ಉಚಿತ ಬಟ್ಟೆಯ ಚೀಲಗಳನ್ನು ವಿತರಿಸುವ ಮೂಲಕ ನೋಯ್ಡಾ ಪ್ರಾಧಿಕಾರ ಪ್ಲಾಸ್ಟಿಕ್ ಗೆ ಗುಡ್ ಬೈ ಹೇಳುತ್ತಿದೆ.

ನೋಯ್ಡಾದ ನಗರ ಪಾಲಿಕೆಯು "ಸೇ ನೋ ಟು ಪ್ಲಾಸ್ಟಿಕ್" ಎಂಬ ಅಭಿಯಾನದೊಂದಿಗೆ ನೋಯ್ಡಾ‌ ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ.‌ ಒಂದು ವೇಳೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸಿರುವುದು ಕಂಡು ಬಂದರೆ 5,000 ರೂ ದಂಡವನ್ನು‌ ವಿಧಿಸುತ್ತಿದೆ.

ಉಚಿತ ಬಟ್ಟೆಯ ಚೀಲಗಳನ್ನು ವಿತರಿಸುವ ಮೂಲಕ ನೋಯ್ಡಾ ಪ್ರಾಧಿಕಾರ ಪ್ಲಾಸ್ಟಿಕ್ ಗೆ ಗುಡ್ ಬೈ ಹೇಳುತ್ತಿದೆ.

Tuesday July 23, 2019,

2 min Read

ನಮಗೆಲ್ಲರಿಗೂ ತಿಳಿದಿರುವಂತೆ,‌ ಪ್ಲಾಸ್ಟಿಕ್ ಬಳಸುವದರಿಂದ‌ ನಮ್ಮ‌ ಸುತ್ತ-ಮುತ್ತಲಿನ ಪರಿಸರವು ಸಾಕಷ್ಟು ಹಾನಿಗೆ ಒಳಪಡುತ್ತಿದೆ. ಹೆಚ್ಚಿನ ಪ್ಲಾಸ್ಟಿಕ್ ಚೀಲಗಳು ಭೂಮಿಯ ಒಳಗೆ ಸೇರಿಕೊಳ್ಳುತ್ತವೆ,‌ ಕೊಳೆಯಲು ನೂರಾರು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಅವು ಕೆರೆ, ‌ನದಿ, ‌ಸಮುದ್ರದಂತಹ‌ ಜಲಮೂಲಗಳಿಗೆ ಸೇರಿಕೊಂಡು‌ ನೀರನ್ನು ಕಲುಷಿತಗೊಳಿಸುತ್ತಿವೆ. ಪ್ರಾಣಿಗಳು ಅರಿವಿಲ್ಲದೆ ಈ ಪ್ಲಾಸ್ಟಿಕ್‌ ಅನ್ನು ತಿನ್ನುವದರಿಂದ ಅವುಗಳು ಸಾವನ್ನುಪ್ಪುತ್ತಿವೆ. ಜೊತೆಗೆ ಸಮುದ್ರದ ನೂರಾರು ಮೀನುಗಳು ಈ ಪ್ಲಾಸ್ಟಿಕ್ ಮಾರಕಕ್ಕೆ ಬಲಿಯಾಗುತ್ತಿವೆ.


ಅನೇಕ ರಾಜ್ಯ ಸರ್ಕಾರಗಳು ದೇಶಾದ್ಯಂತ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ, ಅನೇಕರು ನಿಷೇಧವನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿಲ್ಲ.


ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು,‌ ನೋಯ್ಡಾ ಪ್ರಾಧಿಕಾರವು ತನ್ನ ನಾಗರೀಕರಲ್ಲಿ ಹತ್ತಿ ಚೀಲಗಳನ್ನು ಬಳಕೆ ಮಾಡುವಂತೆ ಉತ್ತೇಜಿಸಿದೆ.


ಕ

(ಚಿತ್ರ: ಎನ್‌ಡಿಟಿವಿ)


ಪ್ಲಾಸ್ಟಿಕ್ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ರಾಶಿಯನ್ನು ಹೆಚ್ಚಿಸುತ್ತಿದೆ. ಇದಕ್ಕಾಗಿ ನೋಯ್ಡಾ ನಗರ ಪಾಲಿಕೆಯ ಜುಲೈ 4ರಂದು‌ "ಸೇ ನೋ ಟು ಪ್ಲಾಸ್ಟಿಕ್" ಎಂಬ ಅಭಿಯಾನವನ್ನು ಆರಂಭಿಸಿತು, ‌ಮತ್ತು‌ ಪ್ಲಾಸ್ಟಿಕ್ ಚೀಲಗಳ ವಿರುದ್ಧ ಬಟ್ಟೆ ಚೀಲಗಳ ಬಳಕೆಯನ್ನು ಬಳಸುವಂತೆ ನಿರಂತರವಾಗಿ ಉತ್ತೇಜಿಸುತ್ತಿದೆ. ಇದರ ಕುರಿತು ಎನ್‌ಡಿಟಿವಿ ಯೊಂದಿಗೆ ಮಾತಾನಾಡಿದ ನೋಯ್ಡಾ ಪ್ರಾಧಿಕಾರದ ಸಿಇಓ ಅಲೋಕ್ ಟಂಡನ್ ಅವರು,


“ಈ ಯೋಜನೆ ಆರಂಭದಲ್ಲಿ ಸೆಕ್ಟರ್ 4ರ 'ಹಾರೋಲಾ ಮಾರುಕಟ್ಟೆಯಲ್ಲಿ' 500 ಕ್ಕೂ ಹೆಚ್ಚು ಬಟ್ಟೆ ಚೀಲಗಳನ್ನು ವಿತರಿಸಲಾಯಿತು ಮತ್ತು ಕೆಲವೇ ದಿನಗಳಲ್ಲಿ ನೋಯ್ಡಾದ ಎಲ್ಲ ವ್ಯಾಪ್ತಿಗೂ ಪಸರಿಸಿತು. 2018 ರಲ್ಲಿ ರಾಜ್ಯದಲ್ಲಿ ಬಂದ ಪ್ಲಾಸ್ಟಿಕ್ ನಿಷೇಧವನ್ನು ನಾವು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬಯಸುತ್ತೇವೆ. ಜೊತೆಗೆ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಚೀಲಗಳ‌ ಬಗೆಗಿನ ವಿಷಕಾರಿ ಬಾಂಧವ್ಯವನ್ನು‌ ಕಡಿದುಕೊಳ್ಳುವಂತೆ ಮತ್ತು ಅದಕ್ಕಿರುವ ಪರ್ಯಾಯ ಪರಿಸರಸ್ನೇಹಿ ಮಾರ್ಗಗಳನ್ನು ಅಳವಡಿಸಿಕೊಳ್ಳುವಂತೆ ಶಿಕ್ಷಣ ನೀಡುತ್ತಿದ್ದೇವೆ."


ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಗ್ರಹಿಸಲು ಪ್ರಾಧಿಕಾರವು ಪ್ಲಾಸ್ಟಿಕ್ ತಪಾಸಣೆಯನ್ನು ನಡೆಸುತ್ತಿದೆ, ಮತ್ತು ಸ್ಥಳೀಯ ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಸೇರಿದಂತೆ, ಎಲ್ಲ ನಾಗರೀಕರಿಗೆ ಹತ್ತಿ ಚೀಲಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.


ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಪ್ರಕಾರ ನಗರದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ತ್ಯಾಜ್ಯದಲ್ಲಿ 10% ತ್ಯಾಜ್ಯ ಪ್ಲಾಸ್ಟಿಕ್ ಆಗಿದೆ. ದಿನಕ್ಕೆ ಸುಮಾರು‌ 40-50 ಟನ್ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.


"ಸೇ ನೋ ಟು ಪ್ಲಾಸ್ಟಿಕ್" ಎಂಬ ಅಭಿಯಾನವನ್ನು ಯಶಸ್ವಿಗೊಳಿಸಲು ನಗರ ಪ್ರಾಧಿಕಾರ ಕೆಲವು ಎನ್‌ಜಿಒಗಳ‌ ಸಹಯೋಗದೊಂದಿಗೆ 'ಪರಿಸರದ ಮೇಲೆ ಪ್ಲಾಸ್ಟಿಕ್ ಬೀರುತ್ತಿರುವ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಮತ್ತು ಸುಸ್ಥಿರ ಪರಿಹಾರಗಳನ್ನು‌ ಕಂಡುಕೊಳ್ಳುವುದರ ಕುರಿತು' ಅರಿವು ಮೂಡಿಸುತ್ತಿದೆ.


ಒಂದು ವರ್ಷದ ಹಿಂದೆ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬಂದರು ಕೂಡ, ಜನರು ಇನ್ನೂ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದಾರೆ. ಆದ್ದರಿಂದ‌ ಈ ಅಭಿಯಾನವನ್ನು ಮತ್ತಷ್ಟು ಬಲಪಡಿಸಲು‌ 40 ಮೈಕ್ರಾನ್ ಕ್ಕಿಂತ ಕಡಿಮೆ ಪ್ಲಾಸ್ಟಿಕ್ ಚೀಲಗಳನ್ನು ಬಳಸಿದರೆ 5,000 ರೂ‌ ದಂಡ ವಿಧಿಸಲು ಪ್ರಾಧಿಕಾರ ಯೋಜಿಸಿತು.


ಕೆಲವು ನಾಗರೀಕರು ಈ ಕ್ರಮವನ್ನು‌ ವಿರೋಧಿಸಿದರೆ, ಅನೇಕರು‌ ಇದನ್ನು ಶ್ಲಾಘಿಸಿದರು.


'ಸಾವಿತ್ರಿ ಮಾರುಕಟ್ಟೆಯ ವ್ಯಾಪಾರಿಗಳ ಸಂಘ'ದ ಅಧ್ಯಕ್ಷ ರಾಹುಲ್ ಗುಪ್ತಾ ಅವರು ಹೀಗೆ ಹೇಳಿದರು, 

"ಇದು ಒಳ್ಳೆಯ ಕ್ರಮವಾಗಿದೆ. ಆದರೆ ಅಂಗಡಿಯವರು ಹಾಗೂ ಸುಸ್ಥಿತಿಯ ಗ್ರಾಹಕರು ಶಾಪಿಂಗ್‌ಗಾಗಿ ಕಾಗದ‌ ಅಥವಾ ಬಟ್ಟೆಯ ಚೀಲಗಳನ್ನು ಬಳಸುವುದು ಸುಲಭ ಎಂದು‌ ಅರ್ಥೈಸಿಕೊಳ್ಳಬೇಕು. ಬೀದಿ ಬದಿಯ ವ್ಯಾಪಾರಸ್ಥರು ಪ್ಲಾಸ್ಟಿಕ್ ಸುಲಭವಾಗಿ ಲಭ್ಯವಾಗುವದರಿಂದ ಹಾಗೂ ಅಗ್ಗವಾಗಿ ದೊರಕುವದರಿಂದ ಪ್ಲಾಸ್ಟಿಕ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಪ್ಲಾಸ್ಟಿಕ್ ಚೀಲಗಳಷ್ಟೇ ಅಗ್ಗವಾಗಿ ದೊರೆಯುವಂತಹ‌‌‌ ಪರಿಸರಸ್ನೇಹಿ ಮಾರ್ಗೋಪಾಯಗಳನ್ನು ಅಧಿಕಾರಗಳು‌ ತರಬೇಕು" ಎಂದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.