ಮಣಿಪುರದ ಈ ಪರಿಸರ ಪ್ರೇಮಿ ಒಬ್ಬರೇ 300 ಎಕರೆ ಕಾಡನ್ನು ಮರು ನೆಟ್ಟಿದ್ದಾರೆ
ಮೊಯಿರಾಂಗ್ಥೆಮ್ ಲೋಯಾ ತಮ್ಮ ವೈದ್ಯಕೀಯ ಪ್ರತಿನಿಧಿ ಕೆಲಸವನ್ನು ತೊರೆದು ತಮ್ಮ ಜೀವಿತಾವಧಿಯ 17 ವರ್ಷಗಳನ್ನು ಮಣಿಪುರದ ಪುನ್ಷಿಲೋಕ್‌ನ 300 ಎಕರೆ ನಿರಾಕರಿಸಲಾದ ಕಾಡಿನ ಪ್ರದೇಶದಲ್ಲಿ ಗಿಡ ನೆಡಲು ಮೀಸಲಿಟ್ಟಿದ್ದಾರೆ.
ಈ ಯುಗದ ಮಾನವನ ಕೃತ್ಯಗಳು ಪ್ರಪಂಚದಾದ್ಯಂತ ಕಾಡು ಪ್ರದೇಶದ ಗಣಣೀಯ ನಾಶಕ್ಕೆ ಕಾರಣವಾಗಿವೆ. ಇತ್ತೀಚಿನ ಉದಾಹರಣೆ ಎಂದರೆ, ಅಮೇಜಾನ್ ಕಾಡಿಗೆ ಆವರಿಸಿದ್ದ ಕಾಡ್ಗಿಚ್ಚು, ಇದಕ್ಕೆ ಕಾರಣ ರೈತರು, ಕೈಗಾರಿಕೋದ್ಯಮಿಗಳು ಹಾಗೂ ವ್ಯಾಪಾರಿಗಳು.
ಆದರೆ ಹಲವಾರು ಜನ ಇದರ ವಿರುದ್ಧ ಹೋರಾಡುತ್ತಲೂ ಇದ್ದಾರೆ. ಇಲ್ಲಿಯೇ, ಮುಂಬೈನ 10,000 ಬುಡಕಟ್ಟು ಜನರು ವಾಸಿಸುತ್ತಿರುವ ಆರೆಯ್ ಕಾಡು ಪ್ರದೇಶವನ್ನು, ಮುಂಬರುತ್ತಿರುವ ಮುಂಬೈ ಮೆಟ್ರೋ ಚೊಲಾಬಾ-ಸೀಪ್ಜ್ ಲೈನ್‌ನ ಮೆಟ್ರೋ ಕಾರ್ ಶೆಡ್‌ಗಾಗಿ ಬಂದಿರುವ ಪ್ರಸ್ತಾಪದ ವಿರುದ್ಧ ಬೃಹತ್ ಪ್ರತಿಭಟನೆಯಾಗುತ್ತಿವೆ. ಹಲವು ವ್ಯಕ್ತಿಗಳು ಪರಿಸರವನ್ನು ಉಳಿಸುವ ಸಲುವಾಗಿ ತಮ್ಮ ಕೈಲಾದ ಕೆಲಸವನ್ನು ಮಾಡುತ್ತ ನಮಗೂ ಸ್ಪೂರ್ತಿ ನೀಡುತ್ತಿದ್ದಾರೆ.
ಮಣಿಪುರದ ಮೊಯಿರಾಂಗ್ಥೆಮ್ ಲೋಯಾ ಅಂದಾಜು 300 ಎಕರೆಯಷ್ಟು ಲಾಂಗೋಲ್ ಪರ್ವತ ಶ್ರೇಣಿಯ ಪುನ್ಷಿಲೋಕ್ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ಮರು ನೆಟ್ಟಿದ್ದಾರೆ. ಈ 45 ವರ್ಷದ ಪರಿಸರ ಪ್ರೇಮಿ ಇಡೀ ಪ್ರದೇಶದಲ್ಲಿ ಯಾವುದೇ ಸಹಾಯವಿಲ್ಲದೆ, ಜನರ ಬೆಂಬಲವಿಲ್ಲದೆ ಒಬ್ಬರೇ ಈ ಕಾರ್ಯ ಮಾಡಿದ್ದಾರೆ.
ಎಎನ್‌ಐನೊಂದಿಗೆ ಮಾತನಾಡುತ್ತ, ಅವರು, “ಇಂದು ಈ 300 ಎಕರೆಯ ಅರಣ್ಯ ಪ್ರದೇಶವು, 250 ರೀತಿಯ ಗಿಡಗಳಿಗೆ ಮತ್ತು 25 ವಿವಿಧ ರೀತಿಯ ಬಿದಿರಿನ ಗಿಡಗಳಿಗೆ, ವಿವಿಧ ರೀತಿಯ ಹಾವು, ಪಕ್ಷಿಗಳು, ಹಾಗೂ ಕಾಡು ಪ್ರಾಣಿಗಳಿಗೆ ಆಶ್ರಯವಾಗಿದೆ.” ಎಂದರು.
ಇದೆಲ್ಲ ಹೇಗೆ ಶುರುವಾಯಿತು? ಮೊಯಿರಾಂಗ್ಥೆಮ್ ಲೋಯಾ ಗಿಡಮರಗಳನ್ನು ಚಿಕ್ಕಂದಿನಿಂದಲೇ ಪ್ರೀತಿಸುತ್ತ ಬರುತ್ತಿದ್ದಾರೆ.
“ನಾನು ಕಾಲೇಜು ಮುಗಿಸಿ ಹಿಂತಿರುಗಿದಾಗ, ನಮ್ಮ ಸುತ್ತಲಿನ ಅರಣ್ಯ ಪ್ರದೇಶ ಖಾಲಿಯಾಗಿರುವುದನ್ನು ಕಂಡೆ; ಕೇವಲ ಚಿಕ್ಕ ಗಿಡಗಳಷ್ಟೇ ಉಳಿದಿದ್ದವು. ನನಗೆ ಆಶ್ಚರ್ಯವಾಯಿತು. ಆ ಸ್ಥಿತಿಯನ್ನು ನೋಡಿ ಪರಿಸರಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಾಯಿತು.”
ಮೊಯಿರಾಂಗ್ಥೆಮ್ ಲೋಯಾ ತಮ್ಮ ವೈದ್ಯಕೀಯ ಪ್ರತಿನಿಧಿ ಕೆಲಸವನ್ನು ತೊರೆದು ಪುನ್ಷಿಲೊಕನಲ್ಲಿ ತಮಗಾಗಿ ಒಂದು ಚಿಕ್ಕ ಗುಡಿಸಲನ್ನು ನಿರ್ಮಿಸಿಕೊಂಡು ಅಲ್ಲಿಯೇ ವಾಸಿಸತೊಡಗಿದರು. ನ್ಯೂಸ್ 18 ರ ಪ್ರಕಾರ, ಅವರು 6 ವರ್ಷಗಳ ಕಾಲ ಅಲ್ಲಿಯೇ ಇದ್ದು ಓಕ್, ಫಿಕಸ್, ಮ್ಯಾಗ್ನೋಲಿಯಾ, ತೇಗ ಮತ್ತು ಹಲಸಿನ ಹಾಗೂ ವಿವಿಧ ರೀತಿಯ ಗಿಡಗಳನ್ನು ನೆಟ್ಟರು.
ಆದಾಗ್ಯೂ, ಮೊಯಿರಾಂಗ್ಥೆಮ್ ಸ್ಥಳೀಯ ಮರ ಕಡಿಯುವವರ ಹಾಗೂ ಬೇಟೆಗಾರರಿಂದ ಬಹಳ ಪ್ರತಿರೋಧವನ್ನು ಎದುರಿಸಬೇಕಾಯಿತು. ಸಮಯ ಕಳೆದಂತೆ ಜನರಿಗೆ ಮರಗಳನ್ನು ಕಡಿದರೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತ ತಮ್ಮ ಕಾರ್ಯವನ್ನು ಯಶಸ್ವಿಗೊಳಿಸಿದರು.
ಎನ್‌ಡಿಟಿವಿಯ ಪ್ರಕಾರ, ಮೊಯಿರಾಂಗ್ಥೆಮ್ ಬಹಳಷ್ಟು ಜನರಿಂದ ಪ್ರಶಂಸೆಗೊಳಗಾಗಿದ್ದಾರೆ ಅದರಲ್ಲಿ ಅರಣ್ಯದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಕೆರಿಲ್ಹೌವಿ ಅಂಗಮಿ ಕೂಡ ಒಬ್ಬರು. ಅವರು ಈ ವಿಚಾರದ ಬಗ್ಗೆ
“ಅವರ ಪ್ರಯತ್ನವನ್ನು ನಾವು ಪ್ರಶಂಸಿಸುತ್ತೇವೆ. ಪರಿಸರವನ್ನು ರಕ್ಷಿಸುವ ಮತ್ತು ಅರಣ್ಯ ಪುನಃಸ್ಥಾಪನೆಯಲ್ಲಿ ತೊಡಗಿರುವ ಎಲ್ಲರನ್ನು ನಾವು ಸ್ವಾಗತಿಸುತ್ತೇವೆ. ರಕ್ಷಣೆ, ಪುನರುಜ್ಜೀವನ ಮತ್ತು ಅರಣ್ಯ ರಕ್ಷಣೆಯಲ್ಲಿ ಪಾಲ್ಗೊಳ್ಳಲು ನಾವು ಇತರರನ್ನು ಪ್ರೋತ್ಸಾಹಿಸುತ್ತೇವೆ” ಎಂದರು.
ಈ ವರ್ಷದ ಆರಂಭದಲ್ಲಿ ಮಣಿಪುರದ ವ್ಯಾಲೆಂಟಿನಾ ಎಲಾಂಗ್‌ಬಾಮ್ ಎನ್ನುವ 9 ವರ್ಷದ ಹುಡುಗಿ ಹಸಿರು ರಾಯಭಾರಿಯಾಗಿ, ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ರಿಂದ ನೇಮಕಗೊಂಡ ನಂತರ ಸುದ್ದಿಯಲ್ಲಿದ್ದರು. ತಾವು ನೆಟ್ಟು ಪೋಷಿಸಿದ್ದ ಎರಡು ಗಿಡಗಳನ್ನು ಕತ್ತರಿಸುತ್ತಿರುವುದನ್ನು ಕಂಡು ಅತ್ತ ವಿಡೀಯೋ ಒಂದು ವೈರಲ್ ಆಗಿತ್ತು.