ಪ್ಲ್ಯಾಸ್ಟಿಕ್ ನೀಡಿ ತರಕಾರಿ ಪಡೆಯಿರಿ, ವಿಜಯವಾಡದಲ್ಲಿ ಹೀಗೊಂದು ಅಭಿಯಾನ
ದೇಶದೆಲ್ಲೆಡೆ ಏಕಬಳಕೆ ಪ್ಲ್ಯಾಸ್ಟಿಕ್ ನಿಷೇಧಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದನ್ನು ಬೆಂಬಲಿಸಿ ವಿಜಯವಾಡದ 'ರೈತ ಬಜಾರ್'ನ ತರಕಾರಿ ಮಾರಾಟಗಾರರು ಪ್ಲ್ಯಾಸ್ಟಿಕ್ ಕೊಟ್ಟು ಉಚಿತವಾಗಿ ತರಕಾರಿ ಪಡೆಯಿರಿ, ಎನ್ನುವ ಅಭಿಯಾನ ಆರಂಭಿಸಿದ್ದಾರೆ. ಇಲ್ಲಿ ನೀವು ನೀಡುವ ಪ್ಲ್ಯಾಸ್ಟಿಕ್ ತೂಕಕ್ಕೆ ಸರಿ ಸಮನಾದ ತೂಕದ ತರಕಾರಿಯನ್ನು ಉಚಿತವಾಗಿ ಪಡೆಯಬಹುದು.
ನಮ್ಮ ಹಿಂದಿನ ತಲೆಮಾರಿನ ಜನರು ಪ್ಲ್ಯಾಸ್ಟಿಕ್ ಬಳಕೆಯಿಲ್ಲದೇ ಜೀವನ ನಡೆಸುತ್ತಿದ್ದರು. ಮಣ್ಣಿನಿಂದ ತಯಾರಿಸಿದ ವಸ್ತುಗಳು ಮತ್ತು ಪರಿಸರ ಸ್ನೇಹಿ ವಸ್ತುಗಳ ಬಳಕೆ ಮಾಡುತ್ತಿದ್ದರು. ಆದರೆ ಇಂದು ನಗರೀಕರಣ ಮತ್ತು ಕೈಗಾರಿಕೀಕರಣದ ಪ್ರಭಾವಕ್ಕೆ ಸಿಲುಕಿರುವ ನಾವು, ಪ್ಲ್ಯಾಸ್ಟಿಕ್ ಇಲ್ಲದ ದಿನವನ್ನು ನೆನೆಸಿಕೊಳ್ಳುವುದೂ ಕಷ್ಟವಾಗಿದೆ. ಬೆಳಿಗ್ಗೆ ಎದ್ದು ಹಲ್ಲುಜ್ಜುವ ಬ್ರಷ್‌ನಿಂದ ಹಿಡಿದು ಎಲ್ಲ ದಿನ ಬಳಕೆಯ ವಸ್ತುಗಳೂ ಪ್ಲ್ಯಾಸ್ಟಿಕ್‌ಮಯವಾಗಿದೆ. ಅದರಲ್ಲೂ ಅತಿಯಾಗಿ ಬಳಸುವ ಏಕಬಳಕೆಯ ಪ್ಲ್ಯಾಸ್ಟಿಕ್ ಜಾಗತಿಕ ಕಳವಳಕಾರಿ ವಿಷಯವಾಗಿ ಪರಿಣಮಿಸಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ‘ರೈತರ ಬಜಾರ್'ನಲ್ಲಿ ಪ್ಲ್ಯಾಸ್ಟಿಕ್ ಬಾಟಲಿಗಳು ಮತ್ತು ಪ್ಲ್ಯಾಸ್ಟಿಕ್ ಬ್ಯಾಗ್‌ಗಳನ್ನು ನೀಡಿದರೆ ಉಚಿತ ತರಕಾರಿ ನೀಡುವ ಮೂಲಕ ಪ್ಲ್ಯಾಸ್ಟಿಕ್ ವಿರೋಧಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಇಲ್ಲಿ ಗ್ರಾಹಕರು ತಾವು ನೀಡುವ ಪ್ಲ್ಯಾಸ್ಟಿಕ್ ತ್ಯಾಜ್ಯಕ್ಕೆ ಸಮನಾದ ತೂಕದ ತರಕಾರಿಗಳನ್ನು ಪಡೆಯುತ್ತಾರೆ. ಮರುಬಳಕೆ ಮಾಡಬಹುದಾದ ಸೆಣಬು ಮತ್ತು ಹತ್ತಿ ಚೀಲಗಳಿಗಳ ಬಳಕೆಗೂ ಇದು ನೆರವಾಗಲಿದೆ, ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ, ವರದಿ ಡೆಕ್ಕನ್ ಕ್ರೋನಿಕಲ್.
ತೆನಾಲಿ ಶಾಸಕ ಅನ್ನಾಬತ್ ಹುನಿ ಶಿವಕುಮಾರ್ ಮತ್ತು ಪುರಸಭೆಯ ಅಧಿಕಾರಿಗಳು ಬರಿ-ಪಾಲೆಂ ರಸ್ತೆಯ ಬದಿಯಲ್ಲಿರುವ 'ರೈತರ ಬಜಾರ್' ಒಂದರಲ್ಲಿ ಈ ವಿನಿಮಯ ವ್ಯವಸ್ಥೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದಾರೆ. ಈ ಉಪಕ್ರಮ ಮುಂದಿನ ದಿನಗಳಲ್ಲಿ ಉಳಿದ ಮೂರು ರೈತರ ಬಜಾರ್‌ಗಳಿಗೂ ವಿಸ್ತರಿಸಲಾಗುವುದು, ವರದಿ ಡೆಕ್ಕನ್ ಕ್ರೋನಿಕಲ್.
"ಏಕಬಳಕೆ ಪ್ಲ್ಯಾಸ್ಟಿಕ್ ಚೀಲಗಳ ಬಳಕೆಯ ವಿರುದ್ಧದ ಅಭಿಯಾನವು, ಇನ್ನುಮುಂದೆ ಅಂತಹ ಚೀಲಗಳನ್ನು ವ್ಯಾಪಾರಿಗಳು ಮಾರಾಟಮಾಡದಿರಲು ಮುನ್ನುಡಿಯಾಯಿತು" ಎಂದು ತೆನಾಲಿಯ ಮುನ್ಸಿಪಲ್ ಆರೋಗ್ಯ ಅಧಿಕಾರಿ ಬಿವಿ ರಮಣರವರು ಡೆಕ್ಕನ್ ಕ್ರೋನಿಕಲ್‌ಗೆ ಹೇಳಿದ್ದಾರೆ.
ವ್ಯಾಪಾರಿಗಳು ಈ ವಿನಿಮಯಕ್ಕಾಗಿ ಅಗ್ಗದ ಮತ್ತು ಮಧ್ಯಮ ಬೆಲೆಯ ತರಕಾರಿಗಳನ್ನು ನೀಡುತ್ತಿದ್ದಾರೆ. ಸುಮಾರು 50 ರಿಂದ 90 ಬಾಟಲ್‌ಗಳನ್ನು ಸಂಗ್ರಹಿಸಿದರೆ ಒಂದು ಕೆಜಿ ತೂಗುತ್ತದೆ, ಆದರೆ ಬಹುತೇಕ ಜನರು ತರಕಾರಿ ಕೊಳ್ಳಲು 250 ಗ್ರಾಂ ನಿಂದ 500 ಗ್ರಾಂ ಪ್ಲ್ಯಾಸ್ಟಿಕ್ ಅನ್ನು ತರುತ್ತಾರೆ. ಈ ವಿನಿಮಯ ಉಪಕ್ರಮಕ್ಕೆ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತೆನಾಲಿ ಶಾಸಕರಾದ ಶಿವಕುಮಾರ್‌ರವರು ಹೇಳಿದ್ದಾರೆ ಎಂದು ಡೆಕ್ಕನ್ ಕ್ರೋನಿಕಲ್ ವರದಿ ಮಾಡಿದೆ.
ಏಕ ಬಳಕೆಯ ಪ್ಲ್ಯಾಸ್ಟಿಕ್ ಬಳಕೆಗೆ ಈಗಾಗಲೇ ನಿಷೇಧವಿದ್ದು, ದೇಶದ ಹಲವಾರು ಪ್ರದೇಶಗಳಲ್ಲಿ ಪ್ಲ್ಯಾಸ್ಟಿಕ್ ವಿನಿಮಯ ಮಾಡಿಕೊಂಡು ತರಕಾರಿ ನೀಡುವುದು ಮತ್ತು ಉಪಹಾರ ನೀಡುವ ಅಭಿಯಾನಗಳು ಆರಂಭವಾಗಿದೆ. ಇದು ಇನ್ನಷ್ಟು ಜನಪ್ರಿಯಗೊಂಡು, ಪ್ಲ್ಯಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಜನಾಂದೋಲನ ಅಭಿಯಾನಗಳು ದೇಶದ ಪ್ರತಿಯೊಂದು ಪ್ರದೇಶವನ್ನೂ ತಲುಪಬೇಕಿದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.