ಮಕ್ಕಳಿಗೆ ಉಚಿತ ಪಾಠ ಮಾಡಿದ ವಿಶಿಷ್ಟ ಕಾರ್ಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಿಂದ ಪದಕ ಪಡೆದ ಐಐಟಿ ವಿದ್ಯಾರ್ಥಿ
ಐಐಟಿ ರೂರ್ಕಿಯ ಉತ್ಪಾದನೆ ಮತ್ತು ಕೈಗಾರಿಕಾ ವಿಷಯದಲ್ಲಿ ಎಂಜನಿಯರಿಂಗ್ ಪದವಿ ಪಡೆದ 22ರ ಹರೆಯದ ಅನಂತ್ ವಸಿಷ್ಠ ತಮ್ಮ ವಿಶಿಷ್ಟ ಕಾರ್ಯಕ್ಕೆ ಪ್ರತಿಷ್ಟಿತ ಡಾ.ಜೈ ಕೃಷ್ಣ ಚಿನ್ನದ ಪದಕವನ್ನು ಪಡೆದಿದ್ದಾರೆ.
ಅಷ್ಟಕ್ಕೂ ಅನಂತ್ ವಸಿಷ್ಠ ಮಾಡಿದ್ದೆನು?
ಈ ವರ್ಷ ಉತ್ಪಾದನೆ ಹಾಗೂ ಕೈಗಾರಿಕಾ ಇಂಜನಿಯರಿಂಗ್ ನಲ್ಲಿ ಬಿ.ಟೆಕ್ ಮುಗಿಸಿದ 22 ವರ್ಷದ ವಿದ್ಯಾರ್ಥಿ ಅನಂತ್ ವಸಿಷ್ಠ ಕಲಿಯಾರ್ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠವನ್ನು ಕಲಿಸುವ ಮೂಲಕ ಮಾದರಿಯಾಗಿದ್ದಾರೆ. ಇದಕ್ಕಾಗಿ ಯುವ ನಾಯಕತ್ವ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ್ದಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಚಿನ್ನದ ಪದಕವನ್ನು ಪಡೆದಿದ್ದಾರೆ.
ಐಐಟಿ ರೂರ್ಕಿಯ 19ನೇ ವಾರ್ಷಿಕ ಸಮ್ಮೇಳನದಲ್ಲಿ ಅನಂತ್ ವಸಿಷ್ಠ ಅವರ ಕಾರ್ಯವನ್ನು ಶ್ಲಾಘಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರ ಜೊತೆಗೆ ಇತರೆ ಎಂಟು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದರು.
ಅನಂತ್ ವಸಿಷ್ಠ ಪ್ರಸ್ತುತ ಗುರಗಾಂವ್‌ನ ಮಾಸ್ಟರ್ ಕಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 2015ರಲ್ಲಿ ತಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆದ ನಂತರ ತಮ್ಮ ಕಾಲೇಜಿನ ಸಮೀಪವಿರುವ ಕಲಿಯಾರ್ ಗ್ರಾಮದ ಬಡ ಹಾಗೂ ದೀನದಲಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
ತಮ್ಮ ಸ್ನೇಹಿತರೊಂದಿಗೆ ಪ್ರತಿ ಶನಿವಾರ ಮತ್ತು ಭಾನವಾರದ ದಿನಗಳಂದು 2015ರಿಂದ ಈ ವರ್ಷದವರೆಗೆ ನಾಲ್ಕು ವರ್ಷಗಳ ಕಾಲ ಪಾಠವನ್ನು ಮಾಡಿದ್ದಾರೆ. ಜೊತೆಗೆ ಅವರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟೆಂಟ್, ಕಪ್ಪುಹಲಗೆ, ಬಳಪ ಹಾಗೂ ಕುರ್ಚಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ತಮ್ಮ ಈ ಕಾರ್ಯಕ್ಕಾಗಿ ಅವರು ತಮ್ಮ ಕಾಲೇಜಿನಿಂದ ಎಂಟು ಕಿ.ಮೀ ದೂರದ ಹಳ್ಳಿಗೆ ಹೋಗುತ್ತಿದ್ದರು.
ಪಿಟಿಐ ಜೊತೆ ಮಾತನಾಡಿದ ವಸಿಷ್ಠ,
"ಆರಂಭದಲ್ಲಿ ಹಳ್ಳಿಯ ಜನರು ಹೊರಗಿನವರನ್ನು ನಂಬದ ಕಾರಣ ಮಕ್ಕಳನ್ನು ಅಧ್ಯಯನಕ್ಕೆ ಕಳುಹಿಸುವಂತೆ ಅವರ ಮನವೊಲಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಅದಾಗ್ಯೂ ಅವರು ನನ್ನ ಉದ್ದೇಶವನ್ನು ಅರಿತುಕೊಂಡರು. ಹಾಗೂ ಐದು ಮಕ್ಕಳಿಂದ ಪ್ರಾರಂಭವಾದ ತರಗತಿಗಳು ಇದೀಗ ಹದಿನೈದರಿಂದ ಇಪ್ಪತ್ತು ಮಕ್ಕಳನ್ನು ಹೊಂದಿದ್ದಾವೆ" ಎನ್ನುತ್ತಾರೆ.
ಸಮಯ ಹೊಂದಾಣಿಕೆ
ತಮ್ಮ ಕಾಲೇಜಿನ ವಿದ್ಯಾಭ್ಯಾಸದ ನಡುವೆ ಇದಕ್ಕೆ ಹೇಗೆ ಸಮಯ ಹೊಂದಿಸಿಕೊಳ್ಳುವಿರಿ ಎಂದು ಕೇಳಿದಾಗ, ಬೋಧನೆಯು ನನಗೆ ತುಂಬಾ ಇಷ್ಟ. ಮಕ್ಕಳ ಮತ್ತು ಸಮಾಜ ಕಲ್ಯಾಣಕ್ಕಾಗಿ ಇಂತಹ ಪ್ರಯತ್ನಗಳನ್ನು ಮಾಡುವದರಲ್ಲಿ ಹಿಂಜರಿಯುವುದಿಲ್ಲ ಎಂದಿದ್ದಾರೆ.
"ಗಣಿತ ನನ್ನ ನೆಚ್ಚಿನ ವಿಷಯವಾಗಿದ್ದರಿಂದ, ನಾನು ಅವರಿಗೆ ಇತರೆ ವಿಷಯಗಳನ್ನು ಕಲಿಸುವುದರ ಜೊತೆಗೆ ಇದನ್ನು ಪ್ರಮುಖವಾಗಿ ಕಲಿಸುತ್ತಿದ್ದೆ. ಜೊತೆಗೆ ಅನೇಕ ವಿಷಯ ಹಂಚಿಕೆಯ ಕುರಿತಾದ ಚರ್ಚೆಗಳನ್ನು ಆಯೋಜಿಸುತ್ತಿದ್ದೆ."
"ನಾಲ್ಕು ವರ್ಷಗಳಿಂದ ಮಕ್ಕಳಿಗೆ ಕಲಿಸುವುದು ಒಂದು ವಿಸಿಷ್ಟ ಸಂಗತಿಯಾಗಿತ್ತು. ಇದೀಗ ನಾನು ಕೆಲಸದ ಅನಿವಾರ್ಯತೆಗಾಗಿ ಗುರ್‌ಗಾಂವ್‌ನಲ್ಲಿ ನನ್ನ ನೆಲೆಯನ್ನು ಬದಲಾಯಿಸಿದ್ದರಿಂದ ಈಗ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರೆಲ್ಲರೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಜೊತೆಗೆ ಅವರ ಮುಂದಿನ ದಿನಗಳಲ್ಲಿ ಅವರಿಗೆ ಸಹಾಯ ಮಾಡಲು ನಾನು ಸಂತೋಷ ಪಡುತ್ತೇನೆ" ಎಂದು ವಸಿಷ್ಠ ಹೇಳುತ್ತಾರೆ.
ತಮ್ಮ ಮುಂದಿನ ಯೋಜನೆಗಳ ಕುರಿತಾಗಿ ವಸಿಷ್ಠ ಅವರು ಯಾವುದೇ ಸಂಸ್ಥೆ ಅಥವಾ ಅವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೋಧನೆಯನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳುತ್ತಾರೆ.
"ನಾನು ಉನ್ನತ ಶಿಕ್ಷಣಕ್ಕಾಗಿ ಯುಎಸ್ ನಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಪ್ರವೇಶ ಪಡೆಯುವ ಗುರಿಯನ್ನು ಹೊಂದಿದ್ದು, ನಂತರ ನನ್ನ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ" ಎಂದು ಅನಂತ್ ವಸಿಷ್ಠ ಹೇಳುತ್ತಾರೆ.