್ದಾಣವನ್ನಾಗಿ ಮಾಡಿದ ನಂತರ ದೇಶದಲ್ಲಿ ಸಾರ್ವಜನಿಕ ಸಾರಿಗೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ನಮ್ಮೆಲ್ಲರಿಗೂ ಪ್ರಯಾಣಿಸುವ, ಅಪರಿಚಿತ ಜಾಗಗಳನ್ನು ಅನ್ವೇಷಿಸುವ ಹಾಗೂ ಪರ್ಯಟನೆ ಕೈಗೊಳ್ಳುವ ಆಸೆ ಇದ್ದೇ ಇರುತ್ತದೆ. ಆದಾಗ್ಯೂ ಕೈಗೆದಕ್ಕದ ಮೂಲಸೌಕರ್ಯದ ಕಾರಣಗಳಿಂದಾಗಿ ಬಹು ಪಾಲು ಜನರಿಗೆ ಪ್ರಯಾಣ ಪ್ರಯಾಸಕರವೆನಿಸುತ್ತದೆ. 2001 ರ ಜನಗಣತಿ ಪ್ರಕಾರ ದೇಶದಲ್ಲಿ ಸುಮಾರು 21 ಮಿಲಿಯನ್ ವಿಶಿಷ್ಟಚೇತನರಿದ್ದಾರೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಕೇವಲ ಮೂರು ಪ್ರತಿಶತ ಮಾತ್ರ ಇವರಿಗೆ ಸುಲಭಸಾಧ್ಯವಾಗಿ ಉಪಯೋಗಿಸಬಲ್ಲವಾಗಿವೆ.
ಬೆಂಗಳೂರು ಮೂಲದ ಸಾಮಾಜಿಕ ಉದ್ಯಮ ಅನುಪ್ರಯಾಸ್, ಇದನ್ನು ಬದಲಾಯಿಸುವ ಗುರಿಹೊಂದಿದೆ. ಈ ಸಂಸ್ಥೆಯು ಕೇವಲ ಎಲ್ಲರನ್ನು ಒಳಗೊಂಡ ನೆರೆಹೊರೆಯನ್ನು ಸೃಷ್ಟಿಸುವುದಲ್ಲದೆ ಜನರನ್ನು ವಿಭಿನ್ನ ವಿಕಲಾಂಗತೆಯ ಬಗ್ಗೆ ಸಂವೇದನಾಶೀಲರನ್ನಾಗಿ ಮಾಡುತ್ತಿದೆ.
ಮೊದಲ ಯೋಜನೆಯಂತೆ ಸಂಸ್ಥೆಯು ಭಾರತೀಯ ರೇಲ್ವೆ ಇಲಾಖೆಯ ಸಹಯೋಗದೊಂದಿಗೆ ದೇಶಕ್ಕೆ ತನ್ನ ಮೊದಲ ಅಂಧ-ಸ್ನೇಹಿ ರೇಲ್ವೆ ನಿಲ್ದಾಣವನ್ನು ಮೈಸೂರಿನಲ್ಲಿ ನಿರ್ಮಿಸಿ ಕೊಟ್ಟಿದೆ.
"ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಪಡೆಯುವುದು ಎಲ್ಲರ ಹಕ್ಕು, ಭಾಗ್ಯವಲ್ಲ. ನಮಗೆ ಅಂಧರು ಈ ಎಲ್ಲ ಸವಲತ್ತುಗಳನ್ನು ತಮ್ಮ ಹಕ್ಕಿನಿಂದ ಪಡೆದು, ಸ್ವತಂತ್ರವಾಗಿ ಜೀವಿಸುವುದು ಬೇಕಿತ್ತು ಹಾಗೂ ಇದು ಸಾಕಾರವಾಗುವುದಕ್ಕೆ ಮುಖ್ಯ ಹಾದಿ ಎಂದರೆ ಇಲ್ಲಿ ಎಲ್ಲರೂ ಪ್ರವೇಶಿಸುವಂತೆ ಮಾಡುವುದು" ಎಂದು ಅನುಪ್ರಯಾಸ್‌ನ ಸಹ ಸಂಸ್ಥಾಪಕ ಪಂಚಮ್ ಕಜ್ಲಾ ಯುವರ್ ಸ್ಟೋರಿಗೆ ಹೇಳಿದರು.
ರೇಲ್ವೆ ಪ್ರವೇಶವನ್ನು ಸುಗಮವಾಗಿಸುವ ಪ್ರಯತ್ನ
ರೈಲು ಸಾರಿಗೆ ಪ್ರಯಾಣಕ್ಕೆಂದು ಬಹಳ ಜನರು ಆರಿಸಿಕೊಳ್ಳುತ್ತಾರೆ. ಅದರಲ್ಲೂ ದೂರ ಪ್ರಯಾಣಕ್ಕೆ ರೈಲು ಸಾರಿಗೆ ಅರಾಮದಾಯಕವಾಗಿರುತ್ತದೆ. ಆದರೆ ವಿಶಿಷ್ಟಚೇತನರಿಗೆ ಇದು ಸಂಪೂರ್ಣವಾಗಿ ಬೇರೆಯದ್ದೇ ಪರಿಸ್ಥಿತಿ. ಅಸಮ ನೆಲಹಾಸು, ಇಳಿಜಾರುಗಳ ಅನುಪಸ್ಥಿತಿ ಮತ್ತು ಸಂಚರಣೆ ಸೌಲಭ್ಯಗಳ ಕೊರತೆಯು ಅವರ ಪ್ರಯಾಣದ ತೊಂದರೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಅನುಪ್ರಯಾಸ್, ಈ ಸಮಸ್ಯೆಗಳಿಗೆ 2014 ರಿಂದ ಕ್ರಿಯಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ.
"ನಾವು ಮೊದಲು ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್ ರೈಲನ್ನು ಮರುವಿನ್ಯಾಸಗೊಳಿಸಿ, ದೃಷ್ಟಿಹೀನರಿಗೆ ಸಹಾಯವಾಗುವಂತೆ ಮಾಡಿದೆವು. ಈ ಪ್ರಯತ್ನ ಇಲ್ಲಿಗೇ ನಿಲ್ಲಲಿಲ್ಲ. ಈ ಯೋಜನೆಯನ್ನು ನಾವು ಮುಂಬಯಿನ ಬೋರಿವಲಿ ನಿಲ್ದಾಣ ಹಾಗೂ ಮೈಸೂರಿನ ಕೆ ಎಸ್ ಆರ್ ನಿಲ್ದಾಣಕ್ಕೂ ವಿಸ್ತರಿಸಿದೆವು" ಎನ್ನುತ್ತಾರೆ ಅನುಪ್ರಯಾಸ್‌ನ ಸಹ ಸಂಸ್ಥಾಪಕರು, ಶಕ್ತಿ ಕಾಜ್ಲ.
ದೃಷ್ಟಿಹೀನರ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಸಂಸ್ಥೆಯು ಕೆಲ ಕೆಲಸಗಳನ್ನು ಮಾಡಿತು. ತಂಡದ ಸ್ವಯಂಸೇವಕರು, ಕಾರ್ಯಕರ್ತರು ಹಲವು ವಿಶೇಷಚೇತನರು ರೈಲ್ವೇ ನಿಲ್ದಾಣದಲ್ಲಿ, ರೈಲುಗಳಲ್ಲಿ ಅವರು ಎದುರಿಸಬೇಕಾದ ಸವಾಲುಗಳ ಬಗ್ಗೆ ಗ್ರಹಿಸಿದರು. ನಂತರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನೀಲ ನಕ್ಷೆಯನ್ನು ತಯಾರಿಸಿದರು.
"ದೃಷ್ಟಿಹೀನರಿಗೆ ಪ್ರಯಾಣವು ತೊಂದರೆಯಾಗದಂತೆ ಮಾಡಲು, ನಾವು ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಸೇರಿಸಿದೆವು. ಪ್ಲಾಟ್ಫಾರ್ಮ್ ನ ಮೆಟ್ಟಿಲುಗಳಲ್ಲಿ ಸೂಚಕಗಳನ್ನು ಅಳವಡಿಸುವುದು, ನಿಲ್ದಾಣದ ಸುತ್ತಲೂ ಸ್ಪರ್ಶ ನಕ್ಷೆಗಳನ್ನು ಸ್ಥಾಪಿಸುವುದು, ರೈಲು ವೇಳಾಪಟ್ಟಿಗಳು, ಆಸನಗಳು, ತರಬೇತುದಾರ ಸಂಖ್ಯೆಗಳನ್ನು ಹಾಗೂ ನಿಲ್ದಾಣದ ವ್ಯಾಪ್ತಿಯಲ್ಲಿರುವ ಎಲ್ಲಾ ತಿನಿಸುಗಳ ಅಂಗಡಿಗಳಲ್ಲಿ ಮೆನು ಕಾರ್ಡ್‌ಗಳನ್ನು ಬ್ರೈಲ್ ಲಿಪಿಯಲ್ಲಿ ಒದಗಿಸುವುದರಿಂದ ಅವರಿಗೆ ಸಹಾಯವಾಗುತ್ತದೆ," ಎಂದು ಪಂಚಮ್ ವಿವರಿಸುತ್ತಾರೆ.
ವಿದ್ಯಾರ್ಥಿಗಳು, ವಾಸ್ತುಶಿಲ್ಪಿಗಳು, ವಿನ್ಯಾಸಕರು ಮತ್ತು ವೃತ್ತಿಪರ ಸಂಶೋಧನಾಕಾರರು ಸೇರಿದಂತೆ 30 ಕ್ಕೂ ಹೆಚ್ಚು ಜನರು ಅನುಪ್ರಯಾಸ್ ನೊಂದಿಗೆ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ತಾಂತ್ರಿಕ ಮಾರ್ಗದರ್ಶನ ಮತ್ತು ಸಾಂಸ್ಥಿಕ ಚೌಕಟ್ಟಿನ ವಿಷಯದಲ್ಲಿ ಉದ್ಯಮ ಸಂಸ್ಥೆಯು ಕೈಗೊಂಡ ಎಲ್ಲಾ ಕ್ರಮಗಳಿಗೆ ಭಾರತೀಯ ರೈಲ್ವೆ ತನ್ನ ಬೆಂಬಲವನ್ನು ವಿಸ್ತರಿಸಿ, ಅನುಷ್ಠಾನದ ಕಾರ್ಯವನ್ನು ಗುತ್ತಿಗೆದಾರರಿಗೆ ನೀಡಿದರು. ತಂಡ ಈ ಯೋಜನೆಗೆ ಬಹುಪಾಲು ನಿಧಿಯನ್ನು ನಿಗಮಗಳ ಸಾಮಾಜಿಕ ಜವಾಬ್ದಾರಿ (ಸಿ ಎಸ್ ಆರ್) ಯಿಂದ ಸಂಗ್ರಹಿಸಿದರೆ, ಉಳಿದ ನಿಧಿಯನ್ನು ಸ್ವಯಂಸೇವಕ ದಳಗಳು ಸಂಗ್ರಹಿಸಿದವು.
ಸಕಾರಾತ್ಮಕ ಮತ್ತು ಅಂತರ್ಗತ ವಾತಾವರಣವನ್ನು ಸೃಷ್ಟಿಸಲು ನಿರ್ದಿಷ್ಟ ಅಂಗವೈಕಲ್ಯದ ಬಗ್ಗೆ ಜಾಗೃತಿ ಮೂಡಿಸುವುದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಅನುಪ್ರಯಾಸ್ ರೇಲ್ವೆ ಇಲಾಖೆಯ ಎಲ್ಲ ಸಿಬ್ಬಂದಿಗೂ ಅಂಗವೈಕಲ್ಯ ಜಾಗೃತಿ ಕಾರ್ಯವನ್ನು ನಡೆಸಿ ಅದರ ಬಗ್ಗೆ ತಿಳಿಸಿಕೊಟ್ಟಿತು. ನಂತರದಲ್ಲಿ ಅನುಪ್ರಯಾಸ್ ಇದೇ ರೀತಿಯ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ, ಕಾರ್ಪೊರೇಟ್ ಸಂಸ್ಥೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ನಡೆಸಿಕೊಟ್ಟಿತು.
"ವಿವಿಧ ಅಂಗವೈಕಲ್ಯಗಳ ಬಗ್ಗೆ ಜನರನ್ನು ಸಂವೇದನಾಶೀಲಗೊಳಿಸುವುದು ಅವರಿಗೆ ಅನುಭೂತಿಯ ಭಾವವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ತಾರತಮ್ಯವನ್ನು ಹೋಗಲಾಡಿಸಲು ಇರುವುದು ಇದೊಂದೇ ಮಾರ್ಗ. ರೇಲ್ವೆ ಸಿಬ್ಬಂದಿ ಅಂಗವಿಕಲರ ಪ್ರಯಾಣದ ಅನುಭವವನ್ನು ಸುಖವಾಗಿರಿಸಲು, ತಾಳ್ಮೆಯಿಂದ ಹಾಗೂ ಅವರಿಗೆ ಅರ್ಥವಾಗುವಂತೆ ನಡೆದುಕೊಂಡರೆ ಸಾಕು," ಎಂದು ಶಕ್ತಿ ಪುನರುಚ್ಚರಿಸುತ್ತಾರೆ.
ಅನುಪ್ರಯಾಸ್ ಇತ್ತೀಚೆಗಷ್ಟೇ ಲಾಭೋದ್ದೇಶರಹಿತ ಸಂಸ್ಥೆಯಿಂದ ಸ್ವ-ಸುಸ್ಥಿರ ಸಂಸ್ಥೆಯಾಗಿ ಮಾರ್ಪಾಡಾಗಿದೆ. ಟಿ-ಶರ್ಟ್‌ಗಳು, ಪೋಸ್ಟರ್‌ಗಳು ಮತ್ತು ಬ್ರೈಲ್ ಪ್ರಿಂಟ್‌ಗಳೊಂದಿಗೆ ಗೋಡೆಯ ಅಲಂಕಾರವನ್ನು ಒಳಗೊಂಡಂತೆ ದೃಷ್ಟಿಹೀನತೆಯ ಬಗ್ಗೆ ಸಮುದಾಯಗಳನ್ನು ಸಂವೇದನಾಶೀಲಗೊಳಿಸುವುದರ ಮೇಲೆ ಕೇಂದ್ರೀಕರಿಸಿದ 'ಬ್ರೈಲ್ ಮೇಟ್' ಎಂಬ ಉತ್ಪನ್ನಗಳನ್ನು ಇದು ಮಾರಾಟ ಮಾಡಲಾರಂಭಿಸಿತು. "ಈ ಉಪಕ್ರಮವು ಜಾಗೃತಿ ಮೂಡಿಸುವ ಹಾಗೂ ನಮಗೆ ಆದಾಯವನ್ನು ತಂದುಕೊಡುವ ಸಾಮರ್ಥ್ಯವನ್ನು ಹೊಂದಿದೆ," ಎಂದು ಶಕ್ತಿ ಟಿಪ್ಪಣಿಸುತ್ತಾರೆ.
ದೃಷ್ಟಿಹೀನರಿಗೆ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವುದು
ಉದ್ಯಮಿ ಸಾಗರ್ ಪಾಟೀಲ್ ಹೂಡಿಕೆದಾರರನ್ನು ಭೇಟಿ ಮಾಡಲು ಮತ್ತು ಒಪ್ಪಂದಗಳನ್ನು ಕೊನೆಗಾಣಿಸಲು ಹಲವಾರು ಸ್ಥಳಗಳಿಗೆ ಪ್ರಯಾಣಿಸಬೇಕಾದ ಸಂಧರ್ಭವಿರುತ್ತಿತ್ತು. ಅದಾಗ್ಯೂ, ಸರಿಯಾದ ಪ್ಲಾಟ್ಫಾರ್ಮ್ ಕಂಡುಹಿಡಿಯಲು ಸಾಧ್ಯವಾಗದ ಕಾರಣ ಮುಂಬೈನ ಬೊರಿವಾಲಿ ರೈಲ್ವೆ ನಿಲ್ದಾಣದಲ್ಲಿ ಅವರು ಅನೇಕ ಬಾರಿ ರೈಲು ತಪ್ಪಿಸಿಕೊಂಡಿದ್ದಾರೆ.
"ನಾನು ಕುರುಡನಾದಾಗಿನಿಂದ ನನಗೆ ಸಹಾಯ ಮಾಡಲು ಯಾರಿಗೂ ಸಮಯ ಅಥವ ತಾಳ್ಮೆಯಿರುತ್ತಿರಲಿಲ್ಲ. ಅನುಪ್ರಯಾಸ್ ಅಳವಡಿಸಿದ ಬ್ರೇಲ್ ಸೂಚಕಗಳನ್ನು ಬಳಸಲು ಶುರುಮಾಡಿದಂದಿನಿಂದ ನಾನು ಯಾವ ರೈಲನ್ನೂ ತಪ್ಪಿಸಿಕೊಂಡಿಲ್ಲ." ಎಂದು ಸಾಗರ್, ಯುವರ್ ಸ್ಟೋರಿ ಗೆ ಹೇಳಿದರು.
ಹದಿನೆಂಟು ವರ್ಷದ ಆದಿಲ್ ಹುಸೇನ್ ಸಹ ಇದೇ ಅಭಿಪ್ರಾಯ ಹೊಂದಿದ್ದಾರೆ. "ನಾನು ಮೈಸೂರು ವಾರಣಾಸಿ ಎಕ್ಸ್ಪ್ರೆಸ್ ರೈಲಿನಲ್ಲಿ ಬಹಳಷ್ಟು ಬಾರಿ ಪ್ರಯಾಣ ಮಾಡಿದ್ದೀನಿ, ದೃಷ್ಟಿಹೀನರಿಗೆ ನೀಡಿರುವ ಈ ರೀತಿಯ ಸೌಕರ್ಯಗಳು ಯಾವತ್ತಿಗೂ ಶ್ಲಾಘನೀಯವೆ. ನಾನು ರೈಲು ಹತ್ತಿದಾಗೆಲ್ಲ ಸ್ವತಂತ್ರನೂ, ಸಬಲೀಕರಣಗೊಂಡವನೂ ಎನ್ನಿಸುತ್ತದೆ" ಎನ್ನುತ್ತಾರೆ.
ಇದೆಲ್ಲ ಶುರುವಾದದ್ದು ಹೇಗೆ?
ಅನುಪ್ರಯಾಸ್, 2014 ರ ನವೆಂಬರ್‌ನಲ್ಲಿ ಶಕ್ತಿ ಕಾಜ್ಲ ಹಾಗೂ ಪಂಚಮ್ ಕಾಜ್ಲಾರಿಂದ ಸ್ಥಾಪಿತವಾಯಿತು. ತಮ್ಮ ಕಾಲೇಜು ದಿವಸಗಳಲ್ಲಿ ಪಂಚಮ್ ದೃಷ್ಟಿಹೀನರಿಗೆ ಪರೀಕ್ಷೆಗಳಲ್ಲಿ ಬರಹಗಾರರಾಗಿ ಸಹಾಯ ಮಾಡುತ್ತಿದ್ದರು.
ಆತ ಅವರೊಂದಿಗಿದ್ದಾಗ, ಅವರು ದಿನನಿತ್ಯ ಜೀವನದಲ್ಲಿ ಪಡುವ ಕಷ್ಟವನ್ನು ಗಮನಿಸಿದರು. ಕಾಲೇಜು ಮುಗಿದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಮತ್ತೆ ದೃಷ್ಟಿಹೀನರಿಗೆ ಸಹಾಯ ಮಾಡಲು ನಿಗಮಗಳ ಸಾಮಾಜಿಕ ಜವಾಬ್ದಾರಿಯ ಉಪಕ್ರಮವು ಅನುವು ಮಾಡಿಕೊಟ್ಟಿತು.
"ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸುಲಭವಾಗಿ ಪ್ರವೇಶ ಪಡೆಯುವಂತೆ ಮಾಡಿ ಅವರ ಜೀವನವನ್ನು ಸುಲಭಗೊಳಿಸುವ ಆಸೆಯಿತ್ತು, ಆದ್ದರಿಂದಲೇ ಅನುಪ್ರಾಯಸ್ ಹುಟ್ಟಿಕೊಂಡದ್ದು. ಈಗ ನನ್ನ ಗುರಿ ಇರುವುದು ಇಡೀ ಭಾರತ ದೇಶವನ್ನು ಸಂಪೂರ್ಣವಾಗಿ ಅದರಲ್ಲೂ ವಿಭಿನ್ನ, ವಿಶಿಷ್ಟ ಚೇತನರಿಗೆ ಎಲ್ಲ ಕಡೆಯೂ ಸುಲಭವಾಗಿ ಪ್ರವೇಶ ಸಿಗುವಂತೆ ಮಾಡುವುದು" ಎನ್ನುತ್ತಾರೆ ಪಂಚಂ.