ಉಚಿತವಾಗಿ ವೃತ್ತಿಪರ ಬಾಕ್ಸಿಂಗ್‌ ತರಬೇತಿ ನೀಡಿ ಪ್ರತಿಭಾನ್ವಿತರನ್ನು ಸಜ್ಜುಗೊಳಿಸುತ್ತಿರುವ ಕಮಲ್

ಮುಜ್ತಬಾ ಕಮಲ್‌ ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು, ಜೀವನ ನಡೆಸುವುದಕ್ಕಾಗಿ ಸಿಕ್ಕಂತಹ ಕೆಲಸಗಳನ್ನು ಮಾಡಿದರು, ಆದರೆ ಬಾಕ್ಸಿಂಗ್‌ ಮೇಲೆ ಅವರಿಗಿದ್ದ ಪ್ರೀತಿ ಎಂದು ಕಡಿಮೆಯಾಗಲಿಲ್ಲ. ಈಗ ಅವರು ಪ್ರತಿಭಾನ್ವಿತರಿಗೆ ಉಚಿತವಾಗಿ ಬಾಕ್ಸಿಂಗ್‌ ತರಬೇತಿ ನೀಡುತ್ತಿದ್ದಾರೆ.

ಉಚಿತವಾಗಿ ವೃತ್ತಿಪರ ಬಾಕ್ಸಿಂಗ್‌ ತರಬೇತಿ ನೀಡಿ ಪ್ರತಿಭಾನ್ವಿತರನ್ನು ಸಜ್ಜುಗೊಳಿಸುತ್ತಿರುವ ಕಮಲ್

Monday November 30, 2020,

3 min Read

ಖ್ಯಾತ ಬಾಕ್ಸರ್‌ ಮೊಹಮ್ಮದ್‌ ಅಲಿ ಹೀಗೆ ಹೇಳುತ್ತಾರೆ, “ನಿಮ್ಮನ್ನು ಹೊಡೆದು ಕೆಳಗುರುಳಿಸಿದರೆ ನೀವು ಸೋತ ಹಾಗಲ್ಲ; ನೀವು ಮೇಲೆಳದೆ ಕೆಳಗೆ ಇದ್ದರೆ ಸೋತಂತೆ.”


37 ವರ್ಷದ ಮುಜ್ತಬಾ ಕಮಲ್ ಈ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಕೊಲ್ಕತ್ತಾದಲ್ಲಿ ಹುಟ್ಟಿ ಬೆಳೆದ ಕಮಲ್‌ 9 ವರ್ಷದವರಿದ್ದಾಗಿನಿಂದಲೇ ಬಾಕ್ಸಿಂಗ್‌ ಗ್ಲೌಸ್‌ಗಳನ್ನು ತೊಟ್ಟಿದ್ದರು. ಅಂದಿನಿಂದ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ರಾಜ್ಯ ಮತ್ತು ರಾಷ್ಟ್ರಮಟ್ಟದ ಹವ್ಯಾಸಿ ಬಾಕ್ಸಿಂಗ್‌ ಪಂದ್ಯಾವಳಿಗಳನ್ನು ಗೆದ್ದಿದ್ದಾರೆ.

ಪಂದ್ಯದಲ್ಲಿ ಬಾಕ್ಸರ್‌ ಒಬ್ಬರಿಗೆ ಪ್ರೋತ್ಸಾಹಿಸುತ್ತಿರುವ ಕಮಲ್

ಆದರೆ ಅವರ ಪ್ರಯಾಣ ಅಷ್ಟೊಂದು ಸುಲಭವಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡು, ಜೀವನ ನಡೆಸುವುದಕ್ಕಾಗಿ ಸಿಕ್ಕಂತಹ ಕೆಲಸಗಳನ್ನು ಮಾಡುತ್ತಾ, ಬಾಕ್ಸಿಂಗ್‌ ಅಭ್ಯಾಸ ಮಾಡುತ್ತಾ ಅವರ ಜೀವನದಲ್ಲಿ ಬಂದ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು.


ಶ್ರಮದಿಂದ ಅಭ್ಯಸಿಸಿದರೂ, ಹಲವು ಸಮಸ್ಯೆಗಳನ್ನು ಎದುರಿಸಿದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಅವರ ಕನಸು ಈಡೇರಲೇ ಇಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ವೃತ್ತಿಪರ ಬಾಕ್ಸಿಂಗ್‌ಗಾಗಿ ಬೇಕಾಗಿರುವ ಸಂಪನ್ಮೂಲ, ಅವಕಾಶ ಮತ್ತು ತರಬೇತಿಯ ಕೊರತೆ.


ಈ ಸಮಸ್ಯೆಗೆ ಪರಿಹಾರವೆಂಬಂತೆ ದೇಶದಲ್ಲಿ ವೃತ್ತಿಪರ ಬಾಕ್ಸಿಂಗ್‌ಗಾಗಿ ಫೌಂಡೇಶನ್‌ ಒಂದನ್ನು ನಿರ್ಮಿಸುವ ಸವಾಲನ್ನು ಕಮಲ್‌ ಸ್ವೀಕರಿಸಿದರು.


“ನಾನೇಷ್ಟೆ ಪ್ರಯತ್ನ ಪಟ್ಟರು ವೃತ್ತಿಪರ ಬಾಕ್ಸಿಂಗ್‌ನೊಳಗೆ ಹೋಗಲಾಗಲಿಲ್ಲ. ಇತರೆ ಪ್ರತಿಭಾವಂತರಿಗೂ ಅದೇ ಸ್ಥಿತಿ ಬರಬಾರದು. ಹಾಗಾಗಿ ನಾನೀಗ ನನ್ನೆಲ್ಲ ಶಕ್ತಿಯನ್ನು ನಿರ್ಲಕ್ಷ್ಯಕ್ಕೊಳಗಾಗಿರುವ ಕ್ರೀಡೆಯಾದ ಬಾಕ್ಸಿಂಗ್‌ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕೆಲವು ಬಾಕ್ಸರ್‌ಗಳಿಗೆ ಉಚಿತವಾಗಿ ತರಬೇತಿ ನೀಡಲು ಬಳಸಿಕೊಳ್ಳುತ್ತಿದ್ದೇನೆ,” ಎನ್ನುತ್ತಾರೆ ಮುಜ್ತಬಾ ಕಮಲ್.‌


ಪಯಣ

ಕೊಲ್ಕತ್ತಾದ ಖಿದಿರ್ಪುರ್‌ನ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾಗ ಕಮಲ್‌ ಅವರಿಗೆ ಕ್ರೀಡೆಯ ಮೇಲೆ ಆಸಕ್ತಿ ಬೆಳೆಯಿತು. ಅವರಿಗೆ ಫುಟ್‌ಬಾಲ್‌ನಲ್ಲಿ ಆಸಕ್ತಿಯಿದ್ದರೂ ಟಿವಿಯಲ್ಲಿ ಕೆಲವು ರೋಚಕ ಪಂದ್ಯಗಳನ್ನು ನೋಡಿದ ನಂತರ ಬಾಕ್ಸಿಂಗ್‌ನ್ನು ಆಯ್ದುಕೊಂಡರು.


ಆರ್ಥಿಕವಾಗಿ ಅಷ್ಟೊಂದು ಸದೃಢರಾಗಿಲ್ಲದ ಕಮಲ್‌ ಕೋಚಿಂಗ್‌ ಪಡೆಯಲಾಗಲಿಲ್ಲ. ಅವರ ತಂದೆ ತೀರಿಕೊಂಡಾಗ ಕಮಲ್‌ ಮತ್ತು ಅವರ ಇಬ್ಬರು ಸಹೋದರಿಯರು ಮತ್ತು ಸೋದರನನ್ನು ನೋಡಿಕೊಳ್ಳುವ ಜವಾಬ್ದಾರಿ ತಾಯಿಯ ಹೆಗಲಿಗೆ ಬಿದ್ದಿತು.

ಚಿಕ್ಕ ವಯಸ್ಸಿನಲ್ಲಿ ಮುಜ್ತಬಾ


ನಸೀಮ್‌ ಹಮೇದ್‌, ಬರ್ನರ್ಡ್‌ ಹಾಪ್ಕಿನ್ಸ್‌ನಂತಹ ಬಾಕ್ಸರ್‌ಗಳ ವಿಡಿಯೋಗಳು ಮತ್ತು ಪಂದ್ಯಗಳನ್ನು ನೋಡುತ್ತಾ ಕಮಲ್‌ ಬಾಕ್ಸಿಂಗ್‌ ತಂತ್ರಗಳನ್ನು ಕಲಿತರು. ಅವರು ಈ ತಂತ್ರಗಳನ್ನು ಅಭ್ಯಸಿಸಲು ತುಂಬಾ ಸಮಯ ವ್ಯಯಿಸುತ್ತಿದ್ದರು.


ಕಮಲ್‌ 1998ರಲ್ಲಿ ಜರ್ಮನಿ ಕಪ್‌, 1999ರಲ್ಲಿ ವೈಎಮ್‌ಸಿಎ ಅಂತರಾಷ್ಟ್ರೀಯ ಮತ್ತು 2001ರಲ್ಲಿ ದಕ್ಷಿಣ ಏಷ್ಯಾ ಕಪ್‌ನಂತಹ ಇತರ ಹಲವು ಸ್ಪರ್ಧೆಗಳನ್ನು ಮತ್ತು ಬಂಗಾರದ ಪದಕಗಳನ್ನು ಗೆದ್ದಿದ್ದಾರೆ.

ತಮ್ಮ ಸಾಧನೆಗಾಗಿ ಪ್ರಮಾಣ ಪತ್ರ ಸ್ವೀಕರಿಸುತ್ತಿರುವ ಕಮಲ್‌.

ತಮ್ಮ ವೃತ್ತಿಜೀವನ ಮುಂದುವರೆದಂತೆ ಕಮಲ್‌ ವೃತ್ತಿಪರ ಬಾಕ್ಸಿಂಗ್‌ಗೆ ಪ್ರವೇಶ ಮಾಡಲು ನಿರ್ಧರಿಸಿದರು. ಭಾರತದಲ್ಲಿ ಸಂಪನ್ಮೂಲ ಮತ್ತು ಅವಕಾಶಗಳ ಕೊರತೆಯಿಂದ ಕಮಲ್‌ ಭಾರತೀಯ ರೈಲ್ವೈಯಲ್ಲಿನ ನೌಕರಿಗೆ ರಾಜಿನಾಮೆ ನೀಡಿ ಹಾಂಕಾಂಗ್‌ಗೆ ತೆರಳಿದರು.


ಅಲ್ಲಿ ಜೀವನ ನಡೆಸುವುದಕ್ಕಾಗಿ ಹಲವಾರು ಕೆಲಸಗಳನ್ನು ಮಾಡಿದೆ. ತುಂಬಾ ಸಮಯದವರೆಗೂ ವೇಟರ್‌ ಅಥವಾ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿದ್ದೇನೆ. ನಂತರ ಜಿಮ್‌ನಲ್ಲಿ ತರಬೇತುದಾರನಾಗಿ, ಫಿಟ್‌ನೆಸ್‌ನ ಒಂದು ಭಾಗವಾಗಿ ಬಾಕ್ಸಿಂಗ್‌ ಹೇಳಿ ಕೊಡಲು ಕೆಲಸ ಸಿಕ್ಕಿತು. ಅದೆ ಸಮಯದಲ್ಲಿ ವೃತ್ತಿಪರ ಬಾಕ್ಸಿಂಗ್‌ ತಂತ್ರಗಳನ್ನು ಕಲಿತು ನನ್ನ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು,” ಎಂದು ವಿವರಿಸುತ್ತಾರೆ ಕಮಲ್.‌


ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದುಕೊಳ್ಳುವಾಗ ಕಮಲ್‌ ಅವರ ದವಡೆಗೆ ಗಂಭೀರ ಪೆಟ್ಟಾಗಿ ಬಾಕ್ಸಿಂಗ್‌ ಕ್ಷೇತ್ರದಲ್ಲಿ ಮುಂದುವರೆಯದಂತಾಗಿ ಅವರು ಭಾರತಕ್ಕೆ ಮರಳಿದರು.


ತಮ್ಮ ಜೀವನದಲ್ಲಿ ಇಷ್ಟೆಲ್ಲ ನಡೆದಿದ್ದರೂ ಕಮಲ್‌ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಬೆಂಗಳೂರಿನಲ್ಲಿ ಕಲ್ಟ್‌.ಪಿಟ್‌ನಲ್ಲಿ ಬಾಕ್ಸಿಂಗ್‌ ಕೋಚ್‌ ಆಗಿ ಸೇರಿಕೊಂಡು ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸತೊಡಗಿದರು.


ಬಾಕ್ಸಿಂಗ್‌ ಅನ್ನು ಫಿಟ್‌ನೆಸ್‌ನ ಒಂದು ಭಾಗವಾಗಿ ಹೇಳಿ ಕೊಡುವುದರ ಜೊತೆಗೆ ಪ್ರತಿಭಾನ್ವಿತ ಯುವಕರಿಗೆ ಸಂಪೂರ್ಣ ಉಚಿತವಾಗಿ ವೃತ್ತಿಪರ ಬಾಕ್ಸಿಂಗ್‌ ಹೇಳಿ ಕೊಡಲು ಅವರು ಪ್ರಾರಂಭಿಸಿದರು.

“ವೃತ್ತಿಪರ ಬಾಕ್ಸರ್‌ ಆಗುವ ನನ್ನ ಕನಸು ಕೆಳಗೆ ಬೀಳುತ್ತಿದ್ದಂತೆ ಅದು ನನ್ನಿಂದ ಸಾಧ್ಯವಾಗದಿದ್ದರೂ ನಾನು ಬೇರೆಯವರಿಗೆ ಅವರ ಗುರಿ ತಲುಪಲು ಸಹಾಯ ಮಾಡಬಹುದಲ್ಲ ಎಂಬ ಯೋಚನೆ ಬಂದಿತು. ಈಗ ನಾನು ಪ್ರತಿದಿನ 40 ಕ್ಕೂ ಅಧಿಕ ಹವ್ಯಾಸಿಗಳಿಗೆ ವೃತ್ತಿಪರ ಬಾಕ್ಸಿಂಗ್‌ಗೆ ತಯಾರಿ ಮಾಡಲು 2 ಗಂಟೆಗಳ ತರಬೇತಿ ನೀಡುತ್ತೇನೆ. ಶಕ್ತಿ, ಸಹನೆ ಮತ್ತು ತಂತ್ರದ ಮೇಲೆ ನಾನು ಗಮನ ಹರಿಸುತ್ತೇನೆ,” ಎನ್ನುತ್ತಾರೆ ಕಮಲ್.‌


ಬಾಕ್ಸಿಂಗ್‌ ಕಲಿಯಬೇಕೆಂಬ ಹಂಬಲ ಮತ್ತು ಸಾಮರ್ಥ್ಯವಿರುವವರನ್ನು ಗುರುತಿಸಿ ಕಮಲ್‌ ತರಬೇತಿ ನೀಡುತ್ತಾರೆ. ಕಾರ್ತಿಕ್‌ ಸತೀಶ್‌ ಕುಮಾರ್‌ ಮತ್ತು ಫೈಜನ್‌ ಅನ್ವರ್‌ ಅಂತವರಲ್ಲಿ ಇಬ್ಬರು. ಕಾರ್ತಿಕ್ ಈಗಾಗಲೇ ಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರೆ, ಖ್ಯಾತ ಬಾಕ್ಸರ್‌ಗಳಾದ ಅನುಚಾ ನಾಯ್ತಾಂಗ್, ಜುನ್ ಪಡರ್ನಾ, ಮತ್ತು ಗಿಡಿಯಾನ್ ಅಗ್ಬೊಸು ವಿರುದ್ಧ ಫೈಜಾನ್ ವಿಜಯಶಾಲಿಯಾಗಿದ್ದಾರೆ.


ಇದರ ಜತೆಗೆ ಕಮಲ್‌, ಸಾಮಾಜಿಕ ತಾಣಗಳಲ್ಲಿ ವೃತ್ತಿಪರ ಬಾಕ್ಸಿಂಗ್‌ ಬಗ್ಗೆ ಅರಿವು ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ.


ವೃತ್ತಿಪರ ಬಾಕ್ಸಿಂಗ್ ಎನ್ನುವುದು ಭಾರತದಲ್ಲಿ ಇನ್ನೂ ಹೊಸದಾಗಿದೆ. ವಿಜೇಂದರ್ ಸಿಂಗ್ ಹೊರತಾಗಿ ಇಲ್ಲಿ ಹೆಚ್ಚು ಪ್ರಸಿದ್ಧ ಬಾಕ್ಸರ್‌ಗಳಿಲ್ಲ.

"ಭಾರತದಲ್ಲಿ ಈ ಕ್ರೀಡೆಗೆ ವೇದಿಕೆಯನ್ನು ಕಲ್ಪಿಸುವುದು ಹಾಗೂ 2024ರ ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಯುವಜನತೆಗೆ ತರಬೇತಿ ನೀಡುವುದು ನನ್ನ ಗುರಿಯಾಗಿದೆ," ಎನ್ನುತ್ತಾರೆ ಕಮಲ್.