ಬಜಾಜ ಚೇತಕ ಮೇಲೆ ದೇಶಾದ್ಯಂತ ಪ್ರವಾಸ ಹೋರಟ ಮೈಸೂರಿನ ತಾಯಿ ಮಗನ ಕಥೆ

ಅಪ್ಪನ ಹಳೆಯ ಸ್ಕೂಟರ್‌ನಲ್ಲಿ ತಾಯಿಯ ಆಸೆಯಂತೆ ದೇಶ ಸುತ್ತಿ ದೇವಸ್ಥಾನಗಳನ್ನು ತೋರಿಸುತ್ತಿದ್ದಾರೆ ಅಪರೂಪದ ಮಗ ದಕ್ಷಿಣ ಮೂರ್ತಿ ಕೃಷ್ಣ ಕುಮಾರ್.

ಬಜಾಜ ಚೇತಕ ಮೇಲೆ ದೇಶಾದ್ಯಂತ ಪ್ರವಾಸ ಹೋರಟ ಮೈಸೂರಿನ ತಾಯಿ ಮಗನ ಕಥೆ

Wednesday October 30, 2019,

3 min Read

ತಾಯಿಗಿಂತ ಬೇರೆ ದೇವರಿಲ್ಲ ಎಂಬ ಮಾತು ಅಕ್ಷರಶಃ ಸತ್ಯ. ತಾಯಿ ತನ್ನ ಮಕ್ಕಳಿಗಾಗಿ ಇಡೀ ಜೀವ ತೇಯುತ್ತಾಳೆ. ಇಡೀ ಜೀವನವನ್ನು ತನ್ನ ಕುಟುಂಬ ಮಕ್ಕಳು ಮನೆ ಕೆಲಸಕ್ಕೆ ಮುಡಿಪಾಗಿಡುತ್ತಾಳೆ. ಕುಟುಂಬ ನೋಡಿಕೊಳ್ಳುವ ಭರದಲ್ಲಿ ತನ್ನ ಆಸೆಗಳನ್ನ ಮರೆತು ಬಿಡುತ್ತಾಳೆ. ಈ ತಾಯಂದಿರ ಆಸೆಗಳನ್ನು ಪೂರೈಸುವ ಮಕ್ಕಳು ಬೆರಳೆಣಿಕೆಯಷ್ಟು ಮಾತ್ರ. ಅಂಥವರ ಸಾಲಿಗೆ ಇದೀಗ ದಕ್ಷಿಣ ಮೂರ್ತಿ ಕೃಷ್ಣ ಕುಮಾರ್ ಸೇರುತ್ತಿದ್ದಾರೆ.


ಸ್ಕೂಟರ್ ಮೇಲೆ ತನ್ನ ತಾಯಿಯ ಜೊತೆ ದಕ್ಷಿಣಮೂರ್ತಿ ಕೃಷ್ಣ ಕುಮಾರ್ (ಚಿತ್ರ ಕೃಪೆ: ಒರಿಸ್ಸಾ ಪೊಸ್ಟ್‌)




ಮೈಸೂರಿನ ನಿವಾಸಿ ದಕ್ಷಿಣ ಮೂರ್ತಿ ಕೃಷ್ಣ ಕುಮಾರ್ ತಮ್ಮ ತಾಯಿಯ ಆಸೆಯಂತೆ ರಾಷ್ಟ್ರದ ಪ್ರಮುಖ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ವಿಷೇಶ ಅಂದರೆ ಇಡೀ ಪ್ರಯಾಣವನ್ನು ತಮ್ಮ ತಂದೆಯ 20 ವರ್ಷದ ಹಳೆಯದಾದ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿಯೇ ಮಾಡುತ್ತಿರುವುದು. 40 ವರ್ಷದ ಕುಮಾರ್ 71 ವರ್ಷದ ತಾಯಿಯ ಜತೆ ಪ್ರಯಾಣ ಬೆಳೆಸಿದ್ದಾರೆ. ತಾವು ಮಾಡುತ್ತಿದ್ದ ಉದ್ಯೋಗವನ್ನು ತೊರೆದು ತಾಯಿ ಚೂಡರತ್ನ ಅವರನ್ನು ಕರ್ನಾಟಕ, ನೇಪಾಳ ಮತ್ತು ಭೂತಾನ್ ಸೇರಿದಂತೆ ಭಾರತದ ಪ್ರಮುಖ ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿದ್ದಾರೆ.


ದಿ ಹಿಂದು ಜೊತೆ ಮಾತನಾಡುತ್ತಾ ಕುಮಾರ್ ಹೇಳುತ್ತಾರೆ,


“ಒಮ್ಮೆ ನಾನು ನಮ್ಮ ತಾಯಿಯನ್ನು ಕೇಳಿದೆ ಬೇಲೂರು ಹಳೆ ಬೀಡನ್ನ ನೋಡಿದ್ದೀರಾ ಎಂದು. ಆಗ ಆಕೆ ಹೇಳಿದಳು ನಾನು ಮೈಸೂರು ಬಿಟ್ಟು ಯಾವ ಸ್ಥಳಗಳನ್ನು ನೋಡಿಲ್ಲ ಅಂತಾ. ಈ ಮಾತು ಹೇಳಿದಾಗ ಒಂದು ಕ್ಷಣ ನಾನು ದಿಗ್ಭ್ರಮೆಗೊಂಡೆ. ಅಷ್ಟೆ ಅಲ್ಲ ಅಲ್ಲೇ ನಾನು ನಿರ್ಧರಿಸಿದೆ ಭಾರತದಾದ್ಯಂತ ಎಲ್ಲಾ ದೇವಾಲಯಗಳಿಗೂ ಕರೆದುಕೊಂಡು ಹೋಗಬೇಕು ಎಂದು. ಆಗ ನಮ್ಮ ಪ್ರಯಾಣ ಪ್ರಾರಂಭವಾಯಿತು ಅಂತಾರೆ ಕುಮಾರ್.”


ದಕ್ಷಿಣ ಮೂರ್ತಿ ಕೃಷ್ಣ ಕುಮಾರ್ ಜನವರಿ 16, 2018 ರಂದು ಮಾತೃ ಸೇವಾ ಸಂಕಲ್ಪ ಯಾತ್ರೆಯನ್ನು ಸ್ಕೂಟರ್ ನಲ್ಲಿ ಆರಂಭಿಸಿದರು. ಇಲ್ಲಿಯವರೆಗೆ 40,000 ಕ್ಕೂ ಅಧಿಕ ಕಿಲೋ ಮೀಟರ್ ದೂರವನ್ನು ಸ್ಕೂಟರ್‌ನಲ್ಲಿಯೇ ಕ್ರಮಿಸಿದ್ದಾರೆ. ಈ ಪ್ರಯಾಣದಲ್ಲಿ ಒಂದು ದಿನವೂ ಸ್ಕೂಟರ್ ಕೆಟ್ಟು ನಿಂತಿಲ್ಲ. ಕಳೆದ ನಾಲ್ಕು ವರ್ಷದ ಹಿಂದೆ ಕುಮಾರ್ ತಂದೆ ತೀರಿಕೊಂಡರು. ಅವರ ಪ್ರೀತಿಯ ವಾಹನ ಇದಾಗಿದೆ. ಹಾಗಾಗಿ ಪ್ರತಿ ಪ್ರಯಾಣದಲ್ಲೂ ತಂದೆ ಜೊತೆಗಿದ್ದು ಆಶಿರ್ವಾದ ಮಾಡುತ್ತಾರೆ, ಹಾಗಾಗಿ ಸ್ಕೂಟರ್‌ನಿಂದ ಪ್ರಯಾಣ ಮೊಟಕುಗೊಳಿಸಿಲ್ಲ ಅನ್ನೋದು ಕುಮಾರ್ ಅವರ ಬಲವಾದ ನಂಬಿಕೆ.


ಇನ್ನು ಕುಮಾರ್ ಹಾಗೂ ಅವರ ತಾಯಿಯ ಈ ಪ್ರಯಾಣದ ಕಥೆಯನ್ನು ಮನೋಜ್ ಕುಮಾರ್ ಎಂಬುವವರು ತಮ್ಮ ಟ್ವಿಟ್ಟರ್‌ನಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದರು. ಈ ವೇಳೆ ಇದನ್ನು ಗಮನಿಸಿದ ಆನಂದ್ ಮಹೀಂದ್ರ ಈ ತಾಯಿ ಮಗನ ಜೋಡಿಗೆ ಕಾರ್ ಉಡುಗೊರೆಯಾಗಿ ಕೊಡೋದಾಗಿ ಘೋಷಣೆ ಮಾಡಿದರು.


ಈ ಬಗ್ಗೆ ಟ್ವಿಟ್ ಮಾಡಿದ ಆನಂದ್ ಮಹೀಂದ್ರ, ತಾಯಿ ಮೇಲಿನ ಪ್ರೀತಿ, ದೇಶದ ಮೇಲಿನ ಪ್ರೀತಿಯ ಇದೊಂದು ಸುಂದರ ಕಥೆ. ಈ ವಿಷಯ ಹಂಚಿಕೊಂಡಿದ್ದಕ್ಕೆ ಮನೋಜ್ ಕುಮಾರ್ ಅವರಿಗೆ ಧನ್ಯವಾದಗಳು. ನೀವು ಅವರನ್ನು ನನ್ನೊಂದಿಗೆ ಸಂರ್ಪಕಿಸಲು ಪ್ರಯತ್ನಿಸಿದರೆ ನಾನು ಅವರಿಗೆ ವೈಯಕ್ತಿಕವಾಗಿ ಕೆಯುವಿ 100 ಎನ್‌ಎಕ್ಸ್‌ಟಿ ಕಾರ್ ಉಡುಗೊರೆ ನೀಡುತ್ತೇನೆ. ಮುಂದಿನ ಪ್ರಯಾಣವನ್ನವರು ತಮ್ಮ ತಾಯಿಯೊಂದಿಗೆ ಕಾರಿನಲ್ಲಿಯೇ ಪ್ರಯಾಣ ಬೆಳೆಸಬಹುದು ಎಂದಿದ್ದಾರೆ.



ಕುಮಾರ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿಯ ಕನಸಿನ ಬಗ್ಗೆ ತಿಳಿದ ನಂತರ ತಮ್ಮ ಕೆಲಸ ತೊರೆದು ತಾಯಿಯ ಸೇವೆ ಮಾಡುತ್ತಿದ್ದಾರೆ. ದಿ ಹಿಂದು ಜೊತೆ ಮಾತನಾಡುತ್ತಾ ಕುಮಾರ್,


"ನನಗೆ ನನ್ನ ತಾಯಿಯ ಕನಸು ಈಡೇರಿಸುದು ಮುಖ್ಯ. ಅದನ್ನು ಹೊರತು ಪಡಿಸಿ ಜೀವನದಲ್ಲಿ ಯಾವುದೇ ಒತ್ತಡ ಇಲ್ಲ. ನಾನು ನಕಾಶೆಯನ್ನು ಹೆಚ್ಚಾಗಿ ಬಳಸುವುದಿಲ್ಲ, ಪ್ರತಿ ಬಾರಿ ನಾವು ಪ್ರಯಾಣಿಸುವಾಗಲೂ ಜನರ ಸಲಹೆ ಪಡೆಯುತ್ತೇನೆ. ಅವರು ಹೇಳಿದ ಮಾರ್ಗದಲ್ಲಿ ಚಲಿಸುತ್ತೇವೆ. ನಮಗೆ ಸಂವಹನದ ಸಮಸ್ಯೆ ಇಲ್ಲ” ಎಂದರು.


ನಾನು 13 ವರ್ಷಗಳ ಕಾಲ ಕೆಲಸ ಮಾಡಿದ್ದ ಹಣದಿಂದ ಪ್ರಯಾಣ ಮಾಡುತ್ತಿದ್ದೇನೆ. ಪ್ರಯಾಣದ ಸಮಯದಲ್ಲಿ ಯಾವುದೇ ಹಣ ಅಥವಾ ಉಡುಗೊರೆಯನ್ನು ತೆಗೆದುಕೊಳ್ಳುವುದಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಯಾಣ ಮಾಡುತ್ತೇವೆ. ಸಂಜೆಯ ಬಳಿಕ ದೇವಸ್ಥಾನ ಹಾಗೂ ಧರ್ಮಶಾಲೆಯಲ್ಲಿ ಉಳಿದುಕೊಳ್ಳುತ್ತೇವೆ. ದಿನಕ್ಕೆ ಎರಡು ಬಾರಿ ಊಟ ಮಾಡುತ್ತೇವೆ. ಇದು ಕೇವಲ ದೇವಸ್ಥಾನದ ಪ್ರಯಾಣವಲ್ಲ. ಪ್ರಕೃತಿ, ಒಳ್ಳೆಯ ಜನರನ್ನು ಭೇಟಿಯಾಗಿ ಅವರ ಪ್ರೀತಿಯನ್ನು ಆನಂದಿಸುತ್ತೇವೆ. ಪ್ರಯಾಣವೆಂದರೆ ಶಿಕ್ಷಕ ಇದ್ದ ಹಾಗೆ ಎನ್ನುತ್ತಾರೆ ಕುಮಾರ್.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.