41 ರ ಎರಡು ಮಕ್ಕಳ ತಾಯಿ ಈಗ ‘ವಕೀಲೆʼ

ಹತ್ತನೇ ತರಗತಿಯಲ್ಲಿ ಕುಟುಂಬದವರ ಬಲವಂತಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿ ವಿವಾಹವಾಗಿ, ಕೌಟುಂಬಿಕ ಕಲಹದಿಂದ ಮನನೋಯಿಸಿಕೊಳ್ಳದೆ, ವಕೀಲರೊಬ್ಬರ ಕಛೇರಿಯಲ್ಲಿ ಕ್ಲರ್ಕ್‌ಆಗಿ ಕೆಲಸ ಮಾಡಿ ತಮ್ಮಿಬ್ಬರು ಮಕ್ಕಳನ್ನು ಸಾಕಿ ಶಿಕ್ಷಣ ಕೊಡಿಸಿ, ಈಗ 41ರ ಮಧ್ಯ ವಯಸ್ಸಿನಲ್ಲಿ ಲಾಯರ್‌ ಆದ ನೀನಾ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಚಿಲುಮೆಯೇ ಸರಿ.

41 ರ ಎರಡು ಮಕ್ಕಳ ತಾಯಿ ಈಗ ‘ವಕೀಲೆʼ

Wednesday December 11, 2019,

2 min Read

ಓದುವುದಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಹಲವಾರು ಜನ ಸಾಬೀತು ಪಡಿಸಿದ್ದಾರೆ. ಬ್ರಿಟೀಷರ ಆಡಳಿತ ಕಾಲದಿಂದಲೂ ಭಾರತದಲ್ಲಿ ವಯಸ್ಕರ ಶಿಕ್ಷಣವೆಂಬುದು ಜಾರಿಯಲ್ಲಿದೆ. ಸ್ವತಂತ್ರ ಭಾರತದ ಸರಕಾರಗಳೂ ಅದನ್ನು ಮುಂದುವರೆಸಿಕೊಂಡು ಬಂದವು. ಸಂಜೆಯ ಹೊತ್ತಿನಲ್ಲಿ ವಯಸ್ಕರ ಶಿಕ್ಷಣ ತರಗತಿಗಳನ್ನು ನಡೆಸಿ, ಮೂಲಭೂತವಾಗಿ ಅವಶ್ಯವೆನಿಸುವಷ್ಟು ಶಿಕ್ಷಣವನ್ನು ಅಲ್ಲಿ ಹೇಳಿಕೊಡಲಾಗುತ್ತದೆ. ಇದು ಬಾಲ್ಯದಲ್ಲಿ ಶಿಕ್ಷಣದ ಸೌಕರ್ಯ ಇಲ್ಲದ ಕಾರಣಕ್ಕೋ ಅಥವಾ ಶಿಕ್ಷಣ ಅವಶ್ಯವಲ್ಲ ಎಂದು ತಿಳಿದುಕೊಂಡ ಆಗಿನ ಹಿರಿಯರು ಶಾಲೆಗೆ ಹೋಗಿರುವುದಿಲ್ಲವಲ್ಲ ಅಂತಹವರಿಗಾಗಿ ನಡೆವ ಶಾಲೆಯ ಕಥೆ. ಆದರೆ ಕೆಲ ಅನಿವಾರ್ಯ ಕಾರಣದಿಂದಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದವರ ಕಥೆಯದ್ದು ಬೇರೊಂದು ಆಯಾಮ.


ಹಾಗೆ ಮನೆಯಲ್ಲಿ ಬಲವಂತವಾಗಿ ಬಾಲ್ಯ ವಿವಾಹ ಮಾಡಿದ ಕಾರಣದಿಂದಾಗಿ ಹತ್ತನೇ ತರಗತಿಗೆ ಶಿಕ್ಷಣವನ್ನು ನಿಲ್ಲಿಸಿದವರು ಕೆ. ಜಿ. ನೀನ. ಹತ್ತನೇ ತರಗತಿ ಓದುವಾಗ ಮನೆಯವರ ಬಲವಂತಕ್ಕೆ ಮದುವೆಯಾಗಿ, ಶಾಲೆ ತೊರೆದ ನೀನಾರಿಗೆ ಇನ್ನೂ ಮುಂದಕ್ಕೆ ಓದುವ ಆಸೆ ಹಾಗೆಯೇ ಉಳಿದಿತ್ತು. ಅದರ ಕುರಿತು ಮಾತನಾಡುತ್ತ ಅವರು,


“ಹತ್ತನೇ ತರಗತಿಯ ನಂತರ, ನಾನು ಮದುವೆಯಾಗಿ ನನ್ನ ಅಧ್ಯಯನವನ್ನು ನಿಲ್ಲಿಸಬೇಕಾಯಿತು. ಶೀಘ್ರದಲ್ಲೇ, ನನಗೆ ಇಬ್ಬರು ಮಕ್ಕಳಾದರು, ನನ್ನ ಎಲ್ಲಾ ಸಹಪಾಠಿಗಳು ಕಾಲೇಜಿಗೆ ಸೇರಿದ್ದಾರೆ ಆದ್ದರಿಂದ ಓದಬೇಕೆಂಬ ಆಸೆ ನನ್ನಲ್ಲಿ ಹಾಗೆಯೇ ಉಳಿದಿತ್ತು” ಎಂದರು.

ಕೆ. ಜಿ. ನೀನ (ಚಿತ್ರಕೃಪೆ: ದಿ ನ್ಯೂ ಇಂಡಿಯಾ ಎಕ್ಸ್ಪ್ರೆಸ್)



ಕನಸನ್ನು ಕಾಣುತ್ತಾ ಕೂತು ಬಿಟ್ಟರೆ ಆದೀತೆ ಎಂದು ಚಿಂತಿಸಿದ ಅವರು, ತಮ್ಮ ಮನೆಯನ್ನು ಸಂಭಾಳಿಸಲು ಒಂದು ಕಾನೂನು ಸಲಹಾ ಕಛೇರಿಯಲ್ಲಿ ಕ್ಲರ್ಕ್‌ ಆಗಿ ಸೇರಿದರು. ಅಲ್ಲಿ ಅವರ ಆಸೆ ಮತ್ತಷ್ಟು ಬೆಳೆಯತೊಡಗಿತು. ಅದೇ ಸಮಯದಲ್ಲಿ ತಮ್ಮ ನೆರೆಹೊರೆಯ ರಾಣಿ ಎಂಬ ಕೇರಳ ಸಾಕ್ಷರತಾ ಸಮಿತಿಯ ಪ್ರಮುಖರನ್ನು ಭೇಟಿಯಾದಾಗ ಅವರು ನೀನಾರಿಗೆ ಹತ್ತನೇ ತರಗತಿಯ ಸಮನಾದ ಪರೀಕ್ಷೆಯೊಂದ್ನು ಬರೆಸಿದರು.


"ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದೊಂದಿಗಿನ ಪ್ರೇರಕ್ ರಾಣಿಯನ್ನು ಭೇಟಿಯಾಗುವುದು ಒಂದು ಮಹತ್ವದ ತಿರುವು, ಏಕೆಂದರೆ ಅವರು 10 ನೇ ತರಗತಿಯ ಸಮಾನ ಕೋರ್ಸ್ಗೆ ಸೇರಲು ನನಗೆ ಸಹಾಯ ಮಾಡಿದರು" ಎಂದು ನೀನಾ ಹೇಳಿದರು.


ಅದರ ನಂತರ ತಮ್ಮ ಮಗಳೊಟ್ಟಿಗೇ ಪದವಿಪೂರ್ವ ಕೋರ್ಸ್ಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನಲ್ಲಿ ನೊಂದಾಯಿಸಿಕೊಂಡರು. ಅದರ ಕುರಿತು ಮಾತನಾಡುತ್ತ,


ನಾನು ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಭಾವಿಸಿದೆ. ನಾನು ಕೋರ್ಸ್‌ಗೆ ಸೇರಿಕೊಂಡೆ ಮತ್ತು ಪ್ರತಿ ಭಾನುವಾರ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದೆ, ಒಂದು ದಿನ ವಕೀಲೆಯಾಗುವೆನೆಂಬ ಆಸೆ ಚಿಗುರೊಡೆಯಿತು. ಅಂತಿಮವಾಗಿ, ನಾನು 2010 ರಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾದೆ,” ಎಂದರು.


2012ರಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಯುತ್ತಲೇ ತಮ್ಮ ಲಾಯರ್‌ ಆಗುವ ಕನಸಿಗೆ ಪೂರಕವಾಗುವ ಹಾಗೆ ಕಾನೂನು ಪದವಿ ಓದುವುದಕ್ಕೆಂದು ಎರ್ನಾಕುಲಂನ ಸರ್ಕಾರಿ ಕಾನೂನು ಪದವಿ ಕಾಲೇಜಿನ ಪ್ರವೇಶ ಪರೀಕ್ಷೆ ಬರೆದು, ಉತ್ತೀರ್ಣರಾಗಿ ಐದು ವರ್ಷಗಳ ಕಾನೂನು ಪದವಿ ಶಿಕ್ಷಣ ಮುಗಿಸಿದ್ದಾರೆ. ಇದೇ ಡಿಸೆಂಬರ್‌ 15 ರಂದು ಅವರು ತಮ್ಮ ಕೆಲಸಕ್ಕೆ ಹಾಜರಾಗಲಿದ್ದಾರೆ.


“ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದಾಗಿದೆ. ನಾನು ನನ್ನ ಕನಸಿಗೆ ಒಂದು ಹೆಜ್ಜೆ ಹತ್ತಿರವಾಗಿದ್ದೆ,” ಎಂದು ಅವರು ಹೇಳಿದರು. “ನಾನು ಕಾಲೇಜಿನಲ್ಲಿದ್ದಾಗಲೂ ಕೆಲಸವನ್ನು ನಿಲ್ಲಿಸಲಿಲ್ಲ. ಇದು ಕಷ್ಟಕರವಾಗಿತ್ತು ಮತ್ತು ಅದನ್ನು ಸುಲಭಗೊಳಿಸಿದ್ದಕ್ಕಾಗಿ ನನ್ನ ಕುಟುಂಬ, ಬಾಸ್ ಮತ್ತು ಶಿಕ್ಷಕರಿಗೆ ನಾನು ಧನ್ಯವಾದ ಹೇಳಬೇಕು,” ಎಂದಿದ್ದಾರೆ.


ತಮ್ಮ ಮುಂದಿನ ನಡೆಯ ಬಗ್ಗೆ ಹೇಳುತ್ತ ಅವರು, “ನಾನು ಇನ್ನು ಮುಂದೆ ನಾನು ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದ ವಕೀಲರ ಕಛೇರಿಯಲ್ಲಿ, ಅವರ ಕಿರಿಯ ಸಹೋದ್ಯೋಗಿಯಾಗಿ ಕಾನೂನು ಅಭ್ಯಾಸ ಮಾಡುತ್ತೇನೆ” ಎಂದರು.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.