ಈ 5 ಸ್ಟಾರ್ಟ್ಅಪ್‌ಗಳು ತಮ್ಮ ಪರಿಸರ ಸ್ನೇಹಿ ಮಾರ್ಗಗಳೊಂದಿಗೆ ಹಸಿರು ಜೀವನದೆಡೆಗೆ ಹೋಗಲು ನಿಮ್ಮನ್ನು ಪ್ರೇರೇಪಿಸುತ್ತವೆ
ಈ ನವೋದ್ಯಮಗಳು ತಮ್ಮ ಕಾರ್ಯಸ್ಥಳವನ್ನು ಪರಿಸರ ಸ್ನೇಹಿಯಾಗಿ ಮಾಡಲು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರಿಂದ ಪರರು ತಿಳಿದುಕೊಳ್ಳಬೇಕಾದ್ದು ಇಲ್ಲಿದೆ.
ಪರಿಸರ ಸ್ನೇಹಿಯಾಗುವುದೆಂದರೆ ಕೇವಲ ಸುತ್ತಲಿನ ಪರಿಸರವನ್ನ ನೋಡಿಕೊಳ್ಳುವುದಷ್ಟೇ ಅಲ್ಲ, ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಹಾಗೂ ಸಂಪನ್ಮೂಲಗಳನ್ನು ಸಂರಕ್ಷಿಸುವುದರೆಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದೂ ಆಗಿದೆ.
ಹಲವು ಕೈಗಾರಿಕಾ ಸಂಸ್ಥೆಗಳು ತಮ್ಮಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಅರಿತು, ಪರಿಸರ ಸ್ನೇಹಿಯಾಗುವುದರತ್ತ ಮುಖ ಮಾಡಿವೆ.
ಮರುಬಳಕೆಯ ವಸ್ತುಗಳನ್ನು ಉಪಯೋಗಿಸುತ್ತ, ಶಕ್ತಿಯ ಬಳಕೆಯನ್ನು ಹಾಗೂ ಕಸವನ್ನು ಕಡಿತಗೊಳಿಸುತ್ತ, ಭಾರತದ ನವೋದ್ಯಮಗಳು ವಿಶ್ವಕ್ಕೆ ಮಾದರಿಯಾಗಬಲ್ಲವು. ನಮ್ಮ ಭೂಮಿಯನ್ನು ಉಳಿಸುವದಕ್ಕೆಂದೇ ಸುಸ್ಥಿರ ಜೀವನ ಕ್ರಮವನ್ನು ಅಳವಡಿಸಿಕೊಂಡಿರುವ 5 ನವೋದ್ಯಮಗಳು ಸೋಷಿಯಲ್ ಸ್ಟೋರಿಯೊಂದಿಗೆ ಪರಿಸರ ರಕ್ಷಣೆಯೆಡೆಗಿನ ತಮ್ಮ ಪ್ರಯತ್ನಗಳನ್ನು ಹಂಚಿಕೊಂಡಿದ್ದಾರೆ.
ಝನ್‌ರೂಫ್
ಝನ್‌ರೂಫ್ ಒಂದು ಗೃಹ-ತಂತ್ರಜ್ಞಾನ ನವೋದ್ಯಮವಾಗಿದ್ದು, ಮನೆಯ ಅನುಪಯುಕ್ತ ತಾರಸಿಯ ಮೇಲೆ ಸೋಲಾರ್ ಅಳವಡಿಸಿ ವಿದ್ಯುತ್ ಉತ್ಪಾದಿಸುತ್ತದೆ.
ಪ್ರಾಣೇಶ್ ಹಾಗೂ ಶುಶಾಂತ್ ಸಚನ್ 2016ರಲ್ಲಿ ಆರಂಭಿಸಿದ ಗುರುಗ್ರಾಮ್ ಮೂಲದ ಈ ನವೋದ್ಯಮವು ಭಾರತದ ಅತಿದೊಡ್ಡ ಸೋಲಾರ್ ವಿತರಕರಾಗುವ ಗುರಿ ಹೊಂದಿದೆ. 150,000 ಮನೆಗಳನ್ನು ಸಂದರ್ಶಿಸಿ, 17,000ಕ್ಕೂ ಹೆಚ್ಚು ಮನೆಗಳಿಗೆ ರೂಪಿಸಿ ಹಾಗೂ 5000ಕ್ಕೂ ಹೆಚ್ಚು ಮನೆಗಳಲ್ಲಿ ಸೋಲಾರ್ ಅಳವಡಿಸಿದ್ದಾರೆ.
ಪರಿಸರ ಪ್ರಜ್ಞೆಯುಳ್ಳ ತಮ್ಮ ಕಾರ್ಯಸ್ಥಳದ ಬಗ್ಗೆ ಮಾತನಾಡುತ್ತ, ಪ್ರಾಣೇಶ್ ಹೀಗೆ ಹೇಳುತ್ತಾರೆ,
“ನಮ್ಮ ಉದ್ಯೋಗಿಗಳು ಯಾವಾಗಲೂ ಉತ್ತಮ ಪರಿಸರ ಅಭ್ಯಾಸಗಳನ್ನು ಅನುಸರಿಸುತ್ತಾರ ಎಂದು ನಾವು ಸದಾ ಖಚಿತಪಡಿಸುತ್ತೇವೆ. ಪರಿಣಾಮವಾಗಿ, ಕಚೇರಿಯಲ್ಲಿ ಬಳಕೆಯಲ್ಲಿಲ್ಲದ ಯಾವುದೇ ಎಲೆಕ್ಟ್ರಾನಿಕ್ ಉಪಕರಣವನ್ನು ಕೊಠಡಿಯಿಂದ ಹೊರಡುವ ಕೊನೆ ವ್ಯಕ್ತಿ ಆಫ್ ಮಾಡಿ ಹೋಗುತ್ತಾರೆ. ನಮ್ಮಲ್ಲಿ ಆಹಾರವು ವ್ಯರ್ಥವಾಗುವುದಿಲ್ಲ, ಮತ್ತು ಪ್ರತಿಯೊಬ್ಬ ಉದ್ಯೋಗಿಯು ಪಾಟ್ನಲ್ಲಿ ಬೆಳೆಸೆಲಾದ ಸಸ್ಯವನ್ನು ಪ್ರತಿದಿನ ತಮ್ಮ ಮೇಜಿನ ಮೇಲೆ ಇಟ್ಟುಕೊಂಡು ನೀರುಣಿಸುತ್ತಾರೆ”
ಅಷ್ಟೇ ಅಲ್ಲದೆ, ಝನ್‌ರೂಫ್ ಪ್ರಿಂಟಿಂಗ್‌ಗಾಗಿ ಹಾಳೆಯನ್ನು ಖರ್ಚು ಮಾಡದೆ, ತಂತ್ರಜ್ಞಾನದ ಸದುಪಯೋಗ ಪಡಿಸಿಕೊಂಡು ಅದರ ಮೂಲಕವೇ ದಾಖಲೆಗಳನ್ನಿಡುತ್ತದೆ.
“ಗೃಹ-ತಂತ್ರಜ್ಞಾನ ನವೋದ್ಯಮಗಳಲ್ಲಿ ತಂತ್ರಜಾನ ಮಹತ್ವದ ಪಾತ್ರ ವಹಿಸುತ್ತದೆ. ಹಾಳೆರಹಿತವಾಗುವುದಕ್ಕೆ ನಾವು ಒತ್ತಡಕ್ಕೆ ಒಳಗಾಗಿದ್ದಿಲ್ಲ. ನಮಗೆ ತಂತ್ರಜ್ಞಾನದ ಮೂಲಕ ಸಂವಹನ ನಡೆಸುವುದು ದಾಖಲೆಗಳನ್ನಿಡುವುದು ಸುಲಭ, ಸುರಕ್ಷಿತ, ಮತ್ತು ಎಲ್ಲ ದಾಖಲೆಗಳನ್ನು ಇಡಲು ಹಾಗೂ ಬೇರೆ ಭಾಗದಲ್ಲಿನ ನಮ್ಮ ಕೆಲಸಗಾರರಿಗೆ ಅವರು ಇರುವಲ್ಲಿಂದಲೇ ಇವುಗಳನ್ನು ಪಡೆಯಬಹುದಾಗಿದೆ,” ಎನ್ನುತ್ತಾರೆ ಪ್ರಾಣೇಶ್.
ತಮ್ಮ ಪರಿಸರ ಸ್ನೇಹಿ ಉಪಕ್ರಮದಬಗ್ಗೆ ಮಾತನಾಡುತ್ತ ಪ್ರಾಣೇಶ, “ನಮ್ಮ ಕಚೇರಿಯು ನೈಸರ್ಗಿಕ ಬೆಳಕಿನಿಂದ ಕೂಡಿದ್ದು, ಸಂಜೆ 7:00 ರವರೆಗೆ ನಾವು ಯಾವುದೇ ಕೃತಕ ದೀಪಗಳನ್ನು ಬಳಸುವುದಿಲ್ಲ, ಮತ್ತು ಕಚೇರಿಯಲ್ಲಿ ಶಕ್ತಿ ದಕ್ಷ ಎಲ್ಇಡಿ ದೀಪಗಳನ್ನು ಮಾತ್ರ ಉಪಯೋಗಿಸುತ್ತೇವೆ. ನಾವು ಕಂಪನಿಯೊಳಗೆ ಕಟ್ಟುನಿಟ್ಟಾದ ಪ್ಲಾಸ್ಟಿಕ್ ನೀತಿಯನ್ನು ಹೊಂದಿದ್ದು, ಇದರ ಪರಿಣಾಮವಾಗಿ ಎಲ್ಲಾ ಉದ್ಯೋಗಿಗಳಿಗೆ ಲೋಹದ ನೀರಿನ ಬಾಟಲಿಗಳನ್ನು ಒದಗಿಸಲಾಗಿದೆ ಮತ್ತು ಮರುಬಳಕೆ ಮಾಡಬಹುದಾದ ಮಗ್ ಗಳು ಮತ್ತು ಫಲಕಗಳನ್ನು ಮಾತ್ರ ಬಳಸಲಾಗುತ್ತದೆ. ಗ್ರಾಹಕರು ಎದುರಿಸುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಸಹ ನಮ್ಮ ಮೊಬೈಲ್ ಮೂಲಕ ಡಿಜಿಟಲೀಕರಣಗೊಳಿಸಲಾಗುತ್ತದೆ ಮತ್ತು ಕಾರ್ಯಗತಗೊಳಿಸಲಾಗುತ್ತದೆ” ಎಂದಿದ್ದಾರೆ.
ಟ್ರೂಲಿ ಮ್ಯಾಡ್ಲಿ
ಟ್ರೂಲಿ ಮ್ಯಾಡ್ಲಿ ಒಂದು ಡೇಟಿಂಗ್ ಹಾಗೂ ಮ್ಯಾಚ್‌ಮೇಕಿಂಗ್ ಆಪ್ ಆಗಿದ್ದು, ಸುಮಾರು 5 ಮಿಲಿಯನ್ ಬಳಕೆದಾರರನ್ನು ಹೊಂದಿದೆ. 2014ರಲ್ಲಿ ಸ್ನೇಹಿಲ್ ಕ್ಹನೋರ್ ಹಾಗೂ ಸಚಿನ ಭಟಿಯಾರಿಂದ ಆರಂಭಗೊಂಡ ಇದು ಸುಮಾರು 20 ಮಿಲಿಯನ್ ಜೋಡಿಗಳನ್ನು ಹೊಂದಾಣಿಕೆ ಮಾಡಿರುವುದಾಗಿ ಹೇಳಿಕೊಂಡಿದೆ.
ಈ ನವೋದ್ಯಮದ ಪ್ರಕಾರ, ಭಾರತದಲ್ಲಿ ಇದೊಂದೇ ನಂಬಲರ್ಹ ಅಂಕಿಗಳನ್ನು ನೀಡುತ್ತದಂತೆ.
ದೆಹಲಿ ಮೂಲದ ಈ ನವೋದ್ಯಮವು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಅತ್ಯಂತ ಜಾಗೃತವಾಗಿದ್ದು, ಹಲವಾರು ಕ್ರಮಗಳನ್ನು ಅಳವಡಿಸಿಕೊಂಡಿದೆ.
“ವೈಯಕ್ತಿಕವಾಗಿ, ನಾನು ಕಾರ್ಬನ್ ಫೂಟ್‌ಪ್ರಿಂಟ್‌ನ್ನು ಸಾಧ್ಯವಾದ ಕಡೆಗೆಲ್ಲ ಕಡಿಮೆಗೊಳಿಸಲು ಪ್ರಯತ್ನಿಸುತ್ತೇನೆ. ಅದನ್ನು ಸಾಧಿಸಲು ನಾವು ಸಣ್ಣ ಕೆಲಸಗಳನ್ನು ಮಾಡಬೇಕು. ಉದಾಹರಣೆಗೆ, ದಿನನಿತ್ಯದ ಓಡಾಟಕ್ಕೆ ನಾನು ಸ್ವಂತ ವಾಹನವನ್ನು ಉಪಯೋಗಿಸುವುದಿಲ್ಲ. ಒಂದೋ ಮೆಟ್ರೋದಲ್ಲಿ ಅಥವಾ ಗೆಳೆಯರ, ಸಹ ಕೆಲಸಗಾರರ ಜೊತೆಗೆ ಕಾರ್‌ನಲ್ಲಿ ಬರುತ್ತೇನೆ. ಇತ್ತೀಚೆಗೆ ಬರುತ್ತಿರುವ ವಿದ್ಯುತ್ ಚಾಲಿತ ವಾಹನಗಳನ್ನು ಮುಂಬರುವ ದಿನಗಳಲ್ಲಿ ಉಪಯೋಗಿಸುತ್ತೇನೆ,” ಎನ್ನುತ್ತಾರೆ ಸ್ನೇಹಿಲ್.
ನವದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಗಗನಕ್ಕೇರುತ್ತಿದೆ ಮತ್ತು ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದರಿಂದ, ಟ್ರೂಲಿಮ್ಯಾಡ್ಲಿ ಅಂತರ್ಜಲ ಸಮಸ್ಯೆಯನ್ನು ಪರಿಹರಿಸಲು ಪ್ರಜ್ಞಾಪೂರ್ವಕ ಹೆಜ್ಜೆ ಇಟ್ಟು ನೀರಿಲ್ಲದ ಮೂತ್ರಾಲಯಗಳನ್ನು ಸ್ಥಾಪಿಸಿದೆ. ಇದರ ಕುರಿತು ಮಾತನಾಡುತ್ತ, ಸ್ನೇಹಿಲ್,
“ಅಂತರ್ಜಲ ಕುಸಿತ ಕಂಡಿರುವ ಭಾರತದ ಇತರ ಪ್ರಮುಖ ನಗರಗಳಲ್ಲಿ ದೆಹಲಿಯೂ ಇದೆ ಎಂದು ಕೇಳಿದಾಗ ನಮಗೆ ಗಾಬರಿಯಾಯಿತು. ಸಾಮಾನ್ಯ ಮೂತ್ರ ವಿಸರ್ಜನೆಯು ಪ್ರತಿ ಫ್ಲಶ್‌ಗೆ ಸುಮಾರು ಎಂಟು ಲೀಟರ್ ನೀರನ್ನು ಬಳಸಲಾಗುತ್ತದೆ ಇದರಿಂದ ಕೇವಲ ಮೂತ್ರ ವಿಸರ್ಜನೆಗೇ ವರ್ಷಕ್ಕೆ ಸುಮಾರು 1.5 ಲಕ್ಷ ಲೀಟರ್ ನೀರು ಖರ್ಚಾಗುತ್ತದೆ. ಆದ್ದರಿಂದ, ಜಲರಹಿತ ಮೂತ್ರ ವಿಸರ್ಜನೆಯನ್ನು ಆರಿಸುವುದು ಸ್ಪಷ್ಟ ಆಯ್ಕೆಯಾಗಿದೆ,” ಎಂದರು
ಇದಲ್ಲದೆ, ಸ್ಟಾರ್ಟ್ಅಪ್ ಪ್ಯಾಂಟ್ರಿಯಿಂದ ಎಲ್ಲಾ ಪ್ಲಾಸ್ಟಿಕ್ ಸ್ಟಿರರ್ ಗಳನ್ನು ತೆಗೆದುಹಾಕಿದೆ ಮತ್ತು ವಾಟರ್ ಕೂಲರ್ ನಲ್ಲಿ ಪ್ಲಾಸ್ಟಿಕ್ ಕಪ್ಗಳನ್ನು ಬಳಸುವುದನ್ನು ನಿಲ್ಲಿಸಿದೆ. ಇನ್ನು ಸಂಪೂರ್ಣವಾಗಿ ಅಗತ್ಯವಿಲ್ಲದ ಸಮಯದಲ್ಲಿ ಮುದ್ರಣವನ್ನು ಬಳಸುವುದನ್ನು ಕಡಿಮೆ ಮಾಡಿದೆ ಮತ್ತು ಅತೀಯಾದ ಮುದ್ರಣವನ್ನು ನಿರ್ಬಂಧಿಸಿದೆ.
“ಸಸ್ಯಗಳನ್ನು ನಿರ್ವಹಿಸಲು ನಾವು ಯುವ ಉದ್ಯೋಗಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಆದ್ದರಿಂದ, ಪ್ರತಿ ತ್ರೈಮಾಸಿಕದಲ್ಲಿ, ನಗದು ಬಹುಮಾನದ ಜೊತೆಗೆ, ನಾವು ವಿಜೇತರಿಗೆ ಒಳಾಂಗಣ ಸಸ್ಯಗಳನ್ನು ನೀಡಲು ಪ್ರಾರಂಭಿಸಿದ್ದೇವೆ. ಈ ರೀತಿಯ ಸಣ್ಣ ವಿಷಯಗಳು ದೀರ್ಘಾವಧಿಯಲ್ಲಿ ದೊಡ್ಡ ಪರಿಣಾಮವನ್ನು ತರುತ್ತವೆ,” ಎನ್ನುತ್ತಾರೆ ಸ್ನೇಹಿಲ್.
ದಿ ಮ್ಯಾನ್ ಕಂಪನಿ
ಗುರುಗ್ರಾಮ್ ಮೂಲದ 'ದಿ ಮ್ಯಾನ್ ಕಂಪನಿ' ಪುರುಷರ ಸೌಂದರ್ಯಪೂರಕ ಉತ್ಪನ್ನಗಳನ್ನು ತಯಾರಿಸುವ ಈ ನವೋದ್ಯಮವನ್ನು, ಭೀಷಮ್ ಭಟೇಜಾ ಅವರು 2015 ರಲ್ಲಿ ಪ್ರಾರಂಭಿಸಿದರು.
ನವೋದ್ಯಮದ ಪ್ರಕಾರ, ಗ್ರಾಹಕರಿಗೆ ಅವರ ಸೌಂದರ್ಯದ ಸುಧಾರಣೆಗೆ ಪ್ರಯೋಜನಕಾರಿಯಾದ ಉತ್ಪನ್ನಗಳನ್ನು ನೀಡುವುದರ ಜೊತೆಗೆ, ಅವರು ಬಳಸುವ ಪದಾರ್ಥಗಳ ಬಗ್ಗೆಯೂ ಅವರು ಸೂಕ್ಷ್ಮರಾಗಿದ್ದು, ಅವರ ಸಂಪೂರ್ಣ ಉತ್ಪನ್ನ ಶ್ರೇಣಿಯು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿದೆ ಮತ್ತು ಸಾರಭೂತ ತೈಲಗಳಿಂದ ತುಂಬಿರುತ್ತದೆ.
“ನಾವು ಗಿಡಮೂಲಿಕೆಗಳು, ಹೂಗಳು, ಬೀಜಗಳು ಮತ್ತು ಹಣ್ಣುಗಳಿಂದ ಹೊರತೆಗೆಯಲಾದ 100 ಪ್ರತಿಶತ ನೈಸರ್ಗಿಕ ಸಾರಭೂತ ತೈಲಗಳನ್ನು ಬಳಸುತ್ತೇವೆ. ಎಸ್‌ಎಲ್‌ಎಸ್‌ನ ಉತ್ಪಾದನೆಯು ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಎಸ್‌ಎಲ್‌ಎಸ್ ಹೊಂದಿರುವ ಉತ್ಪನ್ನಗಳನ್ನು ಬಳಸುವುದರಿಂದ ಅಂತರ್ಜಲವು ಕಲುಷಿತಗೊಳ್ಳುತ್ತದೆ ಮತ್ತು ಜೈವಿಕ ಸಂಗ್ರಹಕ್ಕೆ ಕಾರಣವಾಗುತ್ತದೆ. ನಮ್ಮ ಎಲ್ಲಾ ಉತ್ಪನ್ನಗಳು ಈ ಹಾನಿಕಾರಕ ರಾಸಾಯನಿಕ ಮತ್ತು ಪ್ಯಾರಾಬೆನ್‌ಗಳಿಂದ ಮುಕ್ತವಾಗಿವೆ. ನಾವು ಪ್ರಾಣಿಗಳ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತೇವೆ ಮತ್ತು ನಮ್ಮ ವಸ್ತುಗಳನ್ನು ಮರುಬಳಕೆ ಮಾಡಬಹುದಾಗಿದೆ,” ಎನ್ನುತ್ತಾರೆ ಭೀಷಮ್.
ನವೋದ್ಯಮವು ತಮ್ಮ ಕಚೇರಿ ಜಾಗದಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಸುವುದರಿಂದ ದೂರವಿರುತ್ತದೆ, ಮತ್ತು ಅದರ ಎಲ್ಲಾ ಪ್ಯಾಕೇಜಿಂಗ್ ಉತ್ಪನ್ನಗಳು ಮರುಬಳಕೆ ಮಾಡಬಹುದಾಗಿದೆ. ಪರಿಸರ ಸ್ನೇಹಿಯಾಗಿರುವ ಬಗ್ಗೆ ಮಾತನಾಡುತ್ತಾ, ಮತ್ತು ಇತರ ಸ್ಟಾರ್ಟ್‌ಅಪ್‌ಗಳು ಇದನ್ನು ಹೇಗೆ ಮಾಡಬಹುದು ಎಂದು ತಿಳಿಸುತ್ತಾ, ಭೀಷಮ್ ಹೇಳುತ್ತಾರೆ:
“ನಮಗೆ ಪರಿಸರ ಸ್ನೇಹಿ ಎಂದರೆ ನಾವು ಪರಿಸರದ ಮೇಲೆ ಬೀರುವ ಪರಿಣಾಮವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು. ನಾವು ಕೆಲವು ಅಭ್ಯಾಸಗಳನ್ನು ಹೊಂದಿದ್ದರೂ, ಪ್ರಮುಖವಾದದ್ದು ಯಾವುದೇ ಎಸ್‌ಎಲ್‌ಎಸ್ ಅಥವಾ ಪ್ಯಾರಾಬೆನ್‌ಗಳನ್ನು ಬಳಸದಿರುವುದು, ಈ ವಿಷಯದಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ನಮಗೆ ತಿಳಿದಿದೆ. ಪ್ರತಿಯೊಂದು ಕಂಪನಿಯು ಪ್ರಕ್ರಿಯೆಯನ್ನು ತಾನೇ ನಿರ್ಧರಿಸಬಹುದು, ಮತ್ತು ಅವುಗಳ ಮೌಲ್ಯಗಳು ಮತ್ತು ನೀತಿಗೆ ಯಾವುದು ಸೂಕ್ತವಾಗಿರುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಎಲ್ಲಿಯವರೆಗೆ ನಾವು ನಮ್ಮ ಗ್ರಾಹಕರಿಗೆ ಮೌಲ್ಯಗಳು ಮತ್ತು ಬದ್ಧತೆಗೆ ಪ್ರಾಮಾಣಿಕ, ಅಧಿಕೃತ ಮತ್ತು ಸತ್ಯವಾಗಿರುತ್ತೇವೋ ಅಲ್ಲಿಯವರೆಗೆ ನಾವು ಯಶಸ್ಸನ್ನು ನೋಡುತ್ತೇವೆ,” ಎಂದರು.
ಇಕೋರೈಟ್
ಅಹಮದಾಬಾದ್ ಮೂಲದ ಇಕೋರೈಟ್ ಗ್ರಾಹಕರನ್ನು ಆಕರ್ಷಿಸಲು ವಿನ್ಯಾಸಕ್ಕೆ ಒತ್ತು ನೀಡಿ ಪರಿಸರ ಸ್ನೇಹಿ ಚೀಲಗಳನ್ನು ಮಾರಾಟ ಮಾಡುತ್ತದೆ. ಅಮೆಜಾನ್ ಮೂಲಕ ಭಾರತ ಮತ್ತು ಯುಎಸ್ ನಲ್ಲಿ ಬ್ರಾಂಡ್ ಅನ್ನು ಪ್ರಾರಂಭಿಸಿದ ಉದಿತ್ ಸೂದ್ ಮತ್ತು ನಿಕಿತಾ ಬಾರ್ಮೆಚಾ ಅವರು 2017 ರಲ್ಲಿ ಸ್ಥಾಪಿಸಿದ ಈ ನವೋದ್ಯಮವು ಈಗ ಯುರೋಪ್, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳಿಗೆ ವಿಸ್ತರಿಸಿದೆ.
ಪರಿಸರ ಸ್ನೇಹಿ ಸೆಣಬಿನ ಚೀಲಗಳನ್ನು ಮಾರಾಟ ಮಾಡುವ ನವೋದ್ಯಮವು, ಕಚೇರಿ ಜಾಗದಲ್ಲಿಯೂ ಪರಿಸರ ಪ್ರಜ್ಞೆ ಹೊಂದಿದೆ. ನೌಕರರು ಕಚೇರಿ ಜಾಗದಲ್ಲಿ ಯಾವುದೇ ಪ್ಲಾಸ್ಟಿಕ್‌ಗಳನ್ನು ಬಳಸುವುದಿಲ್ಲ, ಬದಲಿಗೆ ಜೈವಿಕ ವಿಘಟನೀಯ ಚೀಲಗಳನ್ನು ಬಳಸುತ್ತಾರೆ.
ಈ ನವೋದ್ಯಮವು ಮಳೆನೀರು ಕೊಯ್ಲನ್ನು ಅಳವಡಿಸಿಕೊಂಡಿದೆ ಮತ್ತು ಸೌರಶಕ್ತಿಯನ್ನು ಬಳಸುತ್ತದೆ. ಕಂಪನಿಯು ತನ್ನ ದೈನಂದಿನ ತ್ಯಾಜ್ಯವನ್ನು ಶುಷ್ಕ ಮತ್ತು ಆರ್ದ್ರ ತ್ಯಾಜ್ಯಗಳಾಗಿ ಬೇರ್ಪಡಿಸುತ್ತದೆ. ಅದರ ಉತ್ಪನ್ನಗಳಲ್ಲಿ ಬಳಸಲಾಗುವ ಹೆಚ್ಚುವರಿ ಬಟ್ಟೆಯನ್ನು ಕಾರ್ಖಾನೆಯಿಂದ ಮರುಬಳಕೆಗಾಗಿ ಕಳುಹಿಸಲಾಗುತ್ತದೆ. ಇದಲ್ಲದೆ, ಅವರು ಕಚೇರಿಯಲ್ಲಿ ಮರುಬಳಕೆ ಮಾಡಬಹುದಾದ ಕಟ್ಲೆರಿಗಳನ್ನು ಹೊಂದಿದ್ದಾರೆ, ಇದರಿಂದಾಗಿ ನೌಕರರು ಆಹಾರದೊಂದಿಗೆ ಬರುವ ಬಿಸಾಡಬಹುದಾದ ಕಟ್ಲರಿಗಳನ್ನು ಬಳಸುವುದನ್ನು ತಪ್ಪಿಸುತ್ತಾರೆ.
ಜಿಇಎಂ ಎನ್ವಿರೋ ಮ್ಯಾನೇಜ್ಮೆಂಟ್
ದೆಹಲಿ ಮೂಲದ ಜಿಇಎಂ ಎನ್ವಿರೋ ಮ್ಯಾನೇಜ್ಮೆಂಟ್ ಅನ್ನು ದಿನೇಶ್ ಪರಿಖ್, ಸಚಿನ್ ಶರ್ಮಾ ಮತ್ತು ಆದಿತ್ಯ ಪರಿಖ್ ಅವರು 2013 ರಲ್ಲಿ ಸ್ಥಾಪಿಸಿದರು. ಕಾರ್ಖಾನೆಗಳು, ಕಚೇರಿಗಳು, ಹೋಟೆಲ್‌ಗಳು, ಮೋಟೆಲ್‌ಗಳು ಮತ್ತು ಸಂಸ್ಥೆಗಳಿಂದ ಜಿಇಎಂ ಪೂರ್ವ ಮತ್ತು ನಂತರದ ಗ್ರಾಹಕ ಪ್ಯಾಕೇಜಿಂಗ್ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ನಂತರ ತ್ಯಾಜ್ಯವನ್ನು ಟಿ-ಶರ್ಟ್, ಕ್ಯಾಪ್ ಮತ್ತು ಬ್ಯಾಗ್‌ಗಳಂತಹ ಉತ್ಪನ್ನಗಳಿಗೆ ಮರುಬಳಕೆ ಮಾಡಲಾಗುತ್ತದೆ, ಅದರ ಬ್ರಾಂಡ್ ‘ಬೀಯಿಂಗ್ ರೆಸ್ಪಾನ್ಸಿಬಲ್’ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಪರಿಸರ ಸುಸ್ಥಿರತೆ ಮತ್ತು ಕಾರ್ಪೊರೇಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಮರುಬಳಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಕಂಪನಿಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.