ತಮಿಳುನಾಡಿನಾದ್ಯಂತ 4,000 ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಿದ 26 ವರ್ಷದ ಯುವಕ

ಕೋಮರಪಾಲಯಂನ ಜೆಕೆಕೆಎನ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನವೀನ್ ಕುಮಾರ್ ಅವರು 400 ಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿರುವ ಅಚಾಯಂ ಟ್ರಸ್ಟ್‌ನ ನೇತೃತ್ವ ವಹಿಸಿದ್ದಾರೆ ಮತ್ತು ಈಗ ತಮಿಳುನಾಡಿನ ಸುಮಾರು 18 ಜಿಲ್ಲೆಗಳಲ್ಲಿ ಈ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ.

ತಮಿಳುನಾಡಿನಾದ್ಯಂತ 4,000 ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಿದ 26 ವರ್ಷದ ಯುವಕ

Sunday January 19, 2020,

2 min Read

ಭಾರತದ ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷುಕರು ಸರ್ವೇಸಾಮಾನ್ಯ. ಅವರು ನಮ್ಮ ಎದುರು ಬಂದಾಗ, ನಾವು ಮಾಡುವ ಎರಡು ಕೆಲಸಗಳೆಂದರೆ, ಅವರನ್ನು ನಿರ್ಲಕ್ಷಿಸುತ್ತೇವೆ ಅಥವಾ ನಂಗೆ ತೊಡರೆ ನೀಡಬಾರದೆಂದು ಅವರಿಗೆ ಸ್ವಲ್ಪ ಹಣವನ್ನು ನೀಡುತ್ತೇವೆ. ಆದರೆ, ಇದು ಅವರ ಪರಿಸ್ಥಿತಿಯನ್ನು ಮತ್ತು ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಭಾರತದ ಬಡವರ ಸಂಖ್ಯೆ ಹೆಚ್ಚುತ್ತಿದೆ. ಅಚಾಯಂ ಟ್ರಸ್ಟ್‌ನ ಸಂಸ್ಥಾಪಕ 26 ವರ್ಷದ ನವೀನ್ ಕುಮಾರ್ ಕೂಡ ಇದನ್ನೇ ಯೋಚಿಸುತ್ತಾರೆ.


2014 ರಿಂದ, ನವೀನ್ ಅವರ ಟ್ರಸ್ಟ್ 4,300 ಕ್ಕೂ ಹೆಚ್ಚು ಭಿಕ್ಷುಕರಿಗೆ ಯಶಸ್ವಿಯಾಗಿ ಸಹಾಯ ಮಾಡಿದೆ ಮತ್ತು ಅವರಲ್ಲಿ 424 ಜನರಿಗೆ ಪುನರ್ವಸತಿ ಕಲ್ಪಿಸಿದೆ. 2019 ರಲ್ಲಿ ನವೀನ್ ಕುಮಾರ್ ಒಬ್ಬರೇ 104 ಭಿಕ್ಷುಕರ ಪುನರ್ವಸತಿಗೆ ಸಹಾಯ ಮಾಡಿದ್ದಾರೆ.


ನವೀನ್ ಸ್ವಯಂಸೇವಕರೊಂದಿಗೆ ಭಿಕ್ಷುಕರಲ್ಲಿ ಒಬ್ಬರನ್ನು ಕರೆದೊಯ್ಯುತ್ತಿರುವುದು (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಈ ಟ್ರಸ್ಟ್ ತಮಿಳುನಾಡಿನ 18 ಜಿಲ್ಲೆಗಳಲ್ಲಿ ಅಸ್ತಿತ್ವವದಲ್ಲಿದೆ ಮತ್ತು ಇದನ್ನು 400 ಕ್ಕೂ ಹೆಚ್ಚು ಸ್ವಯಂಸೇವಕರು ನಡೆಸುತ್ತಿದ್ದಾರೆ.


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ನವೀನ್,


"ನನ್ನ ಮುಖ್ಯ ಧ್ಯೇಯವೆಂದರೆ ಭಿಕ್ಷುಕರಿಲ್ಲದ ಮುಕ್ತ ಭಾರತವನ್ನು ಮಾಡುವುದು. ಇದನ್ನು ಸಾಧಿಸಲು, ಮೊದಲ ಹೆಜ್ಜೆಯೆಂದರೆ ಹಣವನ್ನು ನೀಡುವ ಮೂಲಕ ಭಿಕ್ಷುಕರನ್ನು ಪ್ರೋತ್ಸಾಹಿಸಬಾರದು. ಬದಲಿಗೆ, ಜನರು ಅವರಿಗೆ ಉದ್ಯೋಗಾವಕಾಶಗಳು, ಆಹಾರ, ಬಟ್ಟೆಗಳನ್ನು ನೀಡಿ ಸಾಮಾಜಿಕ ಭದ್ರತೆಗಾಗಿ ಆಶ್ರಯದ ವ್ಯವಸ್ಥೆ ಮಾಡಬೇಕು ಎಂದರು.”


ಕೋಮರಪಾಲಯಂನ ಜೆಕೆಕೆಎನ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ನವೀನ್, ಕಾಲೇಜಿನಲ್ಲಿ ತನ್ನ ಪೂರ್ಣ ಸಮಯದ ಕೆಲಸವನ್ನು ನಿರ್ವಹಿಸುವುದರ ಜೊತೆ ಟ್ರಸ್ಟ್ ಅನ್ನು ಸಹ ನೋಡಿಕೊಳ್ಳುತ್ತಾರೆ.


ಅವರಿಗೆ, ಭಿಕ್ಷುಕರಿಗೆ ಹೊಸ ಜೀವನದ ಅವಕಾಶವನ್ನು ಒದಗಿಸುವುದು ಮುಖ್ಯ ಆದ್ಯತೆಯಾಗಿದೆ. ಸ್ವತಃ ಬಡತನದ ಹಿನ್ನೆಲೆಯಿಂದ ಬಂದ ಅವರು, ತನ್ನ ಉದ್ದೇಶಗಳನ್ನು ಪೂರೈಸಲು ಅನುಭವಿಸಬೇಕಾದ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ.


ಒಮ್ಮೆ ಭಿಕ್ಷುಕನು ತನಗೆ ನೀಡಲಾದ ಹಣದಿಂದ ಮದ್ಯವನ್ನು ಖರೀದಿಸಿರುವುದು ತಿಳಿದ ನಂತರ ನವೀನ್ ಭಿಕ್ಷುಕರ ಜೀವನವನ್ನು ಬದಲಾಯಿಸಲು ಪ್ರಯತ್ನಿಸಲು ನಿರ್ಧರಿಸಿದರು. ಭಾರತದಲ್ಲಿ ಭಿಕ್ಷಾಟನೆಯ ಯಥಾಸ್ಥಿತಿಯನ್ನು ಅರಿಯಲು ಮತ್ತು ಪರಿಹಾರ ಹುಡುಕಲು ನವೀನ್ ಎಪಿಜೆ ಅಬ್ದುಲ್ ಕಲಾಂ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು.


ತಂಡದೊಂದಿಗೆ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಡೆಕ್ಕನ್ ಕ್ರಾನಿಕಲ್ ಜೊತೆ ಮಾತನಾಡುತ್ತ,


"ವಯಸ್ಸಾದ ಜನರು ಬೀದಿಗಳಲ್ಲಿ ಗೊತ್ತು ಗುರಿಯಿಲ್ಲದೆ ತಿರುಗಾಡುವುದನ್ನು ನಾನು ನೋಡುತ್ತಿದ್ದೆ ಮತ್ತು ನಾನು ಅವರಿಗೆ ಏನಾದರೂ ಸಹಾಯ ಮಾಡಲು ಬಯಸಿದೆ. ಆದರೆ ನನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ನೋಡಿ, ಇತರರನ್ನು ಸುಧಾರಿಸಲು ಪ್ರಯತ್ನಿಸಿ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ ಹೆಚ್ಚಾಗಿ ನನ್ನ ಅಧ್ಯಯನದತ್ತ ಗಮನಹರಿಸಲು ಜನರು ನನಗೆ ಹೇಳಿದರು. ಇದು ನನಗೆ ನೋವುಂಟು ಮಾಡಿತು ಮತ್ತು ಅವರ ಜೀವನವನ್ನು ಬದಲಾಯಿಸುವ ಹಂಬಲ ನನ್ನ ತಲೆಯೊಳಗೆ ಹಾಗೆಯೇ ಉಳಿಯಿತು,” ಎಂದರು.


ಕಾರು ಅಪಘಾತದಲ್ಲಿ ಕುಟುಂಬದವರನ್ನು ಮತ್ತು ಗುರುತಿನ ಪತ್ರಗಳನ್ನು ಕಳೆದುಕೊಂಡ 60 ವರ್ಷದ ರಾಜಶೇಖರ್ ಅವರಿಗೆ ಆಶ್ರಯ ನೀಡುವುದು ನವೀನ್ ಅವರ ಮೊದಲ ಪುನರ್ವಸತಿ ಯೋಜನೆಯಾಗಿತ್ತು. ಐಡಿ ಇಲ್ಲದೆ ಅವರಿಗೆ ಕೆಲಸ ಪಡೆಯುವುದು ಸುಲಭವಾಗಿರಲಿಲ್ಲ, ಆದರೆ ಸ್ನೇಹಿತನ ಸಹಾಯದಿಂದ ಮಕ್ಕಳ ಮನೆಯಲ್ಲಿ ನವೀನ್ ಅವರಿಗೆ ಕಾವಲುಗಾರನ ಕೆಲಸವನ್ನು ಕೊಡಿಸಿದರು.


ಅಂದಿನಿಂದ, ಜನರಿಗೆ ಬಟ್ಟೆಗಳನ್ನು ವಿತರಿಸುವುದು, ಕಿಟ್‌ಗಳನ್ನು ಸ್ವಚ್ಚಗೊಳಿಸುವುದು, ಆಹಾರ ಮತ್ತು ವೈದ್ಯಕೀಯ ಆರೈಕೆ ಮಾಡುವ ಮೂಲಕ ನವೀನ್ ಅನೇಕರಿಗೆ ಸಹಾಯ ಮಾಡಿದ್ದಾರೆ.


ಟ್ರಸ್ಟ್ ಸ್ನಾನದ ವ್ಯವಸ್ಥೆ, ಹೇರ್ಕಟ್ಸ್ ಅಥವಾ ಶೇವ್‌ಗಳನ್ನು ಬಿಕ್ಷುಕರಿಗೆ ನೀಡುತ್ತದೆ, ಇದನ್ನು ನರ್ಸಿಂಗ್ ತಂಡವು ಮಾಡುತ್ತದೆ. ನಂತರ, ಅವುಗಳನ್ನು 19 ವಿಭಾಗಗಳಾಗಿ ವರ್ಗೀಕರಿಸಲಾಗಿದೆ, ಅದರ ಆಧಾರದ ಮೇಲೆ ಪ್ರತಿ ಭಿಕ್ಷುಕರನ್ನು ವೃದ್ಧಾಶ್ರಮಕ್ಕೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ಒಬ್ಬ ಭಿಕ್ಷುಕನಿಗೆ ಪುನರ್ವಸತಿ ಕಲ್ಪಿಸಲು 8,000 ರಿಂದ 10,000 ರೂಪಾಯಿಗಳು ಬೇಕಾಗುತ್ತವೆ. ಭಿಕ್ಷುಕರನ್ನು ಸೇರಿಸಿಕೊಳ್ಳಲು ಪ್ರತಿಯೊಂದು ಮನೆಗೂ ತನ್ನದೇ ಆದ ಮಾನದಂಡವಿರುತ್ತದೆ. ಉದಾಹರಣೆಗೆ, ಮಾನಸಿಕ ವಿಕಲಚೇತನ ಭಿಕ್ಷುಕನನ್ನು ಮಾನಸಿಕ ವಿಕಲಚೇತನರಿಗೆ ಎಂದೇ ಇರುವ ಮನೆಗೆ ಸೇರಿಸಬಹುದು. ಸರಿಯಾದ ಮನೆಯನ್ನು ಹುಡುಕಲು ಸಾಕಷ್ಟು ಪ್ರಯಾಣ ವೆಚ್ಚ ತಗುಲುತ್ತವೆ,” ಎಂದು ನವೀನ್ ದಿ ಲಾಜಿಕಲ್ ಇಂಡಿಯನ್ಗೆ ತಿಳಿಸಿದರು.