ಕಂಬಳ ಗದ್ದೆಯ ಉಸೈನ್ ಬೋಲ್ಟ್
ಮೂಡುಬಿದರೆಯ ಮಿಜಾರಿನ ಶ್ರೀನಿವಾಸ್ ಗೌಡ ಅವರು ಐಕಳದಲ್ಲಿ ನಡೆದ ಕಂಬಳದಲ್ಲಿ ಕೇವಲ 9.55 ಸೆಕೆಂಡ್ ನಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸಿ ಜಗತ್ತಿನ ವೇಗದ ಓಟಗಾರ ಉಸೈನ್ ಬೋಲ್ಟ್ ಅವರ 9.57 ಸೆಕೆಂಡ್ ನ ದಾಖಲೆಯನ್ನು ಸರಿಗಟ್ಟಿದ್ದಾರೆ.
ನಮ್ಮ ದೇಶದ ಹಳ್ಳಿಗಳ ಜನಪದ ಕ್ರೀಡೆಗಳಲ್ಲಿ ಮಹತ್ತರವಾದ ಶಕ್ತಿ ಅಡಗಿದೆ, ಕರ್ನಾಟಕದ ಕರಾವಳಿಯ ಜಾನಪದ ಕ್ರೀಡೆ ಕಂಬಳ ಅಂತಹ ಅಪರೂಪದ ಕ್ರೀಡೆಗಳಲ್ಲಿ ಒಂದು. ಕೃಷಿಭೂಮಿಯನ್ನು ಕೇಸರು ಗದ್ದೆಯನ್ನಾಗಿಸಿ, ಎರಡು ಕೋಣಗಳನ್ನು ವರ್ಷಪೂರ್ತಿ ಕಂಬಳಕ್ಕಾಗಿಯೇ ಸಿದ್ಧಗೊಳಿಸಿ ಕಂಬಳದ ದಿನ ಅವುಗಳನ್ನು ಮದುವಣಿಗರಂತೆ ಶೃಂಗರಿಸಿ ಕಂಬಳದ ಗದ್ದೆಯಲ್ಲಿ ಓಡಿಸಿ ಅಪ್ಪಟ್ಟ ಕೃಷಿ ಸಂಸ್ಕೃತಿ ಯನ್ನು ಸಾರುವುದೇ ನಮ್ಮ ಕಂಬಳ.
ಇಲ್ಲಿ ಕಂಬಳದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವವರ ಪಾತ್ರ ಮುಖ್ಯವಾದದ್ದು. ಅವರ ವೇಗ, ಒಂದು ಕೈಯಲ್ಲಿ ಕೋಣವನ್ನು ಇನ್ನೊಂದು ಕೈಯಲ್ಲಿ ಬಾರುಕೋಲನ್ನು ಹಿಡಿದು ಕೆಸರುಗದ್ದೆಯಲ್ಲಿ ಮಿಂಚಿನ ವೇಗದಲ್ಲಿ ಓಡುವ ಸಾಹಸ ಸುಲಭದ ಮಾತಲ್ಲ.
ಇಂದು ನಾವು ಹೇಳಹೊರಟಿರುವುದು ಈ ಕೆಸರುಗದ್ದೆಯಲ್ಲಿ ದೇಶಕ್ಕೆ ಒಲಂಪಿಕ್ ಪದಕದ ಭರವಸೆಯ ಛಾಯೆ ಮೂಡಿಸಿದ ಮಂಗಳೂರಿನ ಸಮೀಪದ ಮುಡುಬಿದರೆಯ ಮಿಜಾರಿನ ಶ್ರೀನಿವಾಸ್ ಗೌಡ ಇವರ ಬಗ್ಗೆ.
ಮೂಲತಃ ಕಟ್ಟಡ ನಿರ್ಮಾಣದ ಕೆಲಸಗಾರರಾದ ಶ್ರೀನಿವಾಸ ಗೌಡ ಅವರಿಗೆ 28 ವರ್ಷ. ಕಂಬಳ, ಕೃಷಿ, ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರಿಗೆ ಕಂಬಳ ಅಚ್ಚುಮೆಚ್ಚು. ಈ ಹಿಂದೆ ವಿವಿಧ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ಕೀರ್ತಿಯನ್ನು ತಂದುಕೊಟ್ಟಿದ್ದು ಇತ್ತೀಚಿಗೆ ಮಂಗಳೂರಿನ ಐಕಳದಲ್ಲಿ ನಡೆದ ಕಂಬಳ. ಈ ಕಂಬಳದಲ್ಲಿ 100 ಮೀಟರ್ ಅನ್ನು ಕೇವಲ 9.55 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ, ಜಗತ್ತನ್ನೇ ನಿಬ್ಬೆರಗಾಗಿಸಿದ್ದಾರೆ.
ಏಕೆಂದರೆ ಜಗತ್ತಿನ ಮಿಂಚಿನ ವೇಗದ ಓಟಗಾರ ಜಮೈಕದ ಉಸೈನ್ ಬೋಲ್ಟ್ 2009 ರಲ್ಲಿ ನಡೆದ ಒಲಂಪಿಕ್ ನಲ್ಲಿ ಕೇವಲ 9.57ಸೆಕೆಂಡ್ ನಲ್ಲಿ 100 ಮೀ ದೂರವನ್ನು ಕ್ರಮಿಸಿ ವಿಶ್ವ ದಾಖಲೆ ಬರೆದಿದ್ದರು. ಆದರೆ ಈಗ ನಮ್ಮ ಮಿಜಾರಿನ ಯುವ ಪ್ರತಿಭೆ ಶ್ರೀನಿವಾಸ ಗೌಡ ಕೆಸರಿನಗದ್ದೆಯಲ್ಲಿ ಕೋಣಗಳಿದ್ದರೂ ಕೇವಲ 9.55ಸೆಕೆಂಡ್ ನಲ್ಲಿ 100 ಮೀಟರ್ ಅನ್ನು ಪೂರ್ಣಗೊಳಿಸಿ ಹುಸೇನ್ ಬೋಲ್ಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
"ಎಲ್ಲರೂ ನನ್ನನ್ನು ಅಪ್ರತಿಮ ಓಟಗಾರ ಉಸೈನ್ ಬೋಲ್ಟ್ ಅವರೊಂದಿಗೆ ಹೋಲಿಸುತ್ತಿದ್ದಾರೆ, ಆದರೆ ನಾನು ಓರ್ವ ಸಾಧಾರಣ ಕೇಸರುಗದ್ದೆಯಲ್ಲಿ ಓಡುವವ," ಎಂಬ ಶ್ರೀನಿವಾಸ್ ಅವರ ಮಾತು ಅವರ ಸೌಜನ್ಯವನ್ನು ತೋರಿಸುತ್ತದೆ, ವರದಿ ಔಟ್ ಲುಕ್.
ಶ್ರೀನಿವಾಸ್ ಅವರ ಈ ಸಾಧನೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ, ಭಾರತದಾದ್ಯಂತ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಆನಂದ ಮಹೇಂದ್ರ ಅವರು ತಮ್ಮ ಟ್ವೀಟರ್ ನಲ್ಲಿ ಶ್ರೀನಿವಾಸ ಅವರಿಂದ ಒಲಂಪಿಕ್ ನಲ್ಲಿ ಚಿನ್ನದ ಪದಕದ ಬಯಕೆಯನ್ನು ವ್ಯಕಪಡಿಸಿದ್ದಾರೆ.
ಭಾರತದ ಕ್ರೀಡಾ ಸಚಿವರಾದ ಕಿರಣ್ ರಜಿಜು ಅವರೇ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ಬರಲು ಆಹ್ವಾನಿಸಿದ್ದಾರೆ.
‘‘ಈಗಾಗಲೇ ರೈಲ್ವೆ ಟಿಕೆಟ್ ಬುಕ್ ಮಾಡಿದ್ದೇವೆ. ಗೌಡರು ಸೋಮವಾರ ದಿಲ್ಲಿ ತಲುಪಲಿದ್ದಾರೆ. ಅವರಿಗೆ ದೇಶದ ಪ್ರತಿಷ್ಠಿತ ತರಬೇತುದಾರರಿಂದ ತರಬೇತಿ ಒದಗಿಸಲು ನಾವು ಸಿದ್ಧರಿದ್ದೇವೆ,’’ ಎಂದು ಟ್ವೀಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಶ್ರೀನಿವಾಸ್ ಗೌಡ ಅವರ ಈ ಪ್ರತಿಭೆ ನಮ್ಮ ದೇಶದ ಹಳ್ಳಿಹಳ್ಳಿಗಳಲ್ಲಿ ಇನ್ನು ಎಲೆಮರೆಯ ಕಾಯಿಯಂತೆ ಇರುವ ಹಲವಾರು ಪ್ರತಿಭೆಗಳಿಗೆ ಸ್ಪೂರ್ತಿಯಾಗಿದೆ. ಶ್ರೀನಿವಾಸ್ ಗೌಡ ಅವರು ಒಳ್ಳೆಯ ತರಬೇತುದಾರರಿಂದ ತರಬೇತಿ ಪಡೆದು ಒಲಂಪಿಕ್ ನ ಚಿನ್ನದ ಪದಕದ ಕನಸನ್ನು ನನಸಾಗಿಸಲಿ ಎಂದು ಆಶಿಸೋಣ.