Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಆತ್ಮರಕ್ಷಣೆ ತರಬೇತಿಗಳ ಮೂಲಕ ಹೆಣ್ಣುಮಕ್ಕಳನ್ನು ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಲು ಆತ್ಮಸ್ಥೈರ್ಯ ತುಂಬುತ್ತಿರುವ ನಟಿ -ಕಮ್- ಮಾರ್ಷಲ್ ಕಲಾವಿದೆ ಇಶಿತಾ ಶರ್ಮಾ

ವಿದ್ಯಾರ್ಥಿಗಳನ್ನು ಹಲ್ಲೆ ಹಾಗೂ ದಾಳಿಯ ವಿರುದ್ಧ ಹೋರಾಡುವಂತೆ ಸಬಲೀಕರಣಗೊಳಿಸಲು ಇಶಿತಾ ಶರ್ಮಾ ರವರು ಮುಂಬೈ ಮೂಲದ ಮುಕ್ಕಮಾರ್ ಅನ್ನು ಸ್ಥಾಪಿಸಿದರು. ಈ ಸಂಸ್ಥೆಯು ಒಂದು ವರ್ಷದಲ್ಲಿ 47 ಶಾಲೆಗಳಲ್ಲಿ 3,000 ಬಾಲಕಿಯರಿಗೆ ತರಬೇತಿ ನೀಡಿದೆ ಹಾಗೂ ಸದ್ಯದಲ್ಲೇ ಇನ್ನೂ 1,000 ಶಾಲೆಗಳನ್ನು ತಲುಪುವ ಗುರಿಹೊಂದಿದೆ.

ಆತ್ಮರಕ್ಷಣೆ ತರಬೇತಿಗಳ ಮೂಲಕ ಹೆಣ್ಣುಮಕ್ಕಳನ್ನು ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಲು ಆತ್ಮಸ್ಥೈರ್ಯ ತುಂಬುತ್ತಿರುವ ನಟಿ -ಕಮ್- ಮಾರ್ಷಲ್ ಕಲಾವಿದೆ ಇಶಿತಾ ಶರ್ಮಾ

Monday September 23, 2019 , 5 min Read

ಹಲವು ಅಂಕಿಅಂಶಗಳು ಮತ್ತು ವರದಿಗಳ ಪ್ರಕಾರ ಭಾರತವು ಮಹಿಳೆಯರಿಗೆ ಸುರಕ್ಷಿತವಾದ ದೇಶವಲ್ಲ. ಏಕೆಂದರೆ ದೇಶಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರ, ಹಲ್ಲೆ ಮತ್ತು ಅತ್ಯಾಚಾರ ಪ್ರಕರಣಗಳು ಮಹಿಳೆಯರು ಹಾಗೂ ಹುಡುಗಿಯರ ಮನಸ್ಸಿನಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿವೆ. ಹೆಣ್ಣುಮಕ್ಕಳ ಈ ಮನಸ್ಥಿತಿಯನ್ನು ಬದಲಿಸಲು ನಟಿ-ಕಮ್-ಮಾರ್ಷಲ್ ಕಲಾವಿದೆಯಾದ ಇಶಿತಾ ಶರ್ಮಾ, ಮುಕ್ಕಾಮಾರ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಇದು ವಿದ್ಯಾರ್ಥಿಗಳಿಗೆ ಮಾರ್ಷಲ್ ಆರ್ಟ್ಸ್, ಸ್ವರಕ್ಷಣೆ ತಂತ್ರಗಳು‌ ಹಾಗೂ ಮಾನಸಿಕ ಸದೃಢ ವ್ಯಾಯಾಮಗಳು ಸೇರಿದಂತೆ ವಿವಿಧ ರೀತಿಯ ತರಬೇತಿ ನೀಡುತ್ತದೆ.


ಭಾರತದಾದ್ಯಂತ ಹಲವಾರು ಮಹಿಳೆಯರು ಹಾಗೂ ಬಾಲಕಿಯರು ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆಗೆ ಒಳಗಾಗಿದ್ದಾರೆ.

ಅಂತರಾಷ್ಟ್ರೀಯ ಪುರುಷ ಮತ್ತು ಲಿಂಗಸಾಮ್ಯತೆ ಸಮೀಕ್ಷೆ (ಇ.ಎಮ್.ಎ.ಜಿ.ಇ.ಎಸ್) ಪ್ರಕಾರ, ಭಾರತದಲ್ಲಿ ಶೇಕಡಾ ೨೪ರಷ್ಟು ಪುರುಷರು ತಮ್ಮ ಜೀವನದ ಯಾವುದಾದರೂ ಕೆಲವು ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿರುವುದನ್ನು ಒಪ್ಪಿಕೊಂಡಿದ್ದಾರೆ.


ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‌.ಸಿ.ಆರ್‌.ಬಿ) ಯ 2016 ರ ವರದಿಯ ಪ್ರಕಾರ, ಆ ವರ್ಷದಲ್ಲಿ 4.4 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು, ಹಲ್ಲೆ ಮತ್ತು ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಆದರೆ,‌ ಇದು ಕೇವಲ ನೋಂದಾಯಿತ ಪ್ರಕರಣಗಳನ್ನು ಪರಿಗಣಿಸಿದರೆ ಸಿಗುವ ಸಂಖ್ಯೆ, ವರದಿ‌ ಮಾಡದೇ, ಗಣನೆಗೆ ತೆಗೆದುಕೊಳ್ಳದ ಪ್ರಕರಣಗಳ‌ ಸಂಖ್ಯೆ ಅದಕ್ಕಿಂತ ಹೆಚ್ಚಿವೆ.


ಇಶಿತಾ ಶರ್ಮಾ ಅವರು 2018 ರಲ್ಲಿ ಸ್ಥಾಪಿಸಿದ ಮುಂಬೈ ಮೂಲದ ಸರ್ಕಾರೇತರ ಸಂಸ್ಥೆಯಾದ ಮುಕ್ಕಮಾರ್, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಪ್ಪಿಸಲು ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬದಲಾವಣೆ ತರಲು ಪ್ರಯತ್ನಿಸುತ್ತಿದೆ. ಅವರ ಸಂಘಟನೆಯು 6, 7 ಮತ್ತು 8 ನೇ ತರಗತಿಗೆ ವಿದ್ಯಾರ್ಥಿನಿಯರಿಗೆ ವಿವಿಧ ರೀತಿಯ ಮಾರ್ಷಲ್ ಆರ್ಟ್, ಸ್ವಯಂ ರಕ್ಷಣೆ ತಂತ್ರಗಳು ಜೊತೆಗೆ ಮಾನಸಿಕ ಸಾಮರ್ಥ್ಯ ವ್ಯಾಯಾಮಗಳಲ್ಲಿ ತರಬೇತಿ ನೀಡುತ್ತದೆ.


ಮುಕ್ಕಮಾರ್ ಶಾಲಾ ಮಟ್ಟದಲ್ಲಿನ‌ ಬಾಲಕಿಯರಿಗೆ ಆತ್ಮರಕ್ಷಣೆಯ ತರಬೇತಿ ನೀಡುತ್ತಿರುವುದು




ಮೂರು ವರ್ಷಗಳ ಉಚಿತ-ವೆಚ್ಚದ ಕಾರ್ಯಕ್ರಮವು ದೈಹಿಕ ಸಾಮರ್ಥ್ಯ, ಭಾವನಾತ್ಮಕ ಸ್ಥಿರತೆ, ನಿಂದನೆಯ ಕಡೆಗೆ ಸಂವೇದನೆ, ಒಗ್ಗಟ್ಟು ಮತ್ತು ಕಾನೂನು ಸಲಹೆಯಂತಹ​ ಅನೇಕ ಅಂಶಗಳನ್ನು ಒಳಗೊಂಡಿದೆ. ಮುಕ್ಕಾಮಾರ್ ಮುಂಬೈನ 47 ಶಾಲೆಗಳಲ್ಲಿ ಒಂದು ವರ್ಷದ ಅವಧಿಯಲ್ಲಿ 3,000 ಬಾಲಕಿಯರನ್ನು ತಲುಪಿ ಅವರ ಜೀವನವನ್ನು ಸಶಕ್ತಗೊಳಿಸಿದೆ.


ನಾನು ಕುಂಗ್ ಫೂ ಸಾಧಕಿಯಾಗಿರುವುದರಿಂದ ಆತ್ಮರಕ್ಷಣೆಗೆ ಇರುವ ಶಕ್ತಿ ಬಗ್ಗೆ ತಿಳಿದಿತ್ತು. ಅದರಲ್ಲೂ ವಿಶೇಷವಾಗಿ ಮಹಿಳೆಯರ ವಿಷಯದಲ್ಲಿ ಅದರ ಪ್ರಾಮುಖ್ಯತೆ ಇನ್ನೂ ಹೆಚ್ಚಿದೆ. ಆತ್ಮರಕ್ಷಣೆಯ ಕಲೆ ಅವರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತರುತ್ತದೆ ಹಾಗೂ ಲಿಂಗ ಆಧಾರಿತ ಹಿಂಸೆಯ ಸಂಕೋಲೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಅದನ್ನು ಸಾಬೀತುಪಡಿಸಲು ನಾನು ಮುಕ್ಕಮಾರ್ ಅನ್ನು ಸ್ಥಾಪಿಸಿದೆ” ಎಂದು ಮುಕ್ಕಮಾರ್ ಸ್ಥಾಪಕರು ಹಾಗೂ ವ್ಯವಸ್ಥಾಪಕ ಟ್ರಸ್ಟಿ ಇಶಿತಾ ಶರ್ಮಾ ಹೇಳುತ್ತಾರೆ.

ಮುಕ್ಕಮಾರ್ ನ ಪ್ರಾರಂಭ

ನಟಿ-ಕಮ್-ಮಾರ್ಷಲ್ ಕಲಾವಿದೆ‌ಯಾಗಿದ್ದ ಇಶಿತಾ ಅವರು ಮಾಂತ್ರಿಕ ನಾಟಕ ಸರಣಿ‌ಯಾದ ‘ಶಕಾ ಲಕ ಬೂಮ್ ಬೂಮ್’ ಹಾಗೂ 'ಲಯನ್ಸ್ ಆಫ್ ಪಂಜಾಬ್ ಪ್ರೆಸೆಂಟ್ಸ್’ ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


2012 ರಲ್ಲಿ ದೆಹಲಿಯಲ್ಲಿ 23 ವರ್ಷದ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆಯ ನಂತರದ ಘಟನೆಗಳನ್ನು ತೋರಿಸುವ ‘ಡಾಟರ್ಸ್ ಆಫ್ ಮದರ್ ಇಂಡಿಯಾ’ ಎಂಬ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ ಇಶಿತಾ, ಮುಕ್ಕಮಾರ್ ಸಂಸ್ಥೆಯ ಬೀಜವನ್ನು ಬಿತ್ತಿದರು. ಈ ಸಾಕ್ಷ್ಯಚಿತ್ರವು ನಿಜಕ್ಕೂ ಅವರನ್ನು ಬೆಚ್ಚಿಬೀಳಿಸಿದ್ದಲ್ಲದೇ ನಿದ್ರೆ ಕೆಡಿಸಿತ್ತು. ಕಿರುಕುಳ ಮತ್ತು ಅತ್ಯಾಚಾರದಂತಹ ಭಯಾನಕ ಕೃತ್ಯಗಳನ್ನು ತಪ್ಪಿಸಲು ಆಕೆ ಏನಾದರೂ ಮಾಡಬೇಕೆಂಬ ಹಟ ತೊಟ್ಟರು.


ಇಶಿತಾ ಶರ್ಮಾ, ಮುಕ್ಕಾಮಾರ್ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ಟ್ರಸ್ಟಿ.

ದೌರ್ಜನ್ಯದ ವಿರುದ್ಧ ಹೋರಾಡುವುದರಿಂದ ಬರುವ ಶಕ್ತಿ ಮತ್ತು ವಿಮೋಚನೆಯನ್ನು ಇಶಿತಾ ಸ್ವತಃ ಅನುಭವಿಸಿದ್ದರಿಂದ, ಅದೇ ಮನೋಭಾವವನ್ನು ಇತರ ಮಹಿಳೆಯರಲ್ಲಿ ಬೆಳೆಸಲು ಸಹಾಯ ಮಾಡಲು ಅವರು ಬಯಸಿದರು ಹೀಗಾಗಿ ಮುಕ್ಕಮಾರ್ ಆರಂಭವಾಯಿತು.


ನನ್ನ ಕಾರಿನಲ್ಲಿ ಮನೆಗೆ‌ ತೆರಳುತ್ತಿರುವಾಗ ನನ್ನನ್ನು ಪುರುಷರ ಗುಂಪೊಂದು ಬೆನ್ನಟ್ಟಿದ ದಿನ ನನಗೆ ಇನ್ನೂ ನೆನಪಿದೆ. ಭಯಭೀತರಾಗಿ ದೂರವಿರಲು ಪ್ರಯತ್ನಿಸುವ ಬದಲು, ನಾನು ಕಿಟಕಿಯನ್ನು ಇಳಿಸಿ ಅವರ ವಿರುದ್ಧ ಧ್ವನಿ ಎತ್ತಿದೆ. ಕೆಲವೇ ಸೆಕೆಂಡುಗಳಲ್ಲಿ ಅವರು ಎಲ್ಲಿಯೂ ಕಾಣಿಸಲಿಲ್ಲ. ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಈ ಘಟನೆ ನನ್ನ ಮನಸ್ಸಿನಲ್ಲಿ ಓಡುತ್ತಲೇ ಇತ್ತು. ಆದ್ದರಿಂದ, ನಾನು ಅನುಭವಿಸಿದ್ದನ್ನು ಮುಕ್ಕಾಮಾರ್ ಮೂಲಕ ಇತರರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದೆ” ಎಂದು ಇಶಿತಾ ನೆನಪಿಸಿಕೊಳ್ಳುತ್ತಾರೆ.


ಮುಂಬೈನ ವರ್ಸೋವಾ ಬೀಚ್‌ನಲ್ಲಿ ಬಾಲಕಿಯರಿಗೆ ಆತ್ಮರಕ್ಷಣೆ ತರಬೇತಿ ನೀಡುತ್ತಿರುವುದು.

ಮುಕ್ಕಮಾರ್ ಅಧಿಕೃತವಾಗಿ 2018 ರಲ್ಲಿ ಅಸ್ತಿತ್ವಕ್ಕೆ ಬಂದರೂ, ಇಶಿತಾ ಅದಕ್ಕಿಂತ ಎರಡು ವರ್ಷಗಳ ಮೊದಲೇ ಅವರು ಅದರ ಕೆಲಸವನ್ನು ಪ್ರಾರಂಭಿಸಿದ್ದರು. ಸಣ್ಣ ಗುಂಪಿನ ಹುಡುಗಿಯರಿಗೆ ಮುಂಬೈನ ವರ್ಸೋವಾ ಬೀಚ್‌ನಲ್ಲಿ ಉಚಿತ ಸ್ವರಕ್ಷಣೆ ತರಬೇತಿಯನ್ನು ಆಯೋಜಿಸುವ ಮೂಲಕ ಅವರು ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಿದರು. ಅದಾದ ಕೆಲವೇ ತಿಂಗಳುಗಳಲ್ಲಿ, ತರಬೇತಿ‌ ಪಡೆದ ಹುಡುಗಿಯರ ಸಂಖ್ಯೆ 5 ರಿಂದ 100 ಕ್ಕೆ ಏರಿತು. 2017 ರ ಸಮಯಕ್ಕೆ, ಹಲವು ಹುಡುಗಿಯರು ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಗೆದ್ದರು.


"ಆ ಸಮಯದಲ್ಲಿ ನಾನು ಹುಡುಗಿಯರನ್ನು ಬಲಶಾಲಿಯನ್ನಾಗಿ ಮಾಡುವ ಮತ್ತು ಅವರಿಗೆ ಆತ್ಮರಕ್ಷಣೆ ಕಲಿಸುವ ಸಾಮರ್ಥ್ಯವನ್ನು ಅರಿತುಕೊಂಡೆ. ಕೆಲವು ಬದಲಾವಣೆಗಳ ಮೂಲಕ ನಾನು ಕಾರ್ಯಾಚರಣೆರನ್ನು ವಿಸ್ತರಿಸಿದೆ” ಎನ್ನುತ್ತಾರೆ ಇಶಿತಾ.

ಉತ್ತಮ ನಾಳೆಯತ್ತ ಪ್ರಯತ್ನ

ಮುಕ್ಕಾಮಾರ್ ನಗರದಾದ್ಯಂತ ಹಲವು ಶಾಲೆಗಳೊಂದಿಗೆ ಸಹಯೋಗ ಹೊಂದಿದ್ದು, ಮುನ್ಸಿಪಲ್ ಕಾರ್ಪೊರೇಷನ್ ಆಫ್ ಗ್ರೇಟರ್ ಮುಂಬೈ (ಎಂಸಿಜಿಎಂ) ಸಹಾಯದಿಂದ ಬಾಲಕಿಯರಿಗೆ ಆತ್ಮರಕ್ಷಣೆಗಾಗಿ ತರಬೇತಿ ನೀಡಿದೆ. ಶಾಲೆಯ ಪಠ್ಯಕ್ರಮದಲ್ಲಿ ಡ್ರಿಲ್ ಅನ್ನು ಸೇರಿಸಲಾಗಿದ್ದು, ಪ್ರತಿ ವಾರ ಎರಡು ಗಂಟೆಗಳ ಕಾಲ ತರಬೇತಿಗಳು ನಡೆಯುತ್ತವೆ.


14 ಕ್ಕೂ ಹೆಚ್ಚು ತರಬೇತುದಾರರನ್ನು ಹೊಂದಿರುವ ಮುಕ್ಕಮಾರ್ ಸಂಸ್ಥೆಯು, ವಿದ್ಯಾರ್ಥಿಗಳಿಗೆ ದೈಹಿಕ ಸಾಮರ್ಥ್ಯ ಮತ್ತು ಕುಂಗ್ ಫೂ, ಕರಾಟೆ ಮತ್ತು ಕಲರಿಪಯಟ್ಟು ಮುಂತಾದ ವಿವಿಧ ಸಮರ ಕಲೆಗಳನ್ನು ಕಲಿಸುವುದಲ್ಲದೆ, ದಾಳಿ ನಡೆದಾಗ ಅಥವಾ ಅವರನ್ನು‌ ಕೆಳಗೆ ಕೆಡವಿದಾಗ ಬಳಸಬಹುದಾದ ನಿರ್ದಿಷ್ಟ ತಂತ್ರಗಳಿಗೆ ತರಬೇತಿ ನೀಡುತ್ತಾರೆ. ಇದು ಬ್ಲಾಕ್ಗಳು, ಹೊಡೆತಗಳು, ಒದೆತಗಳು, ಮೊಣಕಾಲು ದಾಳಿಗಳು, ಹಿಡಿತಗಳು, ಲಾಕ್‌ಗಳು, ಥ್ರೋಗಳು ಇತ್ಯಾದಿಗಳನ್ನು ಒಳಗೊಂಡಿದೆ.


ಇಶಿತಾ ಶರ್ಮಾ ವಿವಿಧ ಸಮರ ಕಲೆಗಳಲ್ಲಿ ಹುಡುಗಿಗೆ ತರಬೇತಿ ನೀಡುತ್ತಿರುವುದು.



"ನಮ್ಮ ಪಠ್ಯಕ್ರಮವು ಹುಡುಗಿಯರಿಗೆ ದೈಹಿಕ‌ ಸದೃಢತೆ, ಶಕ್ತಿ ಹಾಗೂ ಚುರುಕುತನಕ್ಕೆ ತರಬೇತಿ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಮೌಖಿಕ ಆತ್ಮರಕ್ಷಣೆಯನ್ನು (ವರ್ಬಲ್ ಸೆಲ್ಫ್ ಡಿಫೆನ್ಸ್) ಕೇಂದ್ರೀಕರಿಸಿದ ಅನೇಕ ಮಾಡ್ಯೂಲ್‌ಗಳನ್ನು ಸಹ ಒಳಗೊಂಡಿದೆ. ಮಾಡ್ಯೂಲ್‌ಗಳು ಒಳ್ಳೆಯ ಮತ್ತು ಕೆಟ್ಟ ಸ್ಪರ್ಶ, ಲೈಂಗಿಕ ಕಿರುಕುಳ, ಮಕ್ಕಳ ಸಹಾಯವಾಣಿ ಸಂಖ್ಯೆಗಳು, ಒಗ್ಗಟ್ಟು, ಕಾನೂನು ಹಕ್ಕುಗಳು, ಜೊತೆಗೆ ಅಪರಾಧಗಳ ವರದಿಗಾರಿಕೆ ಮುಂತಾದ ಅಂಶಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ” ಎಂದು ಇಶಿತಾ ಹೇಳುತ್ತಾರೆ.


ಇಷ್ಟೇ ಅಲ್ಲದೇ, ಮಾರ್ಷಲ್ ಆರ್ಟ್ಸ್ ಗಳನ್ನು ವೃತ್ತಿಯಾಗಿ ಮುಂದುವರಿಸಲು ಅಥವಾ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಹುಡುಗಿಯರು ಆಸಕ್ತಿ ಹೊಂದಿದ್ದರೆ, ಮುಕ್ಕಮಾರ್ ಸಂಸ್ಥೆಯು ಅವರನ್ನು ಆರ್ಥಿಕವಾಗಿವಾಗಿಯೂ ಬೆಂಬಲಿಸುತ್ತಾರೆ.


ಮುಂಬೈನ ಶಾಲೆಯಲ್ಲಿ ಮುಕ್ಕಾಮಾರ್ ತರಬೇತಿ.

ಮೊದಲ ಎರಡು ವರ್ಷಗಳ ಕಾಲ ದಾಪುಗಾಲು ಇಟ್ಟ ಸಂಸ್ಥೆಯು 2017 ರ ಕೊನೆಯಲ್ಲಿ ಕೋಲ್ಕತಾ ಮೂಲದ ಆನ್‌ಲೈನ್ ಗೇಮಿಂಗ್ ಕಂಪನಿಯಾದ ಕ್ವಾಡ್ರಿಫಿಕ್ ಮೀಡಿಯಾದಿಂದ ಹಣದ‌ ಅನುದಾನವನ್ನು ಪಡೆದುಕೊಂಡಿತು. ಇತ್ತೀಚೆಗೆ, ಮುಕ್ಕಾಮಾರ್ ಸಂಸ್ಥೆಯನ್ನು ಸರ್ಕಾರೇತರ ಸಂಸ್ಥೆಗಳನ್ನು ಬೆಂಬಲಿಸುವ ಬೆಂಗಳೂರು ಮೂಲದ ಎನ್‌ಕೋರ್ ಫೌಂಡೇಶನ್ ಕಾಪಾಡಿಕೊಂಡು ಬಂದಿದೆ.

ಹೆಣ್ಣುಮಕ್ಕಳನ್ನು ತಮ್ಮನ್ನು ರಕ್ಷಿಸಿಕೊಳ್ಳುವತ್ತ ಸಶಕ್ತಗೊಳಿಸುವುದು

ಹದಿನೈದು ವರ್ಷದ ಸೋನಿ ಶರ್ಮಾಳನ್ನು ಅವರ ತಾಯಿ ಕತ್ತಲೆಯಾದ ಬಳಿಕ ಹೊರಗೆ ಹೋಗಲು ಎಂದಿಗೂ ಅನುಮತಿ ನೀಡುತ್ತಿರಲಿಲ್ಲ. ಆಕೆ ಮುಂಬೈನ ನ್ಯೂ ವರ್ಸೋವಾ ಮುನ್ಸಿಪಲ್ ಶಾಲೆಗೆ ಕಲಿಯಲು ಹೋಗುತ್ತಿದ್ದಳು ಆದರೆ ತರಗತಿ ಮುಗಿದ ಬಳಿಕ ಆದಷ್ಟು ಬೇಗ ಮನೆಗೆ ಮರಳಿಬರಬೇಕಾಗಿತ್ತು. ಸೋನಿಯ ತಾಯಿ ಆಕೆ ಏನನ್ನು ಧರಿಸಬೇಕು, ಯಾರನ್ನು ಭೇಟಿಯಾಗಬೇಕು, ಅವಳು ಹೇಗೆ ಮಾತಾಡಬೇಕು ಮತ್ತು ಅವಳು ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಬಹಳ ನಿರ್ದಿಷ್ಟವಾಗಿದ್ದರು. ‌ಇದಕ್ಕೆಲ್ಲ ಕಾರಣ ಆಕೆಯ ತಾಯಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ಅನೇಕ ಸುದ್ದಿಗಳಿಂದ ಭಯಬೀತರಾಗಿದ್ದರು.


ಮುಕ್ಕಮಾರ್ ಆತ್ಮರಕ್ಷಣೆ ಕುರಿತು ತರಗತಿಗಳನ್ನು ನಡೆಸುವ ಬಗ್ಗೆ ಕೇಳಿದಾಗ, ನಾನು ಸೇರಲು ಆಸಕ್ತಿ ಹೊಂದಿದ್ದೆ. ಆದರೆ ನನ್ನ ತಾಯಿ ಅದನ್ನು ಮೊದಲಿಗೆ ಒಪ್ಪಲಿಲ್ಲ. ಅವರನ್ನು ಮನವೊಲಿಸಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಅವರೊಂದಿಗೆ ತರಬೇತಿಯನ್ನು ಪ್ರಾರಂಭಿಸಿದಾಗ, ನಾನು ತುಂಬಾ ಸಾಮರ್ಥ್ಯ ಹೊಂದಿದ್ದೇನೆ ಎಂಬ ಭಾವನೆ ಮೂಡಿತು ಹಾಗಾಗಿ ನಾನು ಕಲಿಯುವುದನ್ನು ನಿಲ್ಲಿಸಲಿಲ್ಲ. ಆದ್ದರಿಂದ, ನಾನು ಸುಮಾರು ಎರಡು ವರ್ಷಗಳ ಕಾಲ ಅಭ್ಯಾಸ ಮಾಡಿದ್ದೇನೆ ಮತ್ತು ನಾನು ಇತರ ಹುಡುಗಿಯರಿಗೆ ಕಲಿಸಲು ಕೂಡ ಪ್ರಾರಂಭಿಸಿದ್ದೇನೆ. ಮುಂಬೈನ ಜಿಲ್ಲಾ ಉಪನಗರ ಮಟ್ಟದಲ್ಲಿ ಕುಂಗ್ ಫೂ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಚಿನ್ನದ ಪದಕವನ್ನು ಗೆದ್ದಿದ್ದೇನೆ. ಇದಾದ ನಂತರ ನನ್ನ ತಾಯಿ ಸಂಜೆ 7 ಗಂಟೆಯ ನಂತರ ನನ್ನನ್ನು ಮನೆಯಿಂದ ಹೊರಗೆ ಕಳುಹಿಸಲು ಹಿಂಜರಿಯುವುದನ್ನು ನಿಲ್ಲಿಸಿದ್ದಾರೆ" ಎಂದು ಮಾತನಾಡಿ ಸೋನಿ ಸಂತಸಪಟ್ಟರು.


ಸೋನಿ ಸಹಾನಿ ಅವರ ಅಸಾಧಾರಣ ಕೊಡುಗೆಗಾಗಿ ಮುಕ್ಕಮಾರ್‌ ಸಂಸ್ಥೆಯಿಂದ ಬಹುಮಾನ ಗೆದ್ದ ನಂತರ.

ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲಿಸಿದ ನಂತರ ಮುಕ್ಕಮಾರ್ ನಿಂದಾಗಿರುವ ಅನೇಕ ಬದಲಾವಣೆಗಳಲ್ಲಿ ಇದೂ ಒಂದು. 3,500 ಗಂಟೆಗಳ ತರಬೇತಿಯ ಮೂಲಕ 47 ಶಾಲೆಗಳಲ್ಲಿ 3,000 ಬಾಲಕಿಯರ ಜೀವನದ ಮೇಲೆ ಪರಣಾಮಕಾರಿ ಪ್ರಭಾವ ಬೀರಿದ ಸಂಸ್ಥೆಯು ಪ್ರಸ್ತುತ ನಗರದ ಇನ್ನೂ 1,000 ಶಾಲೆಗಳನ್ನು ತಲುಪುವ ಪ್ರಯತ್ನದತ್ತ ಸಾಗುತ್ತಿದೆ.


ಮಹಿಳೆಯರು ತಮಗಾಗಿ ತಾವು ಹೋರಾಡುವ ಕಲೆಯಲ್ಲಿ ತೊಡಗಿಸಿಕೊಂಡಾಗಿನಿಂದ ಭಾರತದಾದ್ಯಂತ ಶೇ. 66 ರಷ್ಟು ಅತ್ಯಾಚಾರ ಪ್ರಕರಣಗಳನ್ನು ತಡೆಯಲಾಗಿದ್ದು, ಇದು ಸಶಕ್ತ ಅಂಕಿಅಂಶವಾಗಿದೆ. ಇದನ್ನು ಶೇ.100 ರಷ್ಟು ಪೂರ್ಣಮಾಡುವುದು ಮುಕ್ಕಮಾರ್‌ನ ಗುರಿ. ಆದರೆ ಇದು ಕೇವಲ‌ ಮೇಲ್ಮೈ ಪ್ರಯತ್ನವಷ್ಟೇ, ಇನ್ನೂ ಬಹುದೂರ ಸಾಗಬೇಕಾಗಿದೆ ಎನ್ನುತ್ತಾರೆ ಇಶಿತಾ.

ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.