ದನದ ಕೊಟ್ಟಿಗೆಯಲ್ಲಿ ಅರಳಿದ ಪಾರಿಜಾತ ಶಾಲೆಯ ಘಮಲು ಇಂದು ಇಡೀ ದೇಶವನ್ನೇ ವ್ಯಾಪಿಸುತ್ತಿದೆ
ಅಸ್ಸಾಮಿನ ಬುಡಕಟ್ಟು ಜಿಲ್ಲೆ ಪಮೋಹಿಯ ಉತ್ತಮ್ ತೆರನ್ ಕೇವಲ 800 ರೂಪಾಯಿಗಳಲ್ಲಿ ದನದ ಕೊಟ್ಟಿಗೆಯಲ್ಲಿ ಪ್ರಾರಂಭಿಸಿದ ಶಾಲೆ ಇಂದು 500 ಹೆಚ್ಚುಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿದೆ.
ಒಮ್ಮೆ ನಮ್ಮ ದೇಶದ ಹೆಮ್ಮೆ, ಮಕ್ಕಳ ಹಕ್ಕುಗಳ ಹೋರಾಟಗಾರ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರು ಹೀಗೆಂದಿದ್ದರು,
“ಜಾಗತಿಕ ಮಟ್ಟದಲ್ಲಿ ಯುದ್ಧ ಶಸ್ತ್ರಾಸ್ತ್ರಗಳ ಮೇಲೆ ಮಾಡುವ ಒಂದು ದಿನದ ವೆಚ್ಚದಲ್ಲಿ, ಪ್ರಪಂಚದ ಎಲ್ಲಾ ಮಕ್ಕಳು ಶಾಲೆಯ ಮೆಟ್ಟಿಲನ್ನು ಏರಲು ಸಾಧ್ಯವಿರುವಾಗ, ಜಗತ್ತು ಬಡುವಾಗಿದೆ ಎಂದು ನಾನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ."
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಹಳೆಯ ನಾಣ್ಣುಡಿ ಇಂದು ಕೂಡ ಪ್ರಸ್ತುತ. ಉತ್ತಮ ಶಿಕ್ಷಣ, ಉತ್ತಮ ಆಹಾರ, ಒಳ್ಳೆಯ ಪರಿಸರ, ಆರೋಗ್ಯ, ಎಲ್ಲವೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯಗತ್ಯ. ಈ ಹಿನ್ನಲೆಯಲ್ಲಿ ಸರಕಾರ ಅದೆಷ್ಟೋ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ಇನ್ನು ವಿವಿಧ ಕಾರಣಗಳಿಗಾಗಿ ಶಾಲೆಯಿಂದ ದೂರವಿರುವ ಮಕ್ಕಳ ಸಂಖ್ಯೆ ಬಹಳಷ್ಟಿದೆ.
ಅದು ಬುಡಕಟ್ಟು ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಸ್ಸಾಮಿನ ಪುಟ್ಟ ಹಳ್ಳಿ ಪಮೋಹಿ. ಇಲ್ಲಿನ ಬಹುತೇಕ ಜನರು ಅನಕ್ಷರಸ್ಥರು, ಮಾತ್ರವಲ್ಲದೆ ಇದು ಮುಂದಿನ ತಲೆಮಾರಿಗೂ ವರ್ಗಗೊಳ್ಳುವ ಸಾಧ್ಯತೆ ಇಲ್ಲಿ ಹೆಚ್ಚಾಗಿದ್ದು, ಶಾಲೆಯು ದೂರವಿರುವ ಕಾರಣ ಇಲ್ಲಿನ ಮಕ್ಕಳು ಅನಕ್ಷರಸ್ಥರಾಗಿ ಉಳಿಯುವ ಸಂಭವ ಅಧಿಕವಾಗಿತ್ತು.
ಆದರೆ ಯಾವ ಜಿಲ್ಲೆ ಹೆಚ್ಚು ಅನಕ್ಷರಸ್ಥರನ್ನು ಹೊಂದಿತ್ತೂ ಇಂದು ಅದೇ ಜಿಲ್ಲೆ ಸ್ವರ್ಗ ಪುಷ್ಪ ಪಾರಿಜಾತದ ಹೆಸರಲ್ಲಿ ಶಾಲೆಯನ್ನು ತೆರೆದು ವಿವಿಧ ಕೌಶಲಗಳನ್ನು ಒಳಗೊಂಡ ವಿಧಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿದೆ.
ಇದಕ್ಕೆ ಕಾರಣರಾದವರು, ಪಮೋಹಿ ಉರಿನವರೇ ಆದ ಉತ್ತಮ ತೆರನ್. ಈ ಶಾಲೆ ಹುಟ್ಟಿಕೊಂಡ ಬಗೆಯೇ ಮೈನವಿರೇಳುಸುವಂಹದ್ದು. ತನ್ನೂರಿನ ಎಳೆಯ ಮಕ್ಕಳು ಹೊಲಗದ್ದೆಗಳಲ್ಲಿ ದುಡಿಯುವುದರ ಬದಲು, ಶಾಲೆಯ ಪಾಠಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಉತ್ತಮ್ ತಮ್ಮ ಜೇಬಿನಲ್ಲಿದ್ದ ಕೇವಲ 800 ರೂಪಾಯಿಗಳಲ್ಲಿ, 2003 ರಲ್ಲಿ ಮೊದಲಬಾರಿಗೆ ಪುಟ್ಟ ದನದ ಕೊಟ್ಟಿಗೆಯಲ್ಲಿ ಶಾಲೆಯನ್ನು ಪ್ರಾರಂಭಿಸಿಬಿಟ್ಟರು.
ಮೊದಲಿಗೆ ಕೇವಲ 32 ಜನ ವಿಧಾರ್ಥಿಗಳೊಂದಿಗೆ ಪ್ರಾರಂಭವಾದ ಈ ಶಾಲೆ ಹಲವಾರು ಕಠಿಣ ಸಂದರ್ಭಗಳನ್ನು ಎದುರಿಸಿದೆ. ಶಾಲೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ಸ್ವತಃ ಉತ್ತಮ್ ಮುಂದಾದರು. ಈ ಕುರಿತು ದಿ ಲಾಜಿಕಲ್ ಇಂಡಿಯನ್ ಜೊತೆಗೆ ಮಾತನಾಡಿದ ಉತ್ತಮ್ ಹೀಗೇನ್ನುತ್ತಾರೆ,
"ಈ ಕೆಲಸಗಳನ್ನು ನಾನು ಹಣದ ಅಪೇಕ್ಷೆಯಿಂದ ಮಾಡುತ್ತಿಲ್ಲ, ಹೃದಯಪೂರ್ವಕವಾಗಿ ಪ್ರೀತಿಯಿಂದ ಮಾಡುತ್ತಿದ್ದೇನೆ."
ಹೆತ್ತವರು ಪಾರಿಜಾತ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿರುವಾಗ ಉತ್ತಮ್ ಮಕ್ಕಳನ್ನು ಆಕರ್ಷಿಸಲು, ವಿವಿಧ ಚಟುವಟಿಕೆಗಳನ್ನು ಪರಿಚಯಿಸಿದರು. ಇಂಗ್ಲೀಷ್, ಹಿಂದಿ ಮತ್ತು ಅಸ್ಸಾಮಿ ಕಲಿಯುವುದರ ಜೊತೆಗೆ, ಮಣ್ಣು ಮತ್ತು ಮಣ್ಣಿನ ಆಟಿಕೆಗಳನ್ನು ತಯಾರಿಸಲು ಅವರು ಮಕ್ಕಳನ್ನು ಕೇಳುತ್ತಿದ್ದರು. ಕ್ರಮೇಣವಾಗಿ ಇದು ಸುತ್ತ ಮುತ್ತಲಿನ ಒಂಬತ್ತು ಬುಡಕಟ್ಟು ಹಳ್ಳಿಗಳಾದ ಪಮೋಹಿ, ಮಹಾಗುಪ್ರಾ, ಡಿಯೋಸುಟಲ್, ಗಾರ್ಚುಕ್, ಮೈನಾಖೊರಾಂಗ್, ಧಲ್ಬಾಮಾ, ನೋವಾಗಾನ್, ಗರೋಘುಲಿ ಮತ್ತು ಗರ್ಭಂಗಾದ ಹಿಂದುಳಿದ ವಿದ್ಯಾರ್ಥಿಗಳನ್ನು ಪಾರಿಜಾತ ಶಾಲೆ ಕೈಬೀಸಿ ಕರೆಯಿತು, ವರದಿ ದಿ ಲಾಜಿಕಲ್ ಇಂಡಿಯನ್.
2005 ರಲ್ಲಿ ಉತ್ತಮ್ ಭೋದ್ ಗಯಾ ಪ್ರವಾಸದಲ್ಲಿದ್ದಾಗ ಭೇಟಿಯಾದ ಜಪಾನಿನ ಪ್ರವಾಸಿಗರ ತಂಡವು ಅವರಿಗೆ ತಮ್ಮ ಶಾಲೆಯನ್ನು ವಿಸ್ತರಿಸಲು ಇನ್ನಷ್ಟು ಸಹಾಯ ಮಾಡಿತು. ಇಮೈಲ್ ಮೂಲಕ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಸ್ಥೆಗಳ ಸಹಾಯವನ್ನು ಪಡೆಕೊಳ್ಳಲು ಸಾಧ್ಯವಾಯಿತು. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಶಾಲೆಗೆ ಮೂಲಭೂತ ಸೌಕರ್ಯಗಳು ದಾನಿಗಳ ನೆರವಿನಿಂದ ಹರಿದುಬಂದಿತು.
ಇಂದು, ಅಕಾಡೆಮಿ ಪೂರ್ಣ ಪ್ರಮಾಣದ ಶಿಕ್ಷಣ ಸಂಸ್ಥೆಯಾಗಿದ್ದು, 512 ಬಡತನದಿಂದ ಬಳಲುತ್ತಿರುವ ಮಕ್ಕಳಿಗೆ ನರ್ಸರಿಯಿಂದ 10 ನೇ ತರಗತಿಯವರೆಗೆ ಶಿಕ್ಷಣ ನೀಡುತ್ತಿದೆ. ದೂರದ ಹಳ್ಳಿಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಮಾರು 60 ವಿಧಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉತ್ತಮ್ ಅವರ ಜೊತೆ 20 ಮಂದಿ ಶಿಕ್ಷಕರು ಕೈಜೋಡಿಸಿದ್ದಾರೆ. ಉತ್ತಮ್ ತಮ್ಮ ಈ ಪ್ರಯತ್ನಕ್ಕೆ
2011 ರಲ್ಲಿ, ಅವರು ಸಿಎನ್ಎನ್-ಐಬಿಎನ್ ರಿಯಲ್ ಹೀರೋ ಪ್ರಶಸ್ತಿಯನ್ನು ಪಡೆದಿದ್ದಾರೆ.
ದನದ ಕೊಟ್ಟಿಗೆಯಲ್ಲಿ ಆರಂಭಗೊಂಡ ಈ ಶಾಲೆ ತನ್ನದೇ ಆದ ಗ್ರಂಥಾಲಯವನ್ನು ಹೊಂದಿದೆ, ಮಾತ್ರವಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಕಂಪ್ಯೂಟರ್, ಹೊಲಿಗೆ, ಕ್ರೀಡೆ ಮತ್ತು ನೃತ್ಯ, ಸಮಗ್ರ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯ ಪ್ರಯತ್ನಗಳು ಇನ್ನೂ ಅಧಿಕಕೊಳ್ಳಲಿ, ಶಿಕ್ಷಣದ ಹಕ್ಕು ದೇಶದ ಕೊನೆಯ ಮಗುವಿಗೂ ದಕ್ಕಲಿ ಎಂದು ಆಶಿಸೋಣ.