ಸುಮಾರು 20 ಲಕ್ಷ ಯುಟ್ಯೂಬ್ ಚಂದಾದಾರಿಗೆ, ತಮ್ಮ ವಿಡಿಯೋಗಳ ಮೂಲಕ ಉತ್ತಮ ಕೃಷಿ ತಂತ್ರಜ್ಞಾನದ ಅಳವಡಿಕೆಗೆ ಸಹಕರಿಸುತ್ತಿರುವ ಪಂಜಾಬ್ ಮೂಲದ ಕೃಷಿಕ

ಸುಮಾರು 20 ಲಕ್ಷ ಯುಟ್ಯೂಬ್ ಚಂದಾದಾರಿಗೆ, ತಮ್ಮ ವಿಡಿಯೋಗಳ ಮೂಲಕ ಉತ್ತಮ ಕೃಷಿ ತಂತ್ರಜ್ಞಾನದ ಅಳವಡಿಕೆಗೆ ಸಹಕರಿಸುತ್ತಿರುವ ಪಂಜಾಬ್ ಮೂಲದ ಕೃಷಿಕ

Wednesday October 16, 2019,

2 min Read

ಕಳೆದ ಕೆಲವು ವರ್ಷಗಳಿಂದ ಯೂಟ್ಯೂಬ್ ನಲ್ಲಿ ಆನ್‌ಲೈನ್ ವೀಡಿಯೊಗಳನ್ನು ಅಪ್ಲೋಡ್ ಮಾಡುವ ಹಾಗೂ ವೀಕ್ಷಿಸುವವವರ ಸಂಖ್ಯೆ ಹೆಚ್ಚಾಗಿದೆ. ಯೂಟ್ಯೂಬ್ ನಲ್ಲಿ ವಿವಿಧ ವಿಭಾಗಗಳಿಗೆ ಸಂಭಂದಿಸಿದ ವಿಡಿಯೋಗಳು ಲಭ್ಯವಿದೆ. ಇಲ್ಲಿನ ವಿಡಿಯೋಗಳು ಮನರಂಜನೆಯೊಂದಿಗೆ ಜನರಿಗೆ ಜ್ಞಾನಾರ್ಜನೆಗೂ ಸಹಕಾರಿಯಾಗುತ್ತಿದ್ದು, ಇದರಿಂದ ಪ್ರಯೋಜನ ಪಡೆದುಕೊಳ್ಳುವವರಿಗೂ ಹಾಗೂ ಅಗತ್ಯ ಮಾಹಿತಿಯನ್ನು ಅಪ್ಲೋಡ್ ಮಾಡುವವರಿಗೂ ಉತ್ತಮ ವೇದಿಕೆಯನ್ನು ಕಲ್ಪಿಸಿದೆ.


ಪಂಜಾಬ್ ನಿವಾಸಿಯಾದ ದರ್ಶನ್ ಸಿಂಗ್ ಪ್ರಸ್ತುತ ಜನೋಪಯೋಗಿ ಆಗಿರುವ ಯೂಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದು ತನ್ಮೂಲಕ ವಿವಿಧ ಕೃಷಿ ಚಟುವಟಿಕೆಗಳ ಕುರಿತು ವಿವರಣೆಗಳನ್ನು ಉಪಯುಕ್ತ ಮಾಹಿತಿಯನ್ನು ಚಿತ್ರೀಕರಿಸಿ ವಿಡಿಯೋಗಳನ್ನು ಸಿದ್ಧಪಡಿಸಿ ತಮ್ಮ ಯೂಟ್ಯೂಬ್ ಚಾನೆಲ್ "ಫಾರ್ಮಿಂಗ್ ಲೀಡರ್ಸ್" ನ ಮೂಲಕ ರೈತರಲ್ಲಿ ಅರಿವನ್ನು ಮೂಡಿಸುತ್ತಿದ್ದಾರೆ.


ತಮ್ಮ ಚಾನಲ್ ನ ಚಂದಾದಾರರ ಸಂಖ್ಯೆ ಲಕ್ಷ ಮುಟ್ಟಿದ ಸಂದರ್ಭದಲ್ಲಿ ಚಿನ್ನದ ಪದಕದೊಂದಿಗೆ ದರ್ಶನ್ ಸಿಂಗ್ (ಚಿತ್ರ ಕೃಪೆ: ದಿ ಲಾಜಿಕಲ್ ಇಂಡಿಯನ್)



ಸಿಂಗ್ ಅವರ ಚಾನೆಲ್ ಫಾರ್ಮಿಂಗ್ ಲೀಡರ್ಸ್ ಒಟ್ಟು 170,599,145 ವೀಕ್ಷಣೆಗಳೊಂದಿಗೆ 2.3 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಸಿಂಗ್ ತಮ್ಮ ಚಾನೆಲ್ ಸಹಾಯದಿಂದ ಮೇಕೆ ಸಾಕಣೆ, ಭತ್ತದ ಕೃಷಿ ಮತ್ತು ಇತರರ ಬಗ್ಗೆ ರೈತರಿಗೆ ಶಿಕ್ಷಣ ನೀಡುತ್ತಿದ್ದಾರೆ. ಟ್ರಾಕ್ಟರುಗಳಂತಹ ಕೃಷಿ ಯಂತ್ರೋಪಕರಣಗಳಿಗೆ ಉತ್ಪನ್ನ ವಿಮರ್ಶೆಗಳನ್ನು ಸಹ ಅವರು ಒದಗಿಸುತ್ತಾರೆ.


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಸಿಂಗ್ ಅವರು ಹೀಗೆ ಹೇಳುತ್ತಾರೆ,


"ನಾನು 2017 ರಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸಿದಾಗ, ನನಗೆ ಸಾಕಷ್ಟು ಜ್ಞಾನವಿಲ್ಲದ ಕಾರಣ ಅನೇಕ ಅಡೆತಡೆಗಳು ಎದುರಾಗಿದ್ದವು. ಅವುಗಳ ಪರಿಹಾರಕ್ಕೆ ನಾನು ಅಂತರ್ಜಾಲದ ಮೊರೆಹೋದಾಗ ನನಗೆ ಯಾವುದೇ ಸೂಕ್ತವಾದ ಉತ್ತರ ಸಿಕ್ಕಿರಲಿಲ್ಲ.”


ಈ ಕ್ಷೇತ್ರದಲ್ಲಿ ಅವಕಾಶವಿರುವುದನ್ನು ಮನಗಂಡ ಸಿಂಗ್‌ ರವರು ಒಂದು ಕ್ಯಾಮರಾ ಖರೀದಿಸಿ ಅದರಿಂದ ತನ್ನಂತೆ ಇರುವ ಇತರ ಕೃಷಿಕರಿಗೆ ಮಾರ್ಗದರ್ಶನ ನೀಡಲು ನಿರ್ಧರಿಸಿದರು.


"ಆರಂಭದಲ್ಲಿ, ನಾನು ಮೊಬೈಲ್ ಫೋನ್‌ನಲ್ಲಿ ವೀಡಿಯೊಗಳನ್ನು ಶೂಟ್ ಮಾಡುತ್ತಿದ್ದೆ ಮತ್ತು ವಿರಳವಾಗಿ ಕೆಲವು ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದೆ. ನಾನು ಮುಖ್ಯವಾಗಿ ಡೈರಿ ಮತ್ತು ಕೃಷಿಯ ಪದ್ಧತಿಯ ಬಗ್ಗೆ ವೀಡಿಯೊಗಳನ್ನು ತಯಾರಿಸುತ್ತಿದ್ದೆ. ಆರು ತಿಂಗಳಲ್ಲಿ, ನನ್ನ ವೀಡಿಯೊಗಳಲ್ಲಿ ನಾನು ಪಡೆದ ವೀಕ್ಷಣೆಗಳು ಮತ್ತು ಲೈಕಗಳ ಸಂಖ್ಯೆಯು ನನ್ನ ವೀಡಿಯೊಗಳು ನಮ್ಮ ರೈತ ಸಹೋದರರಿಗೆ ಸಹಾಯ ಮಾಡುತ್ತಿದೆ ಎಂದು ನನಗೆ ಅರಿವುಮಾಡಿಸಿತು” ಎಂದು ದರ್ಶನ್ ಸಿಂಗ್ ಲಾಜಿಕಲ್ ಇಂಡಿಯನ್ ದ ಜೊತೆ ತಮ್ಮ ಪ್ರಾರಂಭಿಕ ದಿನಗಳ ಬಗ್ಗೆ ಮಾತನಾಡಿದರು.


ಕೆಲವು ದಿನಗಳಲ್ಲಿ ತಮ್ಮ ವಿಡಿಯೋಗೆ ಹೆಚ್ಚುತ್ತಿರುವ ಉತ್ತಮ ಪ್ರತಿಕ್ರಿಯೆಗಳನ್ನು ಗಮನಿಸಿದ ಸಿಂಗ್ ಕ್ಯಾಮರದೊಂದಿಗೆ ಇನ್ನು ಕೆಲವು ಸಲಕರಣೆಗಳಾದ, ಮೈಕ್, ಲ್ಯಾಪ್ಟಾಪ್, ಉತ್ತಮಗುಣಮಟ್ಟದ ಕ್ಯಾಮೆರ ಗಳನ್ನು ಖರೀದಿಸಿದರು.


ವಿಡಿಯೋ ಚಿತ್ರೀಕರಣದ ಮೊದಲು ತಮ್ಮ ಕ್ಯಾಮರಾ ಹಾಗೂ ಇತರ ಸಲಕರಣೆಗಳನ್ನು ಜೋಡಿಸುತ್ತಿರುವ ದರ್ಶನ್ ಸಿಂಗ್ (ಚಿತ್ರ ಕೃಪೆ: ದಿ ಲಾಜಿಕಲ್ ಇಂಡಿಯನ್)



ರೈತ ಕುಟುಂಬಕ್ಕೆ ಸೇರಿದ ಸಿಂಗ್ "ರಾಜಕೀಯಶಾಸ್ತ್ರ"ವನ್ನು ಅಧ್ಯಯನ ವಿಷಯವಾಗಿ ಆಯ್ದುಕೊಂಡರು. ತಮ್ಮ ಪದವಿ ಶಿಕ್ಷಣದ ನಂತರ, ಕೃಷಿಯನ್ನು ವೃತ್ತಿಯಾಗಿ ಆರಿಸಿಕೊಂಡರು. ಇರುವ 12 ಎಕರೆ ಕೃಷಿಭೂಮಿಯಲ್ಲಿ ಬೇಸಾಯವನ್ನು ಪ್ರಾರಂಭಿಸಿದ, ದರ್ಶನ್ ಸಾಂಪ್ರದಾಯಿಕ ವಿಧಾನಗಳಿಂದ ಸಾವಯವ ಕೃಷಿಗೆ ಸ್ಥಳಾಂತರಗೊಂಡರು, ಇದೀಗ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ದರ್ಶನ್ ಸಿಂಗ್, ರಾಸಾಯನಿಕ ಗೊಬ್ಬರಗಳಿಗೆ ವಿದಾಯ ಹೇಳಿದ್ದಾರೆ.


ಬಿಬಿಸಿ ಯೊಂದಿಗೆ ಮಾತನಾಡಿದ ಸಿಂಗ್,


"ನಾನು ಪಂಜಾಬ್ ಅಥವಾ ಹರಿಯಾಣದ ಯಾವುದೇ ಸ್ಥಳಕ್ಕೆ ಹೋದಾಗ, ಅಲ್ಲಿನ ರೈತರು ನನ್ನನ್ನು ಗುರುತಿಸುತ್ತಾರೆ; ನಾನು ಅವರಿಗಾಗಿ ವಿಡಿಯೋಗಳನ್ನು ತಯಾರಿಸುತ್ತಿದ್ದೇನೆ ಮತ್ತು ಅವರಿಗೆ ಸಹಾಯವನ್ನು ಮಾಡುತ್ತಿದ್ದೇನೆ ಎಂದು ಅವರಿಗೆ ತಿಳಿದಿದೆ” ಎಂದರು.

ಪ್ರಸ್ತುತ, ಸಿಂಗ್ ಅವರ ವೀಡಿಯೊಗಳಿಗಾಗಿ ಕೃಷಿ ಮೂಲದ ಕಂಪನಿಗಳು ಅವರತ್ತ ದೃಷ್ಟಿನೆಟ್ಟಿವೆ. ಗಳಿಕೆಯ ವಿಷಯದಲ್ಲಿ, ಅವರ ವೀಡಿಯೊಗಳು ಪ್ರತಿ ತಿಂಗಳು ಸುಮಾರು 4000 ಡಾಲರ್ ಗಳಿಸುತ್ತಿವೆ.


ದರ್ಶನ್ ಅವರ ವಿವರಣೆಗಳನ್ನು ಆಧರಿಸಿದ ವಿಡಿಯೋ ವೀಕ್ಷಿಸಿದ, ಓರ್ವ ರೈತರು ಬಿಬಿಸಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ,


"ನಮ್ಮ ಜಾನುವಾರುಗಳು ಈಗ ಆರೋಗ್ಯಕರವಾಗಿದೆ.‌ ಇವರ ವಿಡಿಯೋಗಳ ಮೂಲಕ ನಾವು ಕಡಿಮೆ ಖರ್ಚಿನಲ್ಲಿ ಪರಿಣಾಮಕಾರಿಯಾದ ಫಲಿತಾಂಶ ಪಡೆಯಲು ಸಾಧ್ಯವಾಗಿದೆ" ಎಂದರು.

ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.