ಕೋವಿಡ್-19 ಕೊಠಡಿಗಳಲ್ಲಿ ವೈದ್ಯರು, ದಾದಿಯರ ಬದಲಿಗೆ ಕೆಲಸ ಮಾಡುತ್ತೆ ಈ ರೊಬೊಟ್
ಆಹಾರ, ಫೇಸ್ ಮಾಸ್ಕ್ ಮತ್ತು ಔಷಧಿಯನ್ನು ವಿತರಿಸುವುದಲ್ಲದೆ, ರೋಗನಾಶಕವನ್ನು ಸಿಂಪಡಿಸುತ್ತದೆ ಈ ರೊಬೊಟ್. ಅಷ್ಟೇ ಅಲ್ಲದೆ ರೋಗಿಯನ್ನು ನೇರ ಪ್ರಸಾರದ ಮೂಲಕ ನಿಗಾ ವಹಿಸಿ ಸಾಮಾಜಿಕ ಅಂತರವನ್ನು ಕಾಪಾಡಲು ಸಹಕಾರಿಯಾಗಲಿದೆ ಯಂತ್ರ.
ಡೆಹ್ರಾಡೂನ್ನ ಯುಪಿಇಎಸ್ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಕೊರೊನಾವೈರಸ್ ನೊಂದಿಗೆ ಮಾನವ ಸಂಪರ್ಕವನ್ನು ಕಡಿಮೆ ಮಾಡಬಲ್ಲಂತಹ ರೊಬೊಟ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ರೊಬೊಟ್ ಅವಶ್ಯಕ ವಸ್ತುಗಳಾದ ಆಹಾರ, ಔಷಧಿ ಮತ್ತು ಫೇಸ್ ಮಾಸ್ಕ್ಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ವಿತರಿಸುತ್ತದೆ. ರೋಗಿಯನ್ನು ನೇರ ಪ್ರಸಾರದ ಮೂಲಕ ನಿಗಾ ವಹಿಸಿ ಸಾಮಾಜಿಕ ಅಂತರವನ್ನು ಕಾಪಾಡಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಪ್ರತ್ಯೇಕ ಕೊಠಡಿಗೊಳಿಗೆ ರೋಗಿಗಳು ಹೋದ ಮೇಲೆ ಸೋಂಕುನಿವಾರಕವನ್ನು ಸಿಂಪಡಿಸುತ್ತದೆ ಈ ಯಂತ್ರ.
ಆಂಡ್ರಾಯ್ಡ್ ಅಪ್ಲಿಕೇಷನ್ ನಿಂದ ನಿಯಂತ್ರಿಸಬಹುದಾದ ಕ್ಷಿತಿಜ್ ಗರ್ಗ್ ಹಾಗೂ ಮಯಾಂಗ್ ಬರ್ಸೈನ್ಯಾ ಅವರ ರೊಬೊಟ್, ಯಾರಾದರೂ ಸಾಮಾಜಿಕ ಅಂತರದ ನಿಯಮಗಳನ್ನು ಮೀರಿದರೆ ಅಥವಾ ಮಾಸ್ಕ್ ಧರಿಸದಿದ್ದರೆ ಆಡಳಿತ ಮಂಡಳಿಗೆ ಎಚ್ಚರಿಕೆಯ ಕರೆಗಂಟೆಗಳನ್ನು ನೀಡುತ್ತದೆ. ಈ ರೊಬೊಟ್ನ ವಿದ್ಯುನ್ಮಂಡಲವನ್ನು ಬೇರೆ ಯಂತ್ರಗಳಿಗೂ ಅಳವಡಿಸಬಹುದಾಗಿದೆ. ನೈಜ ಸಮಯದಲ್ಲಿ ತಂತುಗಳಿಲ್ಲದೆ ಚಲಿಸುವ ಮತ್ತು ಸೋಂಕು ನಿವಾರಕವನ್ನು ಸಿಂಪಡಿಸುವ ನಿಯಂತ್ರಕಗಳನ್ನು ಹೊಂದಿಸಿ ಜೋಡಿಸಲಾಗಿದ್ದು, ಈ ಅನ್ವೇಷಣೆಗಾಗಿ ಇಬ್ಬರೂ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ಪೆಟೆಂಟ್ ಪಡೆಯಲಿದ್ದಾರೆ.
“ಸ್ವಚ್ಛತಾ ಕೆಲಸವನ್ನು ಹೊರತುಪಡಿಸಿ, ಯಂತ್ರವು ಪ್ರತ್ಯೇಕವಾಗಿ ಇರುವ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮಾಸ್ಕ್ ಹಾಗೂ ಔಷಧಿಯನ್ನು ವಿತರಿಸಬಲ್ಲದು. ನಾವು ಈಗಾಗಲೇ ಈ ಯಂತ್ರವನ್ನು ಕೆಂಪು ವಲಯದಲ್ಲಿ ಬರುವ ನಮ್ಮ ಸ್ಥಳದಲ್ಲಿ ಬಳಸುತ್ತಿದ್ದೇವೆ,” ಎಂದರು ಯುಪಿಇಎಸ್ನ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಓದುತ್ತಿರುವ ವಿದ್ಯಾರ್ಥಿ ಕ್ಷಿತಿಜ್ ಗರ್ಗ್.
ಈ ಮೂಲಮಾದರಿಯನ್ನು ಮನೆಯಲ್ಲಿ ಬೇಡವಾದ ಸಾಮಾಗ್ರಿಗಳಾದ ಬ್ಯಾಟರಿಗಳು, ಮೋಟಾರ್ಗಳು ಮತ್ತು ವಾಟರ್ ಪಂಪ್ಗಳನ್ನು ಸಣ್ಣ ನಿಯಂತ್ರಕಗಳು ಮತ್ತು ಸಂವೇದಕ ಚಿಪ್ಗಳೊಂದಿಗೆ ಜೋಡಿಸಿ ತಯಾರಿಸಲಾಗಿದೆ. ಯಂತ್ರದ ಸುಧಾರಿತ ಆವೃತ್ತಿಯನ್ನು ತಯಾರಿಸಲು ವಿದ್ಯಾರ್ಥಿಗಳು ಪ್ರೊಸೆಸರ್, ಕ್ಯಾಮೆರಾಗಳು ಮತ್ತು ಸಂಪರ್ಕರಹಿತ ಸಂವೇದಕಗಳಿಗಾಗಿ ಅನುಮತಿಯನ್ನು ಕೋರಿದ್ದಾರೆ. ಅವರು ಮೂಲಭೂತ ಪ್ರೋಗ್ರಾಂ (ಜಾವಾ, ಆಂಡ್ರಾಯ್ಡ್, ಸಿ)ಗಳು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಸಣ್ಣ ಪ್ರೊಸೆಸರ್ಗಳಿಗೆ ಬದಲಾಗಿ ಸಣ್ಣ ಸಂವೇದಕಗಳನ್ನು ಬಳಸಿ ಯಂತ್ರವನ್ನು ತಯಾರಿಸಿದ್ದಾರೆ.
ಸುಧಾರಿತ ಅವೃತ್ತಿಗೆ ಅವರು ಕೃತಕ ಬುದ್ಧಿಮತ್ತೆ ಹಾಗೂ ಮಶೀನ್ ಲರ್ನಿಂಗ್ ತಂತ್ರಜ್ಞಾನವನ್ನು ಸೇರಿಸಿ, ಅಪ್ಲಿಕೇಷನ್ ಗೆ ಕ್ಲೌಡ್ ಸಂಪರ್ಕವನ್ನು ಒದಗಿಸಲಿದ್ದಾರೆ. ಮೂಲಮಾದರಿಯನ್ನು 15 ಸಾವಿರ ರೂ. ಗಳ ವೆಚ್ಚದಲ್ಲಿ ತಯಾರಿಸಲಾಗಿದೆ.
“ದನಿವರಿಯದೆ ವೈರಸ್ನಿಂದ ಕಾಪಾಡಲು ಶ್ರಮಿಸುತ್ತಿರುವ ವೃತ್ತಪರರಿಗೆ ಇದೊಂದು ಸುಸ್ಥಿರ ಪರ್ಯಾಯವಾಗಲಿದ್ದು, ಕೋವಿಡ್-19 ಕೊಠಡಿಗಳಲ್ಲಿ ವೈದ್ಯರು ಮತ್ತು ನರ್ಸ್ಗಳ ಬದಲಿಗೆ ಕೆಲಸ ಮಾಡುತ್ತದೆ. ಅಪ್ಲಿಕೇಷನ್ನಿಂದ ರೊಬೊಟ್ ಅನ್ನು ನಿಯಂತ್ರಿಸಬಹುದಾದರಿಂದ ಜಗತ್ತಿನ ಯಾವುದೇ ಮೂಲೆಯಿಂದ ಯಂತ್ರವನ್ನು ಯಾರೂ ಬೇಕಾದರೂ ನಿರ್ವಹಿಸಬಹುದು. ಪ್ರಸ್ತುತದ ಮೂಲಮಾದರಿಯನ್ನು ಪರೀಕ್ಷಿಸಲಾಗಿದ್ದು, ಅದು ಕೆಲಸ ಮಾಡುತ್ತಿದೆ ಮತ್ತು ನಾವು ಈಗಾಗಲೇ ಸುಧಾರಿತ ಆವೃತ್ತಿಯ ರೊಬೊಟ್ ಮೇಲೆ ಕೆಲಸ ಮಾಡುತ್ತಿದ್ದೇವೆ,” ಎಂದರು ಯುಪಿಇಎಸ್ನ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಓದುತ್ತಿರುವ ವಿದ್ಯಾರ್ಥಿ ಮಯಾಂಕ್ ಬರ್ಸೈನ್ಯಾ.