ಕನ್ನಡೇತರರ ಪಾಲಿಗೆ ವರವಾದ ಲರ್ನ್ ಕನ್ನಡ ಸ್ಮಾರ್ಟ್ಆ್ಯಪ್

ಲರ್ನ್‌ ಕನ್ನಡ ಆ್ಯಪ್ ಮೂಲಕ ಕೇವಲ 10 ದಿನದಲ್ಲಿ ಕನ್ನಡ ಮಾತನಾಡಲು ಕಲಿಯಬಹುದು.

ಕನ್ನಡೇತರರ ಪಾಲಿಗೆ ವರವಾದ ಲರ್ನ್ ಕನ್ನಡ ಸ್ಮಾರ್ಟ್ಆ್ಯಪ್

Sunday November 01, 2020,

3 min Read

ಕರ್ನಾಟಕದಲ್ಲಿ ಉದ್ಯೋಗ, ವ್ಯವಹಾರಕ್ಕೆಂದು ಅನೇಕ ಜನರು ಆಗಮಿಸಿ ಇಲ್ಲಿಯೇ ನೆಲೆಸುತ್ತಿದ್ದಾರೆ ಅದರಲ್ಲೂ ಬೆಂಗಳೂರಿಗೆ ಜೀವನ ಅರಸಿ ಬರುವವರ ಸಂಖ್ಯೆ ಹೆಚ್ಚು. ಇಂತಹ ವೇಳೆಯಲ್ಲಿ ಅವರಿಗೆ ಭಾಷೆಯ ತೊಡಕು ಹೆಚ್ಚಾಗಿ ಕಂಡುಬರುತ್ತಿದೆ. ಕನ್ನಡ ಕಲಿಯಲು ಮನಸ್ಸಿದೆ, ಆದರೆ ಹೇಗೆ ಕಲಿಯಬೇಕೆಂದು ಗೊತ್ತಿಲ್ಲ. ಅಂತವರಿಗಾಗಿಯೇ ಒಂದು ಸುಲಭವಾದ ಆ್ಯಪ್ ತಯಾರಾಗಿದೆ. ಇದರ ಮೂಲಕ ಸುಲಭವಾಗಿ ಕನ್ನಡವನ್ನು ಕಲಿಯಬಹುದು. ಅದೇ ಲರ್ನ್ ಕನ್ನಡ ಸ್ಮಾರ್ಟ್ಆ್ಯಪ್.


ಪ್ರಸ್ತುತ ಬೆಂಗಳೂರಿನಲ್ಲಿ ಸಾಪ್ಟವೇರ್ ಇಂಜನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೂಲತಃ ಚಿತ್ರದುರ್ಗದ ಹೊಳೆಲ್ಕಕೆಯವರಾದ ವರುಣ್ ಎಂಬುವವರು ತಮ್ಮ ಸ್ನೇಹಿತರಾದ ರೋಹಿತ್ ಅವರೊಂದಿಗೆ ಸೇರಿ ಈ ಆ್ಯಪ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಇವರು ಮೈಸೂರಿನಲ್ಲಿ ತಮ್ಮ ಇಂಜನಿಯರಿಂಗ್‌ ಪೂರ್ಣಗೊಳಿಸಿದ್ದಾರೆ.

ವರುಣ್‌

"ಓದನ್ನು ಪೂರ್ತಿಗೊಳಿಸಿ ಬೆಂಗಳೂರಿನಲ್ಲಿ ಉದ್ಯೋಗಕ್ಕೆಂದು ಸೇರಿದಾಗ, ಅಲ್ಲಿಯ ಜನರು ನೀವು ಕನ್ನಡದವರಾ, ನಮಗೂ ಕನ್ನಡ ಕಲಿಸಿ, ಕನ್ನಡ ಕಲಿಯಲಾಗುತ್ತಿಲ್ಲ ಎಂಬ ಮಾತುಗಳನ್ನು ಕೇಳಿ, ನಾವೇ ಯಾಕೆ ಆ್ಯಪ್ ಒಂದನ್ನು ಮಾಡಬಾರದು ಎಂಬ ಯೋಚನೆಯು ತಲೆಯಲ್ಲಿ ಬಂದಾಗ, ತಡಮಾಡದೇ ನನ್ನ ಸ್ನೇಹಿತನೊಡನೆ ಜೊತೆಗೂಡಿ ಲರ್ನ್ ಕನ್ನಡ ಸ್ಮಾರ್ಟ್ಆ್ಯಪ್ ಪ್ರಾರಂಭಿಸಿದೆವು. ಇದರಲ್ಲಿ ಸ್ನೇಹಿತೆ ಪೂಜಾ ಆ್ಯಪ್‌ನಲ್ಲಿ ಕಂಡು ಬರುವ ಶಬ್ಧ, ವಾಕ್ಯಗಳಿಗೆ ಧ್ವನಿಯನ್ನು ನೀಡಿದ್ದಾರೆ. ಪ್ರಾರಂಭದಲ್ಲಿ ನಮ್ಮ ಸಹದ್ಯೋಗಿಗಳಿಗೆಂದೇ ಶುರುವಾದ ಆ್ಯಪ್ ಇಂದು ಎರಡು ಲಕ್ಷಕ್ಕೂ ಹೆಚ್ಚಿನ ಜನರನ್ನು ತಲುಪಿದೆ," ಎಂದು ಸಂಭ್ರಮವನ್ನು ವ್ಯಕ್ತಪಡಿಸುತ್ತಾರೆ ವರುಣ್.


2017 ರ ನವೆಂಬರ್‌ನಲ್ಲಿ ಪ್ರಾರಂಭವಾದ ಈ ಆ್ಯಪ್‌ ಭಾರತ, ಅಮೇರಿಕಾ, ಯುಎಇ, ಯುಕೆ, ನೇಪಾಳ, ಕೆನಡಾ, ಜರ್ಮನಿ, ಸೌದಿ ಅರೇಬಿಯಾ, ಅಸ್ಟ್ರೇಲಿಯಾ ಸೇರಿದಂತೆ 90ಕ್ಕೂ ಹೆಚ್ಚಿನ ದೇಶದ ಜನರನ್ನು ತಲುಪಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ 9 ಲಕ್ಷಕ್ಕೂ ಅಧಿಕ ಜನ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇಂದು ಗೂಗಲ್ ಪ್ಲೇ ಸ್ಟೋರಿನಲ್ಲಿ ಲರ್ನ್ ಕನ್ನಡ ಎಂದು ಹುಡುಕಿದಾಗ ಮೊದಲನೇ ಸಾಲಿನಲ್ಲಿ ಈ ಆ್ಯಪ್ ಕಾಣಿಸಿಕೊಳ್ಳುತ್ತದೆ.

ಆ್ಯಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಆ್ಯಪ್‌ನಲ್ಲಿ ಹತ್ತು ದಿನದ ಕೋರ್ಸ್ ಮೂಲಕ ದೈನಂದಿನ ಬದುಕಿಗೆ ಅಗತ್ಯವಿರುವ ಮಾತುಕತೆಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ಕೋರ್ಸ್ನಲ್ಲಿ ನಾಮಪದಗಳು, ಕ್ರಿಯಾಪದಗಳು, ಶುಭಾಶಯಗಳು, ಅಗತ್ಯ ಪದಗಳು, ಸಂಬಂಧಸೂಚಕಗಳು, ಅಂಕಿಗಳು, ಆಟೋದವರೊಂದಿಗೆ, ತರಕಾರಿ ಅಂಗಡಿಯವರೊಂದಿಗೆ ಮಾತನಾಡಲು ಅಗತ್ಯವಿರುವ ಮಾತುಕತೆಯನ್ನು ಅಳವಡಿಸಲಾಗಿದೆ.


ಇದರಲ್ಲಿ ಇಂಗ್ಲೀಷ್ ಪದಗಳನ್ನು ಕನ್ನಡ ಕಲಿಕೆಯ ಜೊತೆಗೆ ‘ಇನ್ಸಸ್ಟಂಟ್ ವರ್ಡ್ ಟ್ರಾನ್ಸಲೇಷನ್'(ಐಡಬ್ಯೂಟಿ) ಬಳಸಿಕೊಂಡು ಇಂಗ್ಲೀಷ್ ಪದಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಬಹುದಾಗಿದೆ. ಇದು ಪದಗಳ ಉಚ್ಛಾರಣೆ ಹೇಗೆ ಬರಬೇಕು ಎಂಬುದನ್ನು ಕೂಡ ತಿಳಿಸಿಕೊಡುತ್ತದೆ. ಇದರಿಂದ ನೀವು ಮಾತನಾಡುತ್ತಿರುವುದು ಸರಿಯೋ ತಪ್ಪೊ ಎಂದು ಪರಿಶೀಲಿಸಿಕೊಂಡು ಮಾತನಾಡಲು ಕಲಿಯಬಹುದು. ಕೋರ್ಸ್ ಪೂರ್ಣಗೊಂಡ ಬಳಿಕ ಆ್ಯಪ್ ಬಳಕೆದಾರರು ಇದರಲ್ಲಿ ಕಂಡು ಬರುವ ಸರಳ, ಮಧ್ಯಮ ಮತ್ತು ಕಠಿಣ ಎಂಬ ಹಂತದ ೩೦೦ಕ್ಕೂ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕಾಗುತ್ತದೆ.


ಮುಂಚೆ ಕೇವಲ ಇಂಗ್ಲೀಷ್ ಮೂಲಕ ಕನ್ನಡವನ್ನು ಕಲಿಯಬಹುದಾಗಿತ್ತು. ಪ್ರಸ್ತುತ ಹಿಂದಿ, ತೆಲುಗು, ತಮಿಳು ಭಾಷೆಯ ಮೂಲಕವೂ ಕಲಿಯಬಹುದಾಗಿದೆ.

ಲರ್ನ್‌ ಕನ್ನಡ ಆ್ಯಪ್


ಫ್ಲೆಕ್ಸಿ ಕೋರ್ಸ್: ಈ ವರ್ಗದಲ್ಲಿ, ವರ್ಡ್ಸ್ ಎಂಬ ವಿಭಾಗದಲ್ಲಿ ದಿನಗಳು, ಸಮಯ, ದಿಕ್ಕುಗಳು, ಬಣ್ಣ, ತರಕಾರಿ ಹಾಗೂ ಹಣ್ಣುಗಳ ಹೆಸರು, ಮುಂತಾದವನ್ನು ಒಳಗೊಂಡಿದೆ. ಕನ್ವರ್ಸೇಷನ್ಸ್ ವಿಭಾಗದಲ್ಲಿ ಆಟೋ, ಕ್ಯಾಬ್ ಡ್ರೈವರ್, ಕೆಲಸದವರೊಂದಿಗೆ, ವೈದ್ಯರೊಂದಿಗೆ, ಬಸ್-ಕಂಡಕ್ಟರ್ ಜೊತಗೆ, ವ್ಯಾಪಾರಿಗಳೊಂದಿಗೆ, ವಿಳಾಸ ಕೇಳುವುದು ಮುಂತಾದ ದೈನಂದಿನ ಮಾತುಕತೆಗಳನ್ನು ಒಳಗೊಂಡಿದೆ.


ರ‍್ಯಾಂಡಮ್ ಮ್ಯಾಜಿಕ್ ವಿಭಾಗದಲ್ಲಿ ಕಾಲಗಳು, ಕ್ರಿಯಾಪದಗಳ ಕುರಿತಾದ ವ್ಯಾಕರಣವನ್ನು ಒಳಗೊಂಡಿದೆ. ಆ್ಯಂಟೋನಿಮ್ಸ್ ವಿಭಾಗದಲ್ಲಿ ಕೆಲವು ವಾಕ್ಯಗಳ ವಿರುದ್ಧ ಪದದ ಅರ್ಥವನ್ನು ಉಚ್ಛಾರಣೆಯ ಮೂಲಕ ನೀಡಲಾಗಿದೆ. ಇದರಿಂದ ಸಮನಾರ್ಥಕ ಮತ್ತು ವಿರುದ್ಧಾರ್ಥಕ ಅರ್ಥ ಮತ್ತು ಭಾವವನ್ನು ತಿಳಿಯಬಹುದು.


ಇದರಲ್ಲಿ ಕನ್ನಡ ಅಕ್ಷರಗಳನ್ನು ಬರೆಯುವುದು ಹೇಗೆ ಎಂಬುದನ್ನು ಆ್ಯನಿಮೇಶನ್ ಮೂಲಕ ಕಲಿಯಬಹುದು, ನೀವೆ ನಿಮ್ಮ ಮೊಬೈಲ್ ಪರದೆಯ ಸ್ಕ್ರಿಬಲ್ ಪ್ಯಾಡ್‌ನಲ್ಲಿ ಸ್ವತಃ ಅಕ್ಷರಗಳನ್ನು ಬರೆಯಬಹುದಾಗಿದೆ. ಇದರಿಂದ ಸುಲಭವಾಗಿ ಇದು ಚಿಕ್ಕ-ಮಕ್ಕಳು ಮಾತ್ರವಲ್ಲದೆ, ಕನ್ನಡೇತರರು ಕೂಡ ಕನ್ನಡ ಅಕ್ಷರಗಳನ್ನು ಬರೆಯುವುದನ್ನು ರೂಢಿಸಿಕೊಳ್ಳಬಹುದು ಎಂದೆನ್ನುತ್ತಾರೆ ವರುಣ್.


ಪ್ರಸ್ತುತ ಇದು ಆ್ಯಂಡ್ರಾಯ್ಡ್ನಲ್ಲಿ ಮಾತ್ರ ಲಭ್ಯವಿದ್ದು, ಇದೇ ತಿಂಗಳಿನಲ್ಲಿ ಐಒಎಸ್ ಆ್ಯಪ್ ಸ್ಟೋರ್ ಮೂಲಕವು ಬಿಡುಗಡೆ ಮಾಡುವ ಯೋಜನೆಯಿದ್ದು, ಇದರಲ್ಲಿ ಮತ್ತಷ್ಟು ವ್ಯಾಕರಣವನ್ನು ಅಳವಡಿಸುವ, ಉದಾಹರಣೆಗಳನ್ನು ನೀಡುವ ಯೋಜನೆಯಿದೆ ಎಂದೆನ್ನುತ್ತಾರೆ. ಕನ್ನಡೇತರರು ಕನ್ನಡವನ್ನು ಕಲಿಯಲು ಇದು ತುಂಬಾ ಉಪಯುಕ್ತವಾದಂತಹ ಆ್ಯಪ್ ಆಗಿದೆ.


ಕನ್ನಡ ಕಲಿಯಲು ಇದೊಂದು ಉಪಯುಕ್ತ ಆ್ಯಪ್ ಆಗಿದ್ದು, ಇದರಿಂದ ಕನ್ನಡೇತರರು ಸುಲಭವಾಗಿ ಕನ್ನಡವನ್ನು ಕಲಿಯಬಹುದು. ಕನ್ನಡ ಗೊತ್ತಿಲ್ಲ ಎನ್ನುವವರಿಗೆ ಇದರ ಬಗ್ಗೆ ತಿಳಿಸಿ. ಇಂಗ್ಲೀಷ್, ಹಿಂದಿ ಭಾಷೆಯ ಮೂಲಕವು ಕನ್ನಡ ಕಲಿಯಲು ಸಾಧ್ಯವಾಗಿದೆ. ಗೊಂದಲವುಂಟಾದಲ್ಲಿ ಯೂಟ್ಯೂಬ್ ವಿಡಿಯೋಗಳು ಲಭ್ಯವಿದ್ದು, ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಇದರಿಂದಲೇ ನಾನು ಕನ್ನಡ ಕಲಿತೆ.


-ಅಭಿನಾಶ್ ಸಿಂಗ್, ಆ್ಯಪ್‌ನಿಂದ ಕನ್ನಡ ಕಲಿತವರು