2 ಪ್ರಮುಖ ವ್ಯಾಪಾರ ಕೇಂದ್ರದ ಮಧ್ಯದಲ್ಲಿದೆ ಬೆಳಗಾವಿ
ಟೀಮ್ ವೈ.ಎಸ್. ಕನ್ನಡ
ಬೆಳಗಾವಿ ಜಿಲ್ಲಾ ಅವಲೋಕನ
ನಾಲ್ಕನೇ ಅತಿದೊಡ್ಡ ನಗರ ಬೆಳಗಾವಿ, ಭಾರತದ ಮೊದಲ ಸೂಚಿತ ಏರೋಸ್ಪೇಸ್ ನಿಖರ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಕೇಂದ್ರದ ಎಸ್‍ಇಝಡ್‍ನ ತವರಾಗಿದೆ. ಅತ್ಯುನ್ನತ ಗುಣಮಟ್ಟದ ಅಲ್ಯುಮಿನಿಯಂ ಅದಿರಿನ ನೆಲ ಹಾಗೂ 70ಸಾವಿರ ಟನ್ ಆಟೋಮೋಟಿವ್ ಮತ್ತು ಇಂಡಸ್ಟ್ರಿಯಲ್ ಕಬ್ಬಿಣ ಎರಕ ಉತ್ಪಾದಿಸುವ 200 ಫೌಂಡ್ರಿಸ್ ಬೆಳಗಾವಿಯನ್ನು ಪ್ರಮುಖ ಭಾರ ಯಂತ್ರ ಉಪಕರಣ ಮತ್ತು ಅಧಿಕ ಒತ್ತಡದ ಆಯಿಲ್ ಹೈಡ್ರಾಲಿಕ್ಸ್ ಉತ್ಪಾದನಾ ಕೇಂದ್ರವನ್ನಾಗಿಸಿದೆ. ಬೆಂಗಳೂರು-ಮುಂಬೈ ಮಧ್ಯದಲ್ಲಿ ಬೆಳಗಾವಿ ಜಿಲ್ಲೆ ಇರುವುದರಿಂದ ಆಟೊಮೊಬೈಲ್ಸ್ ಮತ್ತು ಏರೋಸ್ಪೇಸ್ ಕೈಗಾರಿಕೆ ಅಭಿವೃದ್ಧಿ ಹೊಂದಲು ಸೂಕ್ತ ಸ್ಥಳವಾಗಿದೆ. ಬೆಳಗಾವಿಯು 13,433 ಚದರ ಕಿಮೀ ವಿಸ್ತೀರ್ಣ ಹೊಂದಿದ್ದು ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಖಾನಾಪುರ, ರಾಮದುರ್ಗ, ರಾಯಭಾಗ ಹಾಗೂ ಸವದತ್ತಿ ಎಂಬ 10 ತಾಲ್ಲೂಕುಗಳನ್ನು ಹೊಂದಿದೆ.

ಆರ್ಥಿಕ ಅವಲೋಕನ
ರಾಜ್ಯದ ಎರಡನೇ ಅತಿದೊಡ್ಡ ರಫ್ತು ಜಿಲ್ಲೆಯಾಗಿದೆ ಬೆಳಗಾವಿ. ಜಿಲ್ಲೆಯ ಒಟ್ಟು ಜಿಡಿಪಿ ರೂ 159.65 ಶತಕೋಟಿ ಇದ್ದು ರಾಜ್ಯ ಜಿಎಸ್‍ಡಿಪಿಗೆ 5.3% ಕೊಡುಗೆ ನೀಡಿದೆ. ಇಲ್ಲಿನವರ ವಾರ್ಷಿಕ ತಲಾ ಆದಾಯ ರೂ 52,250 ಇದ್ದು 2007-08 ರಿಂದ 2012-13ರಲ್ಲಿ ಜಿಡಿಡಿಪಿ ಟ್ರೆಂಡ್ 4.3% ನಲ್ಲಿದೆ.
ವ್ಯವಸಾಯ ಪ್ರಾಮುಖ್ಯತೆ
ತನ್ನ ಒಟ್ಟು ಪ್ರದೇಶದ 48% ಭೂಮಿ ವ್ಯವಸಾಯಕ್ಕೆ ಮೀಸಲಿಡಲಾಗಿದೆ. ಹಾಸನ ಮತ್ತು ಕೋಲಾರದ ನಂತ್ರ ಹಣ್ಣು ಮತ್ತು ತರಕಾರಿಗೆ ಬೆಳಗಾವಿ ಹೆಸರುವಾಸಿಯಾಗಿದೆ. ಈರುಳ್ಳಿ, ಟೊಮೊಟೊ, ಆಲೂಗಡ್ಡೆ, ಮೆಣಸಿನಕಾಯಿ, ಕಾರೆಟ್, ಮಾವು, ಸಪೋಟ, ಬಾಳೆಹಣ್ಣು, ದ್ರಾಕ್ಷಿ ಮತ್ತು ಪಪ್ಪಾಯ ಇಲ್ಲಿನ ಪ್ರಮುಖ ಬೆಳೆಗಳು.
ಕೈಗಾರಿಕಾ ಭೂ ಅವಲೋಕನ
ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯವರು ಸುಮಾರು 300 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಭಾರತದ ಪ್ರಥಮ ಏರೋಸ್ಪೇಸ್ ನಿಖರ ಎಂಜಿನಿಯರಿಂಗ್ ಎಸ್‍ಇಝಡ್ ನಿಂದಾಗಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬೆಳಗಾವಿ ಮುಂಚೂಣಿಯಲ್ಲಿದೆ. 16 ಕೈಗಾರಿಕಾ ಎಸ್ಟೇಟ್‍ಗಳು 6 ಕೈಗಾರಿಕಾ ಪ್ರದೇಶಗಳು ಮತ್ತು 1 ಎಸ್‍ಇಝಡ್ ಜಿಲ್ಲೆಯಲ್ಲಿದೆ. ಜಿಲ್ಲೆಯಾದ್ಯಂತ 11,842 ಎಕರೆ ಲ್ಯಾಂಡ್ ಬ್ಯಾಂಕ್‍ನಲ್ಲಿದ್ದು ನಿರ್ದಿಷ್ಟ ಪ್ರದೇಶದ ಕೇಂದ್ರೀಕೃತ ಅಭಿವೃದ್ಧಿ ವಿಚಾರದಲ್ಲಿ ಹೂಡಿಕೆ ಮಾಡುವುದಕ್ಕೆ ಸೂಕ್ತ ತಾಣವಾಗಿದೆ. ಸುವರ್ಣ ಕರ್ನಾಟಕ ಅಭಿವೃದ್ಧಿ ಕಾರಿಡಾರ್ ಪ್ರಸ್ತಾವನೆಯಂತೆ ಐಟಿ-ಬಿಟಿ ವಲಯ ಮತ್ತು ಸಿದ್ಧ ಉಡುಪು ವಲಯಗಳಲ್ಲಿ ಹೆಚ್ಚಿನ ಸಾಮಥ್ರ್ಯವಿದ್ದು ಸುಮಾರು 30ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ.
ಜಿಲ್ಲೆಯಲ್ಲಿರೋ ಎರಕದ ಮನೆ ಹಾಗೂ ವಿದ್ಯುತ್ ಮಗ್ಗಗಳಿಂದ ಆಟದ ಸಾಮಾನುಗಳು, ಲೋಹದ ವಸ್ತುಗಳು, ಕರಕುಶಲ ಚಪ್ಪಲಿಗಳು, ಕುಂಬಾರಿಕೆ, ಮಣ್ಣಿನ ಬೊಂಬೆಗಳು ತಯಾರಾಗುತ್ತಿದ್ದು, ಜವಳಿ ಕಸೂತಿ ಸಮೂಹ ಕೈಗಾರಿಕೆಗಳು ಈ ಪ್ರದೇಶದ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಕೃಷಿ ಸಬಂಧಿತ ಉದ್ದಿಮೆಗಳ ಮೂಲಸೌಕರ್ಯ ಅಭಿವೃದ್ಧಿüಗೆ ಆದ್ಯತೆ ನೀಡಲಾಗ್ತಿದ್ದು ಶೀತಲೀಕರಣ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. 22 ಸಕ್ಕರೆ ಕಾರ್ಖಾನೆಗಳು, ಚಕ್ಕೋಡಿಯ ಬೆಲ್ಲದ ಉದ್ಯಮಗಳು ಬೆಳೆಯುತ್ತಿವೆ. ಪ್ರಸ್ತುತ ರೂ 385 ಶತಕೋಟಿ ಹೂಡಿಕೆಯಲ್ಲಿ 54 ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳು, 44,142 ವಿವಿಧ ಸಣ್ಣ ಪ್ರಮಾಣದ ಉದ್ದಿಮೆಗಳೊಂದಿಗೆ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದೆ.
ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು
ಭೂಮಿ ಮತ್ತು ಮಣ್ಣು: ಬೆಳಗಾವಿ ವಿವಿಧ ಕೃಷಿ ಹವಾಮಾನ ಮತ್ತು ಮಣ್ಣು ಹೊಂದಿದ್ದು ವ್ಯವಸಾಯ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳನ್ನು ಶಕ್ತಿಗೊಳಿಸಲು ಸಾಧ್ಯವಾಗಿದೆ. ಜಿಲ್ಲೆಯ 48% ಭೂಮಿ ಕೃಷಿಗೆ ಬಳಕೆಯಾಗುತ್ತಿದ್ದು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. 26% ಭೂಮಿ ಖಾಲಿ ಇದ್ದು ಇದರಲ್ಲಿ ಕೃಷಿ ಮಾಡಲಾಗದ ಭೂಮಿ 12% ಇದೆ ಹಾಗೂ 14% ಅರಣ್ಯ ಪ್ರದೇಶವಿದೆ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಖನಿಜ ನಿಕ್ಷೇಪಗಳಿವೆ. ಬಾಕ್ಸೈಟ್, ಯುರೇನಿಯಂ, ಸಿಲಿಕಾ ಸ್ಯಾಂಡ್, ಅಲ್ಯೂಮಿನಿಯಂ, ಲಾಟೆರೈಟ್, ಕ್ವಾರ್ಟ್ಜೈಟ್ ಗಳ ಅಪಾರ ನಿಕ್ಷೇಪಗಳಿವೆ.
ಜಲಾಶಯಗಳು
ಬೆಳಗಾವಿ ಜಿಲ್ಲೆ ನೀರು ಸರಬರಾಜು ರಿಸರ್ವಾಯರ್, ಟ್ಯಾಂಕ್‍ಗಳು ಹಾಗೂ ಕಾಲುವೆಗಳ ಮೇಲೆ ಅವಲಂಬಿತವಾಗಿದೆ. ಕೃಷ್ಣ, ಮಲಪ್ರಭ ಮತ್ತು ಘಟಪ್ರಭ ಜಿಲ್ಲೆಯಲ್ಲಿ ಹರಿದು ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟಿದೆ.
ವಿದ್ಯುತ್ ಸರಬರಾಜು
ಬೆಳಗಾವಿಗೆ ವಿದ್ಯುತ್ ಸರಬರಾಜು ಮಾಡುವ ಜವಾಬ್ದಾರಿ ಹೆಸ್ಕಾಂ ಹೆಗಲ ಮೇಲಿದೆ. 3 ಮೆಗಾವಾಟ್ ಸಾಮರ್ಥ್ಯದ ರೂ 2,016 ಕೋಟಿ ಹೂಡಿಕೆಯ ಸೋಲರ್ ಫೋಟೋ ವೋಲ್ಟಿಕ್ ಪವರ್ ಪ್ಲಾಂಟ್ ನಿರ್ಮಾಣವಾದ ಮೇಲೆ ವಿದ್ಯುತ್ ಅವಲಂಬನೆ ಕಡಿಮೆಯಾಗಿದೆ. 700 ಮೆಗಾವಾಟ್ ಸಾಮಥ್ರ್ಯದ ಯೋಜನೆಗೆ ರಾಜ್ಯ ಸರ್ಕಾರದ ಅನುಮೋದನೆ ಸಿಕ್ಕಿದ್ದು ಮತ್ತೊಂದು ಖಾಸಗೀ ಹೂಡಿಕೆಯಡಿ ಪ್ರಾರಂಭವಾಗ್ತಿರೋ 1320 ಮೆಗಾವಾಟ್ ವಿದ್ಯುತ್ ಪ್ಲಾಂಟ್‍ಗೆ ಈಗಾಗಲೇ ಭೂಮಿ ಹಂಚಿಕೆಯಾಗಿದೆ.
ಜ್ಞಾನಕ್ಷೇತ್ರ
ಬೆಳಗಾವಿಯಲ್ಲಿ 3 ವಿಶ್ವವಿದ್ಯಾಲಯಗಳು ಇದ್ದು ಜಿಲ್ಲೆಯಲ್ಲಿ ಜ್ಞಾನಸಾಗರವನ್ನು ಹರಡಿದೆ. ವಿಶ್ವೇಶ್ವರಯ್ಯ ತಾಂತ್ರಿಯ ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಕೆಎಲ್‍ಇ ವಿಶ್ವವಿದ್ಯಾಲಯ ಇಲ್ಲಿ ವಿದ್ಯಾಕ್ರಾಂತಿಯನ್ನೇ ಮಾಡಿದೆ. 180 ಡಿಗ್ರಿ ಕಾಲೇಜುಗಳು ಸೇರಿದಂತೆ 9 ಎಂಜಿನಿಯರಿಂಗ್ ಕಾಲೇಜು, 15 ಪಾಲಿಟೆಕ್ನಿಕ್ ಕಾಲೇಜು, 2 ಡೆಂಟಲ್ ಕಾಲೇಜು, 2 ಮೆಡಿಕಲ್ ಕಾಲೇಜುಗಳು ಜಿಲ್ಲೆಯ ಹಿರಿಮೆಯನ್ನು ಎತ್ತಿಹಿಡಿದಿದೆ.
ವೈದ್ಯಕೀಯ ಸಂಪನ್ಮೂಲ
ಬೆಳಗಾವಿಯಲ್ಲಿ ಮೂಲಭೂತ ನಾಗರೀಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ. ಜಿಲ್ಲೆಯಲ್ಲಿ 139 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 344 ಖಾಸಗೀ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂ, 14 ಸಮುದಾಯ ಆರೋಗ್ಯ ಕೇಂದ್ರಗಳು, 39 ಸರ್ಕಾರಿ ಮತ್ತು ಆಯುರ್ವೇದ ಆಸ್ಪತ್ರೆಗಳು ಇಲ್ಲಿನ ಆರೋಗ್ಯ ವ್ಯವಸ್ಥೆಗೆ ಹೆಸರು ತಂದುಕೊಟ್ಟಿದೆ.
ಸಂಪರ್ಕ ವ್ಯವಸ್ಥೆ
ಜಿಲ್ಲಿಗೆ ವಿವಿಧ ಭಾಗಳಿಂದ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ. ಪುಣೆ - ಬೆಂಗಳೂರು ನ್ಯಾಷನಲ್ ಹೈವೇಯ ಗೋಲ್ಡನ್ ಕ್ವಾಡ್ರಿಲಾಟೆರಲ್ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗಿದ್ದು, 3 ರಾಷ್ಟ್ರೀಯ ಹೆದ್ದಾರಿಗಳು ಜಲ್ಲೆಯಲ್ಲಿ ಹಾದುಹೋಗುತ್ತದೆ. ಜಿಲ್ಲೆ ತನ್ನದೇ ದೇಶೀಯ ವಿಮಾನ ನಿಲ್ದಾಣ ಹೊಂದಿದ್ದು, 43 ಅಂತರಾಷ್ಟ್ರೀಯ ಏರ್‍ಪೋರ್ಟ್ ಹಾಗೂ 2 ದೇಶೀಯ ಏರ್‍ಪೋರ್ಟ್‍ಗಳಿಗೆ ಸಂಪರ್ಕ ಹೊಂದಿದೆ ಅಲ್ಲದೇ ಗೋವಾದ 3 ಬಂದರುಗಳು ಜಿಲ್ಲೆಗೆ ಅತಿ ಸನಿಹದಲ್ಲಿದೆ.
ಕೊನೆ ಮಾತು: ಅತ್ಯುತ್ತಮ ಮೂಲಸೌಕರ್ಯ ಹೊಂದಿರೋ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವೂ ನಿರ್ಮಾಣವಾಗಿದ್ದು ರಾಜ್ಯದ ಎರಡನೇ ರಾಜಧಾನಿಯಂತೆ ಪ್ರತಿನಿಧಿಸುತ್ತಿದೆ. ಒಟ್ಟಾರೆ ಇಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ವಾತಾವಾರಣ ಇದೆ.