ಬರೀ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿರುವ ನೋಯಿಡಾದ “ದಾದಿ ಕೀ ರಸೋಯಿ”
ಗಂಗಾ ಶಾಪಿಂಗ್ ಕಾಂಪ್ಲೆಕ್ಸ್, ಸೆಕ್ಟರ್ 29, ನೋಯಿಡಾದಲ್ಲಿರುವ ಸಮಾಜ ಸೇವಕ ಅನೂಪ್ ಖನ್ನಾರ ಊಟದ ಮನೆ “ದಾದಿ ಕಿ ರಸೋಯಿ”, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಕೇವಲ ಒಂದು ಊಟಕ್ಕೆ ಐದು ರೂಪಾಯಿ ತೆಗೆದುಕೊಂಡು ಹೊಟ್ಟೆ ತುಂಬಾ ಊಟ ನೀಡುತ್ತಿದೆ.
ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಹಳಷ್ಟು ಜನರಿಗೆ ಒಂದು ಹೊತ್ತಿನ ಊಟವನ್ನು ಹೊಟ್ಟೆ ತುಂಬಾ ಮಾಡುವುದು ವಾಸ್ತವವಾಗಿ ಕಷ್ಟಕರವಾಗಿದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 195.9 ದಶಲಕ್ಷ ಜನರು ಸರಿಯಾದ ಆಹಾರ ದೊರೆಯದೆ ಅಪೌಷ್ಟಿಕತೆಯಿಂದ ಬಳಲುತಿದ್ದಾರೆ.
ಈ ಪಿಡುಗನ್ನು ನಿವಾರಿಸಲು ತಮಿಳುನಾಡು, ಕರ್ನಾಟಕ ಮತ್ತು ಒರಿಸ್ಸಾದಂತಹ ರಾಜ್ಯಗಳು ದುರ್ಬಲ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಊಟ ನೀಡುವ ಸಲುವಾಗಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಈ ಯೋಜನೆಗಳ ಅಡಿಯಲ್ಲಿ ಚೆನ್ನೈನಲ್ಲಿ ‘ಅಮ್ಮಾ ಕ್ಯಾಂಟೀನ್”, ಬೆಂಗಳೂರಿನಲ್ಲಿ “ಇಂದಿರಾ ಕ್ಯಾಂಟೀನ್”, ಭುವನೇಶ್ವರದಲ್ಲಿ “ಆಹಾರ್ ಯೋಜನಾ” ಸ್ಥಾಪಿತವಾಗಿವೆ.
ಇದಲ್ಲದೇ ಕೆಲವು ಸರ್ಕಾರೇತರ ಸಂಸ್ಥೆಗಳು ಮತ್ತು ಸಮಾಜ ಸೇವಕರು ಬಡವರಿಗೆ ಉಚಿತ ಅಥವಾ ಅವರಿಗೆ ಕೈಗೆಟಕುವ ದರದಲ್ಲಿ ಊಟವನ್ನು ಒದಗಿಸುತಿದ್ದಾರೆ. ಇಂತಹವರಲ್ಲಿ ಒಬ್ಬರಾಗಿರುವ ನೋಯಿಡಾ ಮೂಲದ ಸಮಾಜ ಸೇವಕ ಅನೂಪ್ ಖನ್ನಾ “ದಾದಿ ಕಿ ರಸೋಯಿ” ಎಂಬ ಊಟದ ಮನೆ ತೆರೆದು ಪ್ರತಿದಿನ 500 ಜನರಿಗೆ ಊಟವನ್ನು ಒದಗಿಸುತಿದ್ದಾರೆ.
ಒಂದು ಸಮಾಜಮುಖಿ ಉದ್ದೇಶದಿಂದ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ “ದಾದಿ ಕಿ ರಸೋಯಿ” ಕೇವಲ 5 ರೂಪಾಯಿಗಳಿಗೆ ಅನ್ನ-ಬೇಳೆಯ ಸಾಂಬಾರ್, ರೊಟ್ಟಿ-ತರಕಾರಿ ಪಲ್ಯಗಳನ್ನೊಳಗೊಂಡ ಹೊಟ್ಟೆ ತುಂಬಾ ಊಟವನ್ನು ಬಡಜನರಿಗೆ ಒದಗಿಸುತ್ತಿದೆ. ಈ ಊಟದ ಮನೆಯು ನೋಯಿಡಾದ ಸೆಕ್ಟರ್ 17 ರಲ್ಲಿ ಬೆಳಿಗ್ಗೆ 10 ರಿಂದ 11.30 ರವರೆಗೆ ಮತ್ತು ಸೆಕ್ಟರ್ 29 ರಲ್ಲಿ ಮಧ್ಯಾಹ್ನ 12 ರಿಂದ 2 ಗಂಟೆಯವರಗೆ ತೆರೆದಿರುತ್ತದೆ.
ನೋಯಿಡಾದ ಗಂಗಾ ಶಾಪಿಂಗ್ ಕಾಂಪ್ಲೆಕ್ಸ್, ಸೆಕ್ಟರ್ 29ರಲ್ಲಿರುವ ಊಟದ ಮನೆಗೆ ಬಹಳಷ್ಟು ಜನ ರಿಕ್ಷಾ ಚಾಲಕರು ಮತ್ತು ಅವರ ಕುಟುಂಬದವರು ಊಟಕ್ಕಾಗಿ ಬರುತ್ತಾರೆ.
ಈ ಊಟದ ಮನೆಯ ಯೋಜನೆಯನ್ನು ರೂಪಿಸಿದವರು ಅನೂಪ್ ಖನ್ನಾರ ಮಗಳು ಸಾಕ್ಷಿ. ಇದಕ್ಕಾಗಿ ಅನೂಪ್ ಖನ್ನಾ 30,000 ರೂಪಾಯಿಗಳನ್ನು ತೊಡಗಿಸಿದರು. ಅದಾದ ನಂತರ ಈ ಊಟದ ಮನೆಗೆ ದಾನಿಗಳಿಂದ ಹಣದ ನೆರವು ಹರಿದು ಬಂದಿತು.
ದಿ ಲಾಜಿಕಲ್ ಇಂಡಿಯಾ ದೊಂದಿಗೆ ಮಾತನಾಡುತ್ತಾ ಅನೂಪ್ ಹೀಗೆ ಹೇಳುತ್ತಾರೆ,
“ಕೆಲವು ಅಂಗಡಿಗಳ ಮಾಲೀಕರು ರಿಯಾಯತಿ ದರದಲ್ಲಿ ನಮಗೆ ಆಹಾರ ಧಾನ್ಯಗಳನ್ನು ಒದಗಿಸುತ್ತಾರೆ. ಇಲ್ಲಿನ ಸುತ್ತಮುತ್ತಲಿನ ಕೆಲವು ನಿವಾಸಿಗಳು ಹುಟ್ಟಿದ ದಿನಾಚರಣೆ, ಮದುವೆ ವಾರ್ಷಿಕೋತ್ಸವ ಮುಂತಾದ ಶುಭಸಮಾರಂಭಗಳ ದಿನದಂದು ವಿಶೇಷ ಊಟವನ್ನು ನೀಡುತ್ತಾರೆ. ಅವರ ಬೆಂಬಲವು ನಮಗೆ ವರದಾನವಾಗಿದೆ.”
ಊಟದ ಮನೆಯನ್ನು ನಡೆಸಲು ಬೇಕಾದ ಖರ್ಚುವೆಚ್ಚಗಳನ್ನು ಸರಿದೂಗಿಸಲು ಅನೂಪ್ ಎಲ್ಲಾ ಆಹಾರ ಸಾಮಗ್ರಿಗಳನ್ನು ಸಗಟು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಇದರಿಂದ ಅವರಿಗೆ ಮಾರುಕಟ್ಟೆ ದರಕ್ಕಿಂತ ಸುಮಾರು ಅರ್ಧದಷ್ಟು ದರದಲ್ಲಿ ಆಹಾರ ಸಾಮಗ್ರಿಗಳು ದೊರೆಯುತ್ತವೆ. ಒಬ್ಬ ತರಕಾರಿಯವನು ಅವನ ಕುಟುಂಬಕ್ಕೆ ಊಟದ ಮನೆಯಿಂದ ಊಟವನ್ನು ಪಡೆದು ಅರ್ಧ ದರಕ್ಕೆ ತರಕಾರಿಗಳನ್ನು ಒದಗಿಸುತ್ತಾನೆ.
ಎನ್ ಡಿ ಟಿವಿಯೊಂದಿಗೆ ಮಾತನಾಡಿದ ಅನೂಪರ ವ್ಯವಸ್ಥಾಪಕ ಸೋನು ಆಹಾರದ ಗುಣಮಟ್ಟದ ಬಗ್ಗೆ ಹೀಗೆ ಹೇಳುತ್ತಾರೆ,
“ಅಡಿಗೆ ಮಾಡುವ ಸ್ಥಳದಲ್ಲಿ ಏನೂ ಹೆಚ್ಚು ಕಡಿಮೆ ಆಗದಂತೆ ನೋಡಿಕೊಳ್ಳಲು ನಾವು ನಾಲ್ಕು ಸಿಸಿಟಿವಿಗಳನ್ನು ಅಳವಡಿಸಿದ್ದೇವೆ. ಖನ್ನಾರವರು ಪ್ರತಿದಿನ ಸಿಸಿಟಿವಿ ರೆಕಾರ್ಡಿಂಗ್ ಗಳನ್ನು ಖುದ್ದಾಗಿ ಪರಿಶೀಲಿಸುತ್ತಾರೆ.”
“ಬಡವರಿಗಾಗಿ ಊಟ ನೀಡುವ ಉದ್ದೇಶದಿಂದ “ದಾದಿ ಕಿ ರಸೋಯಿ” ಸ್ಥಾಪಿತವಾಗಿದ್ದರೂ ನಾವು ಉಚಿತವಾಗಿ ಊಟ ನೀಡುವುದಿಲ್ಲ. ಒಂದು ಊಟಕ್ಕೆ 5 ರೂಪಾಯಿ ನಿಗದಿ ಮಾಡಿದ್ದೇವೆ. ಇದು ಜನರ ಸ್ವಾಭಿಮಾನವನ್ನು ಗೌರವಿಸುವುದಕ್ಕಾಗಿ ಮಾತ್ರವಾಗಿದೆ ಮತ್ತು ಅದು ಅವರ ಕೈಗೆಟಕುವ ದರವಾಗಿದೆ” ಎಂದು ಅನೂಪ್ ಹೇಳುತ್ತಾರೆ.
ಬಡವರಿಗೆ ಬರೀ ಊಟವನ್ನೇ ಅಲ್ಲದೇ ಅನೂಪ್ ಅವರ ಸದ್ಭಾವನಾ ಸ್ಟೋರ್ಸ್ ಎಂಬ ಅಂಗಡಿಯಲ್ಲಿ ಕೇವಲ ಹತ್ತು ರೂಪಾಯಿಗಳಿಗೆ ಬಟ್ಟೆಗಳನ್ನೂ ಮಾರುತ್ತಾರೆ. ಅಲ್ಲಿ ಅವರು ಪುಸ್ತಕಗಳು, ಷೂಗಳನ್ನೂ ಬಡವರಿಗೆ ಮಾರುತ್ತಾರೆ ಎಂದು ಜಾಗರಣ ಪತ್ರಿಕೆ ವರದಿ ಮಾಡಿದೆ.
ಪ್ರಧಾನ ಮಂತ್ರಿಯವರ ಜನೌಷಧಿ ಯೋಜನೆಯಡಿ ಅನೂಪ್ 2017 ರಲ್ಲಿ ನೋಯಿಡಾದಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ತೆರೆದಿದ್ದಾರೆ. ಪ್ರಸ್ತುತ ಅವರ ಎರಡು ಔಷಧಿ ಅಂಗಡಿಗಳು ಬಡವರಿಗೆ ತುರ್ತು ಅವಶ್ಯಕತೆಯಿದ್ದಾಗ ಔಷಧಿಗಳನ್ನು ಪೂರೈಸುತ್ತವೆ.
ಬಡವರ ಬಗ್ಗೆ ಅತೀವ ಕಾಳಜಿಯಿದ್ದ ಅವರ 90 ವರ್ಷದ ತಾಯಿ ಇತ್ತೀಚೆಗೆ ತೀರಿಕೊಂಡರು. ಅವರ ಅಸ್ತಿಯನ್ನು ಯಾವುದೇ ನದಿಗೆ ಬಿಡದೇ ಗಿಡಗಳನ್ನು ಬೆಳೆಯಲಾಗುವ ಪ್ರದೇಶಗಳಲ್ಲಿ ಹರಡಲಾಯಿತು ಎಂದು ಅನೂಪ್ ಹೇಳುತ್ತಾರೆ. ಇದು ಅವರ ಸಮಾಜ ಸೇವೆಗೆ ಮಿಡಿಯುವ ಹೃದಯಕ್ಕೆ ಹಿಡಿದ ಕನ್ನಡಿಯಾಗಿದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.