ವಾಡಿಯ ಮಹಿಳೆಯರು: ಸಮುದಾಯ ಆಧರಿತ ಉದ್ಯಮದೊಂದಿಗೆ ಬಡತನದ ವಿರುದ್ಧ ಹೋರಾಟ
ವಾಡಿಯಲ್ಲಿನ ಸಮುದಾಯ ಉದ್ಯಮ ಕೇಂದ್ರವು ಮಹಿಳೆಯರನ್ನು ಸಶಕ್ತಗೊಳಿಸಿರುವುದಲ್ಲದೆ ಅವರಿಗೆ ಹೊಸ ದೃಷ್ಟಿಕೋನ ನೀಡಿದೆ.
ಗುಲ್ಬರ್ಗಾದ ವಾಡಿಯ ವಸತಿ ಪ್ರದೇಶದಲ್ಲಿ ಮುರಿದು ಬಿದ್ದ ಇಟ್ಟಿಗೆ ಗೋಡೆಗಳು ಕಿರಿದಾದ ರಸ್ತೆಗಳು ಕಾಣಸಿಗುತ್ತವೆ, ಇದು ಅಲ್ಲಿನ ಬಡತನದ ಸಂಕೇತ. ಒಂದಷ್ಟು ಇಟ್ಟಿಗೆಗಳನ್ನು ಒಂದರ ಮೇಲೊಂದರಂತೆ ಇಟ್ಟರೆ ಅದೆ ಒಲೆ, ಒಂದು ಸೀರೆಯನ್ನು ಹಾಕಿದರೆ ಅದೆ ಹೊರ ಜಗತ್ತಿನಿಂದ ಬೇರೆ ಮಾಡುವ ಬಾಗಿಲು.
ವಾಡಿ ಒಂದು ಪ್ರಮುಖ ರೈಲ್ವೆ ಜಂಕ್ಷನ್, ಆದರೆ ಇದು ಅಲ್ಲಿರುವ ಎರಡು ದೊಡ್ಡ ಎಸಿಸಿ ಸಿಮೆಂಟ್ ಸ್ಥಾವರದಿಂದ ಗುರುತಿಸಿಕೊಂಡಿದೆ, ಅಲ್ಲಿಗೆ ದೇಶದ ವಿವಿಧ ಭಾಗಗಳಿಂದ ಕೆಲಸ ಅರಿಸಿ ಬರುತ್ತಾರೆ. ಹಲವು ಗಂಡಸರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಆದರೆ ಮಹಿಳೆಯರಿಗೆ? ಅದೊಂದು ಬೇರೆ ಕತೆ.
ಮೂರು ವರ್ಷಗಳ ಹಿಂದೆ ಹೆಡ್ ಹೆಲ್ಡ್ ಹೈ ಪೌಂಡೇಶನ್ ಎಸಿಸಿಯ ಬೆಂಬಲದೊಂದಿಗೆ ವಾಡಿಯಲ್ಲಿ ಯುವ ಪರಿವರ್ತನಾ ಕಾರ್ಯಕ್ರಮವನ್ನು ಪ್ರಾರಂಭಿಸಿ ಅಲ್ಲಿನ ಸಮುದಾಯದ ಯುವಜನತೆಯನ್ನು ನೇಮಿಸಿಕೊಂಡಿತು. ಕಾರ್ಯಕ್ರಮದ ಧ್ಯೇಯವನ್ನು ಗಮನದಲ್ಲಿರಿಸಿಕೊಂಡು ಮಾಡಿದ ನೇಮಕಾತಿಯಲ್ಲಿ(ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರು) ವೈಯಕ್ತಿಕ ಅಥವಾ ಆರ್ಥಿಕ ಒತ್ತಡಗಳಿಂದ ಶಾಲೆ ಬಿಟ್ಟವರೆ ಇದ್ದರು.
ಆದರೆ ಮುಂದಿನ ನೇಮಕಾತಿಗಳಲ್ಲಿ ತಂಡಕ್ಕೆ ವಾಡಿಯಲ್ಲಿ ಬೇರೆ ಸಮಸ್ಯೆ ಇದೆ ಎಂದು ಮನದಟ್ಟಾಯಿತು.
ಹೆಡ್ ಹೆಲ್ಡ್ ಹೈನಲ್ಲಿ ಕಮ್ಯೂನಿಟಿ ಮ್ಯಾನೆಜ್ಮೆಂಟ್ ನಿಯಂತ್ರಿಸುವ ಅನುಷಾ ಸಕ್ಸೆನಾ ಮಾತನಾಡುತ್ತಾ, ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗಲು ಕುಟುಂಬದ ವಿರೋಧವಿರುವುದರಿಂದ ಮಹಿಳೆಯರು ಆ ಕೆಲಸಗಳನ್ನು ಒಪ್ಪಿಕೊಳ್ಳದಿರುವುದು ತಂಡದ ಗಮನಕ್ಕೆ ಬಂದಿತು. ಮದುವೆಯೊಂದನ್ನು ಬಿಟ್ಟು ಹೆಂಗಸರು ಮನೆಯಿಂದ ಹೊರಗೆ ಇರುವುದು ಅಲ್ಲಿ ಅಸಾಮಾನ್ಯವಾದ ಸಂಗತಿಯಾಗಿತ್ತು ಎಂದರು.
ನಾವು ಮತ್ತೆ ನಮ್ಮ ಯೋಜನೆಯನ್ನು ಪರಾಮರ್ಶಿಸಿ ಮಹಿಳೆಯರು ಉತ್ತಮ ಜೀವನ ನಿರ್ವಹಿಸಲು ನಗರಕ್ಕೆ ಬರುವುದೊಂದೆ ಪರಿಹಾರವೆ ಎಂಬ ಪ್ರಶ್ನೆಯನ್ನು ಕೇಳಿಕೊಂಡೆವು ಎನ್ನುತ್ತಾರೆ ಅನುಷಾ.
ಸಮುದಾಯ ಆಧರಿತ ಉದ್ಯಮವನ್ನು ಪ್ರಾರಂಭಿಸುವುದು
ಈ ಪ್ರಶ್ನೆಯಿಂದ ಮಹಿಳೆಯರಿರುವಲ್ಲೆ ಸಮುದಾಯ ಆಧರಿತ ಉದ್ಯಮವನ್ನು ಪ್ರಾರಂಭಿಸುವ ಯೋಜನೆ ಅಂತರ್ಪ್ರೇರಣಾದ ಪರಿಕಲ್ಪನೆ ಮೂಡಿತು.
ಮೊದಲ ಅಂತರ್ಪ್ರೇರಣಾ ಕೇಂದ್ರವನ್ನು ಪ್ರಾರಂಭಿಸುವುದಕ್ಕೂ ಮೊದಲು ವಾಡಿಯಲ್ಲಿ ಹಲವು ಅಡೆತಡೆಗಳಿದ್ದವು. ಮಹಿಳೆಯರು ಉತ್ತಮ ಆದಾಯವನ್ನು ಪಡೆಯಬಲ್ಲಂತಹ, ಮಾರುಕಟ್ಟೆ ಸಂಪರ್ಕಗಳಿರುವಂತಹ ಆರ್ಥಿಕ ಚಟುವಟಿಕೆಯನ್ನು ಗುರುತಿಸುವುದು ತಂಡದ ಕೆಲಸವಾಗಿತ್ತು.
ಎಂಟರ್ ಮೀಮಾನ್ಸಾ ಎಂಬ ಟೆಕ್ಸ್ಟೈಲ್ ಕಂಪನಿ ಬಳಸದ ಹೆಚ್ಚುವರಿ ಬಟ್ಟೆಯನ್ನು ಬ್ಯಾಗ್ ಮತ್ತು ಇತರ ಉಪಯೋಗಿ ವಸ್ತುಗಳಾಗಿ ಮಾರ್ಪಡಿಸುತ್ತದೆ. ಮನಿಷ್ ಕೊಠಾರಿ ಮತ್ತು ಪ್ರಿಯಾಂಕಾ ಬಾಪ್ನಾ ನೇತ್ರತ್ವದಲ್ಲಿರುವ ಮೀಮಾನ್ಸಾ ಸಮಾಜದ ಅಂಚಿನಲ್ಲಿರುವ ಮಹಿಳೆಯರನ್ನು ಈ ಪ್ರಯತ್ನದಲ್ಲಿ ಒಳಗೊಳ್ಳಲು ಆಸಕ್ತಿ ಹೊಂದಿತ್ತು.
ಯೋಜನೆಗೆ ಸ್ಥಳ, ಹೊಲಿಗೆ ಯಂತ್ರಗಳನ್ನು ನೀಡಲು ಮತ್ತು ನೇಮಕಾತಿ ಮಾಡಿಕೊಳ್ಳಲು ಎಸಿಸಿ ಮುಂದೆ ಬಂದಿತು, ಕಳೆದ ವರ್ಷದ ಅಗಸ್ಟ್ನಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದಿತು. ಸಪ್ಟೆಂಬರ್ನಲ್ಲಿ 43 ಮಹಿಳೆಯರು ತಮ್ಮ ತರಬೇತುದಾರರೊಂದಿಗೆ ಕೆಲಸ ಪ್ರಾರಂಭಿಸಲು ಸಿದ್ಧರಿದ್ದರು.
ಹೆಡ್ ಹೆಲ್ಡ್ ಹೈನ ಸಹಾಯಕ ತರಬೇತುದಾರರಾದ ಮತ್ತು ಕೇಂದ್ರ ಸ್ಥಾಪಿಸಲು ಮುಖ್ಯ ಪಾತ್ರ ವಹಿಸಿದ ಚಂದನಾ ಟಿ ಆರ್ ಮಾತನಾಡುತ್ತಾ ತಂಡವು ಮಹಿಳೆಯರಿಗೆ ಸಮಯಪ್ರಜ್ಞೆ ಮತ್ತು ವೃತ್ತಿಪರತೆಯ ಮಹತ್ವವನ್ನು ಒತ್ತಿ ಹೇಳಿತು. ಏಕೆಂದರೆ ವಾಡಿಯಲ್ಲಿ ಎಲ್ಲ ತರಹದ ಹಬ್ಬಗಳನ್ನು ಆಚರಿಸಲಾಗುತ್ತಿತ್ತು ಎಂದರು.
ಹೊಸ ಜೀವನ
ಇಲ್ಲಿರುವ ಮಹಿಳೆಯರ ಕತೆ ಬೇರೆ ಬೇರೆಯಾಗಿದ್ದರೂ ಅದರಲ್ಲೊಂದು ಸಾಮಾನ್ಯವಾದ ಎಳೆಯಿತ್ತು.
ಮನಮ್ಮ ಎಂಬ ಎರಡು ಮಕ್ಕಳ ತಾಯಿ, ಆಕೆಗೊಬ್ಬ ಕುಡುಕ ಗಂಡ, ಅವನು ತನ್ನ ಕುಡಿತಕ್ಕಾಗಿ ಸೀರೆ ಸೇರಿದಂತೆ ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ಮಾರಿದ್ದ.
ಸಂಸಾರದಿಂದ ಹೊರನಡೆದು ತವರುಮನೆಯಲ್ಲಿ ತನ್ನ ಅಣ್ಣನ ಕುಟುಂಬದೊಂದಿಗೆ ಇರುವ ಗಂಗಮ್ಮ. ಆದರೆ ಅವಳಿಗೆ ಆಗಾಗ ತಾನೊಬ್ಬಳು ಆರ್ಥಿಕ ಹೊರೆ ಎಂಬ ಯೋಚನೆ.
ರೇಣುಕಾ, ವಿಶೇಷ ಚೇತನ ಮಹಿಳೆ, ತಾಯಿ ಮತ್ತು ಅನ್ನನೊಂದಿಗಿದ್ದ ಅವರು ಎಂದು ವೈಯಕ್ತಿಕ ಸ್ವಾತಂತ್ರ್ಯವನ್ನು ಅನುಭವಿಸಿಲ್ಲ.
ಇಂತಹ ಎಲ್ಲ ಮಹಿಳೆಯರು ತಮ್ಮ ಕೆಲಸ ಮನೆ, ಮನೆಯವರನ್ನು ನೋಡಿಕೊಳ್ಳುವುದೆಂದು ನಿಗದಿಯಾದಂತಿದೆ. ಅಂತರ್ಪ್ರೇರಣಾ ಯೋಜನೆ ಬರುವವರೆಗೂ ಅವರ ಜೀವನ ಹೀಗೂ ಇರಬಹುದು ಎಂದು ಅವರು ಯೋಚಿಸಿರಲಿಲ್ಲ. ತಮ್ಮ ಕನಸುಗಳಿಗೆ ಅಲ್ಲಿ ಜಾಗವೆ ಇರಲಿಲ್ಲ.
ಪ್ರಾರಂಭದಲ್ಲಿ ಉತ್ಪಾದನಾ ಸಾಮರ್ಥ್ಯ ತುಂಬಾ ಕಡಿಮೆಯಿತ್ತು. ಮಹಿಳೆಯರು ದಿನಕ್ಕೆ 10 ಬ್ಯಾಗ್ ಕೂಡ ತಯಾರಿಸುತ್ತಿರಲಿಲ್ಲ. ಹಾಗಾಗಿ ಅವರ ದುಡಿಮೆ ದಿನಕ್ಕೆ 10/20 ರೂ. ಆಗುತ್ತಿತ್ತು; ಹೀಗಿದ್ದಾಗ ದೀರ್ಘಾವದಿ ಯೋಜನೆಯ ಕಷ್ಟಸಾಧ್ಯ.
ಕೆಲವು ಸಂಶೋಧನೆಗಳ ನಂತರ ಎಚ್ಎಚ್ಎಚ್ ತಂಡ ಹೆಚ್ಚು ಕಾರ್ಯಕ್ಷಮತೆಯುಳ್ಳ ಹೊಲಿಗೆ, ಕಟ್ಟಿಂಗ್ ಯಂತ್ರಗಳನ್ನು ತಂದಿತು ಹಾಗೂ ಪೂರ್ತಿ ಪ್ರಕ್ರಿಯೆಗೆ ವೇಗ ನೀಡಿತು. ಇದು ಹೆಚ್ಚೆಚ್ಚು ಬ್ಯಾಗ್ ತಯಾರಿ ಮಾಡುವಂತೆ ಮಾಡಿತು.
ಧ್ಯೇಯ
ಕೆಲವೆ ವಾರಗಳಲ್ಲಿ ಮಹಿಳೆಯರ ಮತ್ತು ಸಮುದಾಯದ ಮನಸ್ಥಿತಿ ಬದಲಾಯಿತು. ಈಗ ಹಲವು ಮಹಿಳೆಯರ ಕುಟುಂಬಗಳು ಅವರ ವೃತ್ತಿಯ ಧ್ಯೇಯಗಳಿಗೆ ಬೆಂಬಲ ನೀಡುವುದರ ಬಗ್ಗೆ ಮಾತನಾಡುತ್ತಿವೆ. ಕೆಲಸದ ಮೇಲೆ ಗಮನವಿರಿಸಲು ಸಹಾಯವಾಗುವ ಮಕ್ಕಳ ಆರೈಕೆ ಕೇಂದ್ರವು ಅಲ್ಲಿರಲಿದೆ.
ಆದರೆ ಮಹಿಳೆಯರಲ್ಲಿ ಒಂದು ದೊಡ್ಡದಾದ, ಪ್ರಮುಖವಾದ ಬದಲಾವಣೆ ಕಾಣಿಸಿಕೊಂಡಿತು. ಆರ್ಥಿಕ ಸಬಲೀಕರಣದಿಂದ ಅವರು ತಮ್ಮದೆ ಹೊಸ ಆವೃತ್ತಿಯನ್ನು ಕಂಡುಕೊಂಡರು. ವೇತನ (ಪ್ರತಿಯೊಬ್ಬರು ಈಗ ತಿಂಗಳಿಗೆ 2,500 ರೂ.ಗಿಂತ ಹೆಚ್ಚು ದುಡಿಯುತ್ತಾರೆ) ಸ್ಥಾನಮಾನ ಮತ್ತು ಕುಟುಂಬದ ಮೇಲೆ ಹತೋಟಿಯನ್ನು ಹೆಚ್ಚಿಸಲು ಸಹಾಯಮಾಡಿದೆ.
ಯೋಜನೆ ಶುರುವಾಗಿ ಎರಡು ತಿಂಗಳ ನಂತರ ಮನಮ್ಮ, ಈಗ ಮೊದಲಿನ ಹಾಗೆ ಹೆದರುತ್ತಿರಲಿಲ್ಲ. ಅವರ ಗಂಡ ಕೆಲಸ ಬಿಡು ಎಂದಾಗ ಸ್ಥಳೀಯ ಪೊಲೀಸರಿಗೆ ಹೇಳುವಷ್ಟು ಧೈರ್ಯವನ್ನು ಹೊಸ ಕೆಲಸ ಅವರಿಗೆ ನೀಡಿತ್ತು.
ಎಚ್ಎಚ್ಎಚ್ ತಂಡದೊಂದಿಗೆ ಮಾತನಾಡುತ್ತಾ ಅವರು, “ಈಗ ನನ್ನ ಪತಿ ಕೆಲಸಬಿಡು ಎಂದು ಹೇಳುವುದಿಲ್ಲ ಮತ್ತು ನನ್ನನ್ನು ಗೌರವದಿಂದ ಕಾಣುತ್ತಾರೆ. ಇದು ನನ್ನ ಹೊಸ ಬದುಕು,” ಎಂದರು.
ಹೀಗೆ ಗಂಗಮ್ಮ, ರೇಣುಕಾ ಮತ್ತು ಹಲವರಿಗೆ ಕೆಲಸ ಹೊಸ ಹುರುಪು ಸ್ಥಾನಮಾನ ಗೌರವವನ್ನು ನೀಡಿದೆ.
ಕೋವಿಡ್-19 ಮತ್ತು ಹೊಸ ಸವಾಲುಗಳು
ಕೋವಿಡ್-19 ನಿಂದ ಹಲವು ಮಹಿಳೆಯರು ಈಗ ಮನೆಯಿಂದಲೆ ಫೇಸ್ ಮಾಸ್ಕ್ ತಯಾರಿಸುವ ಕೆಲಸ ಮಾಡುತ್ತಿದ್ದಾರೆ, ಅದನ್ನು ಎಸಿಸಿ ವಾಡಿ ಮತ್ತು ಇತರ ಪ್ರದೇಶಗಳಲ್ಲಿ ವಿತರಿಸುತ್ತದೆ.
ತಮ್ಮ ಕೇಂದ್ರಕ್ಕೆ ಮರಳಿ, ಎಲ್ಲರೂ ಜತೆಯಾಗಿ ನಗುತ್ತಾ, ಕತೆ ಹಂಚಿಕೊಳ್ಳುತ್ತಾ ಕೆಲಸ ಮಾಡಿ ತಮ್ಮ ಸುಂದರ ಬದುಕನ್ನು ರೂಪಿಸಿಕೊಳ್ಳಲು ಅವರೆಲ್ಲ ಸಿದ್ಧರಾಗಿದ್ದಾರೆ.
ಸಬಲೀಕರಣದ ಹೊರತಾಗಿ ತಂಡದ ಬೆಂಬಲ ಅಂತರ್ಪ್ರೇರಣಾ ಯೋಜನೆಯನ್ನು ವಿಶೇಷವಾಗಿಸಿದೆ, ವಾಡಿಯಂತಹ ಪ್ರದೇಶದಲ್ಲಿರುವ ಮಹಿಳೆಯರಿಗೆ ತಮ್ಮ ಮನೆಬಿಟ್ಟು ಬೇರೆ ಅನುಭವ ಪಡೆಯಲು ಸಹಾಯ ಮಾಡಿ ಬಲಿಷ್ಟವಾಗುತ್ತಿದೆ.
“ಯಾರಿಗಾದರೂ ಸಮಸ್ಯೆ ಬಂದರೆ ನಾವೆಲ್ಲ ಒಟ್ಟಾಗಿ ಅದನ್ನು ಬಗೆಹರಿಸುತ್ತೇವೆ,” ಎಂಬ ದೇವಕಿಯವರ ಮಾತು ಅಲ್ಲಿನ ಒಗ್ಗಟ್ಟನ್ನು ತೋರಿಸುತ್ತದೆ.
ಈ ಲೇಖನವನ್ನು ಅನುಷಾ ಸಕ್ಸೇನಾ, ಚಂದನಾ ಟಿಆರ್ ಮತ್ತು ಸುಲ್ತಾನಾ ಅಜೀಜ್ ಸೇರಿದಂತೆ ಹೆಡ್ ಹೆಲ್ಡ್ ಹೈ ಫೌಂಡೇಶನ್ನ ಅಂತರ್ಪ್ರೇರಣಾ ಗ್ರಾಮೀಣ ಉದ್ಯಮಶೀಲತಾ ತಂಡದವರ ಮಾಹಿತಿಯೊಂದಿಗೆ ರಚಿಸಲಾಗಿದೆ.
(ವಿಶೇಷ ಸೂಚನೆ: ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖರರದ್ದು)