ಕಳೆದ 43 ವರ್ಷಗಳಿಂದ ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಪದ್ಮಶ್ರೀ ಪುರಸ್ಕೃತ ವೈದ್ಯ

ಬೆಂಗಳೂರು ಬಳಿಯ ಬೇಗೂರು ಗ್ರಾಮದಲ್ಲಿ ಬಡವರಿಗಾಗಿ ಉಚಿತ ಚಿಕಿತ್ಸಾಲಯವನ್ನು ಪ್ರಾರಂಭಿಸಿ, ಬಿ ರಮಣ್‌ ರಾವ್‌ರವರು ಕಳೆದ ಕೆಲವು ವರ್ಷಗಳಿಂದ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ನೆರವಾಗುತ್ತಿದ್ದಾರೆ.

ಕಳೆದ 43 ವರ್ಷಗಳಿಂದ ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಪದ್ಮಶ್ರೀ ಪುರಸ್ಕೃತ ವೈದ್ಯ

Saturday September 28, 2019,

2 min Read

ದೇಶದಲ್ಲಿಂದು ಖಾಸಗಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿರುವ ಜತೆ ಖಾಸಗಿ ವೈದ್ಯರ ಸಂಖ್ಯೆಯೂ ಹೇರಳವಾಗಿದೆ. ಇದು ಸಮಾಜದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಲಭ್ಯವಿರುವ ಆರೋಗ್ಯ ಸೌಲಭ್ಯಗಳಮೇಲೆ ಪರಿಣಾಮವನ್ನುಂಟುಮಾಡಿದೆ. ಆದಾಗ್ಯೂ, ಕತ್ತಲೆಯಲ್ಲಿ ಭರವಸೆಯ ಬೆಳಕಿನಂತೆ ಹೊಳೆಯುವ ಕೆಲವು ವೈದ್ಯರು ಇದ್ದಾರೆ. ಅಂತಹವರಲ್ಲಿ ಒಬ್ಬರಾದ ಬಿ ರಮಣ್‌ ರಾವ್‌ರವರು ಕಳೆದ ಕೆಲವು ವರ್ಷಗಳಿಂದ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ನೆರವಾಗುತ್ತಿದ್ದಾರೆ.


ಬಡ ಮಹಿಳೆಗೆ ತಪಾಸಣೆ ನಡೆಸುತ್ತಿರುವ ಬಿ ರಮಣ್‌ ರಾವ್‌ರವರು.



ಸಲಹಾ ವೈದ್ಯರು ಮತ್ತು ಹೃದ್ರೋಗ ತಜ್ಞರಾಗಿರುವ ಡಾ. ರಾವ್‌ರವರು ಹಿಂದಿ ಚಲನ ಚಿತ್ರ ನಟ ಅಮಿತಾಬ್‌ ಬಚ್ಚನ್‌, ದಿವಂಗತ ಕನ್ನಡ ಚಲನಚಿತ್ರ ನಟ ಡಾ. ರಾಜ್‌ ಕುಮಾರ್ ಮತ್ತು ಹಲವಾರು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ತಮ್ಮ ಸೇವೆಯಿಂದಾಗಿ ಕೆಲವೇ ವರ್ಷಗಳಲ್ಲಿ ಖ್ಯಾತಿಯನ್ನು ಪಡೆದುಕೊಂಡರೂ ಎಂದಿಗೂ ಅದನ್ನು ದುರುಪಯೋಗಪಡಿಸಿಕೊಂಡವರಲ್ಲ.


ಕಳೆದ 43 ವರ್ಷಗಳಿಂದ ಅವರು ಬೆಂಗಳೂರು ಬಳಿಯ ಬೇಗೂರು ಗ್ರಾಮದಲ್ಲಿ ಬಡವರಿಗಾಗಿ ಉಚಿತ ಚಿಕಿತ್ಸಾಲಯವನ್ನು ಪ್ರಾರಂಭಿಸಿದ್ದಾರೆ. ಅವರು 1974ರಲ್ಲಿ ಈ ಚಿಕಿತ್ಸಾಲಯವನ್ನು ಆರಂಭಿಸಿದರು, ಅವರ ವೈದ್ಯಕೀಯ ಕ್ಷೇತ್ರದ ಶ್ಲಾಘನೀಯ ಕಾರ್ಯಗಳಿಗಾಗಿ 2010 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2008ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂರವರು ಗ್ರಾಮೀಣ ಪ್ರದೇಶದಲ್ಲಿ ಇವರು ಸಲ್ಲಿಸಿರುವ ಸೇವೆಯನ್ನು ಮನಗಂಡು ಗೌರವಿಸಿದ್ದರು.



40 ವರ್ಷದ ಸುದೀರ್ಘ ಅನುಭವ ಹೊಂದಿರುವ ರಾವ್‌ರವರು ಪ್ರತಿ ಭಾನುವಾರ ಬೇಗೂರು ಗ್ರಾಮದಲ್ಲಿ ಬಡವರಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾರೆ. ಅವರು ಮಣಿಪಾಲ್‌ನ ಕಸ್ತೂರ್‌ ಬಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿಯನ್ನು ಮುಗಿಸಿದ್ದಾರೆ, ಸಮಾಜಕ್ಕಾಗಿ ಏನನ್ನಾದರೂ ಒಳ್ಳೆಯದನ್ನು ಮಾಡುವಂತೆ ಸದಾ ಪ್ರೇರೇಪಿಸುತ್ತಿದ್ದ ಅವರ ಪಾಲಕರಿಗೆ ಇದರ ಶ್ರೇಯ ಸಲ್ಲುತ್ತದೆ.


ರಾವ್‌ರವರು ಹೇಳುವಂತೆ ಹಳ್ಳಿಗಳಲ್ಲಿ ಆರೋಗ್ಯ ಸೌಲಭ್ಯಗಳು ತೀರಾ ಕಳಪೆಯಾಗಿದೆ, ಆರೋಗ್ಯ ಸೌಲಭ್ಯ ಪಡೆದುಕೊಳ್ಳುವುದು ಎಲ್ಲ ವರ್ಗದ ಜನರಿಗೂ ಮೂಲಭೂತ ಹಕ್ಕು ಎನ್ನುವುದು ರಾವ್‌ ರವರ ಅಭಿಪ್ರಾಯವಾಗಿದೆ. ಹೀಗಾಗಿ ಈ ಮೂಲಭೂತ ಆರೋಗ್ಯ ಸೌಲಭ್ಯ ಹಳ್ಳಿಯಲ್ಲಿರುವ ಬಡಜನರಿಗೂ ಸಿಗಬೇಕು ಎನ್ನುವ ದೃಷ್ಟಿಯಿಂದ ಪ್ರತಿ ಭಾನುವಾರ ಉಚಿತ ವೈದ್ಯಕೀಯ ಸೇವೆಯನ್ನು ನೀಡುತ್ತಾರೆ.


ಡಾ.ರಾವ್‌ರವರು ತಮ್ಮ ತಂಡದೊಂದಿಗೆ ಗ್ರಾಮಕ್ಕೆ ಬೇಟಿ ನೀಡುತ್ತಾರೆ, ಅಲ್ಲಿ ಅವರು ಉಚಿತ ಸಮಾಲೋಚನೆಗಳನ್ನು ನೀಡುತ್ತಾರೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಮಾತ್ರೆಗಳನ್ನು, ಔಷಧಿಗಳನ್ನು ಹಾಗೂ ಚುಚ್ಚು ಮದ್ದನ್ನು ಸಹ ನೀಡುತ್ತಾರೆ. ಸರಿಯಾಗಿ ತಪಾಸಣೆ ಮಾಡಿದ ನಂತರವೇ ಅವರು ಚಿಕಿತ್ಸೆ ಮಾಡಲು ಮುಂದುವರೆಯುತ್ತಾರೆ. ನೆರೆಹೊರೆಯ ಹಳ್ಳಿಯ ಜನರೂ ಬೇಗೂರಿನವರೆಗೂ ಬಂದು ಚಿಕಿತ್ಸೆಯನ್ನು ಪಡೆಯುತ್ತಾರೆ, ಎಷ್ಟು ಸಮಯ ಬೇಕಾದರೂ ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆಯನ್ನು ಪಡೆದೇ ಹೋಗುತ್ತಾರೆ.


ಒಂದು ಹೊತ್ತಿನ ಊಟಕ್ಕೂ ಕಷ್ಟ ಎನ್ನುವಷ್ಟು ಬಡತನವಿರುವ ಜನರಿಗೆ, ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದೆಂದರೆ ಕೈಗೆಟುಕದ ಕೆಲಸವಾಗಿಯೇ ಉಳಿದಿದೆ. ಹೀಗಿರುವಾಗ ಬೇಗೂರಿನ ಸುತ್ತಮುತ್ತಲಿರುವ ಬಡವರ ಪಾಲಿಗೆ ಬೆಳಕಾಗಿ ಉಚಿತ ಚಿಕಿತ್ಸೆ ನೀಡುತ್ತಿರುವ ಡಾ. ರಮಣ ರಾವ್ ರವರನ್ನು ಶ್ಲಾಘಿಸಲೇಬೇಕು.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.