ಹೆಚ್‌ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುವ ಮೂಲಕ 47 ಮಂದಿ ಮಕ್ಕಳಿಗೆ ತಂದೆಯಾದ ಸೋಲೋಮನ್ ರಾಜಾ

ಚೆನ್ನೈ ನಿವಾಸಿ ಸೋಲೋಮನ್ ರಾಜ್ 47 ಜನ ಹೆಚ್‌ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಅವರನ್ನು ಸಾಕಿ ಸಲಹುತ್ತಿದ್ದಾರೆ. ಈ ಎಲ್ಲಾ ಮಕ್ಕಳು ಪ್ರೀತಿಯಿಂದ ಸೋಲೋಮನ್ ರಾಜಾ ಅವರನ್ನು ಅಪ್ಪ ಎಂದು ಕರೆಯುತ್ತಾರೆ.

ಹೆಚ್‌ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುವ ಮೂಲಕ 47 ಮಂದಿ ಮಕ್ಕಳಿಗೆ ತಂದೆಯಾದ ಸೋಲೋಮನ್ ರಾಜಾ

Sunday October 20, 2019,

3 min Read

ನಮ್ಮ ಸಮಾಜ ಎಷ್ಟೇ ಮುಂದುವರೆದರು ಕೆಲವೊಂದು ವಿಚಾರಗಳಲ್ಲಿ ಇನ್ನೂ ಹಿಂದೆ ಇದೆ. ಹೆಚ್‌ಐವಿ ಪೀಡಿತ ಮಕ್ಕಳು, ಮನುಷ್ಯರನ್ನು ನಮ್ಮ ಸಮಾಜ ಇನ್ನು ಒಪ್ಪಿಕೊಳ್ಳುವ ಹಂತ ತಲುಪಿಲ್ಲ ಅನ್ನುವುದು ದುರದೃಷ್ಟಕರ ಸಂಗತಿ. ಹೆಚ್‌ಐವಿ ಒಂದು ಭಯಾನಯ ಖಾಯಿಲೆ. ಇದಕ್ಕೆ ಇನ್ನು ಸಂಪೂರ್ಣ ಗುಣಪಡಿಸುವ ಔಷಧವನ್ನು ಕಂಡುಹಿಡಿದಿಲ್ಲ. ಆದರೆ ಈ ಖಾಯಿಲೆ ಪೀಡಿತರನ್ನು ದೂರು ಸರಿಸುವುದು ಮತ್ತೊಂದು ದುರಂತ. ಈ ಹೆಚ್‌ಐವಿ ಕಾಯಿಲೆಗೆ ಒಳಗಾದ ಎಷ್ಟೋ ಮಕ್ಕಳು ಕುಟುಂಬದಿಂದ ದೂರವೇ ಉಳಿದಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಮಕ್ಕಳನ್ನು ರಸ್ತೆಯಲ್ಲಿ ಬಿಟ್ಟು ಹೋಗುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸದ್ಯದ ಪ್ರಶ್ನೆ. ಆದರೆ ಇಂಥಹ ಮಕ್ಕಳನ್ನು ದತ್ತು ಪಡೆದು ಸಾಕಿ ಸಲಹುತ್ತಿದ್ದಾರೆ ಇಲ್ಲೊಬ್ಬ ಚೆನ್ನೈ ಮೂಲದ ವ್ಯಕ್ತಿ.


ಹೆಚ್ ಐ ವಿ ಪೀಡಿತ ಮಗುವಿನೊಂದಿಗೆ ಸೋಲೋಮನ್ (ಚಿತ್ರ ಕೃಪೆ: ಮಿಲಾಪ್)



ಹೌದು, ಚೆನ್ನೈ ಮೂಲದ ಸೋಲೋಮನ್ ರಾಜಾ ಸದ್ಯ ಹೆಚ್‌ಐವಿ ಪೀಡಿತ ಮಕ್ಕಳ ತಂದೆ ಎಂದು ಪ್ರಖ್ಯಾತರಾಗಿದ್ದಾರೆ. ಸದ್ಯ 47 ಮಂದಿ ಹೆಚ್‌ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. 11 ಮಂದಿ ಸಿಬ್ಬಂದಿಯನ್ನು ಕೆಲಸಕ್ಕಿಟ್ಟುಕೊಂಡಿರುವ ಸೋಲಮನ್ ರಾಜಾ, ಸೋಲೋಮನ್ ಶೆಲ್ಟರ್ ಎಂಬ ಟ್ರಸ್ಟ್ ಮೂಲಕ ಈ ಮಕ್ಕಳಿಗೆ ಮನೆಯವರ ಪ್ರೀತಿ ನೀಡುವ ಮೂಲಕ ಆರೈಕೆ ಮಾಡುತ್ತಿದ್ದಾರೆ.


ಸೋಲೋಮನ್‌ ಅವರಿಗೆ ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಾಗಲಿಲ್ಲ. ಆಗ ಹೆಚ್‌ಐವಿ ಪೀಡಿತ ಮಗುವೊಂದನ್ನು ದತ್ತು ಪಡೆಯಲು ಯೋಚಿಸಿದ್ದರಂತೆ. ಈ ವೇಳೆಗೆ ಅವರ ಪತ್ನಿ ಗರ್ಭವತಿಯಾದರು. ಆದರೂ ಮಗು ದತ್ತು ಪಡೆಯುವ ಯೋಚನೆಯಿಂದ ಹಿಂದೆ ಸರಿಯಲಿಲ್ಲ ಸೋಲೋಮನ್. ಈ ವಿಚಾರ ಸ್ನೇಹಿತರ ಬಳಿಯೂ ಚರ್ಚೆ ಮಾಡಿದ್ದರಂತೆ. ಅದರಂತೆ, 2005 ರಲ್ಲಿ ಸೋಲೋಮನ್ ಸ್ನೇಹಿತರೊಬ್ಬರು ಒಬ್ಬ ಹುಡುಗನ ಕುಟುಂಬದ ಬಗ್ಗೆ ಹೇಳುತ್ತಾರೆ. ಈ ಬಾಲಕನ ಕುಟುಂಬ ಹೆಚ್‌ಐವಿ ಪೀಡಿತರಾಗಿ ಸಾವನ್ನಪ್ಪುತ್ತಾರೆ. ಈ ವೇಳೆ ಈ ಬಾಲಕನನ್ನು ಎಲ್ಲರೂ ನಿರ್ಲಕ್ಷ ಮಾಡಿದ್ದಾರೆ ಎಂದು ತಿಳಿದಾಗ ಆ ಬಾಲಕನನ್ನು ಮನೆಗೆ ತಂದು ಸಾಕಲು ಸೋಲೋಮನ್ ನಿರ್ಧಾರ ಮಾಡುತ್ತಾರೆ.


ಹೆಚ್. ಐ. ವಿ. ಪೀಡಿತ ಮಗುವನ್ನು ಸೋಲೋಮನ್ ಆರೈಕೆ ಮಾಡುತ್ತಿರುವುದು (ಚಿತ್ರ ಕೃಪೆ: ಮಿಲಾಪ್)



ಮಿಲಾಪ್ ನೊಂದಿಗಿನ ಸಂವಾದದಲ್ಲಿ ಸೋಲೋಮನ್,


“ಮೊದ ಮೊದಲು ಸ್ನೇಹಿತ ನನಗೆ ಹೇಳಿದಾಗ ನಾನು ಆ ಹುಡುಗನನ್ನು ನಿರಾಕರಿಸಿದ್ದೆ. ನಂತರ ಅವನ ಕಥೆ ಕೇಳಿ ಆ ಬಾಲಕನನ್ನು ಮನೆಗೆ ಕರೆದುಕೊಂಡು ಬರಲು ನಿರ್ಧಾರ ಮಾಡಿದೆ. ಮೊದ ಮೊದಲು ಹೀಗೆ ಹೆಚ್‌ಐವಿ ಪೀಡಿತ ಮಗುವನ್ನು ಸಾಕಲು ನಿರ್ಧಾರ ಮಾಡಿರುವ ಸುದ್ದಿ ಹರಡುತ್ತಿದ್ದಂತೆಯೇ ನಾನು ಉದ್ಯೋಗವನ್ನು ತ್ಯಜಿಸಬೇಕಾಯಿತು. ನಂತರ ನನ್ನ ಸ್ನೇಹಿತರು ಹೆಚ್ ಐ ವಿ ವೈರಸ್ ಹರಡುತ್ತದೆ ಎಂದು ನನ್ನನ್ನು ದೂರ ಮಾಡಿದರು. ಕುಟುಂಬದವರು ದೂರ ಮಾಡಿದರು. ಆದರೂ ನಾನು ಎದೆಗುಂದದೆ ಮುನ್ನೆಡೆದೆ” ಎಂದು ಹೇಳಿದರು.

ಸೋಲೋಮನ್ ಮೊದಲು ಒಂದು ಮಗುವನ್ನು ಮಾತ್ರ ದತ್ತು ಪಡೆದು ಸಾಕುತ್ತಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ. ಸಾಕಷ್ಟು ಜನ ಮಕ್ಕಳನ್ನು ಇಲ್ಲಿಗೆ ತಂದು ಬಿಡಲಾರಂಭಿಸಿದರಂತೆ. ಹೀಗೆ ಸದ್ಯ ಒಟ್ಟು ಹೆಚ್ ಐ ವಿ ಪೀಡಿತ 47 ಮಕ್ಕಳನ್ನು ಸೋಲೋಮನ್ ಆರೈಕೆ ಮಾಡುತ್ತಿದ್ದಾರೆ.


ಎನ್ ಡಿ ಟಿ ವಿ ಜೊತೆ ಮಾತನಾಡುತ್ತಾ ಸೋಲೋಮನ್ ಹೀಗೆ ಹೇಳುತ್ತಾರೆ,


“ನಾನು 47 ಮಕ್ಕಳ ತಂದೆ. ಅವರು ನನ್ನನ್ನು ಅಪ್ಪ ಎಂದು ಕರೆಯುತ್ತಾರೆ. ಇದು ನನಗೆ ಖುಷಿ ಕೊಡುತ್ತದೆ. ಈ ಜೀವನ ನನಗೆ ಸಾಕಷ್ಟು ತೃಪ್ತಿ ತಂದಿದೆ. ಅವರೆಲ್ಲಾ ನನ್ನನ್ನು ಅಪ್ಪಾ ಎಂದಾಗ ಎಲ್ಲಿಲ್ಲದ ಖುಷಿ ಸಿಗುತ್ತದೆ. ಈ ಮಕ್ಕಳನ್ನು ಸಾಕುವಾಗ ನನಗೆ ಆರ್ಥಿಕವಾಗಿ ಕಷ್ಟವಾಗಿತ್ತು. ಆದರೂ ನಾನೆಲ್ಲವನ್ನು ಮೆಟ್ಟಿ ನಿಂತು ಮಕ್ಕಳನ್ನು ಸಾಕುತ್ತಿದ್ದೇನೆ ಎನ್ನುತ್ತಾರೆ.”


ಹೆಚ್ ಐ ವಿ ಪೀಡಿತ ಮುದ್ದು ಮಕ್ಕಳೊಂದಿಗೆ ಸೋಲೋಮನ್ (ಚಿತ್ರ ಕೃಪೆ: ಡೆಕ್ಕನ್ ಕ್ರಾನಿಕಲ್)


ಇನ್ನು ಈ ಮಕ್ಕಳ ಆರೈಕೆ ಜೊತೆಗೆ ಮಕ್ಕಳಿಗೆ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ, ಡ್ಯಾನ್ಸ್, ಕಂಪ್ಯೂಟರ್ ಶಿಕ್ಷಣವನ್ನೂ ಕೂಡ ಕೊಡಿಸುತ್ತಿದ್ದಾರೆ ಸೋಲೋಮನ್. ಈ ಮಕ್ಕಳಲ್ಲಿ ಹಲವರು ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದರೆ, 7 ಮಂದಿ ಮಕ್ಕಳು ಬೇರೆ ಬೇರೆ ವಿಷಯದಲ್ಲಿ ಪದವಿ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ಅಲ್ಲದೆ ಈಗ ಪಿಯುಸಿ ಕಲಿಯುತ್ತಿರುವ ಒಬ್ಬಳು ಹುಡುಗಿ ಮುಂದೆ ಡಾಕ್ಟರ್ ಆಗಬೇಕೆಂದು ಆಸೆ ಪಟ್ಟಿದ್ದಾರಂತೆ. ಅಷ್ಟೆ ಅಲ್ಲ ತನ್ನಂತ ಇತರೆ ಮಕ್ಕಳಿಗೆ ಚಿಕಿತ್ಸೆ ನೀಡಬೇಕೆಂಬುದು ಬಯಸಿದ್ದಾಳೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸೋಲೋಮನ್. ಎಷ್ಟೋ ಜನ ಇಂಥಹ ಮಕ್ಕಳನ್ನು ದೂರ ಇಡುವುದನ್ನು ನೋಡಿದ್ದೇವೆ. ಆದರೆ ಯಾವುದೇ ಸ್ವಾರ್ಥ ಇಲ್ಲದೆ ಇಂಥಹ ಮಕ್ಕಳಿಗಾಗಿ ನಿರ್ಸಾರ್ಥ ಸೇವೆ ಸಲ್ಲಿಸುತ್ತಿರುವ ಸೋಲೋಮನ್ ಅನೇಕರಿಗೆ ನಿದರ್ಶನ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.