ಸಾರ್ವಜನಿಕ ನೀರಿನ ನಲ್ಲಿಗಳನ್ನು ಸರಿಪಡಿಸುವ ಮೂಲಕ ಗ್ಯಾಲನ್ ನೀರನ್ನು ಉಳಿಸಿದ ಕೋಲ್ಕತಾದ ಈ ನಾಗರಿಕರು
ಕೋಲ್ಕತಾ ಮೂಲದ ಇಬ್ಬರು ನಿವಾಸಿಗಳು ಮೂರು ತಿಂಗಳ ಅವಧಿಯಲ್ಲಿ 156 ಸಾರ್ವಜನಿಕ ನಲ್ಲಿಗಳನ್ನು ಸರಿಪಡಿಸುವ ಮೂಲಕ ನಗರದಲ್ಲಿ ನೀರು ಉಳಿಸಲು ನಾಗರಿಕ ಕೇಂದ್ರಿತ ಆಂದೋಲನಕ್ಕೆ ನಾಂದಿ ಹಾಡಿದ್ದಾರೆ.
ನೀರಿಲ್ಲದೆ ಒಂದೇ ಒಂದು ದಿನವನ್ನು ಕಳೆಯುವದನ್ನು ಊಹಿಸಿಕೊಳ್ಳಿ. ಕುಡಿಯಲು, ಸ್ನಾನ ಮಾಡಲು ಎಲ್ಲೆಲ್ಲಿಯೂ ನೀರಿಲ್ಲ. ದೃಶ್ಯೀಕರಿಸುವುದು ಕಠಿಣ ಅಲ್ಲವೇ?
ಅದಾಗ್ಯೂ, ನೀರಿನ ಸಂಪನ್ಮೂಲಗಳ ದುರುಪಯೋಗ ಮತ್ತು ಹವಾಮಾನ ಬದಲಾವಣೆಯಿಂದಾಗಿ ಇದನ್ನು ನಿಭಾಯಿಸುವುದು ಕಷ್ಟಕರವಾಗುತ್ತಿದೆ.
ಸರ್ಕಾರದ ಥಿಂಕ್ ಟ್ಯಾಂಕ್ ಪ್ರಕಟಿಸಿರುವ 2018ರ ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ (ಸಿಡಬ್ಲ್ಯೂಎಮ್‌ಐ) ಹಾಗೂ ನೀತಿ ಆಯೋಗದ ವರದಿಯ ಪ್ರಕಾರ, ಭಾರತದಲ್ಲಿ 600 ದಶಲಕ್ಷ ಜನರು ತೀವ್ರ ನೀರಿನ ಒತ್ತಡವನ್ನು ಎದುರಿಸುತ್ತಿದ್ದಾರೆ. 75% ಕುಟುಂಬಗಳಿಗೆ ಸರಿಯಾದ ಕುಡಿಯುವ ನೀರಿನ ಲಭ್ಯತೆಯಿಲ್ಲ ಮತ್ತು 84% ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರು ಲಭ್ಯವಿಲ್ಲ.
ನೀತಿ ಆಯೋಗವು ಪ್ರಕಟಿಸಿದ ಮತ್ತೊಂದು ವರದಿಯಲ್ಲಿ, ಸರಿಯಾದ ಮೂಲಸೌಕರ್ಯಗಳ ಕೊರತೆಯಿಂದ ಹಾಗೂ ನೀರಿನ ಸೋರಿಕೆಯ ನಷ್ಟದಿಂದಾಗಿ ದೇಶದ ಒಟ್ಟು 21 ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲವು ಖಾಲಿಯಾಗುವ ಮಟ್ಟದಲ್ಲಿದೆ ಎಂದು ಹೇಳಿದೆ. ಬೆಳೆಯುತ್ತಿರುವ ಈ ಸಮಸ್ಯೆಯನ್ನು ನಿಭಾಯಿಸಲು ಕೋಲ್ಕತಾ ಮೂಲದ ಇಬ್ಬರು ನಿವಾಸಿಗಳು ಈಗ ನಗರದಾದ್ಯಂತ ರಸ್ತೆಬದಿಯ ಸಾರ್ವಜನಿಕ ನಲ್ಲಿಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅಜಯ್ ಮಿತ್ತಲ್ (28) ಮತ್ತು ವಿನಯ್ ಜಾಜು (36) ತಮ್ಮ ವೈಯಕ್ತಿಕ ಪ್ರಯತ್ನಗಳ ಮೂಲಕ ನಾಗರಿಕರ ಆಂದೋಲನಕ್ಕೆ ನಾಂದಿ ಹಾಡಿದ್ದಾರೆ. 'ಸುಸ್ಥಿರತೆಗಾಗಿ ಸಕ್ರಿಯ ನಾಗರಿಕರು ಒಟ್ಟಾಗುವಿಕೆ' (ಎಸಿಟಿಎಸ್) ಯಲ್ಲಿ 500 ಜನರು ನೀರಿನ ಮಿತಬಳಕೆಯ ಕುರಿತು ಎಲ್ಲರಲ್ಲೂ ಅರಿವನ್ನು ಮೂಡಿಸುತ್ತಿದ್ದಾರೆ.
ಇವರಿಬ್ಬರು ನಾಗರಿಕರ ಬೆಂಬಲದೊಂದಿಗೆ, ಮೂರು ತಿಂಗಳ ಅವಧಿಯಲ್ಲಿ ಕೋಲ್ಕತ್ತಾದಾದ್ಯಂತ 156 ಸೋರುವ ಸಾರ್ವಜನಿಕ ನಲ್ಲಿಗಳನ್ನು ಸರಿಪಡಿಸುವ ಮೂಲಕ ಗ್ಯಾಲನ್ ನೀರನ್ನು ಉಳಿಸಿದ್ದಾರೆ.
ಆ್ಯಕ್ಟ್ಸ್ ಸಂಸ್ಥಾಪಕರಾದ ಅಜಯ್ ಮಿತ್ತಲ್ ಯುವರ್ ಸ್ಟೋರಿ ಯೊಂದಿಗೆ ಮಾತನಾಡುತ್ತಾ
"ಕೋಲ್ಕತಾ ನಗರ ಪಾಲಿಕೆಯು ಸರಬರಾಜು ಮಾಡಿದ 30% ನೀರು ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಹೇಳಿದೆ. ಜೊತೆಗೆ ಇದರ ಕುರಿತಾಗಿ ನಾನು ಆಳವಾಗಿ ತಿಳಿದಾಗ, ಕೋಲ್ಕತಾ ನಗರವು ಭಾರತದಲ್ಲಿ ಅತಿ ಹೆಚ್ಚು ನೀರನ್ನು ಬಳಸುತ್ತಿದ್ದು, ಒಬ್ಬ ವ್ಯಕ್ತಿಯು 600 ಲೀಟರ್ ಅಷ್ಟು ನೀರನ್ನು ಬಳಸುತ್ತಿರುವುದು ಕಂಡು ಬಂತು. ಸಮುದಾಯ-ನೇತೃತ್ವ ಹೊಂದಿರುವ ಅಭಿಯಾನಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿರುವದರಿಂದ ನಾನು ಸಮಾನ ಮನಸ್ಕರನ್ನು ಸೆಳೆಯಲು ನಿರ್ಧರಿಸಿದೆ" ಎಂದು ಹೇಳಿದರು.
ಸಾರ್ವಜನಿಕರ ಸಹಯೋಗ ಅತಿಮುಖ್ಯ
2019ರ ಜೂನ್‌ನಲ್ಲಿ ಕೋಲ್ಕತ್ತಾ ನಗರದಲ್ಲಿ ನೀರಿನ್ನು ಪೋಲು ಮಾಡುವುದರಿಂದಾಗಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿತ್ತು. ಟ್ರಾವೆಲ್ ಕಂಪನಿಯ ಮಾಲೀಕರಾದ ಹಾಗೂ ಎಸಿಟಿಎಸ್ ಗುಂಪಿನ ಸಕ್ರಿಯ ಸದಸ್ಯರಾದ ವಿಜಯ್ ಅಗರ್ವಾಲ್ ಇದನ್ನು ಗಮನಿಸಿದರು.
"ನಾನು ಕೋಲ್ಕತ್ತಾದ ದಕ್ಷಿಣ ಭಾಗದ ಚೆಟ್ಲಾದಲ್ಲಿದ್ದೆ. ಆಗ ನನ್ನ ಮಗನನ್ನು ಶ್ರೀ ಶ್ರೀ ಅಕಾಡೆಮಿ ಶಾಲೆಗೆ ಬಿಡುತ್ತಿದ್ದೆ. ಅಲ್ಲಿಯ ನೀರಿನ ನಲ್ಲಿಗಳು ನಿರಂತರವಾಗಿ ಸೋರುತ್ತಿರುವದನ್ನು ಗಮನಿಸಿದೆ. ಮುರಿದ ಕವಾಟಗಳಿಂದ ಇಂತಹ ಅನೇಕ ರಸ್ತೆಬದಿಯ ನಲ್ಲಿಗಳು ನೀರನ್ನು ಹೊರ ಹಾಕುತ್ತಲೇ ಇರುತ್ತವೆ ಎಂದು ಶೀಘ್ರದಲ್ಲೇ ಅರಿತೆ. ಏನಾದರೂ ಮಾಡವಹುದೇ ಎಂದು ನಾನು ಅಜಯ್ ಅವರನ್ನು ಸಂಪರ್ಕಿಸಿದೆ" ಎಂದು ವಿಜಯ್ ಹೇಳುತ್ತಾರೆ.
ನಂತರ ಶೀಘ್ರದಲ್ಲಿಯೇ, ಎಟಿಎಸ್ನ ಎಲ್ಲಾ ಸದಸ್ಯರು ನಗರದಾದ್ಯಂತ ಸೋರುವ ನಲ್ಲಿಗಳನ್ನು ಸರಿಪಡಿಸುವ ಉದ್ದೇಶದಿಂದ ಸೇರಿದರು. ಒಂದು ಗುಂಪು ಕೋಲ್ಕತ್ತಾದಾದ್ಯಂತ ಮೊಮಿನ್‌ಪುರ, ಎಕ್ಬಾಲ್ಪುರ, ಕಾಸ್ಬಾ, ಭವಾನಿಪುರ, ಹಜ್ರಾ, ಮತ್ತು ಪಿಯರಾ ಬಗಾನ್ ಪ್ರದೇಶಗಳಲ್ಲಿ ಸೋರಿಕೆಯಾಗುವ ನಲ್ಲಿಗಳನ್ನು ಗುರುತಿಸಿದರೆ, ಇನ್ನೊಂದು ಗುಂಪು ಅದನ್ನು ಸರಿಪಡಿಸಲು ಹತ್ತಿರದ ಕೊಳಾಯಿಗಾರರೊಂದಿಗೆ ಸಂಯೋಜಿಸಿದ್ದಾರೆ. ಮೂರು ತಿಂಗಳಗಳ ಪ್ರಯತ್ನದ ನಂತರ 156 ನಲ್ಲಿಗಳನ್ನು ಸರಿಪಡಿಸಿದರು. ಇದರಿಂದ ಅಪಾರ ಪ್ರಮಾಣದ ನೀರನ್ನು ಉಳಿಸಲಾಯಿತು.
"ಗುಂಪಿನಲ್ಲಿ ಒಡಗೂಡುವ ಮೂಲಕ ಬಹಳಷ್ಟು ಜನರು ಈ ಉಪಕ್ರಮವನ್ನು ಪ್ರಶಂಸಿದರು. ಉತ್ತಮ ಜೀವನಕ್ಕಾಗಿ ಸರಿಪಡಿಸುವಿಕೆ ಧ್ಯೇಯದೊಂದಿಗೆ ಇದನ್ನು ಅನುಸರಿಸುತ್ತಿದ್ದೇವೆ. ಯಾವುದೇ ಒಂದು ದೊಡ್ಡ ಸಮಸ್ಯೆಯನ್ನು ಸಣ್ಣ ಪರಿಹಾರದ ಮೂಲಕ ಹೇಗೆ ನಿಭಾಯಿಸಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದೇ ನಾನು ಭಾವಿಸುತ್ತೇನೆ". ಇಲ್ಲಿ ಸದಸ್ಯರಿಂದ ಸ್ವಲ್ಪ ಹಣವನ್ನು ಸಂಗ್ರಹಿಸಿ, ನೀರಿನ ನಲ್ಲಿಗಳನ್ನು ಸರಿಪಡಿಸಲು ಕೊಳಾಯಿಗಾರರನ್ನು ಕರೆಸುತ್ತೇವೆ" ಎಂದು ಅಜಯ್ ಹೇಳುತ್ತಾರೆ.
ಇದು ಶುರುವಾಗಿದ್ದು ಹೇಗೆ
ಅಂತರಾಷ್ಟ್ರೀಯ ಯುವಜನ ಸಂಘಟನೆಯಾದ ಎಐಇಎಸ್ಇಸಿ ಜೊತೆಕೆಲಸ ಮಾಡುವ ಸಂದರ್ಭದಲ್ಲಿ ಅಜಯ್ ಮತ್ತು ವಿನಯ್ ಪರಸ್ಪರ ಭೇಟಿಯಾದರು. ಅಲ್ಲಿ ಅವರು ಕೋಲ್ಕತಾದ ಮಾಲಿನ್ಯ ಪರಿಸರ ಮತ್ತು ನೀರಿನ ಗುಣಮಟ್ಟದ ಹಾನಿಕಾರಕ ಪರಿಣಾಮಗಳ ಬಗ್ಗೆ ಚರ್ಚಿಸುತ್ತಾರೆ.
2017ರಲ್ಲಿ ನಗರವು ಪರಿಸರಕ್ಕೆ ಹಾಗೂ ಜನರ ಆರೋಗ್ಯದ ಮೇಲೆ ಅಪಾಯವನ್ನುಂಟು ಮಾಡುವ ಅತೀ ಹೆಚ್ಚಿನ ಮಟ್ಟದ ಮಾಲಿನ್ಯವನ್ನು ಅನುಭವಿಸಿದಾಗ, ಇವರಿಬ್ಬರು ಅದರ ವಿರುದ್ಧ ಹೆಜ್ಜೆ ಹಾಕಲು ನಿರ್ಧರಿಸಿದರು.
"ದೊಡ್ಡ ಪ್ರಮಾಣದ ಬದಲಾವಣೆಯನ್ನು ತರಲು ಇರುವ ಉತ್ತಮ ಮಾರ್ಗವೆಂದರೆ ನಾಗರಿಕರ ಸಕ್ರಿಯ ಭಾಗವಹಿಸುವಿಕೆ ಮೂಲಕ ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ, ನಮ್ಮ ನೆಟವರ್ಕ್ ಮೂಲಕ ವೈದ್ಯರು, ಪರಿಸರವಾದಿಗಳು, ವಿದ್ಯಾರ್ಥಿಗಳು, ಎನ್‌ಜಿಒಗಳ ಸ್ಥಾಪಕರು ಮತ್ತು ನಿವಾಸಿಗಳನ್ನು ಆಹ್ವಾನಿಸಿ ಸಭೆಯನ್ನು ಆಯೋಜಿಸಿದೆವು. ಅವರಲ್ಲಿ ಹೆಚ್ಚಿನವರು ಸಂತೋಷದಿಂದ ತಮ್ಮ ಬೆಂಬಲ ನೀಡಿದರು. ನಾವು 2017ರಲ್ಲಿ 'ಕೋಲ್ಕತ್ತಾ ಕ್ಲೀನ್ ಏರ್' ಅಭಿಯಾನವನ್ನು ಪ್ರಾರಂಭಿಸಿದೆವು" ಎಂದು ಅಜಯ್ ನೆನಪಿಸಿಕೊಳ್ಳುತ್ತಾರೆ.
ಸೈಕಲ್ ಸಮಾಜ, ಗ್ಲೋಬಲ್ ಶೇಪರ್ಸ್ ಕೋಲ್ಕತಾ ಹಬ್, ಕಾರ್ಮೆಲ್ ಶಾಲೆ, ನಾರಾಯಣ ಆಸ್ಪತ್ರೆ ಮತ್ತು ಜಾಧವಪುರ ವಿಶ್ವವಿದ್ಯಾಲಯ ಸೇರಿದಂತೆ ಈ ಅಭಿಯಾನಕ್ಕೆ ವಿವಿಧ ಶಾಲೆಗಳು ಮತ್ತು ಸಂಸ್ಥೆಗಳ ಬೆಂಬಲವೂ ಸಿಕ್ಕಿತು.
ಈ ಅಭಿಯಾನದ ಮುಖ್ಯ ಉದ್ದೇಶ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶುದ್ಧ ಗಾಳಿಯನ್ನು ಉಸಿರಾಡಬಹುದೆಂದು ಖಚಿತಪಡಿಸಿಕೊಳ್ಳಲು ಜೀವನಶೈಲಿಯ ಬದಲಾವಣೆಯನ್ನು ಸಂಯೋಜಿಸಲು ಜನರಿಗೆ ಸಹಾಯ ಮಾಡುತ್ತದೆ. ಈ ಗುಂಪು ವಾಕ್‌ಥಾನ್‌ಗಳು, ಸಮ್ಮೇಳನಗಳು, ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳು, ಯೋಗ ಅಧಿವೇಶನಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಡೆಸಿತು.
ನೀರಿನ ಉಳಿಕೆಗಾಗಿ ಅಭಿಯಾನ
ಮೊಮಿನ್‌ಪುರದ ನಿವಾಸಿ ಆಕಾಶ್ ಶಾ ಅವರು ನೀರಿನ ಕೊರತೆಯಿಂದಾಗಿ ತಮ್ಮ ಪ್ರದೇಶದಲ್ಲಿ ಅನಾನುಕೂಲತೆಯನ್ನು ಎದುರಿಸಿದರು. ಈಗ ಆ ಪರಿಸ್ಥಿತಿಯನ್ನು ಪರಿಹರಿಸಲಾಗಿದೆ ಎಂದು ಸಂತೋಷ ಪಡುತ್ತಾರೆ.
"ಅನೇಕ ಬಾರಿ, ನಾವು ನೀರಿನ ಮೂಲಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಾಡಬೇಕಾಗುತ್ತಿತ್ತು. ನೀರು ತುಂಬುವಾಗ ಟ್ಯಾಂಕರ್‌ಗಳಿಗೆ ದೀರ್ಘ ಸರತಿ ಸಾಲುಗಳು ಮತ್ತು ಸಣ್ಣಪುಟ್ಟ ವಾಗ್ವಾದಗಳು ಸಾಮನ್ಯ ಸಂಗತಿಯಾಗಿದ್ದವು. ಉತ್ಸಾಹಭರಿತ ನಾಗರಿಕರ ಗುಂಪೊಂದು ಸಿಕ್ಕಿ, ಸೋರಿಕೆಯಾಗುತ್ತಿದ್ದ ಎಲ್ಲ ನಲ್ಲಿಗಳನ್ನು ಸರಿಪಡಿಸಿ ನಮ್ಮ ತೊಂದರೆಗಳನ್ನು ನಿವಾರಿಸಿತು" ಎಂದು ಅವರು ಹೇಳುತ್ತಾರೆ.
ನೀರನ್ನು ಉಳಿಸುವ ಮೂಲಕ ನೆರೆಹೊರೆಯವರನ್ನು ಹೆಚ್ಚು ವಾಸಿಸುವಂತೆ ಮಾಡಲು ನಾಗರಿಕರ ನೇತೃತ್ವದ ಚಳುವಳಿಯ ಯಶಸ್ವಿ ಉದಾಹರಣೆಯೆಂದರೆ ಅಜಯ್ ಮತ್ತು ವಿನಯ್ ಅವರ ಪ್ರಯತ್ನಗಳು. ಕಳೆದ ಕೆಲವು ತಿಂಗಳುಗಳಲ್ಲಿ ಈ ಅಭಿಯಾನ ತುಂಬಾ ಪರಿಣಾಮಕಾರಿಯಾಗಿತ್ತೆಂದು ಬೌಬಜಾರ್ ಪ್ರದೇಶದ ಸ್ಥಳೀಯ ಠಾಣೆಯ ಹೆಚ್ಚುವರಿ ಪೋಲಿಸ್ ಅಧಿಕಾರಿಯಾದ ಸಿದ್ದಾರ್ಥ ಚಟರ್ಜಿ ಹೇಳುತ್ತಾರೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.