ಶಾಲೆಯ ಕ್ಲೀನರ್ ಆಗಿದ್ದ ಲಿನ್ಜಾ ಈಗ ಅದೇ ಶಾಲೆಯಲ್ಲಿ ಶಿಕ್ಷಕಿ
ಕೇರಳದ ಶಾಲೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಲಿನ್ಜಾ ಆರ್.ಜೆ ತಮ್ಮ ಪರಿಶ್ರಮದ ಮೂಲಕ ಸಾಧನೆಗೈದು ಈಗ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬದುಕಿನಲ್ಲಿ ಒಮ್ಮೊಮ್ಮೆ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಸಾಧಕನಾಗಬಯಸುವವನು ಎಲ್ಲ ಅಡ್ಡಿಗಳನ್ನು ಮೆಟ್ಟಿ ನಿಂತಾಗಲೇ ಸಾಧಕನಾಗಲು ಸಾಧ್ಯ. ಆದರೆ ಸಾಧನೆಗೆ ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಕಾಯುವ ತಾಳ್ಮೆ ಇರಬೇಕಷ್ಟೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕನ್ಹಂಗಡ್‌ನ ಇಕ್ಬಾಲ್ ಶಾಲೆಯಲ್ಲಿ ಕ್ಲೀನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಲಿನ್ಜಾ ಆರ್.ಜೆ ಈಗ ಅದೇ ಶಾಲೆಯಲ್ಲಿ ಶಿಕ್ಷಕಿಯಾಗುವ ಮೂಲಕ ಎಲ್ಲರ ಚಿತ್ತವನ್ನು ತಮ್ಮತ್ತ ಸೆಳೆದಿದ್ದಾರೆ. ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.
ALSO READ
ಇಕ್ಬಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿದ್ದ ಅವರ ತಂದೆ ರಾಜನ್ ಕೆಕೆ 2001 ರಲ್ಲಿ ನಿಧನರಾದಾಗ ಲಿನ್ಜಾ ಅಂತಿಮ ವರ್ಷದ ಪದವಿ ಶಿಕ್ಷಣದಲ್ಲಿದ್ದರು. ಆಗ ಶಾಲೆಯು ಸಹಾನಭೂತಿಯ ಆಧಾರದ ಮೇಲೆ ಕ್ಲೀನರ್ ಕೆಲಸವನ್ನು ನೀಡಿತು. ಆ ಸಮಯದಲ್ಲಿ 12ನೇ ತರಗತಿ ಓದುತ್ತಿದ್ದ ತನ್ನ ತಮ್ಮನನ್ನು ನೋಡಿಕೊಳ್ಳುವುದು ಅನಿವಾರ್ಯವಾದ್ದರಿಂದ ಲಿನ್ಜಾ ಆ ಕೆಲಸವನ್ನು ಒಪ್ಪಿಕೊಂಡರು.
"ಒಮ್ಮೊಮ್ಮೆ ಬಿಡುವಿನ ವೇಳೆ ಇರುವಾಗ ನಾನು ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಕುಳಿತುಕೊಂಡು ಅಧ್ಯಯನ ಮಾಡುತ್ತಾ, ಬಿ.ಎ ಪೂರ್ಣಗೊಳಿಸಿ, ನಂತರ ಎಂ.ಎ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಡೆದೆ," ಎನ್ನುತ್ತಾರೆ ಲಿನ್ಜಾ, ವರದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್.
2006ರಲ್ಲಿ ಅನಿವಾರ್ಯ ಕಾರಣದಿಂದ ಆ ಕೆಲಸವನ್ನು ತೊರೆಯಬೇಕಾಯಿತು. ಶಿಕ್ಷಕರಾಗಲು ಬಿ.ಎಡ್ ಮಾಡುವುದು ಕಡ್ಡಾಯವಾದ್ದರಿಂದ ಈ ಸಮಯದಲ್ಲಿ ಬಿ.ಎಡ್ ಮಾಡಿ ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ್ ಶಿಕ್ಷಕಿಯಾಗಿ ಸೇರಿದರು. ಮರಳಿ 2013ರಲ್ಲಿ ಇಕ್ಬಾಲ್ ಶಾಲೆಯು ಸ್ವಚ್ಛಗೊಳಿಸುವ ಕೆಲಸ ನೀಡುವವರೆಗೂ ಲಿನ್ಜಾ ಐದು ವರ್ಷಗಳ ಕಾಲ ಶಿಕ್ಷಕಿಯಾಗಿದ್ದಳು.
ಇದರ ಮಧ್ಯೆ, ಲಿನ್ಜಾ ನೆಹರೂ ಕಾಲೇಜಿನ ಗುಮಾಸ್ತರಾದ ಸುಧೀರನ್ ಸಿ.ವಿ ಅವರನ್ನು ವಿವಾಹವಾದರು. ಅವರಿಗೆ ಸೋಹಿಲ್ ಮತ್ತು ಸಂಘಮಿತ್ರ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರ ಸಹೋದರ ಈಗ ಕೊಲ್ಲಿಯಲ್ಲಿ ನೆಲೆಸಿದ್ದಾರೆ, ವರದಿ ಪುಣೆ ಮೀರರ್.
"ಆಕೆ ಅಚ್ಚುಕಟ್ಟಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದಳು. ಆದರೆ ತನ್ನ ಬಿಡುವಿನ ವೇಳೆಯಲ್ಲಿ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿರುತ್ತಿದ್ದಳು. ಇಂಥ ಅದ್ಬುತ ಪ್ರತಿಭೆಯು ವ್ಯರ್ಥವಾಗುವುದನ್ನು ನೋಡಿದೆ, ಆಗ ನಾನು ಶಿಕ್ಷಕರ ಅರ್ಹತಾ ಪರೀಕ್ಷೆಗೆ ತಯಾರಿ ನಡೆಸುವಂತೆ ಅವಳಿಗೆ ಹೇಳಿದೆ. ಆಗ ಮಗುವಿನ ಕಾರಣದಿಂದಾಗಿ ಅವಳು ಹಿಂಜರಿದಾಗ, ನಾನು ಬಡತನದಿಂದಾಗಿ ಬಹು ಬೇಗನೆ ಮದುವೆಯಾದೆ. ಎರಡು ಮಕ್ಕಳ ತಾಯಿಯಾದ ನಂತರ ನಾನು ನನ್ನ ಶಿಕ್ಷಣವನ್ನು ಪೂರ್ಣಗೊಳಿಸಿದೆ ಎಂದಾಗ, ಅವಳಿಗೆ ಸಂದೇಶವೊಂದು ದೊರಕಿತು, ಆಗ ಇದಕ್ಕೆ ಒಪ್ಪಿಕೊಂಡಳು," ಎಂದು ಇಕ್ಬಾಲ್ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರವೀನಾ ಹೇಳುತ್ತಾರೆ, ವರದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್.
ಲಿನ್ಜಾ ಕೇರಳ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆ-ಟಿಇಟಿ) ತೆರವುಗೊಳಿಸಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಲಿಸಲು ಅರ್ಹತೆ ಪಡೆದರು. ನಂತರ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ (ಎಸ್‌ಎಟಿ) ತೇರ್ಗಡೆಯಾದರು. ಕಂಪ್ಯೂಟರ್ ಕೌಶಲ ಮುಂತಾದ ವಿಷಯಗಳಲ್ಲಿ ಪರಿಣಿತರಾದರು. ಇದೆಲ್ಲಾ ಅರ್ಹತೆಗಳ ನಡುವೆ ಅವಳು ತನ್ನ ಸಿಬ್ಬಂದಿ ಕೆಲಸದಿಂದ ಕುಗ್ಗಲಿಲ್ಲ. 2018ರಲ್ಲಿ ಪ್ರಾಥಮಿಕ ವಿಭಾಗದಲ್ಲಿ ಶಿಕ್ಷಕರ ಹುದ್ದೆಗೆ ಕರೆದಾಗ, ಅವಳು ಅರ್ಜಿ ಸಲ್ಲಿಸಿದಳು.
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಲಿನ್ಜಾ,
"ಇಕ್ಬಾಲ್ ಶಾಲೆಯಲ್ಲಿ ಕೆಲಸ ಸಿಕ್ಕಾಗ, ಮೊದಲ ದಿನ ತರಗತಿಯಲ್ಲಿ ನನ್ನನ್ನು ನೋಡಿ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾದ್ದರು. ನಾನು ಗೈರಾದ ಶಿಕ್ಷಕರ ಬದಲಾಗಿ ಬಂದಿದ್ದೆ ಎಂದೇ ಅವರು ಭಾವಿಸಿದ್ದರು. ಈ ಹೊಸ ಪಾತ್ರದಲ್ಲಿ ನನ್ನನ್ನು ವಿದ್ಯಾರ್ಥಿಗಳು ಸ್ವೀಕರಿಸುತ್ತಾರೆಯೇ ಎಂಬ ಅನುಮಾನವಿತ್ತು. ಆಗ ನಾನು ಇಂಗ್ಲೀಷಿನಲ್ಲಿ ಸಂಭೋದಿಸುವ ಮೂಲಕ ಪಾಠ ಆರಂಭಸಿದೆ. ಈ ಮೂಲಕ ನಾನು ಇದನ್ನು ಮಾಡಬಲ್ಲೇ ಎಂದು ತೋರಿಸುವ ಮೂಲಕ ವಿದ್ಯಾರ್ಥಿಗಳ ಮನದಲ್ಲಿದ್ದ ಸಂಶಯವನ್ನು ಹೋಗಲಾಡಿಸಿದೆ," ಎಂದೆನ್ನುತ್ತಾರೆ.
"ಆಕೆಯಲ್ಲಿ ನಾಯಕತ್ವದ ಗುಣವಿತ್ತು. ಸ್ವಚ್ಛಗೊಳಿಸುವ ಸಿಬ್ಬಂದಿಯಾಗೇ ಉಳಿದದ್ದರೆ ಈ ಶಾಲೆಯ ವಿದ್ಯಾರ್ಥಿಗಳಿಗೆ ದೊಡ್ಡ ನಷ್ಟವಾಗುತ್ತಿತ್ತು," ಎನ್ನುವುದು ಪ್ರವೀನಾರವರ ಅಭಿಪ್ರಾಯ.
ಇಂತಹ ಪ್ರತಿಭೆಗಳು ಎಲೆಮರೆಯಲ್ಲಿ ಅವಿತಿರದೆ ಮುಂಬೆಳಕಿಗೆ ಬಂದು ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂಬುದೇ ನಮ್ಮ ಆಶಯ.