ಅಸ್ಸಾಮಿನ ಬುಡಕಟ್ಟು ಮಕ್ಕಳ ಬದುಕನ್ನೇ ಬದಲಿಸಿದ, ಐಐಟಿ ಖರಗ್‌ಪುರ ಹಳೆಯ ವಿದ್ಯಾರ್ಥಿಗಳ ಈ ಮಾದರಿ ಶಾಲೆ
ಅಸ್ಸಾಮಿನ ಗ್ರಾಮಒಂದರಲ್ಲಿ ಗ್ರಾಮಸ್ಥರಿಂದ, ಗ್ರಾಮಸ್ಥರಿಗಾಗಿ, ಗ್ರಾಮದ ಜನರ ಮಧ್ಯೆಯೇ ರೂಪುಗೊಂಡ ಶಾಲೆ ಹಮ್ಮಿಂಗ್ ಬರ್ಡ್. ಪ್ರಸ್ತುತ ಈ ಶಾಲೆ 15 ದಕ್ಷಶಿಕ್ಷಕರು ಮತ್ತು 11 ಬೋಧಕೇತರ ಸಿಬ್ಬಂದಿಯನ್ನು ಹೊಂದಿದ್ದು 240 ಬುಡಕಟ್ಟು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ಮಾತ್ರವಲ್ಲದೆ 19 ಗ್ರಾಮಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ.
ಅಸ್ಸಾಂನ ಮಜುಲಿ ದ್ವೀಪದಲ್ಲಿರುವ ಸ್ಥಳೀಯ ಸರ್ಕಾರಿ ಶಾಲೆಯೊಂದರಲ್ಲಿ 8 ನೆ ತರಗತಿ ವ್ಯಾಸಂಗ ಮಾಡುವ 12 ವರ್ಷದ ಅಪುನ್ ಡೊಲೇಗೆ ಇಂಗ್ಲಿಷ್ ನ್ನಾಗಲಿ ಅಥವಾ ತನ್ನ ಸ್ಥಳೀಯ ಭಾಷೆ ಅಸ್ಸಾಮಿಯನ್ನಾಗಲಿ ಓದಲು, ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಒಳ್ಳೆಯ ವಿದ್ಯಾಭ್ಯಾಸಕ್ಕೆ ಪೂರಕವಾದ ಪಠ್ಯಕ್ರಮ ಹಾಗೂ ಇತರ ಸೌಲಭ್ಯಗಳ ಕೊರತೆಯಿಂದಾಗಿ ಅಪುನ್ ತೀವ್ರ ಕಷ್ಟಪಡುತ್ತಿದ್ದಳು.
ಇದನ್ನು ಮನಗಂಡ ಅಪುನ್ ರವರ ತಾಯಿ ಆಕೆಯನ್ನು 2017 ನೆ ಇಸವಿಯ ಪ್ರಾರಂಭದಲ್ಲೇ ಹಮ್ಮಿಂಗ್ ಬರ್ಡ್ ಶಾಲೆಗೆ ಸೇರಿಸಿದರು. ಅಲ್ಲಿ ಅಪುನ್ ಅಸ್ಸಾಮಿ ಇಂಗ್ಲೀಷ್ ಹಾಗೂ ಗಣಿತ ವಿಷಯಗಳನ್ನು ಅಧ್ಯಯನಕ್ಕಾಗಿ ಆಯ್ದುಕೊಂಡರು. 2 ವರ್ಷಗಳ ಬಳಿಕ ಅದೇ ಅಪುನ್ ಅಸ್ಸಾಮಿ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಿರರ್ಗಳವಾಗಿ ಮತನಾಡುವುದಲ್ಲದೆ ವಿದ್ಯಾರ್ಥಿ ಪರಿಷತ್ತನ ಅಧ್ಯಕ್ಷೆ ಆಗಿ ಕೂಡಾ ಆಯ್ಕೆಗೊಂಡಿದ್ದಾಳೆ. ಮುಂದೆ ತಾನು ಕಲಿತ ಶಾಲೆಯಲ್ಲಿಯೇ ಪ್ರಾಂಶುಪಾಲರಾಗಬೇಕೆಂಬುದು ಆಕೆಯ ಕನಸು.
2017 ರ ಪ್ರಾರಂಭದಲ್ಲಿ ಅಪುನ್ ಮಾತ್ರವೇ ಹಮ್ಮಿಂಗ್ ಬರ್ಡ್ ನ ವಿದ್ಯಾರ್ಥಿ ಆಗಿದ್ದರು. ಆದರೆ ಇಂದು 240 ಬುಡಕಟ್ಟು ವಿದ್ಯಾರ್ಥಿಗಳು ಅಪುನ್ ಅವರ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ. ಕಾನನದ ಮೂಲೆಯಲ್ಲಿ ಜೀವಿಸುತ್ತಿರುವ ಆದಿವಾಸಿ ಮಕ್ಕಳ 'ಉತ್ತಮ ಗುಣಮಟ್ಟದ ಶಿಕ್ಷಣ' ಪಡೆಯಬೇಕೆಂಬ ಕನಸನ್ನು ನನಸು ಮಾಡಿದ ಐಐಟಿ ಪದವೀಧರರಾದ ಬಿಪಿನ್ ಧಾನೇ ಹಾಗೂ ಅವರ ತಂಡದವರಿಗೆ ಚಿರರುಣಿಗಳಾಗಿದ್ದಾರೆ. ಹಮ್ಮಿಂಗ್ ಬರ್ಡ್ ಇಂದು 15 ದಕ್ಷ ಶಿಕ್ಷಕರು ಹಾಗೂ 11 ಬೋಧಕೇತರ ಸಿಬ್ಬಂದಿಗಳೊಂದಿಗೆ 19 ಹಳ್ಳಿಗಳಲ್ಲಿ ಸೇವೆಸಲ್ಲಿಸುತ್ತಿದೆ.
ಐಐಟಿ ಪಧವೀಧರರ ಯಶೋಗಾಥೆ
ಐಐಟಿ-ಖರಗ್‌ಪುರದ ಹಳೆಯ ವಿದ್ಯಾರ್ಥಿ ಬಿಪಿನ್ ಧಾನೆ (30 ವರ್ಷ) 2017 ರ ಆರಂಭದಲ್ಲೇ ಹಮ್ಮಿಂಗ್ ಬರ್ಡ್ ಶಾಲೆಯನ್ನು ಆರಂಭಿಸಿ ಪ್ರಸ್ತುತ 240 ವಿದ್ಯಾರ್ಥಿಗಳ ಭವಿಷ್ಯದ ಬೆಳಕಾಗಿದ್ದಾರೆ. ಬಿಪಿನ್ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡ ಸ್ವಲ್ಪ ಸಮಯಕ್ಕೆ ಅವರ ಐಐಟಿ ಸಹಪಾಠಿ ವತನ್ ಸೈನಿ (ಜುಲೈ 2017 ರಲ್ಲಿ) ಉಪ-ಪ್ರಾಂಶುಪಾಲರಾಗಿ, ಆದಿವಾಸಿ ಕುಟುಂಬಗಳನ್ನು ಸಂಪರ್ಕಿಸಿ ಅವರಲ್ಲಿ ಶಿಕ್ಷಣದ ಕುರಿತು ಅರಿವು ಮೂಡಿಸಲು ಇನ್ನೋರ್ವ ಐಐಟಿ ಪದವೀದರರಾದ ಧರಮ್‌ಜೀತ್ ಕುಮಾರ್ (27) ಮತ್ತು ಪಠ್ಯಕ್ರಮ ರಚನೆಯ ಉಸ್ತುವಾರಿ ನೋಡಿಕೊಳ್ಳಲು ಕೋಸ್ಟರಿಕಾ ವಿಶ್ವವಿದ್ಯಾಲಯದ ಅಶ್ವತಿ ಪ್ರೀಥ ಜಯಕುಮಾರ್ (27) ಆಗಮಿಸಿ ಬಿಪಿನ್ ರವರೊಂದಿಗೆ ಕೈಜೋಡಿಸಿದರು.
"ಶಾಲೆಯನ್ನು ನಿರ್ಮಿಸುವುದು ನನ್ನ ಮೂಲ ಉದ್ದೇಶವಾಗಿರಲಿಲ್ಲ, ಆದರೆ ಆ ಸಮಯದಲ್ಲಿ ಇಲ್ಲಿನ ಸಮುದಾಯದ ಜನರಿಗೆ ತಮ್ಮ ಮಕ್ಕಳು ಒಂದು ಒಳ್ಳೆಯ ಶಾಲೆಯಲ್ಲಿ ಓದಬೇಕು ಎಂಬುದು ಒಂದು ಕನಸಾಗಿತ್ತು," ಎಂದು ಬಿಪಿನ್ ಹೇಳುತ್ತಾರೆ
ಕಾಡಿನೊಳಗೆ ಆದಿವಾಸಿ ಜನರು ವಾಸಿಸುವ ಸ್ಥಳಗಳಲ್ಲಿ ಶಾಲೆಯನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ. ಶಾಲೆ ಕಟ್ಟಡದೊಂದಿಗೆ ಮಕ್ಕಳಿಗೆ ಕಲಿಕೆಗೆ ಪೂರಕವಾದ ಇತರ ಸೌಕರ್ಯಗಳನ್ನು ಒದಗಿಸುವುದು ಇನ್ನೊಂದು ದೊಡ್ಡಸವಾಲೇ ಸರಿ. ಆದರೆ 19 ಗ್ರಾಮಗಳ ಸಹಕಾರದಿಂದ, ಗ್ರಾಮಸ್ಥರೇ ದೇಣಿಗೆ ನೀಡಿದ 3 ಎಕರೆ ಜಾಗದಲ್ಲಿ ಬಿಪಿನ್ಅವರು ಶಾಲೆಯನ್ನು ನಿರ್ಮಿಸಿದರು.
ಕೇವಲ ಜಾಗಮಾತ್ರವಲ್ಲದೆ ಗ್ರಾಮಸ್ಥರು ಶಾಲೆ ನಿರ್ಮಾಣಕ್ಕಾಗಿ ಮರದ ದಿಂಬಿ, ಬಿದಿರು ಮೊದಲಾದವುಗಳನ್ನು ನೀಡಿ, ಮೂರುವರೆ ತಿಂಗಳಲ್ಲೇ ಒಂದು ಶಾಲೆ ನಿರ್ಮಾಣವಾಗುವಂತೆ ಸಹಕರಿಸಿದರು. ಬಿಪಿನ್ ತಮ್ಮ ಮಾತಿನಲ್ಲೇ ಹೇಳುವಂತೆ, "ನಮ್ಮ ಶಾಲೆ ಇಂದಿಗೂ ಪರಿಪೂರ್ಣವಾಗಿಲ್ಲ, ಪ್ರತಿ ವರ್ಷ ಮಕ್ಕಳ ಜ್ಞಾನದ ವಿಸ್ತರಣೆಗೆ, ಬೆಳವಣಿಗೆಗೆ ಪೂರಕವಾಗುವ೦ತ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದೊಂದು ನಿರಂತರ ಪ್ರಕ್ರಿಯೆ."
ಗ್ರಾಮಸ್ಥರ ಸಹಕಾರ ಪಡೆದು ಶಾಲೆ ಆರಂಭಿಸಿದ ಬಿಪಿನ್ ರವರಿಗೆ ಇನ್ನೂ ಹಲವು ಸವಾಲುಗಳು ಎದುರಾದವು. ಪ್ರಾರಂಭದಲ್ಲಿ ಮನೆ ಮನೆಗೆ ಹೋಗಿ ಹೆಣ್ಣುಮಕ್ಕಳ ಹೆತ್ತವರನ್ನು ಭೇಟಿ ಮಾಡಿ ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಅರಿವು ಮೂಡಿಸುತ್ತಿದ್ದರು. ಅದರ ಫಲವಾಗಿ ಇಂದು ಹಮ್ಮಿಂಗ್ ಬಿರ್ಡ್ ನ ಒಟ್ಟು ಮಕ್ಕಳಲ್ಲಿ ಶೇಕಡ 60 ಪ್ರತಿಶತ ವಿದ್ಯಾರ್ಥಿನಿಯರೆ ಇದ್ದಾರೆ.
ತಮ್ಮ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ವಿವರಿಸುತ್ತಾ ಬಿಪಿನ್ ಹೀಗೆ ಹೇಳುತ್ತಾರೆ,
"ನಮಲ್ಲಿ 3 ರೀತಿಯ ವಿದ್ಯಾರ್ಥಿಗಳಿದ್ದಾರೆ- ಉಚಿತವಾಗಿ ವಿದ್ಯಾಭ್ಯಾಸ ಪಡೆಯುವವರು, 250 ರೂಪಾಯಿ ಪ್ರತಿ ತಿಂಗಳು ಪಾವತಿಸಿ ಶಿಕ್ಷಣ ಪಡೆಯುವವರು ಹಾಗೂ ಕೆಲ ಪ್ರಾಯೋಜಿತ ಸಂಘ ಸಂಸ್ಥೆಗಳಿಂದ 1200 ರೂಪಾಯಿಗಳನ್ನು ಪಡೆದು ವಿದ್ಯಾಭ್ಯಾಸ ಪಡೆಯುವವರು."
ಇದೆಲ್ಲದರೊಂದಿಗೆ ತಮ್ಮ ಶಾಲೆಯನ್ನು ಸದಾ ಕಾರ್ಯ ಚಟುವಟಿಕೆಯಿಂದ ಕೂಡಿರಲು ಹಾಗೂ ತಮ್ಮ ಸಹೋದ್ಯೋಗಿಗಳಿಗೆ ವೇತನ ನೀಡಲು ಬಿಪಿನ್ ನಿರಂತರವಾಗಿ ಹಣವನ್ನೂ ಕ್ರೋಡೀಕರಿಸುತ್ತಿರುತ್ತಾರೆ.
ಉಪಕ್ರಮವನ್ನು ಉತ್ತೇಜಿಸಲು ಮತ್ತು ಕೊಡುಗೆದಾರರನ್ನು ಆಹ್ವಾನಿಸಲು ಶಾಲೆಯು ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ಅನ್ನು ಬಳಸುತ್ತದೆ.
ವಾರ್ಷಿಕ ವರದಿಯ ಪ್ರಕಾರ, 240 ವಿದ್ಯಾರ್ಥಿಗಳಲ್ಲಿ 60 ಹಾಸ್ಟೆಲ್ ನಲ್ಲಿ ಇರುವ ಹಾಗೂ 40 ಮನೆಯಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಉಚಿತ ಶಿಕ್ಷಣ ನೀಡುತ್ತಿದೆ. ಹಾಸ್ಟೆಲ್ ವ್ಯವಸ್ಥೆ ಬಹುಪಾಲು ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ಮುಂದುವರೆಸಲು ಸಹಕಾರಿಸಿದೆ.
ಹಮ್ಮಿಂಗ್ ಬರ್ಡ್ ಯಾವುದೇ ನಿರ್ದಿಷ್ಟ ಮಂಡಳಿಯ ಪಠ್ಯಕ್ರಮವನ್ನು ಅನುಸರಿಸದಿದ್ದರೂ (ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಂದ ಕಲಿಸಲಾಗುತ್ತದೆ), ಶೀಘ್ರದಲ್ಲೇ ಸಿಬಿಎಸ್‌ಇಯಂತಹ ಪಠ್ಯಕ್ರಮವನ್ನು ತಮ್ಮ ವಿದ್ಯಾರ್ಥಿಗಳಿಗೆ ಅಳವಡಿಸಿಕೊಳ್ಳಲು ಯೋಜನೆಯನ್ನು ರೂಪಿಸುತ್ತಿದೆ.
ಬುಡಕಟ್ಟು ವಿದ್ಯಾರ್ಥಿಗಳ ಜೀವನವನ್ನು ಪರಿವರ್ತಿಸುವ ಆಶಾಕಿರಣ
70 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಶಾಲೆಯು 2017 ರಲ್ಲಿ 110 ವಿದ್ಯಾರ್ಥಿಗಳಿಗೆ ಮತ್ತು 2018 ರಲ್ಲಿ 210 ವಿದ್ಯಾರ್ಥಿಗಳಿಗೆ ಏರಿಕೆ ಕಂಡಿದೆ. ಈ ಹಿಂದೆ ವಿದ್ಯಾರ್ಥಿಗಳ ದಾಖಲಾತಿಗೆ ಯಾವುದೇ ಮಿತಿಯನ್ನಿರಿಸಿಲ್ಲ, ಆದರೆ ಈ ವರ್ಷದಿಂದ ಶಾಲೆಯು ಈಗ ಸೀಮಿತ ಪ್ರವೇಶಾತಿಯನ್ನು ನಿಗದಿ ಮಾಡಿದೆ (ಇದು 240 ವಿದ್ಯಾರ್ಥಿಗಳನ್ನು ಹೊಂದಿದೆ).
ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಅಸ್ಸಾಮೀಸ್, ಹಿಂದಿ ಮತ್ತು ಇಂಗ್ಲಿಷ್ ಮತ್ತು ಇತರ ಜೀವನ ಕೌಶಲ್ಯಗಳನ್ನು ಕಲಿಸಲಾಗುತ್ತದೆ. “ಶಾಲಾ ದಿನ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 3.00 ರವರೆಗೆ. ವಿದ್ಯಾರ್ಥಿಗಳು ಬಯಸಿದರೆ, ನೇಯ್ಗೆ ಕಲಿಯಲು ನಾವು ಕೈಮಗ್ಗ ದಿಂದ ನೇಯಲು ಕಲಿಸುತ್ತೇವೆ. ಮಧ್ಯಾಹ್ನ 2.00 ರಿಂದ ಮಧ್ಯಾಹ್ನ 3.00 ರವರೆಗೆ ಸಂಗೀತ ತರಬೇತಿಯನ್ನು ಸಹ ನೀಡುತ್ತೇವೆ” ಎಂದು ಬಿಪಿನ್ ಹೇಳುತ್ತಾರೆ.
ಹಮ್ಮಿಂಗ್ ಬರ್ಡ್ ಕೇವಲ ಪಠ್ಯ ಪುಸ್ತಕಗಳ ವಿಷಯವನ್ನೇ ಮಕ್ಕಳಿಗೆ ಬೋಧಿಸುತ್ತಿಲ್ಲ. ಬಿದಿರಿನ ನೇಯ್ಗೆ, ಕೃಷಿ ಪದ್ಧತಿಗಳು, ಫುಟ್ಬಾಲ್, ಕುಂಗ್ ಫೂ, ಸಾವಯವ ತೋಟಗಳು ಮತ್ತು ಸಾಂಪ್ರದಾಯಿಕ ಕಲೆಗಳ ತರಬೇತಿಗಳನ್ನು ಸಹ ನೀಡುತ್ತದೆ. ಜೊತೆಗೆ ತನ್ನದೇ ಆದ 'ವಿದ್ಯಾರ್ಥಿ ಸಂಸತ್ತ'ನ್ನು ಸಹ ಹೊಂದಿದ್ದು ಎಳೆಯರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ.
ಹಮ್ಮಿಂಗ್ ಬರ್ಡ್ ಶಾಲೆಯು ಈ ಎಲ್ಲಾ ಹೆಗ್ಗಳಿಕೆಯೊಂದಿಗೆ ಪ್ರತಿವರ್ಷ ಕಠಿಣವಾದ ವಾರ್ಷಿಕ ಪ್ರವಾಹದ ಹಾನಿಯನ್ನು ಎದುರಿಸುತ್ತಿದೆ (ಅದು ಶಾಲೆಯನ್ನು ಭಾಗಶಃ ಮುಳುಗಿಸುತ್ತದೆ). ಈ ಅವಧಿಯಲ್ಲಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎತ್ತರದ ಜಾಗಕ್ಕೆ ಶಾಲೆಯನ್ನು ಸ್ಥಳಾಂತರಿಸುತ್ತಾರೆ.
ಮುಂದಿರುವ ಸವಾಲುಗಳು
ಬ್ರಹ್ಮಪುತ್ರ ನದಿತಟದಲ್ಲಿರುವ ಮಜುಲಿ ದ್ವೀಪವು ಸುಮಾರು 1,70,000 ಜನಸಂಖ್ಯೆಯನ್ನು ಹೊಂದಿದ್ದು 900 ಶಾಲೆಗಳು ಇಲ್ಲಿವೆ. ಇದಕ್ಕೆ 2016 ರಲ್ಲಿ ಜಿಲ್ಲಾ ಸ್ಥಾನಮಾನ ನೀಡಲಾಯಿತು ಮತ್ತು ಇದನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವದ ಅತಿದೊಡ್ಡ ನದಿ ದ್ವೀಪವೆಂದು ಪಟ್ಟಿ ಮಾಡಿದೆ.
"ಒಂದು ಶಾಲೆ ಮಜುಲಿ ದ್ವೀಪದ ಎಲ್ಲರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಅದಕ್ಕೆ ಹೆಚ್ಚಿನ ಶ್ರಮದ ಅಗತ್ಯವಿದೆ ಈ ಹಿನ್ನಲೆಯಲ್ಲಿ ನಾನು ನಮ್ಮ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವ ಉದ್ದೇಶ ನಮ್ಮದು” ಎನ್ನುತ್ತಾರೆ ಬಿಪಿನ್.
ತಮ್ಮ ಮಾದರಿ ಹಮ್ಮಿಂಗ್‌ಬರ್ಡ್ ಶಾಲೆಯಿಂದ ಉತ್ತಮ ಅಭ್ಯಾಸಗಳನ್ನು ಮರುಸೃಷ್ಟಿಸಲು ಬಿಪಿನ್ ಮತ್ತು ಅವರ ತಂಡವು ಈಗ ಇತರ ಶಾಲೆಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಆದಾಯ ಗಳಿಸಲು ಶಾಲೆಯನ್ನು ಮೀರಿದ ಚಟುವಟಿಕೆಗಳಿಗಾಗಿ ಈ ತಂಡವು 2017 ರಲ್ಲಿ ನೊಂದಾವಣೆಯಾದ ಅಯಾಂಗ್ ಟ್ರಸ್ಟ್ ಎಂಬ ಎನ್ ಜಿ ಓ ನೊಂದಿಗೆ ಕೈಜೋಡಿಸಿದೆ. ವಿಪ್ರೋ ಸೀಡಿಂಗ್ ಫೆಲೋಶಿಪ್, ಎಡುಮೆಂಟಮ್ ಮತ್ತು ಎನ್‌ಕೋರ್‌ಗೂ ಈ ತಂಡವನ್ನು ಆಯ್ಕೆ ಮಾಡಲಾಗಿದೆ.
ತಮ್ಮ ಮುಂದಿನ ಯೋಜನೆಗಳ ಕುರಿತು ಮಾತನಾಡಿದ ಬಿಪಿನ್,
"ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ನಾವು 6 ಸರಕಾರಿ ಶಾಲೆಗಳೊಂದಿಗೆ 4 ಖಾಸಿಗಿ ಶಾಲೆಯೊಂದಿಗೆ ಸಹಭಾಗಿತ್ವ ಹೊಂದಿದ್ದೆವೆ" ಎಂದರು
ವಿದ್ಯಾರ್ಥಿಗಳೊಂದಿಗೆ, ಶಿಕ್ಷಕರೊಂದಿಗೆ, ಹಾಗೂ ಸಮುದಾಯದೊಂದಿಗೆ ಕೆಲಸ ಮಾಡುವ ಹಮ್ಮಿಂಗ್‌ಬರ್ಡ್ ಶಾಲೆ ತನ್ನ ಅನುಭವಗಳನ್ನು ಉತ್ತಮ ಅಭ್ಯಾಸಗಳನ್ನು ತನ್ನ ಸಹಭಾಗಿತ್ವದಲ್ಲಿರುವ ಶಾಲೆಗಳೊಂದಿಗೆ ಹಂಚಿಕೊಳ್ಳುತ್ತದೆ.
ಹಮ್ಮಿಂಗ್ ಬರ್ಡ್ 15 ಇತರ ಸರಕಾರಿ ಶಾಲೆಗಳಿಗಾಗಿ ಸಂಚಾರಿ ಲೈಬ್ರೆರಿ ಹಾಗೂ ಸ್ಟೇಮ್ ಲ್ಯಾಬ್ ಕಾರ್ಯಕ್ರಮಗಳನ್ನು ಜಾರಿಗೆ ತಂದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತಿದೆ. ಶಿಕ್ಷಣದಲ್ಲಿ ಆಸಕ್ತಿಯನ್ನು ಹುಟ್ಟುಹಾಕಲು ಮತ್ತು ಮಕ್ಕಳು ಕ್ರಿಯಾಶೀಲರಾಗಿ ವಿವಿಧ ಕೌಶಲ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಗುಣವಾಗುವಂತೆ ಈ ವರ್ಷದ ಜುಲೈನಲ್ಲಿ "ಮಂಥನ್ ಫೆಲೋಶಿಪ್" ಅನ್ನು ಪ್ರಾರಂಭಿಸಿದ್ದಾರೆ.
ದೇಶದ ಭವಿಷ್ಯ ಆ ದೇಶದ ಶಾಲಾ ಆವರಣದಲ್ಲೇ ರೂಪುಗೊಳ್ಳುತ್ತದೆ ಎನ್ನುತ್ತಾರೆ ಜ್ಞಾನಿಗಳು. ಸ್ವಾತಂತ್ರ್ಯ ಬಂದು 72 ವರ್ಷಗಳ ಬಳಿಕವೂ ನಮ್ಮದೇಶದಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಎದ್ದುಕಾಣುತ್ತಿದೆ. ಆದರೆ ಅಸ್ಸಾಮಿನ ಈ ಬುಡಕಟ್ಟು ಜನರಿಗಾಗಿ ಐಐಟಿ ಖರಗ್‌ಪುರದ ವಿದ್ಯಾರ್ಥಿಗಳು ಕೈಕೊಂಡ ಸಾಧನೆ ಮಾತ್ರ ಆದರ್ಶಪ್ರಾಯ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.