ಹಸಿ ತ್ಯಾಜ್ಯವೆಂದು ಕಡೆಗಣಿಸಬೇಡಿ, ಅದು ಅನಿಲವಾಗಬಹುದು ನೋಡಿ

ದಿನನಿತ್ಯ ನಾವು ಬಳಸುವ ತರಕಾರಿ ಯಥೇಚ್ಛವಾಗಿ ಹಸಿ ಕಸವನ್ನು ಸೃಷ್ಟಿಸುತ್ತದೆ. ಅಷ್ಟೇ ಅಲ್ಲದೆ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಸೃಷ್ಟಿಯಾಗುವ ಕಸವೂ ಗಣನೀಯ ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದನ್ನು ಸುಮ್ಮನೆ ಎಸೆದು ದಂಡ ಮಾಡುವ ಬದಲು, ಅವುಗಳಿಂದ ಅಡುಗೆ ಅನಿಲವನ್ನು ತಯಾರಿಸಿದ್ದಾರೆ ಶೃತಿ ಅಹುಜಾ.

ಹಸಿ ತ್ಯಾಜ್ಯವೆಂದು ಕಡೆಗಣಿಸಬೇಡಿ, ಅದು ಅನಿಲವಾಗಬಹುದು ನೋಡಿ

Tuesday October 22, 2019,

3 min Read

ಪ್ರತಿಕ್ಷಣವೂ ಹೊಸತನ್ನ ಕಂಡುಹಿಡಿಯುತ್ತಲೇ ಇರುವ ಈ ಪ್ರಪಂಚದಲ್ಲಿ ಪರಿಣಾಮಗಳಷ್ಟೇ ಹೇರಳವಾಗಿ ದುಷ್ಪರಿಣಾಮಗಳೂ ಇವೆ. ಮಾನವ ಟಯರ್‌ ಕಂಡುಹಿಡಿದ, ಅವು ಉಪಯೋಗಗೊಂಡು ಹಳತಾಗುತ್ತಲೆ ಅವನ್ನು ಸುಟ್ಟ, ವಾಯುವನ್ನು ಮಾಲಿನ್ಯಗೊಳಿಸಿದ. ಕಾರ್ಖಾನೆಗಳು ತಲೆ ಎತ್ತಿದವು ಅದರ ಗಲೀಜನ್ನು ನದಿಪಾತ್ರಕ್ಕೆ ಬಿಡಲಾಯಿತು, ಜಲಮಾಲಿನ್ಯವಾಯಿತು. ಹೀಗೆ ಒಂದಿಲ್ಲೊಂದು ಮಾಲಿನ್ಯಕ್ಕೆ ಕಾರಣನಾಗಿ ಕ್ಲೈಮೇಟ್‌ ಚೇಂಜ್‌ ಆಗ್ತಿದೆ ಅಂತ ಬೀದಿಗಿಳಿದ ಮತ್ತದೇ ಮರುಬಳಕೆಗೆ ಬಾರದ ಬ್ಯಾನರ್‌ ಹಿಡಿದ! ಇಂತಹವರ ಮಧ್ಯೆ ಸದ್ಭುದ್ದಿಯ ಜನರು ವಿಜ್ಞಾನಿಗಳ, ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತರ, ಬದಲಾವಣೆಯರುವಾರಿಗಳ ರೂಪದಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿರೋದು ಈ ಭೂಮಿ ಇನ್ನಷ್ಟು ಸಹಸ್ರ ವರ್ಷಗಳು ಉಳಿಯಬಹುದು ಎಂಬುದಕ್ಕೆ ಸಾಕ್ಷಿ.


ಟ

ಶೃತಿ ಅಹುಜಾ (ಚಿತ್ರಕೃಪೆ: ದಿ ಬೆಟರ್‌ ಇಂಡಿಯಾ)


ಆ ರೀತಿಯ ಜನರು ಸಿಗುವುದೇ ಅಪರೂಪ ಅಂತಹದರಲ್ಲಿ ಅವರ ಬಗ್ಗೆ ತಿಳಿದುಕೊಳ್ಳದೆ ಇದ್ದರೆ ನಾವು ಶ್ರೇಷ್ಠವಾದ್ದನ್ನ ಕಳೆದುಕೊಂಡಂತೆ. ಅಂತಹ ತೆರೆಮರೆಯ ಸಾಧಕಿ ಶೃತಿ ಅಹುಜಾ.


ಕೈತುಂಬ ಸಂಬಳ ಸಿಗುವ ಕೆಲಸ ಮಾಡುತ್ತ, ಹವಾ ನಿಯಂತ್ರಣ ಕೊಠಡಿಯಲ್ಲಿ ಇಡೀ ದಿನ ಸಮೃದ್ಧವಾಗಿ ಬದುಕುತ್ತಿದ್ದ ಶೃತಿ ಭಾರತದಲ್ಲೊಂದು ಸಾಮಾಜಿಕ ಸಮಸ್ಯೆಯನ್ನ ಪರಿಹರಿಸಲಿಕ್ಕೆಂದೇ ತಮ್ಮ ಮಾತೃ ದೇಶಕ್ಕೆ ಬಂದವರು. 2010ರಲ್ಲಿ ನವೋದ್ಯಮವನ್ನ ಸ್ಥಾಪಿಸಲು ತಮ್ಮ ಹುಟ್ಟೂರು ಹೈದರಾಬಾದಿಗೆ ಬಂದರು. ಅವರ ಈ ಉದ್ಯಮ ಸಾಮಾಜಿಕವಾಗಿ ಇಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆಂದು ಅವರೂ ಅಂದಾಜಿಸಿರಲಿಲ್ಲ.

ಕಸದಿಂದ ರಸವಲ್ಲ – ಅನಿಲ!

2012 ರಲ್ಲಿ ತಮ್ಮ ಅಹುಜಾ ಎಂಜಿನಿಯರಿಂಗ್‌ ಸರ್ವೀಸಸ್‌ ಸಂಸ್ಥೆಯನ್ನು ಸ್ಥಾಪಿಸಿದ ಶೃತಿ ತಮ್ಮ ಉದ್ಯಮದ ಮೂಲಕ 12,000 ಟನ್‌ ಸಾವಯುವ ತ್ಯಾಜ್ಯವನ್ನು ಸಂಗ್ರಹಿಸಿ 600+ ಟನ್‌ ಅಡುಗೆ ಅನಿಲವನ್ನು ತಯಾರಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಪೀಳಿಗೆಗೆ ಮಾರಕವಾಗಲಿದ್ದ ಸುಮಾರು ನಾಲ್ಕು ಲಕ್ಷ ಟನ್‌ನಷ್ಟು ಇಂಗಾಲವನ್ನು ಉತ್ಪತ್ತಿ ಆಗದಂತೆ ಮಾಡಿದ್ದಾರೆ. ಈಗ ಸುಮಾರು 7 ವರ್ಷಗಳ ನಂತರ ಅವರ ಸಂಸ್ಥೆಯ 16 ಬಯೋಗ್ಯಾಸ್‌ ಉತ್ಪತ್ತಿ ಕೇಂದ್ರವನ್ನು ಸ್ಥಾಪಿಸಿದ್ದಾರೆ 32ರ ಎಲೆಕ್ಟ್ರಿಕಲ್‌ ಇಂಜಿನಿಯರ್‌ ಶೃತಿ ಅಹುಜಾ.


(ಚಿತ್ರಕೃಪೆ: ಅಹುಜಾ ಎಂಜಿನಿಯರಿಂಗ್‌ ಸರ್ವೀಸಸ್‌)




ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಚಿಗುರಿದ ನವೋದ್ಯಮದ ಕನಸು

ಭಾರತಕ್ಕೆ ಮರಳಿದ ಹೊಸತರಲ್ಲಿ ಉದ್ಯಮ ಸ್ಥಾಪನೆಗೆ ಪರಿಕಲ್ಪನೆಗಳನ್ನು ಯೋಚಿಸುತ್ತಿದ್ದ ಶೃತಿ ಒಮ್ಮೆ ತಮ್ಮ ತಂದೆಯೊಂದಿಗೆ ಕೋಳಿ ಸಕಾಣಿಕೆ ಕೇಂದ್ರವೊಂದಕ್ಕೆ ಭೇಟಿ ನೀಡಿದ್ದರು. ಆಗಲೆ ಅವರಿಗೆ ಪೌಲ್ಟ್ರಿ ಉದ್ಯಮದಲ್ಲಾಗುವ ತ್ಯಾಜ್ಯ ನಿರ್ವಹಣೆಯ ಕಷ್ಟ ಅರಿವಾದದ್ದು.


“ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಪ್ರತೀ ವರ್ಷ ಸುಮಾರು 23 ದಶಲಕ್ಷ ಟನ್‌ನಷ್ಟು ತ್ಯಾಜ್ಯ ಪೌಲ್ಟ್ರಿ ಕ್ಷೇತ್ರದಲ್ಲಿ ಉತ್ಪತ್ತಿಯಾಗುತ್ತದೆ ಹಾಗೂ ಅದನ್ನು ಅನಿಲವಾಗಿ ಬದಲಾಯಿಸಿದರೆ ಸುಮಾರು 270 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆ ಮಾಡಬಹುದು ಎಂಬುದನ್ನು ನಾನು ತಿಳಿದುಕೊಂಡೆ” ಎನ್ನುತ್ತಾರೆ ಶೃತಿ ಅಹುಜಾ, ವರದಿ ದಿ ಬೆಟರ್‌ ಇಂಡಿಯಾ.


ಪೌಲ್ಟ್ಟಿ ತ್ಯಾಜ್ಯವನ್ನ ಸರಿಯಾಗಿ ನಿರ್ವಹಿಸದೆ ಇದ್ದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳನ್ನ ತರಬಹುದು ಹಾಗೂ ಅದರಲ್ಲಿ ಶೇಖರಣೆಗೊಂಡ ನೈಟ್ರೋಜನ್‌, ಫಾಸ್ಫರಸ್‌ ನೀರನ್ನು ಮಲಿನಗೊಳಿಸುತ್ತದೆ ಹಾಗೂ ಅದರಿಂದ ಹೊರಹೊಮ್ಮಿದ ಅಮೋನಿಯಾ ಸೋಂಕು ತರಿಸುತ್ತದೆ.


ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೃತಿ ಜೈವಿಕ ತ್ಯಾಜ್ಯವನ್ನ ಅನಿಲವನ್ನಾಗಿ ಬದಲಾಯಿಸಬಲ್ಲ ಯಂತ್ರಗಳನ್ನ ತಯಾರಿಸುವ ಸಲುವಾಗಿ ಅಧ್ಯಯನ ಮಾಡಲು 2012 ರಲ್ಲಿ ಇಂಡಿಯನ್‌ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಸಿಎಸ್ಐಆರ್-ಐಐಸಿಟಿ)ಯ ಮುಖ್ಯ ವಿಜ್ಞಾನಿಯಾದ ಡಾ|| ಎ ಗಂಗಾಗ್ನಿ ರಾವ್‌ ಅವರನ್ನ ಸಂಪರ್ಕಿಸಿದರು.


(ಚಿತ್ರಕೃಪೆ: ಅಹುಜಾ ಎಂಜಿನಿಯರಿಂಗ್‌ ಸರ್ವೀಸಸ್‌)

ಐಐಸಿಟಿಯ ಸಹಯೋಗದಲ್ಲಿ ಶೃತಿ ಎಜಿಆರ್‌ ಎಂಬ ಆಮ್ಲಜನಕರಹಿತ ಅನಿಲ ಘಟಕವನ್ನು ತಯಾರಿಸುವಲ್ಲಿ ಕೆಲಸ ಮಾಡಿದರು. ಅದೇ ವರ್ಷ ಶೃತಿಯವರ ಸಂಸ್ಥೆಗೆ ಬಯೋಮೀತೆನೇಷನ್‌ ತಂತ್ರಜ್ಞಾನ ಬಳಸಲಿಕ್ಕೆ ಪರವಾನಗಿಯೂ ದೊರೆಯಿತು. ತಮ್ಮೆಲ್ಲಾ ಅನುಭವವನ್ನು ಕ್ರೂಢಿಕರಿಸಿ ಒಂದು ಡೈಜೆಸ್ಟರ್‌ ತಯಾರಿಸಿದ ಶೃತಿ ಅದನ್ನು ಹೈದರಾಬಾದಿನ ಹೊರಹೊಲಯದಲ್ಲಿನ ತಮ್ಮ ಜಮೀನಿನಲ್ಲಿ ಸ್ಥಾಪಿಸಿದರು. ನಂತರದ ತಿಂಗಳುಗಳಲ್ಲಿ ಅವರು ತಮ್ಮ ತಂಡದೊಂದಿಗೆ ವಿವಿಧ ರೀತಿಯ ತ್ಯಾಜ್ಯವನ್ನು ಘಟಕದಲ್ಲಿ ಹಾಕಿ ಪರೀಕ್ಷಿಸಿದರು.


ಅವರಿಗೆ ತಮ್ಮ ವಿಶಿಷ್ಟ ಉತ್ಪನ್ನವನ್ನ ಮಾರುಕಟ್ಟೆಗೆ ತರುವುದು ಕಷ್ಟವೇ ಆಗಿತ್ತು. ಕಾರಣ ತ್ಯಾಜ್ಯ ನಿರ್ವಹಣೆಯ ವಿಷಯದಲ್ಲಿ ಜನರಿಗಿದ್ದ ದಿವ್ಯ ನಿರ್ಲಕ್ಷ್ಯ.


ಇದರ ಬಗ್ಗೆ ಮಾತನಾಡುತ್ತ ಶೃತಿ,


“ತ್ಯಾಜ್ಯ ನಿರ್ವಹಣಾ ವಲಯವು ಲಾಭದಾಯಕವಲ್ಲ ಎಂಬ ಮಾತಿದೆ. ಎಲ್ಲರ ಮನಸ್ಸಿನಲ್ಲೂ ತ್ಯಾಜ್ಯ ಕೊನೆಗೆ ಕಂದಕವನ್ನೇ ಸೆರಬೇಕು ಎಂಬ ಭ್ರಮೆ ಹರಡಿಕೊಂಡಿದೆ. ಅದರ ಸಾಮರ್ಥ್ಯವನ್ನ ಅರ್ಥ ಮಾಡಿಕೊಳ್ಳುವುದು ಕಷ್ಟವಿದೆ.


(ಚಿತ್ರಕೃಪೆ: ಅಹುಜಾ ಎಂಜಿನಿಯರಿಂಗ್‌ ಸರ್ವೀಸಸ್‌)




ತ್ಯಾಜ್ಯದಿಂದ ಅನಿಲವನ್ನ ತಯಾರಿಸುವ ತಂತ್ರಜ್ಞಾನವು ಕಸ ಶೇಖರಣೆಯ ಜಾಗಗಳಲ್ಲಿ ಉತ್ಪತ್ತಿಯಾಗುವ ಲೀಚೇಟ್‌ನ ಸಮಸ್ಯೆಯನ್ನೂ ಬಗೆಹರಿಸುತ್ತಿದೆ. ಈ ಲೀಚೇಟ್‌ಗಳು ಅಂತರ್ಜಲಕ್ಕೆ ಮಾರಕವಾಗುತ್ತವೆ.


ಬೃಹತ್‌ ಹೈದರಾಬಾದ್‌ ಮುನಿಸಿಪಲ್‌ ಕಾರ್ಪೊರೇಶನ್‌ ಪ್ರತಿದಿನ ಸಂಗ್ರಹಗೊಂಡ ಹಸಿ ತ್ಯಾಜ್ಯವನ್ನ ಪರಿಷ್ಕರಿಸಿ ಸುಮಾರು 5000 ಕಿಲೋದಷ್ಟು ತ್ಯಾಜ್ಯದಿಂದ 300 ಯುನಿಟ್‌ ವಿದ್ಯುತ್‌ ಉತ್ಪಾದಿಸುತ್ತಿದ್ದೆ.


ಸಿವಿಆರ್‌ ಕಾಲೇಜ್‌, ಒಸ್ಮಾನಿಯಾ ವಿಶ್ವವಿದ್ಯಾಲಯ, ತರಕಾರಿ ಮಾರುಕಟ್ಟೆ, ಐಐಸಿಟಿ ಹಾಗೂ ಕೇಪ್‌ಜಮಿನಿ ಕ್ಯಾಂಪಸ್‌ಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.


ತಮ್ಮ ತಂತ್ರಜ್ಞಾನದಿಂದ ಅಹುಜಾ ಇಂಜಿನಿಯರಿಂಗ್‌ ಸರ್ವೀಸಸ್‌ ಒಂದು ಟನ್‌ ತ್ಯಾಜ್ಯದಿಂದ 60 ಕಿಲೋ ಅನಿಲವನ್ನ ಉತ್ಪಾದಿಸುತ್ತದೆ. ಅಂದರೆ ನಾಲ್ಕು ಸಿಲಿಂಡರಿನಷ್ಟು! ಸಂಸ್ಥೆಯು ಮುಂದಿನ ದಿನಗಳಲ್ಲಿ ಹೋಟೆಲ್‌, ಅಹಾರ ಸಂಸ್ಕರಣ ಘಟಕ, ಧಾರ್ಮಿಕ ಕ್ಷೇತ್ರಗಳು ಹಾಗೂ ಬೃಹತ್‌ ಶಿಕ್ಷಣ ಸಂಸ್ಥೆಗಳಂತಹ ಬೃಹತ್‌ ತ್ಯಾಜ್ಯ ಉತ್ಪಾದಕರನ್ನು ಈ ಕಾರ್ಯಕ್ಕೆ ಸೇರಿಸಿಕೊಳ್ಳುವ ಸಂಕಲ್ಪ ಮಾಡಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.