Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಸುನಾಮಿ ಪೀಡಿತ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಮಹಿಳಾ ಫಿಲ್ಮ್ ಮೇಕರ್

ಆರ್. ರೇವತಿ 2005ರಲ್ಲಿ 20 ವಿದ್ಯಾರ್ಥಿಗಳೊಂದಿಗೆ ವಾನವಿಲ ಶಾಲೆಯನ್ನು ಸ್ಥಾಪಿಸಿದರು. ಈ ಮಾಜಿ ಫಿಲ್ಮ್ ಮೇಕರ್ನ ಸುನಾಮಿ ಪೀಡಿತ ಪ್ರದೇಶವಾದ ನಾಗಪಟ್ಟಣಂನಲ್ಲಿರುವ ಈ ಶಾಲೆಯಲ್ಲಿ ಪ್ರತಿವರ್ಷ‌ 180ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

ಸುನಾಮಿ ಪೀಡಿತ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಮಹಿಳಾ ಫಿಲ್ಮ್ ಮೇಕರ್

Monday March 09, 2020 , 4 min Read

2004ರಲ್ಲಿ ಭಾರತದ ಚರಿತ್ರೆಯಲ್ಲಿ ಸುನಾಮಿ ಎಂಬ ಅತ್ಯಂತ ಭೀಕರವಾದ ನೈಸರ್ಗಿಕ ವಿಕೋಪ‌ ಸಂಭವಿಸಿತು. ಹಿಂದೂ ಮಹಾಸಾಗರದಿಂದ ಹುಟ್ಟಿದ ಉಬ್ಬರವಿಳಿತದ ಅಲೆಗಳು ತಮಿಳುನಾಡಿನ ಹಲವಾರು ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಿ 8,000ಕ್ಕೂ ಹೆಚ್ಚು ಜನರ ಪ್ರಾಣವನ್ನು ಕಸಿದುಕೊಂಡವು. ಈ‌ ಘಟನೆ ನಡೆದು 15 ವರುಷವಾದರೂ ಇಂದಿಗೂ ಅದು ಅಲ್ಲಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.


ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈನಿಂದ 320 ಕಿ.ಮೀ ದೂರದಲ್ಲಿರುವ ನಾಗಪಟ್ಟಣಂನ ಪರಿಹಾರ ಶಿಬಿರದಲ್ಲಿ ಕೆಲಸ‌ ಮಾಡಲು‌ ಸ್ವಯಂಸೇವಕರಾಗಿ ಸೇರಿದಾಗ ಆರ್. ರೇವತಿಯವರಿಗೆ 27 ವರ್ಷ. ಇದು 2004ರ ಸುನಾಮಿಯಿಂದ ಹೆಚ್ಚು ಹಾನಿಗೊಳಗಾದ ಕರಾವಳಿ ಪ್ರದೇಶಗಳಲ್ಲಿ ಒಂದು.


ಆ ಸಮಯದಲ್ಲಿ ರೇವತಿಯವರು ತಮಿಳು‌ ಚಲನಚಿತ್ರ ನಿರ್ದೇಶಕ ಗೌತಮ್ ಮೆನನ್ ಅವರ ಬಳಿ ಸಹಾಯಕ‌ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ವಿಪತ್ತಿನಲ್ಲಿ ಸಿಲುಕಿರುವವರಿಗೆ ಸಹಾಯವನ್ನು ಮಾಡಲು ಬ್ರೇಕ್ ತೆಗೆದುಕೊಂಡರು. ಆದರೆ ಈ ಅನುಭವವು ತಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತದೆ ಎಂದು ಅವರಿಗೆ ಅರಿವಿರಲಿಲ್ಲ.


43 ವರ್ಷದ ಆರ್. ರೇವತಿ


ರೇವತಿಯವರು ನಾಗಪಟ್ಟಣಂನಲ್ಲಿ ಕೆಲಸ ಮುಗಿಸಿ ಹೊರಡುವ ಸಮಯದಲ್ಲಿ ಈ ಪ್ರದೇಶದಲ್ಲಿರುವ ಎರಡು ಅಲೆಮಾರಿ ಬುಡಕಟ್ಟು ಗುಂಪುಗಳ ಬಗ್ಗೆ ಅವರು ಕಂಡುಕೊಂಡರು. ಅಲಂಕರಿಸಿದ ಎತ್ತುಗಳೊಂದಿಗೆ ಜನರನ್ನು ಮನರಂಜಿಸುವ ಮೂಲಕ ಜೀವನ ಸಾಗಿಸುವ ಬೂಮ್ ಬೂಮ್ ಮತ್ತುಕಾರನ್ನರು/ಆದಿಯನ್ನರು ಹಾಗೂ ಮೂಲತಃ ಬೇಟೆಗಾರರಾಗಿದ್ದು ಜೀವನೋಪಾಯಕ್ಕಾಗಿ ಮಣಿಗಳ ಆಭರಣಗಳನ್ನು ಮಾರಾಟ ಮಾಡುವವರಾಗಿ ಪರಿವರ್ತನೆಗೊಂಡ ನರಿಕುವಾರ್‌ರರು.


"ಈ ಸ್ಥಳೀಯ ಬುಡಕಟ್ಟು ಜನಾಂಗದವರು ನಾನು ಭೇಟಿಯಾದುದರಲ್ಲಿಯೇ ಅತ್ಯಂತ ಹಿಂದುಳಿದ ಜನರಾಗಿದ್ದರು. ಅವರು ಯಾವುದೇ ಗುರುತು ಹಾಗೂ ಸಾಮಾಜಿಕ ಭದ್ರತೆ ಇಲ್ಲದೆ ತೀವ್ರ ಅಪೌಷ್ಟಿಕತೆ ಹಾಗೂ ಬಡತನದಲ್ಲಿ ವಾಸಿಸುತ್ತಿದ್ದರು. ವಯಸ್ಕರನ್ನು ಮುಖ್ಯವಾಹಿನಿಯ ಸಮಾಜದಿಂದ ಬಹಿಷ್ಕರಿಸಿದರೆ, ಮಕ್ಕಳು ಶಾಲೆ ಅಥವಾ ಶಿಕ್ಷಣದ ಮಹತ್ವ ಅರಿಯದೆ ಸಂಪೂರ್ಣ ಅಜ್ಞಾನದಲ್ಲಿ ವಾಸಿಸುತ್ತಿದ್ದರು. ಅವರ ಸಮುದಾಯವನ್ನು ಉನ್ನತೀಕರಿಸಲು ಏನಾದರೂ ಮಾಡಬೇಕೆಂದು ಬಯಸಿದೆ ಅದಕ್ಕಾಗಿ ನಾನು ಶಾಲೆಯನ್ನು ಸ್ಥಾಪಿಸಲು ನಿರ್ಧರಿಸಿದೆ," ಎಂದು ರೇವತಿ (43) ಹೇಳಿದರು.


ನಾಗಪಟ್ಟಣಂನ ವಾನವಿಲ ಶಾಲೆ




ರೇವತಿಯವರು 2005ರಲ್ಲಿ‌ 20 ವಿದ್ಯಾರ್ಥಿಗಳೊಂದಿಗೆ ವಾನವಿಲ ಶಾಲೆಯನ್ನು ಸ್ಥಾಪಿಸಿದರು.


ಈಗ, ರೇವತಿ ಪ್ರತಿವರ್ಷ 180ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ ಮತ್ತು ಆದಿಯನ್ನರು ಮತ್ತು ನಾರಿಕುರವರ ಗುಂಪುಗಳಲ್ಲಿ ಪರಿವರ್ತನೆಯ ಅಲೆಯನ್ನು ಸೃಷ್ಟಿಸುತ್ತಿದ್ದಾರೆ.


ರೇವತಿಯವರ ಬದುಕಿನ ತಿರುವು

ರೇವತಿಯವರು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅರಕ್ಕೋಣಂನಲ್ಲಿ ಜನಿಸಿದರು. ಚೆನ್ನೈನ ಸೈದಾಪೇಟೆಯ ಸರ್ಕಾರಿ ಶಾಲೆಯಲ್ಲಿ ಕಲಿತ ಅವರು ನಂತರ ಭಾರತಿ ಮಹಿಳಾ ಕಾಲೇಜಿನಿಂದ ಗಣಿತಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು.


ಆದರೆ ಅವರು ಪತ್ರಿಕೋದ್ಯಮದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರಿಂದ ಆ ಕ್ಷೇತ್ರಕ್ಕೆ ತೆರಳಿದರು. ಆದ್ದರಿಂದ ರೇವತಿಯವರು ನಿರ್ದೇಶನಕ್ಕಿಂತ ಮೊದಲು ಸನ್ ನ್ಯೂಸ್, ಜೀ ನ್ಯೂಸ್, ಈ ನಾಡು ಟಿವಿಯಂತಹ ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.


ತಮ್ಮ ಕೆಲವು ವಿದ್ಯಾರ್ಥಿಗಳೊಂದಿಗೆ ರೇವತಿ


2004ರಲ್ಲಿ ನಾಗಪಟ್ಟಣಂನಲ್ಲಿ ಸುನಾಮಿಯಲ್ಲಿ ಬದುಕುಳಿದವರಿಗಾಗಿ ಸಹಾಯ ಮಾಡಲು ರೇವತಿ ಸ್ವಯಂಸೇವಕರಾಗಿ ಬಂದಾಗ, ಲಕ್ಷ್ಮೀ ಎಂಬ ಪುಟ್ಟ ಹುಡುಗಿ ಬಸ್ ನಿಲ್ದಾಣದ ಬಳಿ ರೇವತಿಗೆ ಸಿಕ್ಕಳು. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮತ್ತು ಅಸ್ಥಿಪಂಜರದ ಹಾಗೇ ಇದ್ದ ಆ ಹುಡುಗಿಯ ನೋಟ ರೇವತಿಯವರನ್ನು ತುಂಬಾ ಕಾಡಿತು.


"ಕೆಲವು ಕಾರಣಗಳಿಂದ ಲಕ್ಷ್ಮೀಯ ನೋಟ ನನ್ನೊಳಗೆ ಕಾಡುತಿತ್ತು. ಕೆಲವು ದಿನಗಳ ನಂತರ, ಅವಳ ಸಾವಿನ ವಿನಾಶಕಾರಿ ಸುದ್ದಿಯನ್ನು ಕೇಳಿದೆ. ತನಿಖೆಯಲ್ಲಿ ಅವಳು ಆದಿಯಾನ್ ಬುಡಕಟ್ಟಿನ ಸಮುದಾಯವಳೆಂದು ತಿಳಿದು ಬಂದಿತು. ಅದು ಭಿಕ್ಷೆ‌ ಬೇಡುವ ಹಾಗೂ ಭೀಕರವಾದ ಕೆಲಸಗಳನ್ನು ಮಾಡಿ ಜೀವ‌ನ ಸಾಗಿಸುವ ಬಡಕುಲವಾಗಿತ್ತು. ಸರ್ಕಾರದಿಂದ ಲಭ್ಯವಾಗುವಂತಹ ಸವಲತ್ತುಗಳನ್ನು ಪಡೆಯಲು ಅವರಿಗೆ ಯಾವುದೇ ಗುರುತು ಇರಲಿಲ್ಲ ಹಾಗೂ ಅರ್ಹರಾಗಿರಲಿಲ್ಲ. ಅರಿವಿನ ಕೊರತೆಯಿಂದಾಗಿ ಅವರ ಯಾವುದೇ ಮಕ್ಕಳನ್ನು ಶಾಲೆಗೆ ಕಳುಹಿಸಲಾಗಿರಲಿಲ್ಲ. ಅವರಿಗೆ ಸಹಾಯ ಮಾಡದೇ ಹಿಂತಿರುಗಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಆ ಕ್ಷಣದಲ್ಲಿಯೇ ಶಾಲೆಯನ್ನು ತೆರೆಯಬೇಕೆಂಬ ಯೋಚನೆ ನನ್ನಲ್ಲಿ ಒಡಮೂಡಿತು ಮತ್ತು ಎರಡನೇ ಆಲೋಚನೆಗೆ ಅವಕಾಶ ನೀಡದೆ ನಾನು ನನ್ನ ಕಾರ್ಯದಲ್ಲಿ‌ ಸಕ್ರೀಯವಾದೆ," ಎಂದು ರೇವತಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.


ಶಾಲೆಗೆ ಹೋಗದವರಿಗಾಗಿ ಶುರುವಾದ ಶಾಲೆ

2005ರಲ್ಲಿ ರೇವತಿ ನಾಗಪಟ್ಟಣಂ ಜಿಲ್ಲೆಯ ಕೀಖಕರೈರುಪ್ಪು ಹಳ್ಳಿಯ ಹೃದಯ ಭಾಗದಲ್ಲಿ 20 ವಿದ್ಯಾರ್ಥಿಗಳೊಂದಿಗೆ ಸಣ್ಣ ಆಶ್ರಯ ಕೋಣೆಯಲ್ಲಿ ತಮ್ಮ ವೈಯಕ್ತಿಕ 25 ಸಾವಿರ ರೂ ಹಣದಿಂದ ಶಾಲೆಯನ್ನು ಸ್ಥಾಪಿಸಿದರು.


ವಾನವಿಲ ಶಾಲೆಯಲ್ಲಿ ತರಗತಿ ನಡೆಯುತ್ತಿರುವುದು


ಸರ್ಕಾರದ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಭಾಗವಾಗಿ ಈ ಶಾಲೆಯನ್ನು ವಾನವಿಲ (ತಮಿಳು‌ ಭಾಷೆಯಲ್ಲಿ‌ ‘ಮಳೆಬಿಲ್ಲು' ಎಂದರ್ಥ) ಎಂಬ ಹೆಸರಿನೊಂದಿಗೆ ವಸತಿ ತರಬೇತಿ ಕೇಂದ್ರವಾಗಿ ನೋಂದಾಯಿಸಲಾಯಿತು.


"ಶಾಲೆಯನ್ನು ಸ್ಥಾಪಿಸಿದ ಆರಂಭಿಕ ಎರಡು ವರ್ಷಗಳು ಸುಲಭವಾಗಿರಲಿಲ್ಲ. ದಿನನಿತ್ಯದ ಕಾರ್ಯಾಚರಣೆಗಳನ್ನು ನಡೆಸಲು ನನ್ನ ಬಳಿ ಹಣವಿರಲಿಲ್ಲ. ಇದಲ್ಲದೆ ಶಾಲೆಗೆ ಬರುವ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಅವರಿಗೆ ಕಲಿಸುವ ಮೊದಲು ನಾನು ಅವರಿಗೆ ಪೌಷ್ಟಿಕಾಂಶ ಭರಿತವಾದ ಆರೋಗ್ಯಕರ ಆಹಾರವನ್ನು ಒದಗಿಸಬೇಕಾಗಿತ್ತು. ಆದ್ದರಿಂದ ನಾನು ಶಿಕ್ಷಕಿ ಹಾಗೂ ಅಡುಗೆ ಮಾಡುವ ಎರಡು ಉಭಯ ಪಾತ್ರಗಳನ್ನು ನಿರ್ವಹಿಸುತ್ತಿದ್ದೆ," ಎಂದು ರೇವತಿ ಹೇಳುತ್ತಾರೆ.


ರೇವತಿ ಎದುರಿಸಿದ್ದ ಮತ್ತೊಂದು ಸವಾಲು ಎಂದರೆ ಯಾರೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಾಗಿತ್ತು. ಎರಡು ಬುಡಕಟ್ಟಿನ ಸಮುದಾಯಗಳು ಭಿಕ್ಷಾಟನೆ ಮಾಡುವ ಮೂಲಕ ತಮ್ಮ ದೈನಂದಿನ ಊಟವನ್ನು ಸಂಪಾದಿಸುತ್ತಿದ್ದರು. ಆದ್ದರಿಂದ ಶಾಲೆಗೆ ದಾಖಲಾದ ಮಕ್ಕಳು ಸಹ ಹಣಕ್ಕಾಗಿ ತರಗತಿಗಳ ನಡುವೆಯೇ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಅನೇಕ ಬಾರಿ ರೇವತಿ ಅವರನ್ನು ಹಿಂಬಾಲಿಸಿ ಅವರನ್ನು ಮರಳಿ ಕರೆ ತರಬೇಕಾಗುತ್ತಿತ್ತು.


ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು




ತಾತ್ಕಾಲಿಕ ಶಾಲೆಯನ್ನು ಸ್ಥಾಪಿಸುವುದು, ಬುಡಕಟ್ಟು ಮಕ್ಕಳಿಗೆ ಕೆಲವು ತಿಂಗಳುಗಳ ಕಾಲ‌ ಕಲಿಸಿ, ತದನಂತರ ಮುಖ್ಯವಾಹಿನಿ ಶಿಕ್ಷಣಕ್ಕೆ ಪರಿವರ್ತನೆಗೊಳ್ಳಲು ಸಹಾಯ ಮಾಡುವುದು ರೇವತಿಯವರ ಆಲೋಚನೆಯಾಗಿತ್ತು. ಆದರೆ ಇದು ನಂತರದಲ್ಲಿ ಪೂರ್ಣ ಪ್ರಮಾಣದ ಶೈಕ್ಷಣಿಕ ವಸತಿ ಸಂಸ್ಥೆಯಾಗಿ ರೂಪಾಂತರಗೊಂಡಿತು.


"ಸಮಯ ಕಳೆದಂತೆ, ತಾತ್ಕಾಲಿಕ ಶಾಲೆ ಸಾಕಾಗುವುದಿಲ್ಲ ಎಂದು ನಾನು ಅರಿತುಕೊಂಡೆ. ಆದಿಯನ್ನರು ಹಾಗೂ ನಾರಿಕುವಾರರು ಎದುರಿಸಿದ ಸಾಮಾಜಿಕ ಮತ್ತು ಸಾಕ್ಷರತೆಯ ಸಮಸ್ಯೆಗಳನ್ನು ಪರಿಗಣಿಸಿ ದೀರ್ಘಕಾಲ ಪರಿಹಾರದ ಅಗತ್ಯವಿದೆ," ಎಂದು ರೇವತಿ ಹೇಳುತ್ತಾರೆ‌.


ಬುಡಕಟ್ಟು ಮಕ್ಕಳಿಗೆ ಶಾಲೆಯಲ್ಲಿ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿರುವುದು


ವಾನವಿಲ ಶಾಲೆಯ ಪಠ್ಯಕ್ರಮವನ್ನು ಪ್ರಾಯೋಗಿಕ ಕಲಿಕೆಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಮಕ್ಕಳು‌ ಮನರಂಜನೆಯ ಮೂಲಕ ಪಾಠವನ್ನು ಕಲಿಯುತ್ತಾರೆ. ರೇವತಿಯವರು ತನ್ನ ಕಾಲೇಜು ಯೋಜನೆಯೊಂದರ ಭಾಗವಾಗಿ ಬೀದಿ ಮಕ್ಕಳಿಗೆ ಶಿಕ್ಷಣ‌ ನೀಡುವ ಅನುಭವವನ್ನು ಹೊಂದಿದ್ದರು. ಆದ್ದರಿಂದ ಪಠ್ಯಕ್ರಮವನ್ನು ರಚಿಸುವುದು ಕಷ್ಟಕರವಾಗಲಿಲ್ಲ.


"ವಾನವಿಲಕ್ಕೆ ಕಾಲಿಟ್ಟಿದ್ದ ಮಕ್ಕಳ ಸರಾಸರಿ ವಯಸ್ಸು 5 ರಿಂದ‌ 11 ವರ್ಷ.‌ ಇವರೆಲ್ಲರು ಅನಕ್ಷರಸ್ಥರಾಗಿದ್ದು ಶಿಕ್ಷಣದ ಪರಿಕಲ್ಪನೆಯ ಕುರಿತಾಗಿ ಸಂಪೂರ್ಣವಾಗಿ ತಿಳಿದಿರಲಿಲ್ಲ. ಆದ್ದರಿಂದ ಆಕರ್ಷಕವಾಗಿ ಮತ್ತು ಆಸಕ್ತಿದಾಯಕವಾಗಿ ಇದನ್ನು ವಿನ್ಯಾಸಗೊಳಿಸುವುದು ಅತ್ಯಂತ ಮಹತ್ವದ್ದಾಗಿತ್ತು. ಉದಾಹರಣೆಗೆ ಅವರನ್ನು ತರಕಾರಿ ಮಾರುಕಟ್ಟೆಗೆ ಕರೆದೊಯ್ದು ವೆಚ್ಚ ಹಾಗೂ ಮಾರಾಟದ ಕುರಿತಾಗಿ, ಬೆಲೆಯ ಕುರಿತಾಗಿ ತಿಳಿಸಲಾಯಿತು. ಕೃಷಿ ಭೂಮಿಗಳಿಗೆ ಕ್ಷೇತ್ರ ಭೇಟಿಯ ಮೂಲಕ ಕೃಷಿಯ‌ ಕುರಿತಾಗಿ ಹೇಳಿ ಕೊಡಲಾಯಿತು. ಶಿಕ್ಷಣಶಾಸ್ತ್ರವು ಚಲನಚಿತ್ರ ವೀಕ್ಷಣೆ, ಕಥೆ ಹೇಳುವಿಕೆ ಹಾಗೂ ಪ್ರದರ್ಶನ ಕಲೆಗಳಂತಹ ಚಟುವಟಿಕೆಗಳನ್ನೂ ಸಹ ಒಳಗೊಂಡಿದೆ," ಎಂದು ರೇವತಿ ಹೇಳುತ್ತಾರೆ.


ಬುಡಕಟ್ಟು ಸಮುದಾಯದವರ ಜೀವನವನ್ನು ಪರಿವರ್ತಿಸುವುದು

ರೇವತಿ ವಾನವಿಲ ಶಾಲೆಯನ್ನು ಸ್ಥಾಪಿಸಿ 15 ವರ್ಷಗಳಾಗಿವೆ ಮತ್ತು‌ 1000ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.


"ಇದೀಗ ನನ್ನ ಪ್ರಯತ್ನಗಳ ಫಲಿತಾಂಶವನ್ನು‌ ನೋಡುತ್ತಿದ್ದರೆ ನಂಬಲಾಗದಷ್ಟು ತೃಪ್ತಿಕರದಾಯಕವಾಗಿದೆ‌. ಆಗ ಇದ್ದ ನನ್ನ ಗುರಿ ಮಕ್ಕಳಿಗೆ ಜ್ಞಾನದ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಶಿಕ್ಷಣದ ಮೇಲೆ ನಂಬಿಕೆಯನ್ನು ಇಡಲು ಸಾಧ್ಯವಾಗಿಸುವುದಾಗಿತ್ತು. ಈಗ ಅದನ್ನು ನಾನು ಸ್ವಲ್ಪ ಮಟ್ಟಿಗೆ ಸಾಧಿಸಿದ್ದೆನೆಂದು ವಿಶ್ವಾಸದಿಂದ ಹೇಳಬಲ್ಲೆ ಎಂದು ಭಾವಿಸುತ್ತೇನೆ," ಎನ್ನುತ್ತಾರೆ ರೇವತಿ.


ಕಬ್ಬಡಿ ಆಡುತ್ತಿರುವ ವಾನವಿಲದ ವಿದ್ಯಾರ್ಥಿಗಳು


ಇಂದು, ರೇವತಿಯವರು ಪ್ರತಿವರ್ಷ 80 ವಿದ್ಯಾರ್ಥಿಗಳ ಬ್ಯಾಚ್‌ಗಳೊಂದಿಗೆ ವಸತಿ ಶಾಲೆಯನ್ನು ನಡೆಸುತ್ತಿದ್ದಾರೆ. ಮೊದಲ ವರ್ಷದಲ್ಲಿ ಒಬ್ಬರೇ ಶಾಲೆಯನ್ನು ನಡೆಸುವುದರಿಂದ ಹಿಡಿದು ಈಗ 8 ಜನ ಪೂರ್ಣಾವಧಿ ಶಿಕ್ಷಕರು ಮತ್ತು 14 ಸಹಾಯಕ ಸಿಬ್ಬಂದಿಗಳನ್ನು ಹೊಂದಿರುವ ವಾನವಿಲ ಶಾಲೆ ಬಹು ದೂರ ಸಾಗಿ ಬಂದಿದೆ.


ಈ ಪಯಣದುದ್ದಕ್ಕೂ ಮಿಲಾಪ್‌ನಂತಹ ಕ್ರೌಡ್‌ಸೋರ್ಸಿಂಗ್ ಪ್ಲಾಟ್‌ಫಾರ್ಮ್‌ಗಳು, ವೈಯಕ್ತಿಕ ದೇಣಿಗೆಗಳು, ಸುಂದರಂ ಮ್ಯೂಚುಯಲ್ ಫಂಡ್ಸ್ ಮತ್ತು ಮಾರ್ಕ್ ಸಾಕ್ವೆಟ್ ಫೌಂಡೇಶನ್‌ನ ಅನುದಾನಗಳು ಸಾಥ್ ನೀಡಿವೆ.


ಬುಡಕಟ್ಟು ಸಮುದಾಯದವರ ಶಿಕ್ಷಣವನ್ನು ಬಲಪಡಿಸಲು ಮತ್ತು ಭಿಕ್ಷಾಟನೆಯಿಂದ ಹೊರ ಬರಲು ರೇವತಿ ಎರಡು ಜಿಲ್ಲೆಗಳಲ್ಲಿ ಹರಡಿರುವ ಇತರೆ 10 ಗ್ರಾಮಗಳಲ್ಲಿ ಪೂರಕ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.


ಮುಂದಿನ ದಿನಗಳ ಯೋಜನೆಗಳ ಕುರಿತಾಗಿ ಮಾತನಾಡಿದ ಅವರು,

"ನಾನು ನಾಗಪಟ್ಟಣಂ ಜಿಲ್ಲಾಧಿಕಾರಿ ಸಹಾಯದಿಂದ ಬುಡಕಟ್ಟು ಸಮುದಾಯದವರಿಗಾಗಿ ಜೀವನೋಪಾಯ ಯೋಜನೆ ನಿರ್ಮಿಸಲು ಪ್ರಯತ್ನಿಸುತ್ತಿದ್ದೇನೆ. ಅವರು ಸಮಾಜದಲ್ಲಿ ಅದೃಶ್ಯವಾಗಿ ಉಳಿಯದೆ ತಮಗಾಗಿ ಒಂದು ಸ್ಥಾನ ಮತ್ತು ಗುರುತನ್ನು ಪಡೆಯುತ್ತಾರೆ‌ ಎಂಬ ಭರವಸೆ ಇದೆ," ಎನ್ನುತ್ತಾರೆ