1 ಕೆ.ಜಿ ಪ್ಲಾಸ್ಟಿಕ್ ಕೊಟ್ಟು 1 ಕೆ.ಜಿ ಅಕ್ಕಿ ಪಡೆಯಿರಿ; ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಜಿಲ್ಲಾಧಿಕಾರಿಯ ವಿನೂತನ ಪ್ರಯತ್ನ
ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ಜಿಲ್ಲಾಧಿಕಾರಿ ‘ಒಂದು ಕೆಜಿ ಪ್ಲಾಸ್ಟಿಕ್ ಕೊಡಿ, ಒಂದು ಕೆಜಿ ಅಕ್ಕಿ ಪಡೆಯಿರಿ' ಎಂಬ ನೂತನ ಅಭಿಯಾನವೊಂದನ್ನು ಆರಂಭಿಸಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗಾಗಿ ವಿನೂತನ ಸಮರ ನಡೆಸಿದ್ದಾರೆ.
ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಹಲವಾರು ವಿನೂತನ ಪ್ರಯತ್ನಗಳು ನಡೆಯುತ್ತಲೇ ಇವೆ. ಹಲವು ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಗಳನ್ನು ವಿಭಿನ್ನ ಯೋಜನೆಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದ್ದು, ಇಂತಹವರಲ್ಲಿ ಒಬ್ಬರಾದ ಮುಲುಗು ಜಿಲ್ಲಾಧಿಕಾರಿ ಒಂದು ಕೆ.ಜಿ ಏಕಬಳಕೆಯ ಪ್ಲಾಸ್ಟಿಕ್ ಕೊಟ್ಟವರಿಗೆ ಒಂದು ಕೆ.ಜಿ ಅಕ್ಕಿ ನೀಡುವ ನಾವೀನ್ಯ ಕಾರ್ಯಕ್ರಮ ನಡೆಸುತ್ತಿದ್ದಾರೆ.
ತೆಲಂಗಾಣದ ಸುಮಾರು 174 ಜಿಲ್ಲೆಗಳಲ್ಲಿಯೂ ಈ ಕಾರ್ಯಕ್ರಮವನ್ನು ನಿರ್ದಿಷ್ಟ ದಿನಗಳವೆರೆಗೆ ಹಮ್ಮಿಕೊಳ್ಳಲಾಗಿತ್ತು. ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ರಾಜ್ಯಾದ್ಯಂತ ಏಕಬಳಕೆ ಪ್ಲಾಸ್ಟಿಕ್ ನಿಯಂತ್ರಣ ಹೇರಲಾಗಿತ್ತು. ಈ ನಿಟ್ಟಿನಲ್ಲಿ ಅಕ್ಟೋಬರ್ 16 ರಿಂದ ಹತ್ತು ದಿನಗಳವರೆಗೆ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಅವಧಿಯಲ್ಲಿ ನಿವಾಸಿಗಳಿಂದ ಏಕಬಳಕೆಯ ಸ್ಟ್ರಾ, ಸ್ಪೂನ್, ಪ್ಲೇಟ್, ಗ್ಲಾಸ್ ಹಾಗೂ ಕ್ಯಾರಿ ಬ್ಯಾಗ್‌ಗಳನ್ನು ಸಂಗ್ರಹಿಸಿ ಪ್ರತಿಯೊಂದು ಕೆಜಿಗೆ ಒಂದು ಕೆಜಿ ಅಕ್ಕಿಯಂತೆ ವಿನಿಮಯ ಮಾಡಲಾಯಿತು.
ರಾಜ್ಯಾದ್ಯಂತ ಏಕಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಕಠಿಣ ಕ್ರಮಕೈಗೊಳ್ಳಲಾಗಿದ್ದು, ಯಾವುದೇ ರೀತಿಯ ಏಕಬಳಕೆ ಪ್ಲಾಸ್ಟಿಕ್ ಬಳಸುವಂತಿಲ್ಲ ಹಾಗೂ ಅವುಗಳ ನಿರ್ವಹಣೆಗೆ ಈ ವಿನೂತನ ಯೋಜನೆಯನ್ನು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ತ್ಯಾಜ್ಯ ಸ್ವೀಕರಿಸುವ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಗೆ ಪ್ಲಾಸ್ಟಿಕ್ ತಂದುಕೊಟ್ಟವರಿಗೆ ಉಚಿತವಾಗಿ ಅಕ್ಕಿ ವಿನಿಮಯ ಮಾಡಲಾಗಿದೆ.
ತ್ಯಾಜಕ್ಕೆ ವಿನಿಮಯವಾಗಿ ಉಚಿತ ಅಕ್ಕಿ ನೀಡುವ ಬಗ್ಗೆ ದಿ ಬೆಟರ್ ಇಂಡಿಯಾದೊಂದಿಗೆ ಮಾತನಾಡಿದ ನಾರಾಯಣ್ ರೆಡ್ಡಿ,
"ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಅಕ್ಕಿ ಕೇವಲ ಪ್ರೋತ್ಸಾಹವಾಗಿದೆ. ನಮ್ಮ ಜಿಲ್ಲೆಯು ವನ್ಯಜೀವಿ ಅಭಯಾರಣ್ಯಗಳು ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದ್ದು, ಇದು ದೇಶಾದ್ಯಂತ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಅಧಿಕಾರಿಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರೂ, ಪ್ಲಾಸ್ಟಿಕ್ ಬಳಕೆ ನಿರ್ವಹಣೆಯಾಗುತ್ತಿಲ್ಲ. ಈ ಉಪಕ್ರಮದಿಂದಾಗಿ 2020 ರ ವೇಳೆಗೆ ಭಾರತವನ್ನು ಏಕ-ಬಳಕೆಯ ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸುವುದು ನಮ್ಮ ಬದ್ಧತೆಯಾಗಿದೆ,” ಎಂದರು.
ಜಕರಂ ಎಂಬ ಗ್ರಾಮದ ಶಾಲೆಯೊಂದರಲ್ಲಿ ಒಂದು ಸ್ಪರ್ಧೆಯನ್ನು ಆಯೋಜಿಸುವ ಮೂಲಕ 'ಒಂದು ಕೆಜಿ ಪ್ಲಾಸ್ಟಿಕ್‌ಗೆ ಒಂದು ಕೆಜಿ ಅಕ್ಕಿ' ನೂತನ ಉಪಾಯ ಆರಂಭವಾಯಿತು. ಶಾಲೆಯ ಮಕ್ಕಳು 1000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಿಸಿದರೆ ಶಾಲೆಗೆ ಕ್ರಿಕೆಟ್ ಕಿಟ್ ಉಡುಗೊರೆ ನೀಡುವ ಭರವಸೆ ನೀಡಲಾಗಿತ್ತು ಈ ಸ್ಪರ್ಧೆಯಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದನ್ನು ಕಂಡು ಈ ಯೋಜನೆಯಲ್ಲಿ ಜನರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸಲು ಈ ಆಲೋಚನೆ ಸಹಾಯ ಮಾಡಿತು.
ಅಲ್ಲದೇ, ಈ ಯೋಜನೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಪ್ಲಾಸ್ಟಿಕ್ ತೂಕಕ್ಕೆ ಸಮನಾಗಿ ಅಕ್ಕಿ ನೀಡುವುದು ಒಂದುಕಡೆಯಾದರೆ, ಈ ಯೋಜನೆಗೆ ದಾನಿಗಳಿಂದ ಅಕ್ಕಿ ಹಾಗೂ ದೇಣಿಗೆಯನ್ನು ಸಂಗ್ರಹ ಮಾಡುವುದು ಯೋಜನೆಯ ಮತ್ತೊಂದು ಭಾಗವಾಗಿತ್ತು.
ಜಿಲ್ಲಾಡಳಿತದ ಪ್ರಯತ್ನಕ್ಕೆ ಫಲ ದೊರಕಿದ್ದು, ಅಭಿಯಾನ ಆರಂಭವಾದ ಮೊದಲ ದಿನವೇ ಏಕಬಳಕೆಯ ಸುಮಾರು 2,400 ಕೆಜಿ ಪ್ಲಾಸ್ಟಿಕ್ ಸಂಗ್ರಹವಾಗಿತ್ತು. ಅಲ್ಲದೇ ಶಾಲಾ ಚಟುವಟಿಕೆಗಳ ಮೂಲಕ 31,000 ಕೆ.ಜಿ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವಲ್ಲಿ ದಿನವನ್ನು ಕಳೆಯುವುದರಿಂದ ಇದು ಜೀವನೋಪಾಯವನ್ನು ಕೂಡ ಒದಗಿಸಿದೆ, ವರದಿ ದಿ ಲಾಜಿಕಲ್ ಇಂಡಿಯನ್.
ದಾನಿಗಳಿಂದ 450 ಕ್ವಿಂಟಾಲ್ ಅಕ್ಕಿ ಹಾಗೂ 6 ಲಕ್ಷ ರೂ ಹಣವನ್ನು ಸಂಗ್ರಹಿಸಲಾಗಿದ್ದು, ಇದನ್ನು ಹಳ್ಳಿಗಳಾದ್ಯಂತ ಪ್ಲಾಸ್ಟಿಕ್ ಸಂಗ್ರಹಿಸಿದವರಿಗೆ ವಿತರಿಸಲಾಗಿದೆ.
ಪ್ಲಾಸ್ಟಿಕ್ ನಿಷೇಧದ ನಂತರ ಅದಕ್ಕೆ ಪರ್ಯಾಯವಾಗಿ ರಾಜ್ಯದಲ್ಲಿ ಪೇಪರ್ ಬ್ಯಾಗ್ ತಯಾರಿಸುವ ಘಟಕಗಳನ್ನು ಸ್ಥಾಪಿಸಲು ಸರ್ಕಾರದ ಅನುಮೋದನೆಗಾಗಿ ಪ್ರಯತ್ನಿಸಲಾಗಿದೆ. ದಾನ ಮಾಡಿದ ಹಣದಿಂದ, ನಾವು ಪ್ರತಿ ಹಳ್ಳಿಯಲ್ಲಿ ಎರಡರಿಂದ ಮೂರು ಟೈಲರ್‌ಗಳನ್ನು ನೇಮಿಸಿಕೊಂಡಿದ್ದೇವೆ. ಜನರು ಬಳಸಲು ಯೋಗ್ಯವಿರುವ ಬಟ್ಟೆಯನ್ನು ತಂದರೆ ಇಲ್ಲಿರುವ ಟೈಲರ್‌ಗಳು ಆ ಬಟ್ಟೆಯಿಂದ ಚೀಲಗಳನ್ನು ತಯಾರಿಸಿ ಜನರಿಗೆ ಹಿಂದಿರುಗಿಸುತ್ತಿದ್ದಾರೆ. ಹೀಗೆ ಸುಮಾರು 35,000 ಬ್ಯಾಗ್ ಚೀಲಗಳನ್ನು ತಯಾರಿಸಿದ್ದೇವೆ,
ಎಂದು ನಾರಾಯಣ ರೆಡ್ಡಿ ದಿ ಲಾಜಿಕಲ್ ಇಂಡಿಯನ್ ಗೆ ಹೇಳಿದ್ದಾರೆ.
ಜಿಲ್ಲೆಯ ಪ್ರತಿ ಹಳ್ಳಿಯು 15 ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತವೆ ಆದರೆ, ತ್ಯಾಜ್ಯ ಬೇರ್ಪಡಿಕೆಯ ಕೊರತೆಯಿಂದಾಗಿ ಅವುಗಳು ಭೂಮಿಯೊಳಗೆ ಹುದುಗಿಹೋಗುತ್ತಿವೆ. ಅಲ್ಲದೇ, ಇಲ್ಲಿನ ಪ್ರವಾಸಿತಾಣಗಳು ಸುಮಾರು ಎರಡು ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉತ್ಪಾದಿಸುತ್ತಿದ್ದು, ಇವುಗಳ ನಿರ್ವಹಣೆಗೆ ಪ್ಲಾಸ್ಟಿಕ್‌ಗೆ ಅಕ್ಕಿ ನೀಡುವ ಈ ವಿನೂತನ ಯೋಜನೆ ಪರಿಸರ ವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಾಯಕವಾಗಿದೆ ಎನ್ನಬಹುದು.
ಇದಕ್ಕೆ ಪೂರಕವಾಗಿ, ಅಸ್ಸಾಂನ ಶಾಲೆಯು ಪ್ಲಾಸ್ಟಿಕ್ ತ್ಯಾಜ್ಯವನ್ನೇ ಶುಲ್ಕವನ್ನಾಗಿ ಸ್ವೀಕರಿಸುತ್ತಿದೆ. ಛತ್ತೀಸ್ಗಢದ ಗಾರ್ಬೇಜ್ ಕೆಫೆಯು ಒಂದು ಕಿಲೋ ಪ್ಲಾಸ್ಟಿಕ್‌ಗೆ ಬದಲಾಗಿ ಉಚಿತ ಊಟ ನೀಡುತ್ತಿದೆ ಹಾಗೂ ಭಾರತೀಯ ರೈಲ್ವೆ ಶೀಘ್ರದಲ್ಲೇ ಪ್ಲಾಸ್ಟಿಕ್ ಬಾಟಲಿಯನ್ನು ಕ್ರಶಿಂಗ್ ಯಂತ್ರದಲ್ಲಿ ಹಾಕಿದರೆ, ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಿಕೊಳ್ಳುವ ವಿನೂತನ ಕಾರ್ಯವೊಂದನ್ನು ಕೈಗೊಳ್ಳಲಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.