ಟೆಕ್ ಟಾಕ್: ಎಐ ಅಂದರೆ ಏನು ಗೊತ್ತಾ?
ಹಿಂದೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಿದ್ದ ಸನ್ನಿವೇಶಗಳನ್ನೆಲ್ಲ ಈಗ ಸುಲಭ ಸಾಧ್ಯವಾಗಿಸುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪರಿಕಲ್ಪನೆಯ ಬಗ್ಗೆ ಒಂದಷ್ಟು ಮಾಹಿತಿ.
ಏನಿದು ಎಐ?
ಜ್ಞಾನವನ್ನೂ ಕೌಶಲ್ಯಗಳನ್ನೂ ಸಂಪಾದಿಸಿಕೊಳ್ಳುವ ಹಾಗೂ ಸಂದರ್ಭಕ್ಕೆ ತಕ್ಕಂತೆ ಅನ್ವಯಿಸುವ ಸಾಮರ್ಥ್ಯವೇ ಬುದ್ಧಿಶಕ್ತಿ (ಇಂಟಲಿಜೆನ್ಸ್). ನಮಗೆಲ್ಲ ಗೊತ್ತಿರುವ ಹಾಗೆ ಇದು ಮನುಷ್ಯರ ವೈಶಿಷ್ಟ್ಯಗಳಲ್ಲೊಂದು. ಬುದ್ಧಿಶಕ್ತಿ ಇರುವುದರಿಂದಲೇ ಮನುಷ್ಯ ಹೊಸ ಆವಿಷ್ಕಾರಗಳನ್ನು ಮಾಡಬಲ್ಲ, ಯಂತ್ರಗಳನ್ನು ನಿರ್ಮಿಸಬಲ್ಲ ಹಾಗೂ ತನ್ನ ಕೆಲಸಗಳನ್ನು ಸುಲಭಮಾಡಿಕೊಳ್ಳಬಲ್ಲ.
ಹೀಗೆ ನಿರ್ಮಿಸುವ ಯಂತ್ರಗಳಲ್ಲೂ ಬುದ್ಧಿಶಕ್ತಿ ಇದ್ದರೆ? ನಮ್ಮ ಕೆಲಸಗಳು ಇನ್ನೂ ಸುಲಭವಾಗಬಹುದಲ್ಲವೇ?
ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಎಂಬ ಪರಿಕಲ್ಪನೆಯ ಹುಟ್ಟಿಗೆ ಕಾರಣವಾಗಿದ್ದು ಇದೇ ಪ್ರಶ್ನೆ. ಕೆಲಸಮಾಡುವುದರಲ್ಲಿ, ವಿವಿಧ ಸನ್ನಿವೇಶಗಳಿಗೆ ಸ್ಪಂದಿಸುವಲ್ಲಿ ಮನುಷ್ಯರ ವರ್ತನೆಯನ್ನು ಅನುಕರಿಸಬಲ್ಲ ಯಂತ್ರಗಳನ್ನು ರೂಪಿಸುವುದು ಈ ಪರಿಕಲ್ಪನೆಯ ಉದ್ದೇಶ. ತನ್ನ ಅನುಭವ-ಅನಿಸಿಕೆಗಳ ಆಧಾರದ ಮೇಲೆ ಮನುಷ್ಯ ಹೇಗೆ ಬೇರೆಬೇರೆ ಸಂದರ್ಭಗಳಿಗೆ ಬೇರೆಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೋ, ಯಂತ್ರಗಳಲ್ಲೂ ಅಂತಹುದೇ ಸಾಮರ್ಥ್ಯವನ್ನು ಬೆಳೆಸಬಹುದು ಎಂದು ಈ ಪರಿಕಲ್ಪನೆ ಹೇಳುತ್ತದೆ.
ತಂತ್ರಾಂಶಗಳು (ಸಾಫ್ಟ್‌ವೇರ್) ನಾವು ಹೇಳಿದ ಕೆಲಸವನ್ನು ಹೇಳಿದ ರೀತಿಯಲ್ಲಿ ಮಾತ್ರವೇ ಮಾಡುತ್ತವೆ ಎಂದು ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳು ನಮಗೆ ಹೇಳಿಕೊಟ್ಟಿವೆ. ಅಷ್ಟಕ್ಕೇ ಸೀಮಿತವಾಗುವ ಬದಲು ಹೊಸ ವಿಷಯಗಳನ್ನು ಕಲಿಯುವ, ಹಾಗೆ ಕಲಿತದ್ದನ್ನು ಬಳಸುವ ಸಾಮರ್ಥ್ಯವೂ ಯಂತ್ರಗಳಲ್ಲಿರಬೇಕು ಎನ್ನುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪರಿಕಲ್ಪನೆಯ ಆಶಯ.
ಎಐ ಪರಿಕಲ್ಪನೆ ರೂಪುಗೊಂಡಿದ್ದು ಯಾವಾಗ?
ಎಐ ಹೆಚ್ಚಾಗಿ ಸುದ್ದಿಯಲ್ಲಿರುವುದು ಈಚಿನ ವರ್ಷಗಳಲ್ಲೇ ಆದರೂ ಈ ಪರಿಕಲ್ಪನೆ ತೀರಾ ಹೊಸತೇನಲ್ಲ. ಇತಿಹಾಸದ ದೃಷ್ಟಿಯಿಂದ ನೋಡುವುದಾದರೆ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಬ ಹೆಸರಿನ ಸೃಷ್ಟಿಯಾದದ್ದು 1956 ನೇ ಇಸವಿಯಲ್ಲಿ. ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕಾರ್ಥಿ ಅಲ್ಲಿನ ಡಾರ್ಟ್‌ಮೌತ್ ಕಾಲೇಜಿನಲ್ಲಿ ನಡೆದ ಕಾರ್ಯಾಗಾರವೊಂದರ ಸಂದರ್ಭದಲ್ಲಿ ಈ ಹೆಸರನ್ನು ಮೊದಲಿಗೆ ಬಳಸಿದರು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಒಂದು ಪ್ರತ್ಯೇಕ ಕ್ಷೇತ್ರವಾಗಿ ರೂಪುಗೊಳ್ಳಲು ಕಾರಣವಾದ ಘಟನೆ ಎಂದು ಈ ಕಾರ್ಯಾಗಾರಕ್ಕೂ ಮಾಹಿತಿ ತಂತ್ರಜ್ಞಾನದ ಇತಿಹಾಸದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ.
ಅಷ್ಟೆಲ್ಲ ವರ್ಷಗಳ ಹಿಂದೆ ನಾಮಕರಣವಾದದ್ದೇನೋ ಸರಿ, ಹಾಗೆಂದು ಎಐ ಪರಿಕಲ್ಪನೆಯ ಅಂದಿನ ಸ್ವರೂಪ ಇಂದಿನವರೆಗೂ ಹಾಗೆಯೇ ಉಳಿದಿದೆಯೇ?
ಖಂಡಿತಾ ಇಲ್ಲ. ಕಾಲಕಾಲಕ್ಕೆ ಎಐ ಪರಿಕಲ್ಪನೆಯ ಸ್ವರೂಪ ಬದಲಾಗುತ್ತಲೇ ಇದೆ. ಒಂದು ಕಾಲಕ್ಕೆ ಎಐ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತಿದ್ದ ಓಸಿಆರ್‌ನಂತಹ ತಂತ್ರಜ್ಞಾನಗಳು ಇಂದು ತೀರಾ ಸಾಮಾನ್ಯ ಎನಿಸುವ ಮಟ್ಟ ತಲುಪಿವೆ. ಅಲೆಕ್ಸಾ, ಸಿರಿ ಮುಂತಾದ ತಂತ್ರಜ್ಞಾನಗಳನ್ನು ಬಳಸಿ ಯಂತ್ರಗಳೊಡನೆ ಸಂಭಾಷಿಸುವಂತಹ, ಹಿಂದೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಿದ್ದ ಸನ್ನಿವೇಶಗಳನ್ನೆಲ್ಲ ಇದೀಗ ಎಐ ಸಾಧ್ಯವಾಗಿಸುತ್ತದೆ. ಮುಂದೆ ಇವೂ ಸಾಮಾನ್ಯವೆನಿಸುವ ಮಟ್ಟ ತಲುಪಿದಾಗ, ಸಂಪೂರ್ಣ ಹೊಸತಾದ ಬೇರೆಯವೇ ತಂತ್ರಜ್ಞಾನಗಳು ಎಐ ಸಹಾಯದಿಂದ ಕಾರ್ಯರೂಪಕ್ಕೆ ಬರಬಹುದು ಎನ್ನಲಾಗುತ್ತಿದೆ. ಹೀಗಾಗಿಯೇ, "ಈವರೆಗೆ ಏನನ್ನು ಮಾಡಲಾಗಿಲ್ಲವೋ ಅದೇ ಎಐ" (AI is whatever hasn't been done yet) ಎಂಬ ಹೇಳಿಕೆ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲಿ ಚಾಲ್ತಿಯಲ್ಲಿದೆ.
ಎಐ ಉಪಯೋಗಗಳೇನು?
ಎಐ ಎಂದತಕ್ಷಣ ಅತ್ಯಂತ ವಿಶಿಷ್ಟವಾದ ಅನ್ವಯಗಳು ನಮ್ಮ ಮನಸ್ಸಿಗೆ ಬರುತ್ತವೆ. 2018 ರಲ್ಲಿ ಪ್ರಕಟವಾಗಿದ್ದ '1 the Road' ಎಂಬ ಇಂಗ್ಲೀಷ್ ಕಾದಂಬರಿ ಇದಕ್ಕೊಂದು ಉದಾಹರಣೆ. ಮನುಷ್ಯ ಕಾದಂಬರಿಕಾರರು ತಮ್ಮ ಕಲ್ಪನೆ ಮತ್ತು ಅಧ್ಯಯನಗಳನ್ನು ಬಳಸುವ ಹಾಗೆ ಈ ಕಾದಂಬರಿ ಬರೆದ ಕಂಪ್ಯೂಟರು ಅನೇಕ ಸೆನ್ಸರುಗಳ ಸಹಾಯ ಪಡೆದುಕೊಂಡಿತ್ತು. ಕಾರಿನಲ್ಲಿ ಪಯಣಿಸುವಾಗ ಈ ಸೆನ್ಸರುಗಳು ಗಮನಿಸಿದ ಸಂಗತಿಗಳ ಹೂರಣವನ್ನು ಅದೇ ಬರಹರೂಪಕ್ಕೆ ತಂದು ಕಾದಂಬರಿಯ ರೂಪದಲ್ಲಿ ಪ್ರಸ್ತುತಪಡಿಸಿತ್ತು.
ಇಂತಹ ಹೊಸ ಅನ್ವಯಗಳನ್ನು ಪ್ರದರ್ಶಿಸುವುದಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಈಗಾಗಲೇ ಬಳಸುತ್ತಿರುವ ಅನೇಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಬದಲಾವಣೆ ತರುವ ಸಾಮರ್ಥ್ಯವೂ ಎಐ ಪರಿಕಲ್ಪನೆಗೆ ಇದೆ. ಇಂದಿನ ಜಗತ್ತಿನಲ್ಲಿ ಅಗಾಧ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ದತ್ತಾಂಶವನ್ನು (ಡೇಟಾ) ಬಳಸಿಕೊಂಡು ಇದು ಹೊಸ ಕೌಶಲಗಳನ್ನು ಕಲಿಯಬಲ್ಲದು, ಕ್ರಾಂತಿಕಾರಕವೆನಿಸುವ ಬದಲಾವಣೆಗಳನ್ನು ತರಬಲ್ಲದು. ಆರೋಗ್ಯ ರಕ್ಷಣೆ, ರೀಟೇಲ್, ಉತ್ಪಾದನೆ, ಬ್ಯಾಂಕಿಂಗ್ ಸೇರಿದಂತೆ ನಾವು ಊಹಿಸಿಕೊಳ್ಳಬಹುದಾದ ಎಲ್ಲ ಕ್ಷೇತ್ರಗಳಲ್ಲೂ ಎಐ ನೆರವಿನಿಂದ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಾಧ್ಯವಿದೆ.
ರೋಗಿಗಳಿಗೆ ಬೇಕಾದ ಮಾಹಿತಿಯನ್ನು ಅವರಿಗೆ ಬೇಕಾದ ರೂಪದಲ್ಲಿ ನೀಡುವುದಿರಲಿ, ಸೂಪರ್ ಮಾರ್ಕೆಟ್‌ನಲ್ಲಿ ಯಾವ ವಸ್ತುಗಳನ್ನು ಎಲ್ಲಿಡಬೇಕು ಎಂದು ತೀರ್ಮಾನಿಸುವುದಿರಲಿ - ಇದರಲ್ಲೆಲ್ಲ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಹಾಯ ಪಡೆದುಕೊಳ್ಳಬಹುದು. ಅಗಾಧ ಪ್ರಮಾಣದಲ್ಲಿ ನಡೆಯುವ ಹಣಕಾಸು ವ್ಯವಹಾರಗಳ ಮೇಲೆ ಕಣ್ಣಿಟ್ಟು ಸಂಭಾವ್ಯ ವಂಚನೆಗಳನ್ನು ಪತ್ತೆಹಚ್ಚುವುದು ಕೂಡ ಎಐ ಸಹಾಯದಿಂದ ಸಾಧ್ಯವಾಗುತ್ತದೆ. ವಸ್ತುಗಳ ಅಂತರಜಾಲದ (ಐಓಟಿ) ವ್ಯಾಪ್ತಿ ಹೆಚ್ಚಿದಂತೆ ಅದರಿಂದ ಅಗಾಧ ಪ್ರಮಾಣದ ದತ್ತಾಂಶ ಉತ್ಪಾದನೆಯಾಗುತ್ತದಲ್ಲ, ಆ ದತ್ತಾಂಶವನ್ನು ಸಂಸ್ಕರಿಸಿ ಉಪಯುಕ್ತ ಮಾಹಿತಿ ಪಡೆದುಕೊಳ್ಳುವುದಕ್ಕೂ ಎಐ ಸಹಾಯ ಮಾಡಬಲ್ಲದು.
ಹಾಗೆಂದು ಮುಂದಿನ ವರ್ಷಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮನುಷ್ಯನಿಗಿಂತ ಹೆಚ್ಚು ಬುದ್ಧಿವಂತಿಕೆ ಬೆಳೆಸಿಕೊಂಡು ಈ ಜಗತ್ತನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆಯೇ? ಅಂತಹ ಭಯ ಬೇಡವೇ ಬೇಡ ಎಂದು ತಜ್ಞರು ಹೇಳುತ್ತಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮನುಷ್ಯರಿಗೆ ಪರ್ಯಾಯವಾಗಿ ಬೆಳೆಯುತ್ತದೆ ಎನ್ನುವುದಕ್ಕಿಂತ ನಮ್ಮ ಪ್ರಯತ್ನಗಳ ಫಲವನ್ನು ಅಧಿಕಗೊಳಿಸಲು (ಆಗ್‌ಮೆಂಟ್) ನೆರವಾಗುತ್ತದೆ ಎನ್ನುವುದು ಅವರ ಅನಿಸಿಕೆ.