25 ಚಿಕ್ಕ ಕಾಡುಗಳನ್ನು ನಿರ್ಮಿಸಿದ ಪಂಜಾಬ್‌ ನ ಭಾರತೀಯ ಕಂದಾಯ ಅಧಿಕಾರಿ

ಪಂಜಾಬ್ ನಲ್ಲಿ ಸರ್ಕಾರಿ ಹುದ್ದೆಯಲ್ಲಿರುವ ರೋಹಿತ್ ಮೆಹ್ರಾ ಲೂಧಿಯಾದಲ್ಲಿ ಜಪಾನಿನ ಮಿಯಾವಕಿ ವಿಧಾನದಿಂದ ಚಿಕ್ಕ ಚಿಕ್ಕ 25 ಕಾಡುಗಳನ್ನು ನಿರ್ಮಾಣ ಮಾಡುವ ಮೂಲಕ ಪರಿಸರದ ಜಾಗೃತಿ ಮೂಡಿಸಿದ್ದಾರೆ.

25 ಚಿಕ್ಕ ಕಾಡುಗಳನ್ನು ನಿರ್ಮಿಸಿದ ಪಂಜಾಬ್‌ ನ ಭಾರತೀಯ ಕಂದಾಯ ಅಧಿಕಾರಿ

Friday October 25, 2019,

2 min Read

ನಗರಗಳ ಅಭಿವೃದ್ದಿಗಾಗಿ ಮರಗಳ ಮಾರಣ ಹೋಮ ನಡೆಯುತ್ತಲೇ ಇದೆ. ಮೆಟ್ರೋ ಕಾಮಗಾರಿ, ರಸ್ತೆಗಳಿಗೆ ಅಂತಾ ಬೆಳೆದು ನಿಂತ ಮರಗಳಿಗೆ ಕೊಡಲಿ ಪೆಟ್ಟು ಹಾಕಲಾಗುತ್ತಿದೆ. ಇದರಿಂದ ಸಾಕಷ್ಟು ಪರಿಸರ ಹಾನಿಯಾಗುವುದರ ಜೊತೆಗೆ ಮನುಷ್ಯ ತನ್ನ ಅಂತಃಪತನವನ್ನು ತಾನೇ ತಂದೊಡ್ಡಿಕೊಳ್ಳುತ್ತಿದ್ದಾನೆ.


ಇಂಥಹ ಪರಿಸ್ಥಿತಿಯಲ್ಲಿ 41 ವರ್ಷದ ಭಾರತೀಯ ಕಂದಾಯ ಸೇವೆಗಳ ಅಧಿಕಾರಿ ರೋಹಿತ್ ಮೆಹ್ರಾ ಲೂಧಿಯಾನಾದಲ್ಲಿ ಚಿಕ್ಕ ಚಿಕ್ಕ ಕಾಡುಗಳನ್ನು ನಿರ್ಮಿಸುವ ಮೂಲಕ ಪರಿಸರ, ಮರ ಗಿಡಗಳ ಸಂರಕ್ಷಣೆಗೆ ಮುಂದಾಗಿದ್ದಾರೆ.


q

ವರ್ಟಿಕಲ್ ಗಾರ್ಡನ್ ಮುಂದೆ ರೋಹಿತ್ ಮೆಹ್ರಾ (ಚಿತ್ರ ಕೃಪೆ: ದಿ ಬೆಟರ್ ಇಂಡಿಯ)


ಹೌದು, ಲೂಧಿಯಾನದ ಹಸಿರು ಮನುಷ್ಯ ಎಂದು ಪ್ರಖ್ಯಾತರಾಗಿರುವ ಐಆರ್‌ಎಸ್ ಅಧಿಕಾರಿ ರೋಹಿತ್ ಮೆಹ್ರಾ, ಕೇವಲ ಎರಡು ವರ್ಷಗಳಲ್ಲಿ 500 ಅಡಿ ಭೂಮಿಯಿಂದ ಗಿಡಗಳನ್ನು ನೆಡುವ ಕಾರ್ಯ ಆರಂಭಿಸಿ 4 ಎಕರೆ ಪ್ರದೇಶಗಳವರೆಗೆ 25 ಮಿನಿ ಕಾಡುಗಳನ್ನು ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ ಲೂಧಿಯಾನ ರೈಲು ನಿಲ್ದಾಣದ ಬಳಿ ಮೊದಲ ಲಂಬಾಕೃತಿಯ ಉದ್ಯಾನ ನಿರ್ಮಿಸಿದ್ದಾರೆ. ಸದ್ಯ ಇದೀಗ ಪಂಜಾಬಿನಾದ್ಯಂತ ಸುಮಾರು 75 ಲಂಬ ಉದ್ಯಾನಗಳು ತಲೆ ಎತ್ತಿ ನಿಂತಿವೆ, ವರದಿ ಲೆಟ್ಸ್‌ ಟಾಕ್


ಲೆಟ್ಸ್‌ ಟಾಕ್ ಜೊತೆ ಮಾತನಾಡುತ್ತಾ ರೋಹಿತ,


“ಮೊದಲು ಲೂಧಿಯಾನಾ ಜನರು ಈ ವರ್ಟಿಕಲ್ ಗಾರ್ಡನ್ ಬಗ್ಗೆ ತಿಳಿದುಕೊಂಡು ನಂತರ ನನ್ನನ್ನು ಸಂಪರ್ಕಿಸಿದರು. ಕಾರ್ಖಾನೆಗಳು, ಉದ್ಯಮ ಸಂಸ್ಥೆಗಳು ಇರುವ ಸ್ಥಳಗಳಲ್ಲಿ ಮರಗಳನ್ನು ಬೆಳೆಸಲು ಮನವಿ ಮಾಡಿದರು‌. ಲೂಧಿಯಾನದಿಂದ 40 ಕಿ.ಮೀ. ದೂರದಲ್ಲಿರುವ ಜಾಗ್ರಾವುನ್ ಎಂಬಲ್ಲಿ ಕೈಗಾರಿಕೋದ್ಯಮಿಯೊಬ್ಬರು ತಮ್ಮ 6,000 ಚದರ ಅಡಿ ಅಗಲದ ನಿವೇಶನವನ್ನು ಅರಣ್ಯವನ್ನಾಗಿ ಪರಿವರ್ತಿಸವಂತೆ ಕೇಳಿಕೊಂಡರು” ಎಂದರು.


ಲೂಧಿಯಾನ ಪ್ರದೇಶ ಕೈಗಾರಿಕೆಗಳ ಕೇಂದ್ರ ಎನ್ನುವುದು ಗೊತ್ತಿರುವ ವಿಚಾರ. ಈ ಕೈಗಾರಿಕೆಗಳಿಂದಾಗಿ ಅಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಕೆಲವೊಮ್ಮೆ ವಾಯುಮಾಲಿನ್ಯ ವಿಪರೀತವಾದಾಗ ಶಾಲಾ ಕಾಲೇಜುಗಳಿಗೆ ಸತತವಾಗಿ ನಾಲ್ಕೈದು ದಿನ ರಜೆ ನೀಡಿರುವ ಉದಾಹರಣೆ ಕೂಡ ಇದೆ.


ಪರಿಸರ ಮಾಲಿನ್ಯದ ಅರಿವಿನ ಬಗ್ಗೆ ದಿ ಬೆಟರ್ ಇಂಡಿಯ ಜೊತೆ ಮಾತನಾಡುತ್ತಾ ರೋಹಿತ್,


“ಎರಡು ವರ್ಷದ ಹಿಂದೆ ನನ್ನ ಮಗ ಉದಯ್, ರಜೆ ಕಳೆಯಲು ಹೊರಗೆ ಹೋಗಬೇಕೆಂದು ಹೇಳಿದ. ನನ್ನ ಮಗ ಈ ಮಾತು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಏಕೆಂದರೆ ಅದು ಶಾಲೆಗಳಿಗೆ ರಜೆಗಳನ್ನು ನೀಡುವ ಸಮಯವಲ್ಲ. ಹೊಗೆ ಮತ್ತು ಮಾಲಿನ್ಯದ ಕಾರಣ ಆತನ ಶಾಲೆಯಲ್ಲಿ ಕೆಲವು ದಿನ ರಜೆ ಘೋಷಿಸಲಾಗಿತ್ತು. ಈ ಘಟನೆ ನನಗೆ ಮಾಲಿನ್ಯದ ಸಮಸ್ಯೆಯನ್ನು ಅರಿಯುವಂತೆ ಮಾಡಿತು” ಎಂದರು.


(ಚಿತ್ರಕೃಪೆ: ಲೆಟ್ಸ್‌ ಟಾಕ್)




ಆರಂಭದಲ್ಲಿ ರೋಹಿತ್ ಅವರಿಗೆ ಈ ರೀತಿಯ ಕಾಡುಗಳನ್ನು ನಿರ್ಮಾಣ ಮಾಡುವ ಬಗ್ಗೆ ತಿಳುವಳಿಕೆ ಇರಲಿಲ್ಲ. ಹೀಗಿದ್ದಾಗ ಮಾಲಿನ್ಯ ಕಡಿಮೆ ಮಾಡಲು ಅದು ಕಡಿಮೆ ಅವಧಿಯಲ್ಲಿ ಕಿರುಕಾಡುಗಳನ್ನು ಹೇಗೆ ನಿರ್ಮಾಣ ಮಾಡಬೇಕು ಎಂದು ಯೋಚಿಸಿ ಈ ಬಗ್ಗೆ ಅಧ್ಯಯನ ಪ್ರಾರಂಭಿಸಿದರು‌. ಆಗ ಅವರಿಗೆ ಜಪಾನಿನ ಮಿಯಾವಕಿ ಎಂಬ ತಂತ್ರಜ್ಞಾನದ ಬಗ್ಗೆ ತಿಳಿಯಿತು. ಮರಗಳು ವೇಗವಾಗಿ ಬೆಳೆಯುವಂತೆ ಮಾಡುವ, ಗಿಡ ಹಾಗೂ ಕಾಡುಗಳನ್ನು ಬೆಳೆಸುವ ಪ್ರಾಚೀನ ಭಾರತದ ವಿಜ್ಞಾನವನ್ನು ಅರಿಯುವ ವೃಕ್ಷಾಯುರ್ವೇದದಂತಹ ಕೃತಿಗಳನ್ನು ಕೂಡ ಓದಿದರು. ಇದರ ಜೊತೆ ಜೊತೆಗೆ ಒಂದೇ ಜಾಗದಲ್ಲಿ ಬೇವು, ನಲ್ಲಿ, ಗುಲ್‌ಮೊಹರ್, ಹೊನ್ನೆ, ಜಾಯಿಕಾಯಿ, ಆಲದಮರ ಸೇರಿದಂತೆ ಹಲವು ವಿಭಿನ್ನ ಮರಗಳನ್ನು ಬೆಳೆಸುವುದು ಕೂಡ ಅವರ ಉದ್ದೇಶವಾಗಿತ್ತು.


ಈ ಜಪಾನಿನ ತಂತ್ರಜ್ಞಾನ ಉಪಯೋಗಿಸಿಕೊಂಡು ವೇಗದಲ್ಲಿ ಕಾಡು ನಿರ್ಮಾಣ ಮಾಡಲು ಮುಂದಾಗುತ್ತಾರೆ ರೋಹಿತ್. ಆ ತಂತ್ರಜ್ಞಾನದಲ್ಲಿ ಉಪಯೋಗಿಸುವ ವಸ್ತುಗಳನ್ನು ಬಳಸಿ ಕಾಡು ನಿರ್ಮಾಣ ಮಾಡುತ್ತಾರೆ. ಈ ಮರಗಳು ವೇಗವಾಗಿ ಬೆಳೆಯುವುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಲೂಧಿಯಾನದಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಮಾಲಿನ್ಯವನ್ನು ತಗ್ಗಿಸುವ ರೋಹಿತ್ ಅವರ ಕಾರ್ಯಕ್ಕೆ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಕೂಡ ಕೈಜೋಡಿಸಿದೆ. ರೋಹಿತ್ ಅವರ ಮಾರ್ಗದರ್ಶನದಲ್ಲಿ ಸೃಷ್ಟಿಯಾದ 25 ಅರಣ್ಯಗಳಲ್ಲಿ ಎಂಟು ಕಾಡುಗಳು ಕೈಗಾರಿಕಾ ಪ್ರದೇಶಗಳಲ್ಲಿಯೇ ಇವೆ.


ಸದ್ಯ ಲೂಧಿಯಾನಾ ಸೇರಿದಂತೆ ಸಾಕಷ್ಟು ಪ್ರದೇಶಗಳಿಗೆ ಹೋಗಿ ಈ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುತ್ತುದ್ದಾರೆ ರೋಹಿತ್ ಮೆಹ್ರಾ. ಇದರ ಜೊತೆಗೆ ಮುಂದಿನ 5 ವರ್ಷಗಳಲ್ಲಿ ಇಂಥಹ 1000 ಮಿನಿ ಕಾಡುಗಳನ್ನು ನಿರ್ಮಾಣ ಮಾಡುವ ಬಯಕೆ ಹೊಂದಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.