ಕನ್ನಡ ಕಲಿಕೆ ವೆಬ್‌ಸೈಟ್ ಪ್ರಪಂಚಾದ್ಯಂತ ಕನ್ನಡ ಕಲಿಯಲು ಇಚ್ಛಿಸುವವರಿಗೆ ಸಹಕಾರಿ
ಕನ್ನಡದಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುವುದರಿಂದ ಶುರುವಾಗಿ ಸಣ್ಣ ವಾಕ್ಯಗಳನ್ನು ಓದುವಷ್ಟು ಕಲಿಸುತ್ತದೆ ಪುರುಷೋತ್ತಮ ಬಿಲಿಮನೆಯವರ ಕನ್ನಡ ಕಲಿಕಾ ಜಾಲತಾಣ.
ಸ್ಥಳೀಯ ಭಾಷೆಗಳು ದಿನೇ ದಿನೇ ನಶಿಸಿಹೊಗುತ್ತಿವೆ, ಅವುಗಳನ್ನು ಉಳಿಸಿ ಬೆಳಸ ಬೇಕಾಗಿರಿವುದು ನಮ್ಮ ಕರ್ತವ್ಯ, ಏಕೆಂದರೆ ಭಾಷೆಗಳು ಆಯಾ ಊರಿನ ಸಾಂಸ್ಕೃತಿಕ ಪ್ರತೀಕಗಳಾಗಿವೆ. ಭಾಷೆಯ ಕಲಿಕೆಯನ್ನು ಮತ್ತು ಬಳಕೆಯನ್ನು ಸಮಕಾಲೀನ ತಂತ್ರಜ್ಞಾನಗಳಿಗೆ ಅಳವಡಿಸಿಕೊಳ್ಳದೆ ಹೋದರೆ ಅವುಗಳು ನಿಧಾನವಾಗಿ ನಶಿಸುವುದು ಖಚಿತ.
ಜೆಎನ್‌ಯುನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನದ ಅಧ್ಯಕ್ಷರಾಗಿರುವ ಪ್ರಾಧ್ಯಾಪಕ ಪುರುಷೋತ್ತಮ ಬಿಲಿಮಲೆ ಅವರು ವಿಶ್ವಾದ್ಯಂತ ಕನ್ನಡ ಕಲಿಯಲು ಇಚ್ಛಿಸುವವರಿಗೆ ಸಹಾಯವಾಗುವಂತಹ ಕನ್ನಡ ಕಲಿಕಾ ಎಂಬ ಜಾಲತಾಣವನ್ನು ಕನ್ನಡ ಮತ್ತು ಸಂಸ್ಕೃತಿಯ ಸಹಾಯದಿಂದ ಚಾಲಣೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಇವರು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಉಚಿತ ಕನ್ನಡ ತರಗತಿಗಳನ್ನು ಸಹ ನಡೆಸುತ್ತಿದ್ದಾರೆ.
ಪ್ರೊಫೆಸರ್ ಪುರುಷೋತ್ತಮರವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನ್ಯೂಡೆಲ್ಲಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಪ್ರಸ್ತುತ ಜೆಎನ್‌ಯುನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಕಲಿಕೆಯ ಬಗ್ಗೆ ಎಡೆಕ್ಸ್ ಲೈವ್ ನೊಂದಿಗೆ ಮಾತನಾಡುತ್ತ ಅವರು ಹೀಗೆ ಹೇಳಿದರು,
"ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಆನ್ ಲೈನ್ ವೇದಿಕೆಯ ಬಗ್ಗೆ ಪ್ರಸ್ತಾಪಿಸಿದಾಗ, ಅವರು ತಕ್ಷಣ ಒಪ್ಪಿಕೊಂಡು 30 ಲಕ್ಷ ರೂಪಾಯಿಯನ್ನು ಬಿಡುಗಡೆಗೊಳಿಸಿದರು. ಯಾರು ಬೇಕಾದರೂ ಮಧ್ಯಂತರದ ಮಟ್ಟಕ್ಕೆ ಕನ್ನಡ ಕಲಿಯುವಂತೆ ವೆಬ್ ಸೈಟ್ ಅನ್ನು ವಿನ್ಯಾಸಗೊಳಿಸಲಾಗಿದ್ದು ನನ್ನ ಪ್ರಕಾರ ಇದರಿಂದ ಸಣ್ಣ ವಾಕ್ಯಗಳನ್ನು ಓದಲು, ತಮ್ಮನ್ನು ಪರಿಚಯಿಸಿಕೊಳ್ಳಲು, ಒಬ್ಬರಿಗೊಬ್ಬರು ಶುಭಾಶಯ ಕೋರಲು, ಕನ್ನಡದಲ್ಲಿರುವ ಬೋರ್ಡ್‌ಗಳನ್ನು ಓದಲು, ಇತರರು ಏನು ಮಾತನಾಡುತ್ತಿದ್ದಾರೆಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ."
ಕನ್ನಡ ಕಲಿಕೆ ವೆಬ್‌ಸೈಟ್‌ನಲ್ಲಿ ಕನ್ನಡ ಕಲಿಯಲು ಒಬ್ಬರು ಆಯ್ಕೆಮಾಡಿಕೊಳ್ಳಲು ಎರಡು ವಿಭಿನ್ನ ವರ್ಗಗಳಿವೆ. ಒಂದು ವರ್ಗವು ಮೂಲಭೂತ ವ್ಯಾಕರಣವನ್ನು ಕಲಿಸುತ್ತದೆ, ಇನ್ನೊಂದು ವರ್ಗದಲ್ಲಿ ದೃಶ್ಯ ತುಣುಕುಗಳಿದ್ದು ಅದು ಜಾಗತೀಕರಣ, ಪತ್ರಿಕೋದ್ಯಮದಲ್ಲಿ ಕನ್ನಡ, ಆಧುನಿಕ ಕೃಷಿ, ಬಣ್ಣಗಳು ಮತ್ತು ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳ ಬಗ್ಗೆ ಪಟ್ಟಿ ಹೊಂದಿದೆ, ಇದರಿಂದ ಶಬ್ದಕೋಶವನ್ನು ಸುಧಾರಿಸಬಹುದು. ವ್ಯಾಕರಣ ವರ್ಗದ ಅಡಿಯಲ್ಲಿ, ವರ್ಣಮಾಲೆಯನ್ನು ಬರೆಯಲಷ್ಟೇ ಅಲ್ಲದೆ ಉಚ್ಚಾರಣೆಯನ್ನು ಸಹ ವೀಕ್ಷಿಸಬಹುದು ಮತ್ತು ಕೇಳಿ ಕಲಿಯಬಹುದು. ಹೀಗೆಯೆ ಪ್ರತಿಯೊಂದು ಅಕ್ಷರಕ್ಕೂ ವೆಬ್‌ಸೈಟ್‌ನಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಸ್ವರಗಳು ಮತ್ತು ವರ್ಗಿಯ ವ್ಯಂಜನಗಳಿಂದ ಪಾಠಗಳು ಶುರು ಆಗುತ್ತವೆ.
ಒಟ್ಟು 18 ಅಧ್ಯಾಯಗಳನ್ನೊಳಗೊಂಡ ಘಟಕದಲ್ಲಿ ಕನ್ನಡದಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ಬೇಕಾದ ಮೂಲ ಭಾಷೆಯ ನಿಯಮಗಳನ್ನು ಅಳವಡಿಸಲಾಗಿದ್ದು. ಅಕ್ಷರಗಳ ಕಲಿಕೆಯ ನಂತರ, ವಿದ್ಯಾರ್ಥಿಗಳು ನಾಮಪದಗಳು, ಸರ್ವನಾಮಗಳು, ವರ್ತಮಾನ ಕಾಲ, ಭೂತಕಾಲ, ಭಾವನಾಮ, ವಿಶೇಷಣಗಳು, ವಾಕ್ಯಗಳನ್ನು ಕಲಿಯುತ್ತಾರೆ. ಪ್ರತಿ ಪಾಠದ ಕೊನೆಯಲ್ಲಿ, ಮನೆಕೆಲಸವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಅದನ್ನು ಪುರ್ಣಗೊಳಿಸಿ ನಿರ್ದಿಷ್ಟ ಇಮೇಲ್ ಐಡಿಗೆ ಕಳುಹಿಸಬಹುದು. ಪುರುಷೋತ್ತಮರವರು ಮನೆಕೆಲಸವನ್ನು ಪರಿಶೀಲಿಸಿ, ಪ್ರತಿ ಇಮೇಲ್‌ಗೆ ವೈಯಕ್ತಿಕವಾಗಿ ಉತ್ತರಿಸುತ್ತಾರೆ.
"ವಿದ್ಯಾರ್ಥಿಗಳು ಮಾಡಿದ ಮನೆಕೆಲಸವನ್ನು ಪರೀಕ್ಷಿಸಲು ನಾನು ಶುಕ್ರವಾರ ಎರಡು ಮೂರು ಗಂಟೆಗಳ ಸಮಯವನ್ನು ಮೀಸಲಿಡುತ್ತೇನೆ. ಆಸ್ಟ್ರೇಲಿಯಾ, ಯುಎಸ್ಎ, ಯುಕೆ ಮತ್ತು ಇತರ ದೇಶಗಳಿಂದಲೂ ವಿದ್ಯಾರ್ಥಿಗಳು ತಮ್ಮ ಮನೆಕೆಲಸವನ್ನು ನನಗೆ ಇಮೇಲ್ ಮಾಡುವವರಿದ್ದಾರೆ, ನಾನು ಅವರಿಗೆ ಪ್ರತ್ಯುತ್ತರಿಸುವುದನ್ನು ಎಂದಿಗೂ ತಪ್ಪಿಸುವುದಿಲ್ಲ” ಎಂದು ಎಡೆಕ್ಸ್ ಲೈವ್ ಗೆ ಪುರುಷೋತ್ತಮ ಹೇಳಿದ್ದಾರೆ.
ಇದನ್ನೂ ಹೊರತುಪಡಿಸಿ ವಿಧ್ಯಾರ್ಥಿಗಳು ವೆಬ್ ಸೈಟ್ ನಲ್ಲಿ ವಿಡಿಯೋಗಳನ್ನು ನೋಡಿ ಪ್ರತಿಯೊಂದು ಪದ ಮತ್ತು ಅದರ ಅರ್ಥವನ್ನು ಬರೆಯಬೇಕಾಗುತ್ತದೆ. ಅವರು ನೋಡುವ ಪ್ರತಿಯೊಂದು ವಿಡಿಯೋ ಕನಿಷ್ಠ 400 ಪದಗಳನ್ನು ಹೊಂದಿರುತ್ತದೆ, ಮುಂಬರುವ ದಿನಗಳಲ್ಲಿ ಪುರುಷೋತ್ತಮರವರು ಪದಗಳನ್ನು ಕಡಿಮೆಗೊಳಿಸಲು ಮತ್ತು ವಿಡಿಯೋಗಳನ್ನು ಚಿಕ್ಕದು ಮಾಡುವ ಇಚ್ಛೆ ಹೊಂದಿದ್ದಾರೆ.
ಇದಲ್ಲದೆ ಪುರುಷೋತ್ತಮರವರು ನಡೆಸುವ ಉಚಿತ ತರಗತಿಗಳ ಬಗ್ಗೆ ಕೋಸ್ಟಲ್ ಡೈಜೆಸ್ಟ್ ಗೆ ಹೀಗೆ ಹೇಳಿದ್ದಾರೆ,
“ಪ್ರಸ್ತುತ 40 ವಿದ್ಯಾರ್ಥಿಗಳು ಉಚಿತ ಕನ್ನಡ ತರಗತಿಗಳಿಗೆ ಹಾಜರಾಗುತ್ತಿದ್ದಾರೆ, ಹೊರಗಿನವರು ಮತ್ತು ತುಲನಾತ್ಮಕವಾಗಿ ಅಧ್ಯಯನ ಮಾಡಲು ಬಯಸುವವರು ಆಸಕ್ತಿ ತೋರಿಸಿದ್ದು, ತರಗತಿಗಳು ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ ೪ ರಿಂದ ಸಂಜೆ ೬ ರವರೆಗೆ ನಡೆಯುತ್ತವೆ."
ಆಸಕ್ತರು ಮುಂದಿರುವ ಲಿಂಕ್ ಮೂಲಕ ಕನ್ನಡ ಕಲಿಕಾ ಜಾಲತಾಣಕ್ಕೆ ಬೇಟಿ ನೀಡಬಹುದು: https://kannadakalike.org/
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.