80,000 ಟನ್ ಇ-ತ್ಯಾಜ್ಯಗಳಿಂದ ತಯಾರಾದ 2020ರ ಒಲಂಪಿಕ್ಸ್ ಮೆಡಲ್
ಮುಂಬರುವ 2020 ಒಲಂಪಿಕ್ಸ್ ಕ್ರೀಡಾಕೂಟವು ಟೋಕಿಯೋದಲ್ಲಿ ನಡೆಯಲಿದ್ದು, ಜಪಾನ್ ದೇಶವು ಪುನರ್‌ಬಳಕೆಯನ್ನು ಉತ್ತೇಜಿಸುವ ಸುಲವಾಗಿ ಸಾವಿರಾರು ಟನ್‌ಗಳಷ್ಟು ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳನ್ನು ಮರುಬಳಕೆ ಮಾಡಿ ಲೋಹದ ಪದಕಗಳನ್ನು ತಯಾರಿಸುತ್ತಿದೆ.
2020ರ ಟೋಕಿಯೋ ಒಲಂಪಿಕ್ಸ್ ಹಾಗೂ ಪ್ಯಾರಲಿಂಪಿಕ್ ಕ್ರೀಡಾ ಸಂಘಟನಾ ಸಮಿತಿಯು ವಿಜೇತ ಪದಕಗಳ ವಿನ್ಯಾಸವನ್ನು ಅನಾವರಣಗೊಳಿಸಿದೆ. ಪ್ರತೀ ಪಂದ್ಯದಲ್ಲಿಯೂ ವಿಜೇತರ ಕುತ್ತಿಗೆಯಲ್ಲಿ ನೇತಾಡುವ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳು ಕ್ರೀಡಾಪಟುಗಳ ಸುಮಾರು ವರ್ಷಗಳ ಪರಿಶ್ರಮ ಹಾಗೂ ಪ್ರತಿಭೆಯ ಪ್ರತಿರೂಪವಾಗಿರುತ್ತವೆ.
ಈ ಬಾರಿ ಒಲಂಪಿಕ್ಸ್‌ನ ವಿಶೇಷತೆಯೆಂದರೆ ವಿಜೇತರ ಪದಕಗಳು ಸಂಪೂರ್ಣ ಇ-ತ್ಯಾಜ್ಯಗಳಿಂದ ಪುನರುತ್ಪಾದಿಸಲ್ಪಟ್ಟ ಲೋಹದಿಂದ ತಯಾರಿಸಲಾಗಿದೆ. ಜಪಾನ್ ದೇಶ 2017ರ ಏಪ್ರಿಲ್‌ನಿಂದ 2019ರ ಮಾರ್ಚ್ ವರೆಗೆ "ಟೋಕಿಯೋ ಮೆಡಲ್ ಪ್ರಾಜೆಕ್ಟ್" ಆಯೋಜಿಸಿತ್ತು. ಈ ಯೋಜನೆಯಲ್ಲಿ ದೇಶದ ಎಲ್ಲ ಮುನ್ಸಿಪಾಲಿಟಿಗಳ ಆಡಳಿತವು ಸಾಮಾನ್ಯರಿಂದ ಸಂಗ್ರಹಿಸಿದ ಸುಮಾರು 78,985 ಟನ್‌ಗಳಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಪದಕಗಳ ತಯಾರಿಕೆಗೆ ಬೇಕಾದ ಲೋಹದಲ್ಲಿ ಬಳಸಲಾಗಿದೆ.
ಈ ಭೂಮಿಗೂ ಹಾಗೂ ಜನರಿಗೂ ಉತ್ತಮವಾಗಿರಿ ಹಾಗೂ ಒಗ್ಗಟ್ಟಾಗಿರಿ ಎಂಬ ಧ್ಯೇಯದೊಂದಿಗೆ ಈ ಭಾರಿಯ ಒಲಂಪಿಕ್ಸ್ ಪರಿಸರ ಸ್ನೇಹಿಯಾಗಿರಲು ಜಪಾನ್ ದೇಶ ವಿನೂತನ ಪ್ರಯತ್ನವನ್ನು ಒಗ್ಗೂಡಿಸಿದೆ. ಈ ಯೋಜನೆಯ ಸಫಲಕ್ಕಾಗಿ ಸಾವಿರಾರು ಶಿಕ್ಷಣ ಸಂಸ್ಥೆಗಳು ಹಾಗೂ ಚಿಲ್ಲರೆ ಅಂಗಡಿಗಳ ಮೂಲಕ ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಣೆಯಲ್ಲಿ ಶ್ರಮವಹಿಸಲಾಯಿತು.
ಸಂಗ್ರಹಿಸಿದ ಒಟ್ಟು ತ್ಯಾಜ್ಯಗಳಲ್ಲಿ ಉಪಯೋಗಿಸಿದ ಸೆಲ್ ಫೋನ್‌ಗಳು, ಲಾಪ್‌ಟಾಪ್, ಡಿಜಿಟಲ್ ಕ್ಯಾಮರಾ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಿಂದ ಇಂಜಿನಿಯರ್‌ಗಳು ಸುಮಾರು 32 ಕೆಜಿ ಚಿನ್ನದ ಲೋಹ, 3,500 ಕೆಜಿ ಬೆಳ್ಳಿ, 2200 ಕೆಜಿ ಕಂಚು ಹಾಗೂ ಶೇ. 95ರಷ್ಟು ತಾಮ್ರ, ಶೇ. 5ರಷ್ಟು ಸತು ಲೋಹವನ್ನು ಪಡೆಯಲಾಗಿದೆ ಎಂದು ವರದಿಯಾಗಿದೆ.
ಎಲೆಕ್ಟ್ರಾನಿಕ್ ವಸ್ತುಗಳಿಂದ ಲೋಹದಂತಹ ಸಂಪನ್ಮೂಲಗಳನ್ನು ಮರುಪಡೆಯುತ್ತಿರುವುದು ಹೊಸ ತಂತ್ರಜ್ಞಾನವೇನಲ್ಲ. ಪ್ರಪಂಚದಾದ್ಯಂತ ಬಹುತೇಕ ಕಂಪನಿಗಳು ಇ- ತ್ಯಾಜ್ಯಗಳಿಂದ ಲೋಹಗಳನ್ನು ಉತ್ಪಾದಿಸುತ್ತಿವೆ. 2009ರಲ್ಲಿ ಜಪಾನ್ ದೇಶವು ಒಂದು ನೀತಿಯನ್ನು ದೇಶದೆಲ್ಲೆಡೆ ಜಾರಿಗೊಳಿಸಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮರುಬಳಕೆಮಾಡುವಂತೆ ಕಡ್ಡಾಯಗೊಳಿಸಿತು. ಎಲೆಕ್ಟ್ರಾನಿಕ್ ವಸ್ತುಗಳು ಜೈವಿಕ ವಿಘಟನೀಯವಲ್ಲ ಆದ್ದರಿಂದ ಇವುಗಳ ಮರುಬಳಕೆ ಪರಿಸರ ವ್ಯವಸ್ಥೆ ರಕ್ಷಣೆಗೆ ಬಹಳ ಸಹಾಯಕಾರಿಯಾಗಿದೆ ಎಂದು ಆಲ್ ಎಬೌಟ್ ಸರ್ಕೂಟ್ಸ್ ವರದಿ ಮಾಡಿದೆ.
"ಈ ಯೋಜನೆಯಲ್ಲಿ ಪ್ರತಿಯೊಬ್ಬರ ಕೊಡುಗೆಗಾಗಿ ನಾವು ಕೃತಜ್ಞರಾಗಿರುತ್ತೇವೆ. ಸಣ್ಣ ಗ್ರಾಹಕ ಎಲೆಕ್ಟ್ರಾನಿಕ್ಸ್ ಅನ್ನು ಮರುಬಳಕೆ ಮಾಡುವ ನಮ್ಮ ಯೋಜನೆ ಮತ್ತು ಪರಿಸರ ಸ್ನೇಹಿ ಮತ್ತು ಸುಸ್ಥಿರ ಸಮಾಜಕ್ಕೆ ಕೊಡುಗೆ ನೀಡುವ ನಮ್ಮ ಪ್ರಯತ್ನಗಳು 2020 ಟೋಕಿಯೊ ಒಲಿಂಪಿಕ್ಸ್‌ನ ಪರಂಪರೆಯಾಗುತ್ತವೆ ಎಂದು ನಾವು ಭಾವಿಸುತ್ತೇವೆ” ಎಂದು 2020 ಟೋಕಿಯೊ ಒಲಿಂಪಿಕ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆಯಲಾಗಿದೆ.
ಈ ಭಾರಿ ಪ್ರಮಾಣದ ಎಲೆಕ್ಟ್ರಾನಿಕ್ ತ್ಯಾಜ್ಯದಲ್ಲಿ ಸುಮಾರು 6.21 ಮಿಲಿಯನ್ ಮೊಬೈಲ್ ಫೋನ್‌ಗಳು ಸಂಗ್ರಹವಾಗಿದೆ. ಒಟ್ಟಾರೆ ತ್ಯಾಜ್ಯ ಸಂಗ್ರಹಣೆಯಲ್ಲಿ ಸುಮಾರು 1621 ಮುನಿಸಿಪಾಲಿಟಿಗಳು ಭಾಗಿಯಾಗಿದ್ದವು.
ಒಲಂಪಿಕ್ಸ್ನೊಂದಿಗೆ ಮಾತನಾಡಿದ ಟೋಕಿಯೋ ಒಲಂಪಿಕ್ಸ್ ಪದಕಗಳ ವಿನ್ಯಾಸಕಾರ ಕವಾನಿಶಿ "ನನ್ನ ವಿನ್ಯಾಸವು ಟೋಕಿಯೋ ಒಲಂಪಿಕ್ಸ್‌ಗೆ ಆಯ್ಕೆಯಾಗಿರುವುದು ನನಗೆ ಸಿಕ್ಕ ಗೌರವಾಗಿದೆ. ಇದನ್ನು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ" ಎಂದಿದ್ದಾರೆ.
ಮೆಡಲ್‌ನ ಸಂಪೂರ್ಣ ವಿನ್ಯಾಸವೂ ಜಪಾನ್ ದೇಶದ ಪ್ರತಿಯೊಂದು ಕರಕುಶಲತೆ, ಪ್ರಾಚೀನ ಸಂಪ್ರದಾಯಗಳು ಹಾಗೂ ಒಲಂಪಿಕ್ ಮೌಲ್ಯಗಳನ್ನು ಗೌರವಿಸುತ್ತದೆ. ಅಲ್ಲದೇ ವಿನ್ಯಾಸಗಳು ಕ್ರೀಡಾಪಟುಗಳು ವಿಜಯಕ್ಕಾಗಿ ಪಡುವ ಶ್ರಮವನ್ನು ಮತ್ತು ಒಲಂಪಿಕ್‌ನ ವೈವಿಧ್ಯತೆ ಮತ್ತು ಸ್ನೇಹದ ಸಂಕೇತವನ್ನು ಬಿಂಬಿಸಿತ್ತದೆ.
ಟೋಕಿಯೋ ಒಲಿಂಪಿಕ್ಸ್‌ನ ಬಜೆಟ್ ಆರಂಭದಲ್ಲಿ ಒಂದು ಲಕ್ಷ, 76 ಸಾವಿರ ಕೋಟಿ ರೂ. ಗಳ ಭಾರಿ ಮೊತ್ತ ತಲುಪಿದ್ದು, ಈ ವೆಚ್ಚವನ್ನು ತಗ್ಗಿಸುವ ಉದ್ದೇಶದಲ್ಲಿ ಹಮ್ಮಿಕೊಳ್ಳಲಾಗಿರುವ ಹಲವು ಕಾರ್ಯಕ್ರಮಗಳ ಪೈಕಿ ಪದಕ ನಿರ್ಮಾಣಕ್ಕೆ ಪುನರ್ಬಳಕೆಯ ಲೋಹ ಉಪಯೋಗಿಸುವುದು ಒಂದಾಗಿತ್ತು. ಈ ಮೂಲಕ ಒಟ್ಟು ಬಜೆಟ್ ಅನ್ನು ಸುಮಾರು ಒಂದು ಲಕ್ಷದ 12 ಸಾವಿರ ಕೋಟಿ ರೂ. ಮೊತ್ತಕ್ಕೆ ತರಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಈ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ. 2016 ರ ರಿಯೋ ಒಲಂಪಿಕ್ಸ್‌ನಲ್ಲಿ ಅಂದಾಜು ಶೇ.30ರಷ್ಟು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಮರುಬಳಕೆಯ ವಸ್ತುಗಳಿಂದ ಮಾಡಲಾಗಿತ್ತು. ಆದರೆ ಪ್ರಸ್ತುತ ಯೋಜನೆಯಲ್ಲಿ ಶೇ.100ರಷ್ಟು ಪದಕಗಳು ಸಹ ಮರುಬಳಕೆ ವಸ್ತುಗಳಿಂದಲೇ ತಯಾರಾಗಿದ್ದು, ಇದೇ ಮೊದಲ ಬಾರಿಗೆ ನಾಗರೀಕರು ಎಲೆಕ್ಟ್ರಾನಿಕ್ಸ್ ದಾನದಲ್ಲಿ ತೊಡಗಿಸಿಕೊಂಡಿದ್ದಾರೆ.
2020 ರ ಟೋಕಿಯೊ ಒಲಿಂಪಿಕ್ಸ್ 2020 ರ ಜುಲೈ 24 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 9, 2020 ರವರೆಗೆ ನಡೆಯಲಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.