ಕೊರೊನಾ ಸೋಂಕು ದೃಢಪಟ್ಟರೂ ರೋಗಿಗಳಿಗೆ ಟೆಲಿಮೆಡಿಸಿನ್ ಚಿಕಿತ್ಸೆ ನೀಡುತ್ತಿದ್ದಾರೆ ಆಗ್ರಾದ ಈ ವೈದ್ಯ
ಡಾ. ಮೊಹಮ್ಮದ್ ಶಮೀಮ್, ಕೋವಿಡ್ ಸೋಂಕಿನಿಂದ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದು, ಜೆಎನ್‌ಎಮ್‌ಸಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳೊಂದಿಗೆ ಟೆಲಿಮೆಡಿಸಿನ್ ವಿಧಾನದಿಂದ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ವಿಶ್ವವ್ಯಾಪಿಯಾಗಿರುವ ಕೊರೊನಾ ಮಹಾಮಾರಿ ಕ್ಷೀಪ್ರಗತಿಯಲ್ಲಿ ಹರಡುತ್ತಿದ್ದು, ಎಲ್ಲ ದೇಶಗಳಿಗೂ ತಲೆನೋವಾಗಿ ಪರಿಣಮಿನಿಸಿದೆ. ಕೊರೊನಾ ವಿರುದ್ಧ ಹೋರಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಅದರ ಹರಡುವಿಕೆಯ ವೇಗದಿಂದ, ಲಸಿಕೆಯ ಅಲಭ್ಯತೆಯಿಂದ ವೈದ್ಯಲೋಕಕ್ಕೆ ಅದೊಂದು ಸವಾಲಾಗಿದೆ.
ಕೊರೊನಾ ಸೋಂಕಿನ ಭೀಕರತೆ ಎಷ್ಟಿದೆಯೆಂದರೆ ಅದನ್ನು ಗುಣಪಡಿಸಬೇಕಾದ ವೈದ್ಯರು, ಆರೋಗ್ಯ ಕಾರ್ಯಕರ್ತರೆ ಸೋಂಕಿಗೆ ಬಲಿಯಾಗುವ ಅಪಾಯದಲ್ಲಿದ್ದಾರೆ. ಆದರೆ ಇದ್ಯಾವುದಕ್ಕೂ ಕುಗ್ಗದೆ ವೈದ್ಯಲೋಕ ತಮ್ಮ ಸೇವೆಯನ್ನು ಮುಂದುವರೆಸಿದೆ.
ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಜವಾಹರ್‌ಲಾಲ್ ನೆಹರು ವೈದ್ಯಕೀಯ ಕಾಲೇಜಿನ ವೈದ್ಯರೊಬ್ಬರಿಗೆ ಕೋವಿಡ್ ಸೋಂಕು ತಗುಲಿದೆ, ಆದರೂ ಅವರು ಟೆಲಿಮೆಡಿಸಿನ್ ವಿಧಾನದಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ತಮ್ಮ ಕಾಯಕವನ್ನು ಮುಂದುವರೆಸಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಟಿಬಿ ಹಾಗೂ ಎದೆ ರೋಗದ ವಿಭಾಗದ ಪ್ರಧ್ಯಾಪಕರಾದ ಡಾ. ಮೊಹಮ್ಮದ್ ಶಮೀಮ್, ಕೋವಿಡ್ ಸೋಂಕಿನಿಂದ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದು, ಜೆಎನ್‌ಎಮ್‌ಸಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳೊಂದಿಗೆ ಟೆಲಿಮೆಡಿಸಿನ್ ವಿಧಾನದಿಂದ ಆಸ್ಪತ್ರೆಯಲ್ಲಿರುವ ಕೋವಿಡ್ ಮತ್ತು ಇತರ ಉಸಿರಾಟದ ತೊಂದರೆಯಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ವರದಿ ಎಡೆಕ್ಸ್ ಲೈವ್.
“ಮಾನಸಿಕವಾಗಿ ಇದು ಕಷ್ಟ, ಆದರೆ ಜೀವ ಉಳಿಸಬೇಕಾದದ್ದು ವೈದ್ಯರ ಕೆಲಸ, ಏನೇ ಬಂದರೂ ಆ ಕೆಲಸವನ್ನು ನಾವು ಮುಂದುವರೆಸುತ್ತೇವೆ. ಈ ದುರಂತವನ್ನು ಎದುರಿಸಿ ಬದುಕಬೇಕಾದದ್ದು ಅನಿವಾರ್ಯ, ಕೋವಿಡ್ ಸೋಂಕು ತಗುಲಿರುವ ವೈದ್ಯರು ಕ್ವಾರಂಟೈನ್ ನಲ್ಲಿದ್ದಾಗ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್ ಮೊದಲಾದ ಸಾಧನ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ನಾನು ಬಲವಾಗಿ ನಂಬುತ್ತೇನೆ,” ಎಂದರು ಶಮೀಮ್.
ಇತ್ತೀಚೆಗೆ ನಾವು ಟೆಲಿಮೆಡಿಸಿನ್ ಎಂಬ ಶಬ್ದವನ್ನು ಜಾಸ್ತಿ ಕೇಳುತ್ತಿದ್ದೇವೆ. ಟೆಲಿಮೆಡಿಸಿನ್ ಎಂದರೆ ವೈದ್ಯರು ದೂರ ಸಂಪರ್ಕದ ತಂತ್ರಜ್ಞಾನ ಮತ್ತು ಸಾಧನಗಳನ್ನು ಬಳಸಿಕೊಂಡು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವುದು ಎಂದರ್ಥ. ಇದರಿಂದ ಯಾವುದೇ ಭಾಗದಲ್ಲಿರುವ ವ್ಯಕ್ತಿಗೆ ವೈದ್ಯರು ತಾವು ಇದ್ದ ಸ್ಥಳದಿಂದಲೆ ಚಿಕಿತ್ಸೆ ನೀಡಬಹುದಾಗಿದೆ. ಕೊರೊನಾದಂತಹ ಬಿಕ್ಕಟ್ಟಿನ ಸಮಯದಲ್ಲಿ ಈ ವಿಧಾನ ತುಂಬಾ ಅವಶ್ಯಕವಾಗಿ ಪರಿಣಮಿಸಿದೆ.
“ಜೆಎನ್‌ಎಮ್‌ಸಿಯಲ್ಲಿ ಕೊರೊನಾವೈರಸ್ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ಅನುಭವವು ನಾನು ಸೋಂಕಿನಿಂದ ಬೇಗ ಮುಕ್ತವಾಗುತ್ತೇನೆ ಎಂಬ ಭರವಸೆ ನೀಡುತ್ತಿದೆ. ಮಹಾಮಾರಿ ತಂದೊಡ್ಡಿರುವ ಮಾನಸಿಕ ಒತ್ತಡವನ್ನು ಹೇಳಲಸಾಧ್ಯ. ಅಂತಿಮ ಘಟ್ಟದಲ್ಲಿರುವ ರೋಗಿಗಳು ತಮ್ಮ ಕೊನೆಯ ಘಳಿಗೆಯಲ್ಲಿ ನೋಡುವುದು ವೈದ್ಯರನ್ನು ನರ್ಸ್‌ಗಳನ್ನು. ಅಂತಹ ಸಮಯದಲ್ಲಿ ಅವರ ಕೈ ಬಿಡುವುದು ಸರಿಯಲ್ಲ,” ಎಂದರು ಶಮೀಮ್, ವರದಿ ಔಟ್‌ಲುಕ್ ಇಂಡಿಯಾ.