ಧಾರ್ಮಿಕ ವೆಚ್ಚಗಳಿಗೆ ಕಡಿವಾಣ ಹಾಕಿ ಮಕ್ಕಳ ಶಾಲೆಗೆ ಸಹಾಯ ಮಾಡುತ್ತಿರುವ ಈ ಗ್ರಾಮ
ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಪೋಖ್ರಿ ಗ್ರಾಮದ ಜಿಲ್ಲಾ ಪಂಚಾಯಿತಿಯು ಧಾರ್ಮಿಕ ವೆಚ್ಚಗಳಿಗೆ ಕಡಿವಾಣ ಹಾಕಿ ಅದರಿಂದ ಉಳಿಯುವ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸುತ್ತಿದೆ.
2016ರಲ್ಲಿ ಬೆಳ್ಳಿತೆರೆಯಲ್ಲಿ ಉಪೇಂದ್ರ ಅವರು ನಟಿಸಿದ "ಮುಕುಂದ ಮುರಾರಿ" ಸಿನಿಮಾ ದೈವ ಭಕ್ತಿ, ಅದಕ್ಕೆ ಖರ್ಚು ಮಾಡುವದರ ಕುರಿತಾಗಿನ ವಾಸ್ತವವನ್ನು ಪ್ರೇಕ್ಷಕರೆದುರಿಗೆ ತೆರೆದಿಟ್ಟಿತ್ತು.
ಧಾರ್ಮಿಕ ಕಾರ್ಯಗಳಿಗಿಂತ ಮಕ್ಕಳ ಶಿಕ್ಷಣ ಹೆಚ್ಚು ಎಂಬುದನ್ನು ಅರಿತ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಪೋಖ್ರಿ ಗ್ರಾಮದ ಜಿಲ್ಲಾ ಪಂಚಾಯಿತಿ ವಿನೂತನ ಕಾರ್ಯಕ್ಕೆ ಮುಂದಾಗಿದೆ. ಈ ಮೂಲಕ ಧಾರ್ಮಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಆ ದುಡ್ಡನ್ನು ಶಾಲೆಯ ಅಭಿವೃದ್ಧಿಗೆ ಬಳಸಲು ನಿರ್ಧರಿಸಿದೆ.
ಪೋಖ್ರಿ ಗ್ರಾಮದಲ್ಲಿರುವ ಪ್ರಸ್ತುತ ಶಾಲಾ ಆವರಣವು 20,000 ಚದರ ಅಡಿ (ಸುಮಾರು 0.45 ಎಕರೆ) ಪ್ರದೇಶದಲ್ಲಿದೆ. ಅದಕ್ಕಾಗಿ ಶಾಲಾ ಆವರಣವನ್ನು ವಿಸ್ತರಿಸಲು ಎರಡು ಎಕರೆ ಭೂಮಿಯನ್ನು ಖರೀದಿಸುವ ಯೋಜನೆ ಇದೆ ಎಂದು ಜಿಲ್ಲಾ ಪರಿಷತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾವ್ನೀತ್ ಕೌರ್ ಹೇಳುತ್ತಾರೆ.
ಈ ಪರಿಕಲ್ಪನೆಯ ಕುರಿತಾಗಿ ಸಂತಸ ವ್ಯಕ್ತಪಡಿಸಿದ ಅವರು,
"ಗ್ರಾಮಸ್ಥರು ಶಾಲೆಯನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದ್ದಾರೆ. ಜಿಲ್ಲಾ ಪರಿಷತ್ ಈ ಪ್ರಯತ್ನಕ್ಕೆ ಸಂಪೂರ್ಣ ಹೃದಯದಿಂದ ಕೊಡುಗೆ ನೀಡುತ್ತದೆ," ಎಂದಿದ್ದಾರೆ, ವರದಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್.
ಗ್ರಾಮಸ್ಥರು ಈಗಾಗಲೇ ಅಂಗನವಾಡಿಯನ್ನು (ಸರ್ಕಾರಿ ಮಕ್ಕಳ ಹಾಗೂ ಮಹಿಳಾ ಆರೈಕೆ ಕೇಂದ್ರ) ಶಾಲೆಯ ಕಂಪ್ಯೂಟರ್ ಪ್ರಯೋಗಾಲಯವಾಗಿ ಮಾರ್ಪಾಡಿಸಿ ಅದನ್ನು ಡಿಜಿಟಲೀಕರಣಗೊಳಿಸಿದ್ದಾರೆ, ವರದಿ ಸ್ಟೋರಿಪಿಕ್.
ಶಾಲೆ ಮತ್ತು ಶಾಲೆಗೆ ಸೌಲಭ್ಯಗಳನ್ನು ನವೀಕರಿಸುವುದಕ್ಕಾಗಿ ಗ್ರಾಮಸ್ಥರು ಮೂರು ತಿಂಗಳ ಹಿಂದೆಯೇ ಧಾರ್ಮಿಕ ಚಟುವಟಿಕೆಗಳ ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ.
ಅಲ್ಲದೇ, "ಭಗವತ್ ಸಪ್ತಾಹ" ಎಂಬ ಒಂದು ವಾರದ ಧಾರ್ಮಿಕ ಕಾರ್ಯಕ್ರಮಗಳ ವೆಚ್ಚವನ್ನು ಕಡಿತಗೊಳಿಸಿದ್ದಾರೆ.
ವಿವಿಧ ಧಾರ್ಮಿಕ ಹಬ್ಬದ ಸಮಯದಲ್ಲಿ, ಒಂದು ಸ್ಥಳದಲ್ಲಿ ದಾಲ್ ಅನ್ನು ತಯಾರಿಸಿ, ಪ್ರತಿಯೊಬ್ಬ ವ್ಯಕ್ತಿಯು ಮನೆಯಿಂದಲೇ ಚಪಾತಿ ತರಬೇಕೆಂದು ನಿರ್ಧರಿಸಲಾಗಿದೆ. ಈ ರೀತಿ ಉಳಿಸಿದ ಮೊತ್ತವನ್ನು ಶಾಲೆಯ ನವೀಕರಣಕ್ಕಾಗಿ ಬಳಸಲಾಗುತ್ತದೆ," ಎಂದು ಗ್ರಾಮಸ್ಥರಾದ ಬಾಲಾಸಾಹೇಬ್ ಭೋಸಲೆ ನ್ಯೂ ಇಂಡಿಯನ್ ಎಕ್ಸಪ್ರೆಸ್ ಗೆ ತಿಳಿಸಿದ್ದಾರೆ.
ಈ ಗ್ರಾಮದಲ್ಲಿ 450 ಮನೆಗಳಿದ್ದು, ಪ್ರತಿ ಮನೆಯವರು 5 ಎಕರೆಗಿಂತ ಕಡಿಮೆ ಭೂಮಿ ಇದ್ದರೆ 1,000 ರೂ ಮತ್ತು 5 ಎಕರೆಗಿಂತ ಜಾಸ್ತಿ ಇದ್ದರೆ, 5,000 ರೂಗಳನ್ನು ಶಾಲಾನಿಧಿಗೆ ದಾನ ಮಾಡಿದ್ದಾರೆ. ಇದಲ್ಲದೆ ಗ್ರಾಮ ಪಂಚಾಯತ್ ಇದುವರೆಗೂ 50,000 ರೂಗಳ ಸಹಾಯ ಮಾಡಿದ್ದು, ಗ್ರಾಮಸ್ಥರು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಿಎಸ್ಆರ್ ಯೋಜನೆಯ ಸಹಾಯವನ್ನು ಕೋರಿದ್ದಾರೆ ಎಂದು ವರದಿಯೊಂದು ಹೇಳುತ್ತದೆ.
"ನಮ್ಮಲ್ಲಿ ಇಲ್ಲಿಯವರೆಗೆ 240 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಹತ್ತಿರದ ಹಳ್ಳಿಯ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಪಕ್ಕದ ಹಳ್ಳಿಯ ಜನರು ಈ ಉಪಕ್ರಮಕ್ಕಾಗಿ ಹಣವನ್ನು ನೀಡಲು ಸಿದ್ಧರಿದ್ದಾರೆ, ಆದರೆ ನಾವು ಈ ಕುರಿತಾಗಿ ನಿರ್ಧಾರ ತೆಗೆದುಕೊಂಡಿಲ್ಲ,” ಎನ್ನುತ್ತಾರೆ ಭೋಸಲೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.