ಪೊಲಿಯೋದಿಂದ ಕಾಲು ಕಳೆದುಕೊಂಡರು ಕುಗ್ಗದೆ 10 ಕೋಟಿ ಉದ್ಯಮ ಕಟ್ಟಿ ನಡೆಸುತ್ತಿರುವ ವಿಕಲಚೇತನನ ಯಶೋಗಾಥೆ
ಚಿಕ್ಕ ವಯಸ್ಸಿನಲ್ಲಿ ತಮ್ಮ ಕಾಲು ಕಳೆದುಕೊಂಡರು ಹಿಂಜರಿಯದೆ ತಮ್ಮ ತಂದೆಯ ಉದ್ಯಮವನ್ನೇ ಮುಂದುವರೆಸಿ, ಯಶಸ್ಸುಗಳಿಸಿ ಎಲ್ಲರಿಗೂ ಮಾದರಿಯಾದ ಕಲ್ಪೇಶ ಪಟೇಲರ ಕಥೆ.
ಪೋಲಿಯೋ ರೋಗಕ್ಕೆ ತುತ್ತಾಗಿ ತಮ್ಮ ಒಂದು ಕಾಲನ್ನು ಕಳೆದುಕೊಂಡಾಗ ಕಲ್ಪೇಶ್ ಪಟೇಲರು ಕೇವಲ ಐದು ತಿಂಗಳ ಮಗುವಾಗಿದ್ದರು. ದೇಹದೊಳಗೆ ಪ್ರಾಣಾಂತಕ ಪೋಲಿಯೋ ವೈರಾಣು ಹರಡಿಕೊಂಡಿದ್ದರಿಂದ ನಿರಂತರ ಜ್ವರದಿಂದ ಬಳಲುತ್ತಾ ಹಲವಾರು ತಿಂಗಳುಗಳವರೆಗೆ ಕಲ್ಪೇಶ್ ಹಾಸಿಗೆ ಹಿಡಿದಿದ್ದರು. ಎಲ್ಲಾ ಪ್ರಯತ್ನಗಳ ನಂತರವೂ ಅವರು ಚೇತರಿಸಿಕೊಳ್ಳುವ ಮುನ್ನ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು.
ಇದರಿಂದ ಎದೆಗುಂದದ ಕಲ್ಪೇಶ್ ತಮ್ಮ ಮುಂದಿನ ಜೀವನದಲ್ಲಿ ಹೋರಾಟಕ್ಕಿಳಿದರು. ಅವರ ಕುಟುಂಬದ ಆರ್ಥಿಕ ತೊಂದರೆಗಳಿಂದಾಗಿ ಅವರು ಹನ್ನೊಂದನೆಯ ತರಗತಿಯ ನಂತರ ವಿಧ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದರೆ ಅವರು ಜೀವನದಲ್ಲಿ ಎಂದೂ ಕಲಿಯುವುದನ್ನು ನಿಲ್ಲಿಸಲಿಲ್ಲ. ಒಂದು ಸಣ್ಣ ಉದ್ದಿಮೆಯನ್ನು ನಡೆಸುತಿದ್ದ ತಮ್ಮ ತಂದೆಗೆ ಬೆಂಬಲವಾಗಿ ನಿಂತು ವ್ಯಾಪಾರದ ಗುಟ್ಟುಗಳನ್ನು ತಿಳಿಯಲು ಪ್ರಾರಂಭಿಸಿದರು.
ಕಲ್ಪೇಶರಿಗೆ ಹದಿನೆಂಟು ವರ್ಷ ವಯಸ್ಸಾದಾಗ ಮತ್ತೆ ದುರಾದೃಷ್ಟ ಅವರ ಕುಟುಂಬವನ್ನು ಕಾಡತೊಡಗಿತು. ಅವರು ತಮ್ಮ ತಂದೆಯನ್ನು ಕಳೆದುಕೊಂಡರು ಎಂದು ಅಬ್ದುಲ್ ಕಲಾಂ ಅಭಿಮಾನಿ ಸಂಘವು ವರದಿ ಮಾಡಿದೆ. ಕುಟುಂಬದ ಹಿರಿಯ ಮಗನಾಗಿದ್ದರಿಂದ ಕುಟುಂಬವನ್ನು ಸಲಹುವ ಹೊಣೆಗಾರಿಕೆ ಅವರ ಹೆಗಲ ಮೇಲೆ ಬಿದ್ದಿತು. ಇದರಿಂದಾಗಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಅವರ ಕನಸು ಕನಸಾಗಿಯೇ ಉಳಿಯಿತು.
ಕಲ್ಪೇಶರು ಅವರ ತಂದೆಯವರು ನಡೆಸುತಿದ್ದ ಉದ್ದಿಮೆಯನ್ನು ತಮ್ಮ ಕೈಗೆತ್ತಿಕೊಂಡರು. ಒಂದಷ್ಟು ಮಾರುಕಟ್ಟೆ ಸಂಶೋಧನೆಯ ನಂತರ ಅವರು ವಜ್ರಗಳ ವ್ಯಾಪಾರಕ್ಕಿಳಿದರು. ದಿನಗಳು ಕಳೆದಂತೆಲ್ಲಾ ಅವರ ಗ್ರಾಹಕರ ಸಂಖ್ಯೆ ಹೆಚ್ಚಾಗತೊಡಗಿತು. ಅವರು ದೇಶದ ಎಲ್ಲೆಡೆಯಿದ್ದ ದೊಡ್ಡ ಆಭರಣ ವ್ಯಾಪಾರಿಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡರು. ಇಂದು ಅವರ ಕಂಪೆನಿಯು ವಾರ್ಷಿಕ ಹತ್ತು ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿರುವ ಯಶಸ್ವಿ ಉದ್ಯಮವಾಗಿದೆ. ಕೇವಲ ಎರಡು ಜನರ ತಂಡದೊಂದಿಗೆ ಇದನ್ನು ಸಾಧಿಸಲಾಗಿದೆ ಎಂದು ಕಲ್ಪೇಶ್ ದಿ ಬೆಟರ್ ಇಂಡಿಯಾ ಗೆ ಹೇಳಿದ್ದಾರೆ.
ನಾವು ವಜ್ರವನ್ನು ತಯಾರಿಸಿ ಅದಕ್ಕೆ ಹೊಳಪು ನೀಡುವ ಉದ್ಯಮವನ್ನು ನಡೆಸುತ್ತಿಲ್ಲ. ಅದಕ್ಕೆ ಬಹಳಷ್ಟು ಜನರ ಅವಶ್ಯಕತೆಯಿದೆ. ವಜ್ರಗಳನ್ನು ಖರೀದಿಸುವವರಿಗೆ ಅವುಗಳನ್ನು ಒದಗಿಸುವ ವ್ಯವಹಾರವನ್ನು ಒಬ್ಬ ವ್ಯಕ್ತಿ ನಡೆಸಬಹುದು. ನಾನು ಯಾರಿಂದ ವಜ್ರಗಳನ್ನು ಖರೀದಿಸಬೇಕು ಮತ್ತು ಯಾರಿಗೆ ಅವುಗಳನ್ನು ಮಾರಬೇಕು ಎಂಬುದರ ಬಗ್ಗೆ ಸ್ವಂತವಾಗಿ ಮಾರುಕಟ್ಟೆ ಅಧ್ಯಯನವನ್ನು ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಕಲ್ಪೇಶ್ ಹೇಳುತ್ತಾರೆ.
ಬರೀ ವ್ಯಾಪಾರವೇ ಅಲ್ಲದೇ ಕಲ್ಪೇಶ್ ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿಯೂ ಕೂಡ ಯಶಸ್ವಿಯಾಗಿದ್ದಾರೆ. ಅವರು ತಮ್ಮ ಸಹೋದರಿಯರಿಗೆ ಮದುವೆ ಮಾಡಿದ್ದಾರೆ ಮತ್ತು ಕಿರಿಯ ಸಹೋದರರು ವೃತ್ತಿಪರರಾಗುವಂತೆ ಅವರ ಜೀವನವನ್ನು ರೂಪಿಸಿದ್ದಾರೆ. ತಾವೂ ಕೂಡ ಮದುವೆಯಾಗಿ ಇಬ್ಬರು ಮುದ್ದಿನ ಮಕ್ಕಳ ತಂದೆಯಾಗಿದ್ದಾರೆ. ಕಲ್ಪೇಶರ ಜೀವನವು ನಿಜವಾಗಿಯೂ ಇತರರಿಗೆ ಸ್ಪೂರ್ತಿ ನೀಡಬಹುದಾದ ಯಶೋಗಾಥೆಯಾಗಿದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.