ಇದು ಸಾವಯವ ಕೃಷಿ ಕುಟುಂಬ

ವಿಶಾಂತ್​​

18th Nov 2015
  • +0
Share on
close
  • +0
Share on
close
Share on
close

ಕೃಷಿ ನಮ್ಮ ದೇಶದ ಬೆನ್ನೆಲುಬು. ಆದ್ರೆ ಇಂದಿನ ದಿನಗಳಲ್ಲಿ ಕೃಷಿಯ ಬಗ್ಗೆ ಹಾಗೂ ಗ್ರಾಮೀಣ ಜೀವನದ ಬಗ್ಗೆ ಜನರಿಗೆ ಏನೋ ಒಂಥರಾ ತಾತ್ಸಾರ. ಆದ್ರೆ ಭೂಮಿಯಲ್ಲಿ ಚಿನ್ನವನ್ನು ಕೃಷಿ ಮಾಡಬಹುದು. ಯಾಕಂದ್ರೆ ಮಣ್ಣಿನಲ್ಲಿ ಚಿನ್ನವಿದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಕುಚೇಲನೂ ಕುಬೇರನಾಗಬಹುದು. ಹಾಗಂತ ಸ್ವಾರ್ಥ, ಅತಿಯಾಸೆಯಿಂದ ಹೆಚ್ಚು ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಸಿದ್ರೆ, ಆಹಾರ ಧಾನ್ಯ, ಹಣ್ಣು ಹಾಗೂ ತರಕಾರಿಗಳು ವಿಷವಾಗುತ್ತವೆ. ಜೊತೆಗೆ ನಾವು ಅವನ್ನು ಬೆಳೆಯುವ ಭೂಮಿಯೂ ವಿಷವಾಗುತ್ತವೆ. ಆದ್ರೆ ಇಲ್ಲೊಂದು ಕುಟುಂಬ ಕಳೆದ 30 ವರ್ಷಗಳಿಂದಲೇ ಸಾವಯವ ಕೃಷಿ ಮಾಡುತ್ತಾ ಯಶಸ್ವಿಯಾಗಿದೆ.

image


ಇವರು ಕಾರ್ಯಪ್ಪ ದಂಪತಿ

ವಿವೇಕ್ ಕಾರ್ಯಪ್ಪ ಮತ್ತು ಜೂಲಿ. ಇವರೇ ನಮ್ಮ ಈ ಯುವರ್‍ಸ್ಟೋರಿಯ ನಾಯಕ ಮತ್ತು ನಾಯಕಿ. ವಿವೇಕ್ ಕಾರ್ಯಪ್ಪ ನವದೆಹಲಿಯ ಶ್ರೀರಾಮ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಜೂಲಿ ಅವರೂ ಕೂಡ ದೆಹಲಿಯ ಹಿಂದೂ ಕಾಲೇಜಿನಿಂದ ಸಮಾಜಶಾಸ್ತ್ರದಲ್ಲಿ ಎಂಎ ಶಿಕ್ಷಣ ಮುಗಿಸಿದ್ದಾರೆ. ಜೊತೆಗೆ ಇಟಲಿ, ರೋಮ್ ಹಾಗೂ ಅಮೆರಿಕಾ ದೇಶಗಳಲ್ಲಿ ವ್ಯಾಸಂಗ ಮಾಡಿದ್ದಾರೆ ಜೂಲಿ. ಪ್ರೀತಿಸಿ ಮದುವೆಯಾದ ಈ ಜೋಡಿ ಮನಸ್ಸು ಮಾಡಿದ್ದರೆ, ದೇಶ- ವಿದೇಶಗಳಲ್ಲಿ ಯಾವುದಾದರೂ ಕೆಲಸಕ್ಕೆ ಸೇರಿ, ಐಶಾರಾಮಿ ಜೀವನ ನಡೆಸಬಹುದಿತ್ತು. ಆದ್ರೆ ಈ ಜೋಡಿಗೆ ಅದ್ಯಾಕೋ ನಗರದ ಸಹವಾಸವೇ ಬೇಡ ಅಂತ ಆಗಲೇ ಅನ್ನಿಸಿತ್ತು. ಹೀಗಾಗಿ ಕರ್ನಾಟಕಕ್ಕೆ ಬಂದು 1986ರಲ್ಲಿ ಎಚ್‍ಡಿ ಕೋಟೆಯ ಹಲಸೂರಿನಲ್ಲಿ 30 ಎಕರೆ ಜಮೀನು ಖರೀದಿಸಿದರು.

image


ದೆಹಲಿಯಿಂದ ಹಲಸೂರಿಗೆ

ಇವರು ಖರೀದಿಸಿದ ಆ 30 ಎಕರೆ ಜಮೀನು ಕಲ್ಲು ಮಣ್ಣಿಂದ ಕೂಡಿತ್ತು. ಹೀಗಾಗಿಯೇ ಇವರು ಇಲ್ಲೇನು ಮಾಡ್ತಾರಪ್ಪಾ ಅಂತ ಸುತ್ತಮುತ್ತಲಿನ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ವಿವೇಕ್ ಮತ್ತು ಜೂಲಿ ದಂಪತಿ ಅವರ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿದ್ರು. ಮೊದಲಿಂದಲೂ ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳ ಮೊರೆ ಹೋಗಲಿಲ್ಲ, ಸಬ್ಸಿಡಿಗಾಗಿ ಸರ್ಕಾರದ ಧನಸಹಾಯಕ್ಕೆ ಕೈ ಚಾಚಲಿಲ್ಲ, ಬಿತ್ತನೆ ಬೀಜಗಳಲ್ಲೂ ಕಳಪೆ ಅಥವಾ ನಕಲಿ ಗುಣಮಟ್ಟಡದ ಬೀಜಗಳು ಬರಲು ಪ್ರಾರಂಭಿಸಿದ ಕಾರಣ ಅವನ್ನೂ ಹೊರಗಿನಿಂದ ಖರೀದಿಸದೇ ತಾವೇ ತಯ್ಯಾರಿ ಮಾಡಿಕೊಳ್ಳತೊಡಗಿದರು, ಕ್ರಿಮಿನಾಶಕಗಳನ್ನಂತೂ ಮುಟ್ಟಲೇ ಇಲ್ಲ. ಬದಲಿಗೆ ಸಂಪೂರ್ಣ ತಾವೇ ತಯಾರಿಸಿದ ಗೊಬ್ಬರ ಹಾಗೂ ನೈಸರ್ಗಿಕ ಕ್ರಿಮಿನಾಶಕಗಳನ್ನು ಬಳಸಿ, ಸಾವಯವ ಕೃಷಿ ಮಾಡತೊಡಗಿದರು. ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಬಿತ್ತನೆ ಬೀಜ ಮಾರತೊಡಗಿದರು.

image


ಕೃಷಿಯಲ್ಲಿ ಯಶಸ್ಸು

ಈ ರೀತಿ ಪ್ರಾಕೃತಿಕವಾಗಿ ಬತ್ತ, ಕಬ್ಬು, ಹತ್ತಿ ಸೇರಿದಂತೆ ಇನ್ನೂ ಹಲವು ರೀತಿಯ ದವಸ-ಧಾನ್ಯಗಳನ್ನು ಬೆಳೆಯುತ್ತಾರೆ. ಹಸು, ಎತ್ತುಗಳು ಸೇರಿದಂತೆ ಇವರ ಬಳಿ 14 ಜಾನುವಾರುಗಳಿವೆ. ಜಾನುವಾರುಗಳನ್ನು ನೋಡಿಕೊಳ್ಳಲು ಆಳುಗಳಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡಲು ಪ್ರತಿದಿನ ಹತ್ತಾರು ಮಹಿಳೆಯರು ಕೆಲಸಕ್ಕೆ ಬರುತ್ತಾರೆ.

image


ವಿವೇಕ್ ಕಾರ್ಯಪ್ಪ ಅವರ ಜಮೀನಿನಲ್ಲಿ ಸಾಂಪ್ರದಾಯಿಕ ಪದ್ಧತಿಯ ವ್ಯವಸಾಯಕ್ಕಿಂತ ಶೇಕಡಾ 20% ರಷ್ಟು ಕಡಿಮೆ ಇಳುವರಿ ಬರುತ್ತದೆ. ಆದ್ರೆ ಭೂಮಿಯ ಫಲವತ್ತತೆ ಚೆನ್ನಾಗಿರುವುದರಿಂದ ಬರುವಷ್ಟು ಬೆಳೆ ಉತ್ತಮವಾಗಿರುತ್ತದೆ. ಭೂಮಿಯ ಆರೋಗ್ಯವೂ ಹಾಳಾಗೋದಿಲ್ಲ, ಅಲ್ಲಿ ಬೆಳೆದ ಬೆಳೆಯನ್ನು ತಿನ್ನುವ ಜನರ ಆರೋಗ್ಯಕ್ಕೂ ಸಮಸ್ಯೆ ಉಂಟಾಗಲ್ಲ.

ಇಲ್ಲಿ ಸೂರ್ಯಕಾಂತಿಯಿಂದ ಎಣ್ಣೆ ತಯಾರಿಸಲಾಗುತ್ತದೆ. ಕೊಬ್ಬರಿ ಎಣ್ಣೆಯಿಂದ ಸಾಬೂನು, ಹತ್ತಿಯಿಂದ ಬಟ್ಟೆ, ಹಣ್ಣುಗಳಿಂದ ಜಾಮ್, ಹಾಲಿನಿಂದ ತುಪ್ಪ, ಜೊತೆಗೆ ವಿನೆಗರ್ ತಯ್ಯಾರಿಸಿ ಗೋವಾ, ಹೈದರಾಬಾದ್, ಪಾಂಡಿಚೆರಿ ಮಾತ್ರವಲ್ಲ ದೂರದ ಕೊಲ್ಕತ್ತಾನಲ್ಲೂ ಮಾರಾಟ ಮಾಡಲಾಗುತ್ತಿದೆ. ಹೀಗೆ ಕೃಷಿಯ ಜೊತೆಗೆ ಸಣ್ಣ ಮಟ್ಟದಲ್ಲಿ ಗ್ರಾಮೀಣ ಉದ್ಯಮದಲ್ಲೂ ತೊಡಗಿದ್ದಾರೆ ಈ ಕಾರ್ಯಪ್ಪ ದಂಪತಿ. ‘ಭೂಮಿಯನ್ನು ನಂಬಿ ಸರಿಯಾಗಿ ವ್ಯವಸಾಯ ಮಾಡಿದರೆ, ನಷ್ಟ ಅನ್ನೋದು ಇಲ್ಲವೇ ಇಲ್ಲ ಅನ್ನೋದು’ ವಿವೇಕ್ ಅವರ ಅಭಿಪ್ರಾಯ.

ರೈತರು ಆದಷ್ಟು ಸಾಲದಿಂದ ದೂರವಿರಬೇಕು. ಅದೊಂಥರಾ ಚಕ್ರವ್ಯೂಹ. ಸಿಲುಕಿಕೊಂಡರೆ ಹೊರಗೆ ಬರೋದೇ ಕಷ್ಟ. ಅಕ್ಕಪಕ್ಕದ ಜಮೀನಿನಲ್ಲಿ ಯಾವುದೋ ಬೆಳೆ ಬೆಳೆದ ಅಂತ ಅದನ್ನೇ ಬೆಳೆದು ಉತ್ಪಾದನೆ ಹೆಚ್ಚಾಗಿ, ದರ ಕುಸಿತ ಉಂಟಾಗಿ ನಷ್ಟಕ್ಕೀಡಾಗುವ ಸಾಧ್ಯತೆಯಿರುತ್ತೆ. ಹೀಗಾಗಿಯೇ ಮಾರುಕಟ್ಟೆ ಆಧಾರಿತ ಕೃಷಿ ಮಾಡಬೇಕು. ಸಾಮಾಜಿಕ ಮತ್ತು ಆರ್ಥಿಕ ಸುಸ್ಥಿರತೆಯ ದೃಷ್ಟಿಯಿಂದ ವ್ಯವಸಾಯ ಮಾಡಬೇಕು. ರೈತರು ಪ್ಯಾಂಟ್, ಷರ್ಟ್ ಹಾಕಿಕೊಂಡು ಕಾರು, ಬಂಗಲೆಗಳೊಂದಿಗೆ ನಗರದಲ್ಲಿ ಜಾಲಿಯಾಗಿ ಐಶಾರಾಮಿ ಜೀವನ ನಡೆಸುವ ಕನಸು ಕಾಣುವುದನ್ನು ಬಿಡಬೇಕು. ಕಷ್ಟಪಟ್ಟು ವ್ಯವಸಾಯ ಮಾಡಬೇಕು. ಕಷ್ಟ ಪಡದೆ ಸುಖ ಸಿಗಲು ಸಾಧ್ಯವಿಲ್ಲ ಅನ್ನೋದನ್ನು ತಿಳಿಯಬೇಕು. ಕೈ ಕೆಸರಾದ್ರೆ ಬಾಯಿ ಮೊಸರು ಅನ್ನೋ ಗಾದೆ ಕೇಳಿದ್ದೀರಲ್ಲಾ? ಹೀಗಾಗಿಯೇ ಕಷ್ಟ ಕೆಟ್ಟದಲ್ಲ. ಕಷ್ಟ ಪಟ್ಟರೆ ಸುಖ ಜೀವನ ಲಭಿಸುತ್ತದೆ ಅನ್ನೋದನ್ನು ಎಲ್ಲಾ ಮಹಾಗ್ರಂಥಗಳಲ್ಲೂ ಉಲ್ಲೇಖಿಸಲಾಗಿದೆ’ ಅಂತ ತಮ್ಮ 30 ವರ್ಷಗಳ ಕೃಷಿಯ ಅನುಭವ ಮತ್ತು ಅದರಲ್ಲಿ ಪಡೆದ ಯಶಸ್ಸಿನ ಹಿಂದಿನ ಗುಟ್ಟನ್ನು ಬಿಚ್ಚಿಡ್ತಾರೆ ವಿವೇಕ್ ಕಾರ್ಯಪ್ಪ.

image


ವಿಶೇಷ ಅಂದ್ರೆ ವಿವೇಕ್ ಮತ್ತು ಜೂಲಿ ಕಾರ್ಯಪ್ಪ ದಂಪತಿಯ ಮಕ್ಕಳಾದ ಕಬೀರ್ ಮತ್ತು ಆಜಾದ್ ಕೂಡ ತಂದೆ-ತಾಯಿಯೊಂದಿಗೆ ಸೇರಿ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಹಾಗೇ ಕಬೀರ್ ಅವರ ಪತ್ನಿ ಜಿಯಾ ಕೂಡ ಗಂಡನಿಗೆ ಸಾಥ್ ನೀಡಿದ್ದಾರೆ. ಹೀಗೆ ಸುಶಿಕ್ಷಿತ ಕುಟುಂಬವೊಂದು ನಗರದ ಬ್ಯುಸಿ ಜೀವನವನ್ನು ತೊರೆದು ಹಳ್ಳಿ ಜೀವನಕ್ಕೆ ಒಗ್ಗಿಕೊಂಡಿದೆ. ಈ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾವಯವ ಕೃಷಿ ಮಾಡಲು ರೈತರಿಗೆ ಉತ್ತೇಜನ ನೀಡಬೇಕಿದೆ. ಸಬ್ಸಿಡಿ ಆಗಿರಬಹುದು ಅಥವಾ ಇತರೆ ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಯಾಕಂದ್ರೆ ಆರೋಗ್ಯಕರ ಕೃಷಿಗೆ ಉತ್ತಮ ಉದಾಹರಣೆ ಈ ಸಾವಯವ ಕೃಷಿ.

Want to make your startup journey smooth? YS Education brings a comprehensive Funding and Startup Course. Learn from India's top investors and entrepreneurs. Click here to know more.

  • +0
Share on
close
  • +0
Share on
close
Share on
close

Our Partner Events

Hustle across India